ಶ್ರೀಕ್ಷೇತ್ರ ಇಟಗಿ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲ ಐತಿಹಾಸಿಕ ಕ್ಷೇತ್ರವೂ ಆಗಿದೆ

ಆದ್ಯೋತ್ ಸುದ್ದಿನಿಧಿ;
ಉತ್ತರಕನ್ನಡಜಿಲ್ಲೆಯ ಸಿದ್ದಾಪುರ ತಾಲೂಕಿನ ಶ್ರೀ ಕ್ಷೇತ್ರ ಇಟಗಿಯ(ಇಷ್ಟಿಕಾಪುರ) ಮಹತೋಬಾರ ಶ್ರೀ ರಾಮೇಶ್ವರ, ಶ್ರೀ ಅಮ್ಮನವರು, ಶ್ರೀ ವಿಠ್ಠಲ ದೇವರ ದಿವ್ಯಾಷ್ಟಬಂಧ ಮಹೋತ್ಸವ ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರಭಾರತೀಶ್ರೀಗಳ ಹಾಗೂ ಹಾಸನದ ಶ್ರೀರಾಮಾವಧೂತ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಏಪ್ರಿಲ್ ೪ ರಂದು ಜರುಗಿತು.

ಏಪ್ರಿಲ್ ೧೦ ರಂದು ಈ ಕುರಿತು ಧರ್ಮಸಭೆ ನಡೆಯಲಿದೆ. ದಿವ್ಯಾಷ್ಟಬಂಧ ಮಹೋತ್ಸವ ನಿಮಿತ್ತ ಏಪ್ರಿಲ್ ೧೩ ರ ವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಕ್ಷೇತ್ರ ಇಟಗಿಯು ಧಾರ್ಮಿಕ ಕ್ಷೇತ್ರವಾಗಿದೆಯಲ್ಲದೆ, ಐತಿಹಾಸಿಕ ಹಿನ್ನೆಲೆ ಹೊಂದಿದೆ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಕ್ರಿ.ಶ.೧೯೩೦ ರ ದಶಕದಿಂದಲೂ ಬ್ರಿಟಿಷರ ವಿರುದ್ಧ ಪ್ರಮುಖ ಹೋರಾಟದ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ. ಈ ಸಂದರ್ಭದಲ್ಲಿ ಇಟಗಿ ಶ್ರೀಕ್ಷೇತ್ರವನ್ನು ಪರಿಚಯಿಸುವ ಪ್ರಯತ್ನವನ್ನು ಲೇಖಕ ಕೆಕ್ಕಾರ ನಾಗರಾಜ ಭಟ್ಟ ಮಾಡಿದ್ದಾರೆ.

