ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಶಿರಳಗಿಯ ಪ್ರಸಿದ್ದ ಹಿರಿಯ ಯಕ್ಷಗಾನ ಕಲಾವಿದ ತಿಮ್ಮಪ್ಪ ನಾರಾಯಣ ಹೆಗಡೆಯವರು ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ ೨೦೨೩ರ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ
ಯಕ್ಷಗಾನ ಕಲೆ ಸಮೃದ್ಧವಾದ ಶಿರಳಗಿಯಲ್ಲಿ ನಾರಾಯಣ ಹೆಗಡೆ, ಮಹಾಲಕ್ಷ್ಮಿದಂಪತಿಗಳ ಪುತ್ರರಾಗಿ ಜನಿಸಿದ(೧೭-೫-೧೯೫೭) ತಿಮ್ಮಪ್ಪ ಹೆಗಡೆ ಬಾಲ್ಯದಿಂದಲೇ ಯಕ್ಷಗಾನದತ್ತ ಆಕರ್ಷಿತರಾಗಿದ್ದರು. ಪ್ರಸಿದ್ಧ ಕಲಾವಿದ ಮತ್ತು ಹತ್ತಿರದ ಸಂಬಂಧಿಕರು ಆದ ಗೋಡೆ ನಾರಾಯಣ ಹೆಗಡೆಯವರ ಬಳಿ ಯಕ್ಷಗಾನ ಅಭ್ಯಸಿಸಿ ಯಕ್ಷಗಾನ ರಂಗ ಪ್ರವೇಶಿಸಿದರು.
ಆರಂಭದಲ್ಲಿ ಕೊಳಗಿ-ಶಿರಳಗಿ ಹಾಗೂ ಹಣಜೀಬೈಲ್ ಸ್ಥಾನಿಕ ಮೇಳಗಳಲ್ಲಿ ತೊಡಗಿಕೊಂಡ ಅವರು ನಂತರದಲ್ಲಿ ಉತ್ತರಕನ್ನಡದ ಗುಂಡಬಾಳ ,ಇಡಗುಂಜಿ ,ಪಂಚಲಿಂಗೇಶ್ವರ, ದಕ್ಷಿಣ ಕನ್ನಡದ ಅಮೃತೇಶ್ವರಿ,ಸಾಲಿಗ್ರಾಮ ಮೇಳಗಳಲ್ಲಿ ಪಾತ್ರ ನಿರ್ವಹಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಯಕ್ಷಗಾನ ಕ್ಷೇತ್ರದ ಪ್ರಸಿದ್ಧ ಕಲಾವಿದರ ಮತ್ತು ಭಾಗವತರ ಜೊತೆಯಲ್ಲಿ ಕಾರ್ಯನಿರ್ವಹಿಸಿದ ತಿಮ್ಮಪ್ಪ ಹೆಗಡೆ ಧರ್ಮರಾಯ, ಸಂಜಯ,ಅರ್ಜುನ,ವಿಧುರ, ಲಕ್ಷ್ಮಣ,ಅಕ್ರೂರ, ಪರಶುರಾಮ ಮುಂತಾಗಿ ಅನೇಕ ಪೋಷಕ ಪಾತ್ರಗಳಲ್ಲಿ ತಮ್ಮ ನೃತ್ಯ, ಮಾತುಗಾರಿಕೆ, ಭಾವಾಭಿನಯದ ಮೂಲಕ ಪ್ರತಿಭೆ ನಿರೂಪಿಸಿ, ಆ ಪಾತ್ರಗಳಿಗೆ ಸಮರ್ಥ ನ್ಯಾಯ ಒದಗಿಸಿ, ಯಕ್ಷರಂಗದಿಂದಲೂ, ಪ್ರೇಕ್ಷಕರಿಂದಲೂ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸದ್ಯ ಕೆರೆಮನೆ ಶಿವಾನಂದ ಹೆಗಡೆಯವರ ಮೇಳದಲ್ಲಿ ತೊಡಗಿಕೊಂಡಿರುವ ತಿಮ್ಮಪ್ಪ ಹೆಗಡೆಯವರಿಗೆ ಈಗಾಗಲೇ ಸಾಕಷ್ಟು ಪ್ರಶಸ್ತಿ,ಪುರಸ್ಕಾರಗಳು ಸಂದಿದ್ದು ಈ ಪ್ರಶಸ್ತಿ ಅವರಿಗೆ ಮತ್ತು ತಾಲೂಕಿಗೆ ಮಾತ್ರವಲ್ಲ, ಈಡೀ ಬಡಗುತಿಟ್ಟಿನ ಯಕ್ಷಗಾನ ಕ್ಷೇತ್ರಕ್ಕೆ ಹೆಮ್ಮೆ ತಂದಿದೆ.