ಆದ್ಯೋತ್ ಸುದ್ದಿನಿಧಿ: ಧೀಮಂತ ಕ್ರಿಯೇಷನ್ಸ್ ವತಿಯಿಂದ ದಿನೇಶ್ ಹೆಗ್ಡೆ ಅರಸಾಳು ನಿರ್ಮಿಸುತ್ತಿರುವ ‘ಸಮರಸ’, ಕನ್ನಡ ಚಲನಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಹಿರಿಯೂರ ನೆಹರೂ ಮೈದಾನದಲ್ಲಿ ನೆರವೇರಿತು.
“ಸಮರಸ ” ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿ. ಬೆಳಗೆರೆ ಕೃಷ್ಣಶಾಸ್ತ್ರಿಗಳ “ಹಳ್ಳಿಚಿತ್ರ” ನಾಟಕಾಧಾರಿತ ಚಲನಚಿತ್ರ. ನಾಟಕವನ್ನು ವೀಕ್ಷಿಸಿದ್ದ ಅಂದಿನ ರಾಷ್ಟ್ರಪತಿಗಳಾಗಿದ್ದ ಸರ್ವಪಳ್ಳಿ ರಾಧಾಕೃಷ್ಣನ್ ಇದೊಂದು ಹಳ್ಳಿಗಳ ಭಗವದ್ಗೀತೆ ಎಂದಿದ್ದರು .
ಕೇವಲ ಒಂದು ಹುಣಿಸೆ ಮರದ ಸಲುವಾಗಿ ದಾಯಾದಿಗಳಾಗಿದ್ದ ರಾಮೇಗೌಡ, ತಿಮ್ಮೇಗೌಡ ನ್ಯಾಯಾಲಯದ ಕಟಕಟೆ ತಲುಪಿ , ನಂತರ ಪಶ್ಚಾತ್ತಾಪ ಪಡುವ ಎಂದಿನ , ಇಂದಿನ ಕಥಾಹಂದರವನ್ನು ಒಳಗೊಂಡಿದ್ದು , ಸಿನಿಮೀಕರಣಗೊಳ್ಳುವಾಗ ಕೆಲವೊಂದು ವಿಭಿನ್ನ ತಿರುವನ್ನು ಹೊಂದಿ, ಅಪರೂಪದ ಅಂತ್ಯ ಕಾಣುವಲ್ಲಿ ಯಶಸ್ವಿಯಾಗಿದೆ. ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ ಎಂದು ನಿರ್ದೇಶಕ ಹಿರಿಯೂರು ರಾಘವೇಂದ್ರ ಹೇಳಿದರು.
ರಿಪ್ಪನ್ ಪೇಟೆ, ಅರಸಾಳು, ಜಂಬಳ್ಳಿ, ದೂಣ, ಗುಳುಗುಳಿ ಶಂಕರ, ಬೆಂಗಳೂರು , ಹಿರಿಯೂರು, ವಾಣಿವಿಲಾಸ ಸಾಗರ ಮೊದಲಾದ ಪ್ರೇಕ್ಷಣೀಯ ಸ್ಥಳಗಳಲ್ಲಿ ಸಮರಸದ ಚಿತ್ರೀಕರಣ ಆಗಿದೆ.
ತಾರಾಬಳಗದಲ್ಲಿ ರವಿಕಿರಣ್, ಸುನೀಲ್ ಪುರಾಣಿಕ್, ನಾಗಾಭರಣ, ಸಿಹಿಕಹಿ ಚಂದ್ರು, ಬಿ.ಸುರೇಶ, ಮಹೇಂದ್ರ ಮುಣೋತ್, ಮಂಜುನಾಥ್, ಅಭಿನಯಾ, ಲಕ್ಷ್ಮೀಭಟ್, ನಮಿತಾ ಹೆಗ್ಡೆ, ದಿನೇಶ್ ಹೆಗ್ಡೆ, ಲೋಕೇಶ್ ಚಿತ್ರದುರ್ಗ, ಮಜಾ ಟಾಕೀಸ್ ಅನಿಲ್, ನಾಗರಾಜ ಶಾಂಡಿಲ್ಯ, ಬೇಬಿ ಬೃಹತಿ, ಗುಂಡಣ್ಣ ಚಿಕ್ಕಮಗಳೂರು, ಮಲ್ಲಿಕಾರ್ಜುನ ಮಹಾಮನೆ, ಬಿಟಿಎಸ್ ಕುಮಾರ್, ಬಸವರಾಜ್, ಕುಮಾರಸ್ವಾಮಿ ಹಿರಿಯೂರು ಮೊದಲಾದವರು ಅಭಿನಯಿಸಿದ್ದಾರೆ.
ತಾಂತ್ರಿಕವರ್ಗದಲ್ಲಿ ಛಾಯಾಗ್ರಹಣ ಎಸ್ ಬಾಲು, ಸಂಕಲನ ಮುತ್ತುರಾಜ್ ಟಿ. , ಸಂಗೀತ ನಿರ್ದೇಶನ ಮನೋಜವಂ ಆತ್ರೇಯ , ಸಾಹಿತ್ಯ ಚಕ್ರವರ್ತಿ ಸೂಲಿಬೆಲೆ, ಮನೋಜವಂ ಆತ್ರೇಯ, ಎ.ಎನ್. ರಮೇಶ್ ಗುಬ್ಬಿ, ನೃತ್ಯ ನಿರ್ದೇಶನ ಬಾಲ, ಗಣೇಶ್ ಕೃಷ್ಣಪ್ಪ, ಕಲೆ ದೇವ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ್, ಡಾ. ವೀರೇಶ ಹಂಡಗಿ. ಸಹ ನಿರ್ದೇಶನ ನಾಗರಾಜ ಕುರಬೇಟ, ಲೋಕೇಶ್ ಚಿತ್ರದುರ್ಗ, ಜೇಸಿ ಹಾಸನ, ಸಿನಿ ಪತ್ರಕರ್ತ ಹಿರಿಯೂರು ರಾಘವೇಂದ್ರ ಅವರು ಚಿತ್ರಕಥೆ , ಸಂಭಾಷಣೆ, ಸಾಹಿತ್ಯ ರಚಿಸಿ ಮೊದಲ ಬಾರಿಗೆ ಚಿತ್ರ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ದಿನೇಶ್ ಹೆಗ್ಡೆ ಶೀಘ್ರದಲ್ಲೇ ಚಲನಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವದಾಗಿ ತಿಳಿಸಿದ್ದಾರೆ.