ಇಂದು ಮೇ 1 ಕಾರ್ಮಿಕ ದಿನಾಚರಣೆ : “ಮೇ ದಿನಾಚರಣೆ”ಯ ಇತಿಹಾಸ


ಆದ್ಯೋತ್ ಸುದ್ದಿನಿಧಿ:
ಚಾರಿತ್ರಿಕ ಮೇ ದಿನ ದುಡಿಯುವ ವರ್ಗದ ಅಂತಾರಾಷ್ಟ್ರೀಯ ಸೌಹಾರ್ದ ದಿನ. ಜಗತ್ತಿನಾದ್ಯಂತ ಆಚರಿಸಲ್ಪಡುತ್ತದೆ. ಮೇ ದಿನದಂದು ಕಾರ್ಮಿಕ ವರ್ಗದ ಮತ್ತು ಜನತೆಯ ಐಕ್ಯತೆಯನ್ನು ರಕ್ಷಿಸಲು ಮತ್ತು ಉಳಿಸಿಕೊಳ್ಳಲು ತಾನು ಬದ್ಧ ಎಂದು ಪುನರುಚ್ಚರಿಸುತ್ತದೆ. ಮೇ 1 ರಂದು ಇಡೀ ವಿಶ್ವದಾದ್ಯಂತ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತಿದೆ. ಮೇ ದಿನಕ್ಕೆ ಮಹತ್ತರವಾದ ಚಾರಿತ್ರಿಕ ಮಹತ್ವ ಇದೆ. ಆದ ಕಾರಣ ಅದೊಂದು ಅಂತರಾಷ್ಟ್ರೀಯ ಮಹತ್ವದ ದಿನವಾಗಿದೆ. ಅಂದು ಪ್ರಪಂಚದಾದ್ಯಂತ ಕಾರ್ಮಿಕ ವರ್ಗದ ಐಕ್ಯತೆಯ ಉತ್ಸವವನ್ನು ಆಚರಿಸಲಾಗುತ್ತದೆ.ಕಾರ್ಮಿಕರು 8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿರಾಮಕ್ಕಾಗಿ ನಡೆದ ಸುದೀರ್ಘವಾದ ಹೋರಾಟದ ಅಂತಿಮ ಜಯವೇ ಮೇ ದಿನ. ‘‘ವಿಶ್ವದ ಕಾರ್ಮಿಕರೇ ಒಂದಾಗಿ, ನೀವು ಸಂಕೋಲೆಗಳನ್ನಲ್ಲದೆ, ನೀವು ಕಳೆದುಕೊಳ್ಳಲು ಬೇರೇನೂ ಇಲ್ಲ’’ ಜಗತ್ತಿನ ಶ್ರಮ ಜೀವಿಗಳ ಅಂತಾರಾಷ್ಟ್ರೀಯತೆ ಒಂದು ಗುಡುಗಿನಂತೆ ಮೊಳಗಿದ್ದು ಈ ಘೋಷಣೆಯೊಂದಿಗೆ.
