ಆದ್ಯೋತ್ ಸುದ್ದಿನಿಧಿ:
ಕರ್ನಾಟಕ ವಿಶ್ವವಿದ್ಯಾಲಯ ಪದವಿಪೂರ್ವ ಕಾಲೇಜನ್ನು ಮುಚ್ಚದೇ (ಪಬ್ಲಿಕ್ ಶಾಲೆ ಆವರಣ) ೨೦೨೪-೨೫ ನೇ ಸಾಲಿನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಪ್ರಥಮ ವರ್ಷದ ಪ್ರವೇಶವನ್ನು ಸ್ಥಗಿತಗೊಳಿಸದೇ ಮುಂದುವರಿಸಬೇಕು ಎಂದು ಕೆ.ಪಿ.ಸಿ.ಸಿ, ಶಿಕ್ಷಕರ ಘಟಕ ಅಧ್ಯಕ್ಷ ಬಸವರಾಜ ಗುರಿಕಾರ ಆಗ್ರಹಿಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದ ಪಬ್ಲಿಕ್ ಶಾಲೆ ಆವರಣದಲ್ಲಿರುವ ಪದವಿ ಪೂರ್ವ ಕಾಲೇಜು ಪ್ರಾರಂಭಗೊಂಡು ಸುಮಾರು ೧೧ ವರ್ಷಗಳು ಪೂರ್ಣಗೊಂಡಿವೆ. ಈ ಕರ್ನಾಟಕ ಪದವಿಪೂರ್ವ ಕಾಲೇಜನಲ್ಲಿ ಕಲಾ ವಿಭಾಗ, ವಾಣಿಜ್ಯ ವಿಭಾಗ, ಮತ್ತು ವಿಜ್ಞಾನ ವಿಭಾಗಗಳಿದ್ದು, ೨೦೧೧-೧೨ ರಿಂದ ೨೦೨೩-೨೪ ರ ವರೆಗೆ ೧೧ ವರ್ಷಗಳ ಸುದೀರ್ಘವಾದ ಶಿಕ್ಷಣದ ಸೇವೆಯನ್ನು ನೀಡಿದ ವಿದ್ಯಾಸಂಸ್ಥೆ, ಅತ್ಯಂತ ಉನ್ನತಮಟ್ಟದ ವಿದ್ಯಾರ್ಜನೆಯನ್ನು ನೀಡಿದ ಸಫಲತೆಯೊಂದಿಗೆ ಪ್ರಸ್ತುತ ೨೦೨೩-೨೪ ರ ಶೈಕ್ಷಣಿಕ ವರ್ಷದಲ್ಲಿ ಅತೀ ಹೆಚ್ಚಿನ ಸಂಖ್ಯೆಯ
ಸುಮಾರು ೩೯೪-೪೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು
ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡದ ಹಾಗೂ ಅರ್ಥಿಕವಾಗಿ ಹಿಂದುಳಿದವರು ಓದುತ್ತಿರುವ ಕಾಲೇಜ್ ಇದಾಗಿದೆ.
ಈ ಕಾಲೇಜಿನಲ್ಲಿ ವಿಜ್ಞಾನ ವಿಭಾಗವು ಇದ್ದು, ಕಾಲೇಜಿನ ಶುಲ್ಕವು ಕಡಿಮೆ ಇರುವದರಿಂದ ಬಡ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಶಾಲಾ ಮತ್ತು ಕಾಲೇಜಿನ ಆವರಣವು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡೆಗಳನ್ನು ಆಡುವಂತಹ ಕ್ರೀಡಾಪಟುಗಳಿಗೆ ಹೇಳಿ ಮಾಡಿಸಿದಂತಹ ಆಟದ ಮೈದಾನವಿದೆ.
ಕಾಲೇಜು ಪ್ರಾರಂಭಗೊಂಡಾಗಿನಿಂದ ಇಲ್ಲಿಯವರೆಗೆ ಸಾವಿರಾರು ಬಡ ಮತ್ತು ಗ್ರಾಮೀಣ ಭಾಗದ ಎಸ್.ಸಿ./ಎಸ್.ಟಿ., ಓ.ಬಿ.ಸಿ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಓದು ಪೂರೈಸಿದ್ದಾರೆ.
ಸುತ್ತ-ಮುತ್ತಲಿನ ಪ್ರದೇಶಗಳಿಂದ ಹಲವಾರು ವಿದ್ಯಾರ್ಥಿಗಳಿಗೆ ಅತ್ಯಂತ ಒಳ್ಳೆಯ ಕಾಲೇಜು ಆವರಣ ಈ ಕರ್ನಾಟಕ ಯುನಿವರ್ಸಿಟಿ ಪದವಿ ಪೂರ್ವ ಕಾಲೇಜು ಹೊಂದಿದೆ. ಅದಕ್ಕೆ ಪೂರಕವಾಗಿರುವ ಬಸ್ ಸೌಲಭ್ಯಗಳು, ಕುಡಿಯುವ ನೀರಿನ ಸೌಲಭ್ಯ, ಇನ್ನಿತರ ಶೌಚಾಲಯ ವ್ಯವಸ್ಥೆ, ಸ್ಕಾಲರ್‌ಶಿಪ್ ಸೌಲಭ್ಯಗಳು, ಮತ್ತು ಭೋಧನೆಯ ಕೊಠಡಿಗಳು, ಅನುಭವಿ ಶಿಕ್ಷಕ ವೃಂದವನ್ನು ಹೊಂದಿದೆ.ಹೀಗೆ ಎಲ್ಲಾ ಅನುಕೂಲ ಇರುವ ಕಾಲೇಜ್ ನ್ನು ಮುಚ್ಚಲು ಹೊರಟಿರುವುದು ಖಂಡನೀಯ ಕೂಡಲೇ ೨೦೨೪-೨೫ನೇ ಸಾಲಿನ ಪ್ರವೇಶಾತಿಯನ್ನು ಪ್ರಾರಂಭಿಸಬೇಕು ಎಂದು ಗುರಿಕಾರ್ ಆಗ್ರಹಿಸಿದ್ದಾರೆ.