ಸೆ.22ರಂದು ಸಿದ್ದಾಪುರ ಭುವನಗಿರಿಯಿಂದ ಕನ್ನಡಜ್ಯೋತಿರಥ ಯಾತ್ರೆ ಪ್ರಾರಂಭ

ಆದ್ಯೋತ್ ಸುದ್ದಿನಿಧಿ:
ಡಿ.2೦,21,22ರಂದು ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲಭಾರತ ಕನ್ನಡ ಸಾಹಿತ್ಯಸಮ್ಮೇಳನದ ಅಂಗವಾಗಿ ಜನರಲ್ಲಿ ಸಾಹಿತ್ಯ ಸಮ್ಮೇಳನದ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಕನ್ನಡ ಜ್ಯೋತಿಯನ್ನು ಹೊತ್ತಿರುವ ರಥ ಸಂಚರಿಸಲಿದ್ದು ಸೆ.22ರಂದು ಸಿದ್ದಾಪುರ ಭುವನಗಿರಿಯ ಶ್ರೀಭುವನೇಶ್ವರಿ ದೇವಾಲಯದಲ್ಲಿ ಕನ್ನಡಜ್ಯೋತಿರಥ ಯಾತ್ರೆಗೆ ಚಾಲನೆ ದೊರೆಯಲಿದೆ.


ರಾಜ್ಯದ ಏಕೈಕ ಕನ್ನಡತಾಯಿ ಭುವನೇಶ್ವರಿ ದೇವಾಲಯ ಇರುವುದು ಸಿದ್ದಾಪುರದ ಭುವನಗಿರಿಯಲ್ಲಿ.ಕದಂಬರ ಕಾಲದಲ್ಲಿ ನಿರ್ಮಾಣವಾಗಿದೆ ಎನ್ನಲಾಗುತ್ತಿರುವ ಭುವನೇಶ್ವರಿ ದೇವಾಲಯ ಹಸಿರು ಪರಿಸರದ ನಡುವೆ ಎತ್ತರದ ಸ್ಥಳದಲ್ಲಿದೆ. ಇಲ್ಲೊಂದು ಕನ್ನಡತಾಯಿ ಭುವನೇಶ್ವರಿ ದೇವಾಲಯ ಇದೆ ಎನ್ನುವುದು ಎಷ್ಟೋ ಜನರಿಗೆ ತಿಳಿದಿರಲಿಲ್ಲ. ಪತ್ರಿಕೆಯೊಂದರಲ್ಲಿ ಸುದ್ದಿ ಪ್ರಕಟವಾದಾಗ ಕನ್ನಡದ ಅಭಿಮಾನಿಗಳು ಇತ್ತ ಕಡೆಗೆ ತಿರುಗಿದರು.

ಕಳೆದೊಂದು ದಶಕದಿಂದ ರಾಜ್ಯಮಟ್ಟದ ಹಲವು ಕನ್ನಡಪರ ಸಂಘಟನೆಯವರು ಇಲ್ಲಿಗೆ ಆಗಮಿಸಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಕಳೆದ ವರ್ಷ ಕನ್ನಡ ಸಾಹಿತ್ಯಪರಿಷತ್ ರಾಜ್ಯಾಧ್ಯಕ್ಷ ಮಹೇಶ ಜೋಷಿಯವರು ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯಸಮ್ಮೇಳನಕ್ಕೆ ಕನ್ನಡತಾಯಿಯ ಕ್ಷೇತ್ರದಿಂದ ಕನ್ನಡಜ್ಯೋತಿ ರಥಯಾತ್ರೆ ಪ್ರಾರಂಭಿಸಿ ಈ ಜ್ಯೋತಿರಥ ರಾಜ್ಯಾದ್ಯಂತ ಸಂಚರಿಸಿ ಸಮ್ಮೇಳನದ ಪ್ರಾರಂಭಕ್ಕೆ ಇದೇ ಜ್ಯೋತಿಯಿಂದಲೇ ದೀಪ ಬೆಳಗಿಸುವ ಮೂಲಕ ಚಾಲನೆ ನೀಡುವಂತೆ ಮಾಡಿದ್ದರು. ಈ ಬಾರಿಯೂ ಅದೇ ಸಂಪ್ರದಾಯ ಮುಂದುವರಿದಿದ್ದು ಇದು ಮುಂದುವರಿಯಲಿ ಎಂದು ಕನ್ನಡ ಅಭಿಮಾನಿಗಳು ಆಶಿಸಿದ್ದಾರೆ.

