ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಪಟ್ಟಣದ ಪ್ರಶಾಂತಿ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತಾಲೂಕಾ ಕಸಾಪ ಸಹಯೋಗದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಉಚಿತವಾಗಿ ನೀಡಲಾಗುವ ಲ್ಯಾಪ್ ಟ್ಯಾಪ್ ಹಾಗೂ ಬ್ಯಾಗ್ ವಿತರಣೆ ಹಾಗೂ ಕನ್ನಡದಲ್ಲಿ ಶೇ.1೦೦ ಅಂಕಪಡೆದ ವಿದ್ಯಾರ್ಥಿಗಳಿಗೆ,ಕನ್ನಡ ಭಾಷಾ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿಯುವುದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಕನ್ನಡ ನೆಲ ಹಾಗೂ ಜಲವನ್ನು ರಕ್ಷಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಬೇರೆ ಭಾಷೆಯನ್ನು ಗೌರವಿಸುವುದರ ಜತೆಗೆ ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ಕನ್ನಡದ ಶಾಲು ನಾಡಿನ ಅಸ್ಮಿತೆ. ಅದನ್ನು ಶ್ರೇಷ್ಠ ಎಂದು ಭಾವಿಸಿ ಕಸಾಪ ಗೌರವ ಸ್ವೀಕರಿಸಬೇಕು. ಶೋಕಿಗಾಗಿ ಅನ್ಯ ಭಾಷೆಯನ್ನು ಮಾತನಾಡುವುದು ಸರಿಯಲ್ಲ. ಭಾಷೆ ಸತ್ತರೆ ಸಂಸ್ಕೃತಿ ಹಾಗೂ ಸಮುದಾಯ ಸಾಯುತ್ತದೆ. ನಾವು ಕನ್ನಡದ ಪ್ರೀತಿ ಹಂಚಲು ಹೊರಟ್ಟಿದ್ದೇವೆ ನಮಗೊಂದಿಷ್ಟು ಜಾಗ ಕೊಡಿ. ನಮ್ಮೊಳಗಿರುವ ಭಾಷೆಯ ಕೀಳರಿಮೆಯನ್ನು ಹೊಡೆದು ಹಾಕಬೇಕು ಎಂದು ಕರೆ ನೀಡಿದರು.
ಈ ವೇಳೆ ತಾಲೂಕಾ ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ, ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ನಾಯ್ಕ, ಕಸಾಪ ಕೋಶಾಧ್ಯಕ್ಷ ಪಿ.ಬಿ.ಹೊಸೂರ,
ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ.ನಾಯ್ಕ, ಯಲ್ಲಾಪುರ ಕಸಾಪ ಅಧ್ಯಕ್ಷ ಸುಬ್ರಮಣ್ಯ ಭಟ್, ಸಾಹಿತಿಗಳಾದ ತಮ್ಮಣ್ಣ ಬೀಗಾರ, ಜಿ.ಜಿ.ಹೆಗಡೆ ಬಾಳಗೋಡ, ಕ್ಷೇತ್ರ ಸಮನ್ವಯಾಧಿಕಾರಿ ಚೈತನ್ಯಕುಮಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ, ಕಸಾಪ ತಾಲೂಕಾ ಘಟಕದ ಚಂದ್ರಶೇಖರ ಕುಂಬ್ರಿಗದ್ದೆ, ಅಣ್ಣಪ್ಪ ಶಿರಳಗಿ, ಟಿ.ಕೆ.ಎಂ.ಆಜಾದ್, ಪ್ರಶಾಂತ ಶೇಟ್ ಉಪಸ್ಥಿತರಿದ್ದರು.
ಉಪನ್ಯಾಸಕ ಹಾಗೂ ಕಸಾಪ ಸದಸ್ಯ ರತ್ನಾಕರ ನಾಯ್ಕ ಸ್ವಾಗತಿಸಿದರು. ತಾಲೂಕಾ ಕಸಾಪ ಅಧ್ಯಕ್ಷ ಗೋಪಾಲ ಭಾಶಿ ಪ್ರಾಸ್ತಾವಿಕ ಮಾತನಾಡಿದರು.
ಉಪಾ ಪ್ರಶಾಂತ ಹಾಗೂ ಸುಧಾರಾಣಿ ನಾಯ್ಕ ನಿರೂಪಿಸಿದರು.