ಪ್ಯಾರೀಸ್‌ನಲ್ಲಿ 1889ರಲ್ಲಿ ಕೊಟ್ಟ ಕರೆಯೊಂದಿಗೆ 1890ರಲ್ಲಿ ಮೇ ದಿನದ ಆಚರಣೆ ಆರಂಭವಾಯಿತು. ಅದರ ತಕ್ಷಣದ ಗುರಿ ಚಿಕಾಗೋದ ಮೇ ದಿನ 1886ರ ಹುತಾತ್ಮರ ಸ್ಮರಣೆಯಾಗಿತ್ತು.ಅಮೆರಿಕದ ಟ್ರೇಡ್ ಯೂನಿಯನ್ ಆಂದೋಲನದ ಚರಿತ್ರೆಯಲ್ಲಿ ಹೇ ಮಾರ್ಕೆಟ್ ಪ್ರಕರಣ ಒಂದು ಆಕಸ್ಮಿಕ ಯಕಶ್ಚಿತ ಘಟನೆಯಾಗಿರಲಿಲ್ಲ. ಅದಕ್ಕಿಂತ ಹಿಂದೆ ಅಮೆರಿಕದಲ್ಲಿ ಭಾರೀ ಸಮರಶೀಲ ಟ್ರೇಡ್ ಯೂನಿಯನ್ ಆಂದೋಲನಗಳು ಕಾಣಿಸಿಕೊಂಡಿದ್ದವು. ಕಾರ್ಮಿಕರ ಅದರಲ್ಲಿಯೂ ವಿಶೇಷವಾಗಿ ಚಿಕಾಗೋ ನಗರದ ಕಾರ್ಮಿಕರು ಅನೇಕ ಧೀರ ಹೋರಾಟಗಳನ್ನು ಮಾಡಿದ್ದರು.
ಹತ್ತಾರು ಸಂಘರ್ಷಗಳನ್ನು ಸಂಘಟಿಸಿ ಕಾರ್ಮಿಕ ವರ್ಗದ ಅನನ್ಯ ಐಕ್ಯತೆಗೆ ನಾಂದಿ ಹಾಡಿದ್ದರು. ಎಂಟು ಗಂಟೆಗಳ ಕೆಲಸದ ದಿನಕ್ಕಾಗಿ ಅಲ್ಲಲ್ಲಿ ಆಂದೋಲನಗಳು ನಡೆದಿದ್ದರೂ ಈ ಬೇಡಿಕೆಯೊಂದಿಗೆ ನಡೆಸಿದ ಕಾರ್ಮಿಕ ವರ್ಗದ ಹೋರಾಟಗಳ ಮುಂಚೂಣಿಯಲ್ಲಿದ್ದವರು ಚಿಕಾಗೋ ನಗರದ ಕಾರ್ಮಿಕರೇ. ಹೇ ಮಾರ್ಕೆಟ್ ದುರಂತ ಘಟನೆ ನಡೆಯುವ ಮುಂಚೆ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಬಹು ತುರುಸಿನ ಹೋರಾಟ ನಡೆಸಿಕೊಂಡು ಬಂದಿದ್ದರು.

ಅಗಸ್ಟ್ 20, 1886ರಂದು ಏಳು ಮಂದಿಗೆ ಮರಣ ದಂಡನೆ, ಒಬ್ಬರಿಗೆ 15ವರ್ಷಗಳ ಕಾರಾಗೃಹ ವಾಸ ವಿಧಿಸಲಾಯಿತು. ಗಮನಿಸಬೇಕಾದ ಸಂಗತಿ ಏನೆಂದರೆ ಮೇ 1, 1886ರಂದು ಹೇ ಮಾರ್ಕೇಟ್ ಚೌಕದಲ್ಲಿ ಬಾಂಬ್ ಸ್ಫೋಟವಾದಾಗ ಇವರಲ್ಲಿ ಒಬ್ಬರು ಮಾತ್ರ ಆ ಸ್ಥಳದಲ್ಲಿದ್ದರು. ವಿಶ್ವದಾದ್ಯಂತ ಈ ಶಿಕ್ಷೆಯ ವಿರುದ್ಧ ಪ್ರತಿಭಟನೆ ವ್ಯಕ್ತವಾಯಿತು. ಆದರೂ 7 ಮಂದಿ ಮರಣ ದಂಡನೆಗೊಳಗಾದವರಲ್ಲಿ ಇಬ್ಬರ ಶಿಕ್ಷೆಯನ್ನು ಜೀವಾವಧಿಗಿಳಿಸಲಾಯಿತು.