ಕನ್ನಡಜ್ಯೋತಿರಥ ಜಿಲ್ಲೆಯಲ್ಲಿ ಸಂಚರಿಸುವ ಮಾರ್ಗಗಳು;-
ಸೆ.22 ರಂದು ಸಿದ್ದಾಪುರದ ಭುವನಗಿರಿ ಶ್ರೀಭುವನೇಶ್ವರಿ ದೇವಾಲಯದಿಂದ ಕನ್ನಡ ಜ್ಯೋತಿ ರಥಯಾತ್ರೆ ಪ್ರಾರಂಭವಾಗಲಿದೆ.ಮಧ್ಯಾಹ್ನ 3 ಗಂಟೆಗೆ ಹೊನ್ನಾವರ, ಸಂಜೆ 5 ಗಂಟೆಗೆ ಕುಮಟಾದಲ್ಲಿ ತಂಗಲಿದೆ.ಸೆ.23 ಬೆಳಿಗ್ಗೆ 1೦ ಗಂಟೆಗೆ ಅಂಕೋಲಾ ತಲುಪಲಿದೆ.ಮಧ್ಯಾಹ್ನ 12 ಗಂಟೆಗೆ ಕಾರವಾರ ಮಧ್ಯಾಹ್ನ 3 ಗಂಟಗೆ ಗೋವಾದ ಕಾಣಕೋಣದವರೆಗೆ ರಥ ಮುಂದುವರಿದು ಜೋಯಿಡಾದಲ್ಲಿ ವಾಸ್ತವ್ಯ ಮಾಡಲಿದೆ. ಸೆ.24 ರಂದು ಜೋಯಿಡಾದಿಂದ ಹೊರಟು 11.3೦ಕ್ಕೆ ದಾಂಡೇಲಿ ತಲುಪಲಿದೆ. ಮಧ್ಯಾಹ್ನ 4 ಗಂಟೆಗೆ ಹಳಿಯಾಳಕ್ಕೆ ಸಾಗಲಿದ್ದು ಅಲ್ಲಿ ವಾಸ್ತವ್ಯ ಹೂಡಲಿದೆ.ಸೆ.25ರಂದು ಬೆಳಿಗ್ಗೆ 11ಕ್ಕೆ ಯಲ್ಲಾಪುರ ಹಾಗೂ ಮಧ್ಯಾಹ್ನ 3 ಗಂಟಗೆ ಶಿರಸಿ ತಲುಪಲಿದೆ. ನಂತರ ಹಾನಗಲ್ ಮಾರ್ಗವಾಗಿ ಹಾವೇರಿ ತಲುಪಲಿದೆ.
ಕನ್ನಡಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿರಥಯಾತ್ರೆ ಕಾರ್ಯಕ್ರಮದ ಪೂರ್ವಭಾವಿ ಸಭೆ
ಮಂಡ್ಯದಲ್ಲಿ ನಡೆಯಲಿರುವ ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡಜ್ಯೋತಿರಥ ಯಾತ್ರೆಗೆ ಸೆ.22 ರವಿವಾರ ತಾಲೂಕಿನ ಭುವನಗಿರಿಯಲ್ಲಿರುವ ಶ್ರೀಭುವನೇಶ್ವರಿ ದೇವಾಲಯದಿಂದ ಚಾಲನೆ ದೊರಕಲಿದ್ದು ಇದರ ಕಾರ್ಯಕ್ರಮದ ರೂಪುರೇಷೆ ತಯಾರಿಸಲು ಗುರುವಾರ ತಹಸೀಲ್ದಾರ ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಕಾವ್ಯಾರಾಣಿ,ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡಜ್ಯೋತಿರಥ ಯಾತ್ರೆ ಕಾರ್ಯಕ್ರಮವನ್ನು ನಡೆಸಲು ತಾಲೂಕು ಆಡಳಿತ ಸಿದ್ದವಾಗಿದೆ. ಅನುದಾನದ ಕೊರತೆ ಇದ್ದರೂ ಕಾರ್ಯಕ್ರವನ್ನು ಅಚ್ಚುಕಟ್ಟಾಗಿ ನಡೆಸಲಾಗುವುದು.ಇದು ಕನ್ನಡ ತಾಯಿಯ ಕಾರ್ಯಕ್ರಮವಾಗಿದ್ದು ಎಲ್ಲರೂ ಭಾಗವಹಿಸಬೇಕು. ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಲಾಗುವುದು ನಂತರ ಸಭಾಕಾರ್ಯಕ್ರಮ ನಡೆಯಲಿದೆ. 11 ಗಂಟೆಗೆ ಜ್ಯೋತಿಯನ್ನು ರಥದಲ್ಲಿ ಏರಿಸಲಾಗುವುದು ಅಲ್ಲಿಂದ ಪ್ರಾರಂಭವಾಗುವ ಮೆರವಣಿಗೆ ಕಾರ್ಯಕ್ರಮ ಬೇಡ್ಕಣಿ ಮಾರ್ಗವಾಗಿ ರಥವು ಸಿದ್ದಾಪುರ ಪಟ್ಟಣವನ್ನು ಪ್ರವೇಶಿಸಲಿದೆ. ಹೊಸೂರು ಜೋಗವೃತ್ತದಲ್ಲಿ ಪಟ್ಟಣಪಂಚಾಯತ್‌ವತಿಯಿ0ದ ಸ್ವಾಗತ ಹಾಗೂ ಪೂಜೆ ನಡೆಯಲಿದೆ. ಪಟ್ಟಣದ ತಿಮ್ಮಪ್ಪ ನಾಯಕ ವೃತ್ತದವರೆಗೆ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.