ಸಿದ್ದಾಪುರ ತಾಲೂಕಿನ ಇಟಗಿಗೆ ಹತ್ತಿರದಲ್ಲಿರುವ ಐಸೂರು ಹಾಗೂ ಮತ್ತೊಂದು ಭಾಗದಲ್ಲಿರುವ ಬಿಳಗಿ ಇವೆರಡೂ ಸಹ ಐತಿಹಾಸಿಕ ತಾಣಗಳಾಗಿವೆ. ಒಂದು ಕಾಲದಲ್ಲಿ ಐಶ್ವರ್ಯಪುರ ಹಾಗೂ ಶ್ವೇತಪುರ ಎಂದು ಗುರುತಿಸಿಕೊಂಡು ರಾಜಧಾನಿಗಳಾಗಿ ಮೆರೆದ ಈ ಸ್ಥಳಗಳು ಇಂದಿಗೂ ಅನೇಕ ಐತಿಹಾಸಿಕ ಕುರುಹುಗಳನ್ನು ಉಳಿಸಿಕೊಂಡಿವೆ. ಬಿಳಗಿ ಅರಸು ಮನೆತನದವರು ನಿತ್ಯಪೂಜಾ ಸೇವೆಯ ವ್ಯವಸ್ಥೆಯನ್ನು ಶ್ರೀಕ್ಷೇತ್ರ ಇಟಗಿಯ ರಾಮೇಶ್ವರ ದೇವಾಲಯಕ್ಕೆ ಕಲ್ಪಿಸಿದ್ದು ಅಂದಿನ ಅರಸರ ಕಾಲದಲ್ಲಿಯೇ ಶ್ರೀ ರಾಮೇಶ್ವರ ದೇವಾಲಯಕ್ಕೆ ಶಿಲಾಮಯವಾದ ದೇವಾಲಯ ನಿರ್ಮಾಣ ಪೂರ್ಣಗೊಂಡು ಅದಕ್ಕೆ ಕ್ಷೇತ್ರ ಗೌರವ ನೀಡಲಾಯಿತೆಂದು ಇತಿಹಾಸ ತಿಳಿಸುತ್ತದೆ. ಐಸೂರು ಮೂಲ ಸಂಸ್ಥಾನದ ಬಿಳಗಿಯ ಪ್ರಸಿದ್ಧ ದೊರೆಯಾಗಿದ್ದ ಘಂಟೇAದ್ರನ ಮಗ ತಿಮ್ಮರಸನ ಹೆಸರಿನಲ್ಲಿ ದೇವರಿಗೆ ಸದಾ ಸೇವೆ ನಡೆಯುವಂತೆ ಅಂದೇ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ನವರಂಗದ ದ್ವಾರದ ಎದುರಿನಲ್ಲಿ ಹಾಸುಗಲ್ಲಿನ ಮೇಲೆ ದೇವರಿಗೆ ನಮಸ್ಕಾರ ಮಾಡುತ್ತಿರುವ ಭಕ್ತನೋರ್ವನ ರೇಖಾ ಚಿತ್ರವಿದ್ದು ಅದರ ಪಕ್ಕದಲ್ಲಿ ಈ ವಿಷಯವನ್ನು ಕೆತ್ತಿ ಘೋಷಿಸಲಾಗಿದೆ. ದೇವಾಲಯದ ಬಲಭಾಗದ ಭಿತ್ತಿಯಮೇಲೂ ಅಂತರಾಳದ ನೆಲಹಾಸಿನ ಮೇಲೂ ಕನ್ನಡ ಲಿಪಿಯಲ್ಲೇ ಅನೇಕ ಬರಹಗಳಿದ್ದು ದೇವಾಲಯದ ಇತಿಹಾಸ ವಿವರಿಸಲಾಗಿದೆ.

ರಾಮೇಶ್ವರ ದೇವರ ನವರಂಗದ ಉಲ್ಲೇಖದಲ್ಲಲ್ಲದೇ ದೇವರ ಹಲವು ಆಭರಣ, ವಿಭೂಷಣಗಳು ಹಾಗೂ ಪಾತ್ರೆ ಪಗಡೆಗಳ ಮೇಲೂ ಕೂಡ ಘಂಟೆಪ್ಪ ನಾಯಕರ ತಿಮ್ಮಯ್ಯನ ವಿಳಾಸವಿದ್ದು ಬಿಳಗಿ ಅರಸರ ಕೊಡುಗೆಯನ್ನು ಇದು ಬಿಂಬಿಸುತ್ತಿದೆ. ಇಟಗಿಯಲ್ಲಿ ಹಿಂದಿನಿಂದಲೂ ಕೈಂಕರ್ಯಕ್ಕಾಗಿ ಎಂಟು ಮಂದಿ ಅರ್ಚಕರ ವ್ಯವಸ್ಥೆ ಮಾಡಲಾಗಿದ್ದು ಪ್ರಸ್ತುತ ಆಂಗೀರಸ, ಜಮದಗ್ನಿ, ಕಾಶ್ಯಪ ಗೋತ್ರಗಳ ಅರ್ಚಕ ಮನೆತನಗಳಿವೆ.
ಕ್ರಿ.ಶ.೧೪೯೧ರ ಹೊತ್ತಿಗೆ ಮೊದಲನೆಯ ಘಂಟೆರಾಯನ ಕಾಲದಲ್ಲಿ ಐಸೂರಿನಿಂದ ಬಿಳಗಿಗೆ ರಾಜಧಾನಿಯು ಸ್ಥಳಾಂತರವಾಯಿತು ಎನ್ನಲಾಗುತ್ತಿದ್ದು ಕ್ರಿ.ಶ.೧೫೮೮ ರ ಎಡಬಲಗಳಲ್ಲಿ ಇಮ್ಮಡಿ ನರಸಿಂಹ ಇಟಗಿಯ ಶ್ರೀ ರಾಮೇಶ್ವರ ದೇವರಿಗೆ ನಿತ್ಯ ಸೇವೆಯ ವ್ಯವಸ್ಥೆ ಕಲ್ಪಿಸಿದ್ದು ಅದಕ್ಕೂ ಪೂರ್ವದಲ್ಲಿಯೇ ಶಿಲಾಮಯ ದೇವಾಲಯ ನಿರ್ಮಾಣ ನಡೆದಿರಬಹುದೆಂದೂ ಹೇಳಲಾಗುತ್ತಿದೆ. ಉತ್ಸವ ಮೂರ್ತಿ, ಷಣ್ಮುಖ ಪ್ರತಿಮೆ, ವಿಠ್ಠಲ ಮೂರ್ತಿ ಮುಂತಾದವುಗಳು ಇಟಗಿಯ ಪ್ರತಿಮಾ ಶಿಲ್ಪಗಳಾಗಿದ್ದು ವಿಠ್ಠಲಮೂರ್ತಿಯು ಶ್ವೇತವರ್ಣದ ಅಮೃತಶಿಲಾ ಮೂರ್ತಿಯಾಗಿ ಕಂಗೊಳಿಸುತ್ತಿದೆ.