ಒಬ್ಬಾತ ಬಂಧನದಲ್ಲೆ ಅಸುನೀಗಿದ. ಉಳಿದ ನಾಲ್ವರಾದ ಪಾರ್ಸನ್ಸ್, ಪಿಶರ್, ಸ್ಪೋಸ್ ಮತ್ತು ಏಂಗಲ್ಸ್ ಎಂಬ ಕಾರ್ಮಿಕರು ನವೆಂಬರ್ 11,1887ರಂದು ನೇಣುಗಂಬ ಏರಿದರು. ‘‘ನೀವಿಂದು ಹಿಸುಕಿ ಹಾಕಿದ ದನಿಗಳಿಗಿಂತ ನಮ್ಮ ಮೌನವೇ ಹೆಚ್ಚು ಬಲಿಷ್ಠವಾಗುವ ದಿನ ಬಂದೇ ಬರುತ್ತದೆ’’ ಎಂದು ಸ್ಪೋಸ್ ನೇಣುಗಂಬ ಏರುತ್ತಾ ನುಡಿದ ಭವಿಷ್ಯವಾಣಿ ಈಗ ನಿಜವಾಗಿದೆ.ಜಗತ್ತನ್ನೇ ಬದಲಿಸುವ ಶಕ್ತಿ ಕಾರ್ಮಿಕರಿಗಿದೆ. ಕಾರ್ಮಿಕರು ಧರ್ಮ, ಭಾಷೆ ಮತ್ತು ಜಾತಿ ಮೀರಿದವರು ರಾಜ್ಯ ಹಾಗೂ ರಾಷ್ಟ್ರದಲ್ಲಿ ಬದಲಾವಣೆ ತರುವ ಶಕ್ತಿ ಉಳ್ಳವರು. ತ್ಯಾಗ, ಬಲಿದಾನ ಹೋರಾಟದ ಫಲದಿಂದಾಗಿಯೇ ಕಾರ್ಮಿಕರು ತಮ್ಮ ಹಕ್ಕು ಪಡೆಯಲು ಸಾಧ್ಯವಾಗಿದೆ.
ಜಾಗತೀಕರಣ ನೀತಿಗಳು ಬಡವರ, ಶ್ರಮಿಕರ, ದುಡಿಯುವ ಜನರ ಬದುಕನ್ನು ಕಿತ್ತು ತಿನ್ನುತ್ತಿದೆ. ಮತ್ತೊಂದೆಡೆ ನಮ್ಮನ್ನಾಳುವ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇರಿ ಅಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಶೇಕಡಾ 90% ರಷ್ಟು ಇರುವ ದುಡಿವ ಜನರ ಬೆವರಿನ ಗಳಿಕೆಯನ್ನು ಶೇಕಡಾ 10%ರಷ್ಟು ಇರುವ ಬಂಡವಾಳಶಾಹಿ ದೋಚುತ್ತಿದೆ. ಹಲವಾರು ಕಾಯಿದೆಗಳು ಬಂದರೂ ಇಂದು ಅಸಮಾನತೆ, ತಾರತಮ್ಯಗಳು ಜೀವಂತ ಇದೆ. ಅಭಿವೃದ್ಧಿ ಎಂದರೆ ಭ್ರಷ್ಟಾಚಾರ ಎನ್ನುವಂತಾಗಿದೆ.
ಭಾರತವನ್ನು ಯುವ ಭಾರತ ಎಂದು ಚಿತ್ರಿಸಲಾಗುತ್ತಿದೆ. ನಮ್ಮ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಮಂದಿ ಯುವ ಜನರು. ಇವರಲ್ಲಿ ಶೇಕಡಾ 42% ವಯಸ್ಕರಾಗುವ ಮೊದಲೇ ಸಾಯುತ್ತಿರುವ ಮಕ್ಕಳೂ ಇದ್ದಾರೆ. ಇವರು ಭಾರತದ ಒಣಗುತ್ತಿರುವ ರೆಂಬೆಗಳು ಎಂಬ ಯೋಚನೆಯೇ ನಮ್ಮ ಮೈ ನಡುಗಿಸುತ್ತಿದೆ. ನಾವು ಭಾರತದ ಕಾರ್ಮಿಕ ಆಂದೋಲನ ನಮ್ಮ ಕ್ರಾಂತಿಕಾರಿ ಕರ್ತವ್ಯವನ್ನು ನೆರವೇರಿಸದಿದ್ದರೆ ಈ ಯುವ ಭಾರತಕ್ಕೆ ಭವಿಷ್ಯ ಎಲ್ಲಿದೆ?
