ಆದ್ಯೋತ್ ಸುದ್ದಿನಿಧಿ:
ರಾಜ್ಯದ ಕಾಂಗ್ರೆಸ್ ಸರಕಾರ ಹಾಲು ಉತ್ಪಾದಕರಿಗೆ ನೀಡಬೇಕಿರುವ ರೂ. 716 ಕೋಟಿ ಪ್ರೋತ್ಸಾಹ ಧನ ನೀಡದೆ ಬಾಕಿ ಉಳಿಸಿಕೊಂಡು ರೈತರ ಶೋಷಣೆ ಮಾಡುತ್ತಿದೆ ಎಂದು ಉ.ಕ.ಜಿಲ್ಲಾ ಬಿಜೆಪಿ ಪ್ರಧಾನಕಾರ್ಯದರ್ಶಿಗುರುಪ್ರಸಾದ ಹೆಗಡೆ ಹರ್ತೆಬೈಲ್ ಹೇಳಿದ್ದಾರೆ.
ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹಧನ ನೀಡದೆ ಹೈನುಗಾರರ ಜೀವನದ ಜೊತೆ ಕಾಂಗ್ರೆಸ್ ಚೆಲ್ಲಾಟ ಆಡುತ್ತಿದೆ. ಜನ – ಜಾನುವಾರು ಎರಡರ ಶಾಪವೂ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟಲಿದೆ.ಮೋದಿಯವರ ಕಿಸಾನ್ ಸಮ್ಮಾನ್ ನಿಧಿಗೆ ರಾಜ್ಯ ಹೆಚ್ಚುವರಿಯಾಗಿ ನೀಡುತ್ತಿದ್ದ 4000 ನಿಲ್ಲಿಸಿದ ಕಾಂಗ್ರೆಸ್ ರೈತರಿಗೆ ದ್ರೋಹ ಮಾಡಿದೆ.
ರೈತವಿದ್ಯಾ ನಿಧಿ ಯೋಜನೆಯ ಅಡಿಯಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನೀಡಿದ್ದ ವಿದ್ಯಾರ್ಥಿ ವೇತನವನ್ನು, ಈ ದಪ್ಪ ಚರ್ಮದ ಸರ್ಕಾರ ಬಂದಮೇಲೆ ಬಂದ್ ಮಾಡಿದೆ. ಇದು ಯಾವ ಭಾಗ್ಯ ಸಿದ್ದರಾಮಯ್ಯನವರೇ? ರೈತರ ಆತ್ಮಹತ್ಯೆ ಆದಾಗ ಹಾಗೂ ಬರಗಾಲ ಪರಿಸ್ಥಿತಿ ವೀಕ್ಷಣೆ ಮಾಡಲಿಕ್ಕೆ ನಿಮ್ಮ ಸಚಿವರಿಗೆ ಸಮಯವಿರಲಿಲ್ಲ. ಪರಿಹಾರದ ಆಸೆಗೆ ರೈತರ ಆತ್ಮಹತ್ಯೆ ಎಂದು ಸಂವೇದನೆ ಮತ್ತು ವಿವೇಕ ರಹಿತವಾಗಿ ಅನ್ನದಾತರ ಅವಹೇಳನ ಮಾಡಿದ ಸಚಿವರನ್ನು ಸಂಪುಟದಲ್ಲಿ ಇಟ್ಟುಕೊಂಡ ಕೆಟ್ಟ ಸರ್ಕಾರ
ಚರ್ಮ ಗಂಟು ರೋಗ ಬಂದು ಹೈನುಗಾರಿಕೆ ಸಂಕಷ್ಟಕ್ಕೆ ಸಿಲುಕಿದೆ. ಹಾಲಿನ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿದೆ. ಕೊಡಬೇಕಿರುವ ಸಹಾಯಧನ ನೀಡದೆ, ಹಾಲು ಉತ್ಪಾದಕರ ಗಾಯದ ಮೇಲೆ ಯಾಕೆ ಬರೆ ಎಳೆದು ಮತ್ತೂ ಹಿಂಸೆ ನೀಡುತ್ತಿದ್ದೀರಿ? ಈ ಮೊದಲು ಹಳ್ಳಿಗಳಲ್ಲಿ ದೊಡ್ಡ ದೊಡ್ಡ ಕ್ಯಾನ್ ಹಿಡಿದು ಡೈರಿಗೆ ಹಾಲು ಹಾಕಲು ರೈತರು/ಹೈನುಗಾರರು ಬರುವುದು ಕಾಣಲಿಕ್ಕೆ ಸಿಗುತ್ತಿತ್ತು. ಈಗ ರೈತರು ಹೈನುಗಾರಿಕೆ ಉಸಾಪರಿಯೇ ಬೇಡ ಅಂತ ಸಣ್ಣ ಸಣ್ಣ ಗಿಂಡಿ ಹಿಡಿದು ಹಾಲು ಕೊಳ್ಳಲು ಡೈರಿಗೆ ಬರ್ತಾ ಇದ್ದಾರೆ. ಗೋ ಆಧಾರಿತ ಕೃಷಿಯಿಂದ ಜನ ದೂರವಾದರೆ ಅದಕ್ಕೆ ಈ ಕೆಟ್ಟ ಕಾಂಗ್ರೆಸ್ ಸರಕಾರವೇ ಹೊಣೆ.ಈ ಎಲ್ಲಾ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತರ ಕೊಡಬೇಕು ಎಂದು ಗುರುಪ್ರಸಾದ ಹೆಗಡೆ ಆಗ್ರಹಿಸಿದ್ದಾರೆ