ಶ್ರೀ ಕ್ಷೇತ್ರ ಇಟಗಿಯಲ್ಲಿ ಚಂದ್ರಮಾನ ಯುಗಾದಿ, ವಸಂತೋತ್ಸವ, ಉಪಾಕರ್ಮ, ಗಣೇಶ ಚೌತಿ, ನವರಾತ್ರಿ, ಗಂಗಾಷ್ಟಮಿ, ಮಾಸೋತ್ಸವ, ಚಂಪಾಷಷ್ಠೀ, ಮಹಾಶಿವರಾತ್ರಿ, ರಥೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಉತ್ಸವ ಕಾರ್ಯಗಳನ್ನು ನಡೆಸಲು ಹಿಂದಿನಿAದಲೇ ಕುಟುಂಬಗಳನ್ನು ಗುರುತಿಸಿ ಕಾರ್ಯಗಳನ್ನು ಹಂಚಿಕೊಡಲಾಗಿದೆ. ಹಿರೇಅಯಿವತ್ತಳಿಗೆ, ಚಿಕ್ಕಅಯಿವತ್ತಳಿಗೆ, ಕುಡಗುಂದ, ಕಿಲಾರ ಮತ್ತು ಹಿರೇಕೋಡು ಎಂಬ ಪಂಚ ಮಾಗಣಿಗಳ ನಿತ್ಯವ್ಯಾಪ್ತಿಯನ್ನು ಹೊಂದಿರುವ ಕ್ಷೇತ್ರವಿದಾಗಿದ್ದು ಪಂಚ ಮಾಗಣಿಗಳಲ್ಲದೇ ಹೇರೂರು-ಬಾಳೂರು, ಕರೂರು-ಸೋದೆ, ಕೆಳದಿ-ಕ್ಯಾಸನೂರು, ಇಕ್ಕೇರಿ-ಸಾಗರ, ಗೇರಸಪ್ಪೆ-ಚಂದಾವರ, ಇಡುವಾಣಿ-ತಾಳಗುಪ್ಪಾ, ಬಾಳೇಹಳ್ಳಿ-ಮುಠ್ಠಳ್ಳಿ, ಗೋಳಗೋಡು-ಸಂಪಗೋಡು, ಹೆಗ್ಗದ್ದೆ-ಬಿದ್ರಕಾನು, ಕೊಳಗಿ-ಶಿರಳಗಿ ಇವುಗಳೂ ವಿಶೇಷ ವ್ಯಾಪ್ತಿಯಲ್ಲಿ ಸಮಾವೇಶವಾಗಿ ಬಂದಿರುವ ಮಾಗಣಿಗಳೆಂದು ಇತಿಹಾಸ ತಿಳಿಸುತ್ತದೆ.