ಮೇ ದಿನಾಚರಣೆ ಜಗತ್ತಿನ ಎಲ್ಲಾ ದೇಶಗಳ ದುಡಿಯುವ ಜನ ಆಚರಿಸುವ ಹೆಮ್ಮೆಯ ದಿನವಾಗಿದೆ. ಮೇ ದಿನವನ್ನು ದೇಶ, ಭಾಷೆ, ಧರ್ಮಗಳ, ಗಡಿಗಳ ಅಡಚಣೆ ಇಲ್ಲದೇ ಆಚರಿಸಲಾಗುತ್ತಿದೆ. ಸಂಪತ್ತು ಸೃಷ್ಟಿಸುವ ಕಾರ್ಮಿಕರಿಗೆ ಬೆವರಿನ ಪಾಲು ಸಿಗಲಿ. ಮೇ ದಿನ… ಕೇವಲ ಆಚರಣೆಯಲ್ಲ. ಶೋಷಿತರ ಬದುಕನ್ನು ಅರಳಿಸುವ ದಿನ… ಚಿಕಾಗೋದ ಬೀದಿಯಲಿ
ಅಂದು ಹರಿದ ನಿಮ್ಮಯ ರಕ್ತ… ವ್ಯರ್ಥವಲ್ಲ
ನಿಮ್ಮಯ ತ್ಯಾಗ ವ್ಯರ್ಥವಲ್ಲ…. ಎಂದು ಮೇ ದಿನದ ಹುತಾತ್ಮರನ್ನು ಸ್ಮರಿಸೋಣ. ನಿರಂತರ ಹೋರಾಟವೇ ಬಿಡುಗಡೆಗೆ ದಾರಿ.
ಮೇ ದಿನವು ವಿಶ್ವದ ಎಲ್ಲಾ ಕಾರ್ಮಿಕ ವರ್ಗವನ್ನು ಏಕತ್ರಗೊಳಿಸಿ, ಬಂಡವಾಳಶಾಹಿಗಳ ಶೋಷಣೆಯ ವಿರುದ್ಧ ಹೋರಾಟಕ್ಕೆ ಇಳಿಸಿದ ಚರಿತ್ರಾರ್ಹ ದಿನ ಎಂಬುದರಲ್ಲಿ ಅನುಮಾನವಿಲ್ಲ. ‘ವಿಶ್ವದ ಕಾರ್ಮಿಕರೇ ಒಂದಾಗಿರಿ!’ ಎಂಬ ರಣಕಹಳೆ ಊದಿ ಎಲ್ಲರನ್ನೂ ಒಗ್ಗೂಡಿಸುವಲ್ಲಿ ಮೇ ದಿನ ನಿರ್ವಹಿಸಿದ ಪಾತ್ರದ ಶಕ್ತಿ ಅಪಾರವಾದದ್ದು.ಮೇ ದಿನ ದುಡಿಯುವ ಜನಗಳ ನಿರ್ದಯ ಶೋಷಣೆಯ ವಿರುದ್ಧ ಸಮಸ್ತ ಕಾರ್ಮಿಕ ವರ್ಗವನ್ನು ಸಮರ್ಪಿಸುವ ದಿನವಾಗಿ ಸ್ಥಾಪನೆಗೊಳ್ಳಲಿ.
ಯಮುನಾ ಗಾಂವ್ಕರ್

About the author

Adyot

Leave a Comment