ಮೆರವಣಿಗೆಯಲ್ಲಿ ಕಲಾತಂಡಗಳು ಭಾಗವಹಿಸಲಿದೆ ಸ್ಥಳೀಯ ಕನ್ನಡಸಾಹಿತ್ಯಪರಿಷತ್,ಕನ್ನಡಪರ ಸಂಘಟನೆಗಳು,ಲಯನ್ಸ್ ಕ್ಲಬ್,ನಿವೃತ್ತ ನೌಕರರ ಸಂಘ ಸೇರಿದಂತೆ ಹಲವು ಸಂಘಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಸ್ಥಳೀಯ ಕಲಾವಿದರು,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಎಲ್ಲಾ ಸರಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಅವರ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗಬೇಕು ಈ ಬಗ್ಗೆ ಸುತ್ತೋಲೆ ಹೊರಡಿಸಲಾಗುವುದು ಮತ್ತು ಪ್ರತಿಯೊಬ್ಬ ನೌಕರರ ಹಾಜರಾತಿ ಪಡೆಯಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ತಹಸೀಲ್ದಾರ ಮಧುಸೂದನ ಕುಲಕರ್ಣಿ,ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲ ನಾಯ್ಕ,ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್,ನಿಕಟಪೂರ್ವ ಸಾಹಿತ್ಯಪರಿಷತ್ ಅಧ್ಯಕ್ಷರಾದ ಕನ್ನೇಶ ನಾಯ್ಕ ಕೋಲಸಿರ್ಸಿ,ನಾಗರಾಜ ನಾಯ್ಕ ಮಾಳಕೋಡ ಸಲಹೆ,ಸೂಚನೆ ನೀಡಿದರು.
ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ,ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ,ಸ್ಥಾಯಿಸಮಿತಿ ಅಧ್ಯಕ್ಷ ಸುಧೀರ್ ನಾಯ್ಕ,ಮುಖ್ಯಾಧಿಕಾರಿ ಜೆ.ಆರ್.ನಾಯ್ಕ,ಪಿ.ಬಿ.ಹೊಸೂರು,ಅಣ್ಣಪ್ಪ ನಾಯ್ಕ ಮುಂತಾದವರು ಉಪಸ್ಥಿತರಿದ್ದರು

About the author

Adyot

Leave a Comment