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಪುರಾತನ ದೇವಾಲಯ “ಮಾತೋಬಾರ ಶ್ರೀ ರಾಮೇಶ್ವರ ದೇವಾಲಯ ಇಟಗಿ” ಯಲ್ಲಿ ದೇಶದ ಇನ್ನಾವುದೇ ಪುಣ್ಯಕ್ಷೇತ್ರಗಳಲ್ಲಿ ನಡೆಯದ ರೀತಿಯಲ್ಲಿ ಆಗಮೋಕ್ತ ಬಲಿಪೂಜೆ ಪ್ರತಿದಿನ ತ್ರಿಕಾಲವೂ ಇಲ್ಲಿ ನಡೆದುಕೊಂಡು ಬರುತ್ತಿರುವುದೂ ಕೂಡ ಒಂದು ವಿಶೇಷ. ಬತ್ತ, ಪತ್ರೆ ಮುಂತಾದ ಪರಿಕರಗಳಿಂದ ಪಳ, ಡೋಲು ವಾದ್ಯಗಳು, ದೀವಟಿಗೆ ಸಹಿತ ಈ ರೀತಿಯ ಬಲಿಪೂಜೆ ಚಾಚೂ ತಪ್ಪದೆ ಶತಶತಮಾನಗಳಿಂದ ಇಲ್ಲಿನಡೆಯುತ್ತಿರುವುದು ವೈಶಿಷ್ಠ್ಯಪೂರ್ಣವಾಗಿದೆ.

ಸಿದ್ದಾಪುರ ತಾಲೂಕಿನ ಕೇಂದ್ರ ಸ್ಥಳದಿಂದ ಸುಮಾರು ೧೯ ಕಿಮಿ ಅಂತರದಲ್ಲಿರುವ ಇಟಗಿಯ ಶ್ರೀ ರಾಮೇಶ್ವರ ದೇವಾಲಯ ಸುಂದರವಾದ ಪ್ರಕೃತಿಯ ಮಡಿಲಲ್ಲಿ ನೆಲೆನಿಂತಿದೆ. ಈ ಕ್ಷೇತ್ರವನ್ನು “ಇಷ್ಟಿಕಾಪುರ ರಾಮಕ್ಷೇತ್ರ”ಎಂದೂ ಕರೆಯಲಾಗುತ್ತಿದೆ.ಹೀಗಾಗಿಯೇ ದೇಶಕಾಲ ಸಂಕೀರ್ತನ ಸಂದರ್ಭದಲ್ಲಿ “ರಾಮಕ್ಷೇತ್ರೆ”ಎಂದು ಹೆಸರಿಸಲಾಗುತ್ತದೆ. ಶ್ರೀ ರಾಮೇಶ್ವರ ದೇವರ ಆವಾರದಲ್ಲಿ ಅಮ್ಮನವರ ಗುಡಿ ಹಾಗೂ ವಿಠ್ಠಲ ದೇವಾಲಯಗಳೂ ಇವೆ.

ಶ್ರೀ ರಾಮೇಶ್ವರ ದೇವರ ಸನ್ನಿಧಾನದಲ್ಲಿ ಪ್ರತಿ ಅಮಾವಾಸ್ಯೆ ದಿನ “ಶತರುದ್ರ ಪಾರಾಯಣ”, ಪ್ರತಿ ಹುಣ್ಣಿಮೆ ದಿನ “ದುರ್ಗಾಹವನ”, ಪ್ರತಿ ಸಂಕಷ್ಟಹರ ಚತುರ್ಥಿಗೆ “ಚತುರ್ನಾಲಿಕೇಳ ಗಣಹವನ” ಕಾರ್ಯಕ್ರಮಗಳು ಜರುಗುತ್ತವೆ. ಯುಗಾದಿಪರ್ವ, ವಸಂತೋತ್ಸವ, ಕಕ್ಕೆ ಹುಣ್ಣಿಮೆ, ಉಪಾಕರ್ಮ, ಮಹಾಚೌತಿ ಹಬ್ಬ, ಗಂಗಾಷ್ಟಮಿ, ಶರನ್ನವರಾತ್ರಿ, ವಿಜಯದಶಮಿ, ಗೋಪೂಜೆ, ಕಾರ್ತಿಕ ಪೂರ್ಣಿಮೆ ಮಾಸೋತ್ಸವ, ಚಂಪಾಷಷ್ಠಿ, ಶಿವರಾತ್ರಿ, ರಥೋತ್ಸವ ಅನೂಚಾನವಾಗಿ ನಡೆದುಕೊಂಡು ಬಂದಿದೆ.
ಇಟಗಿ ರಾಮೇಶ್ವರ ದೇವರ ರಥೋತ್ಸವ ಹಗಲು ಉತ್ಸವ ಮತ್ತು ರಾತ್ರಿ ಉತ್ಸವ ಎಂದು ಬೇರೆ ಬೇರೆ ನಡೆಯುತ್ತದೆ. ಮಹಾರಥೋತ್ಸವದ ದಿನ ಅಲಂಕರಿಸಿದ ರಥದಲ್ಲಿ ಕುಳಿತಿರುವ “ಉಮಾಮಹೇಶ್ವರ”ನನ್ನು ಭಕ್ತರು ನೋಡುವುದರಿಂದ ರಾಗ-ದ್ವೇಷಗಳು ದೂರಾಗುವ ಜತೆ ಜನನ, ಮರಣಗಳ ದು:ಖವಿಲ್ಲದೇ ಮೋಕ್ಷ ಲಭಿಸುತ್ತದೆ. ಶ್ರೀದೇವರ ಉತ್ಸವಾದಿಗಳನ್ನು ಮಾಡಿದರೆ “ಅಶ್ವಮೇಧ ಯಾಗ” ಮಾಡಿದ ಫಲ ಲಭಿಸುತ್ತದೆ ಎಂದು ಶಾಸ್ತçಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.
“ಕರ್ನಾಟಕದ ದೇವಾಲಯಗಳು” ಗ್ರಂಥದಲ್ಲಿ ಇಟಗಿಯ ದೇವಾಲಯಗಳ ಬಗ್ಗೆ ಉಲ್ಲೇಖಿಸಲಾಗಿದ್ದು “ಸಿದ್ದಾಪುರದಿಂದ ೧೯ ಕಿ.ಮಿ.ದೂರದಲ್ಲಿರುವ ಇಟಗಿ ಗ್ರಾಮದಲ್ಲಿ ರಾಮೇಶ್ವರ ದೇವಾಲಯವಿದೆ. ಇಲ್ಲಿ ರಾಮ ಹಾಗೂ ಈಶ್ವರ ದೇವಾಲಯಗಳಿವೆ. ಈ ದೇವಾಲಯವನ್ನು ೧೫೬೦ ರಲ್ಲಿ ಬಿಳಗಿಯ ರಾಜನು ಕಟ್ಟಿಸಿದನೆನ್ನಲಾಗಿದೆ. ದೇವಾಲಯದ ಎಡಬದಿಯಲ್ಲಿ ಅಮ್ಮನವರ ಗುಡಿ ಇದೆ. ಮುಂದೆ ಕ್ಷೇತ್ರಪಾಲ, ಬಲಗಡೆ ವಿಠ್ಠಲ ದೇವಾಲಯವಿದೆ. ವಿಠ್ಠಲ ದೇವಾಲಯವು ೯ ನೇ ಶತಮಾನದ್ದೆಂದು ತಿಳಿಯಲಾಗಿದೆ” (ಇಟಗಿ ಇತಿವೃತ್ತ ಗ್ರಂಥದಲ್ಲಿ)

ಕೆಕ್ಕಾರ ನಾಗರಾಜ ಭಟ್ಟ ಸಿದ್ದಾಪುರ.

About the author

Adyot

Leave a Comment