ಪ್ರತಿಷ್ಠಿತ ಕದಂಬೋತ್ಸವಕ್ಕೆ ಕ್ಷಣಗಣನೆ ಪ್ರಾರಂಭ

ಶಿರಸಿ : ಫೆಬ್ರವರಿ 8 ಮತ್ತು 9 ರಂದು 2 ದಿನಗಳ ಕಾಲ 25 ನೇ ವರ್ಷದ ರಾಷ್ಟ್ರಪ್ರಸಿದ್ಧ ಕದಂಬೋತ್ಸವ ಕದಂಬರ ರಾಜಧಾನಿ ಬನವಾಸಿಯಲ್ಲಿ ನಡೆಯಲಿದೆ.


ಫೆಬ್ರವರಿ 8 ರಂದು ಸಂಜೆ 6.30ಕ್ಕೆ ಬನವಾಸಿಯ ಮಯೂರಮರ್ಮ ವೇದಿಕೆಯಲ್ಲಿ ಕದಂಬೋತ್ಸವದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಿಷ್ಠಿತ ಪಂಪ ಪ್ರಶಸ್ತಿ ಕೂಡ ಪ್ರಧಾನವಾಗಲಿದ್ದು, ಖ್ಯಾತ ಸಾಹಿತಿ ಡಾ.ಸಿದ್ಧಲಿಂಗಯ್ಯ ನವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಇದಕ್ಕೂ ಮೊದಲು ಫೆಬ್ರವರಿ 6 ರಂದು ಬೆಳಿಗ್ಗೆ 11 ಗಂಟೆಗೆ ಗುಡ್ನಾಪುರದಲ್ಲಿ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಕದಂಬ ಜ್ಯೋತಿಗೆ ಚಾಲನೆ ನೀಡಲಿದ್ದು, ನಂತರ ಕದಂಬ ಜ್ಯೋತಿಯು ಶಿರಸಿ, ಸಿದ್ದಾಪುರ, ಯಲ್ಲಾಪುರ, ಸೊರಬ, ಹಾವೇರಿಗಳಲ್ಲಿ ಸಂಚರಿಸಲಿದೆ. ಫೆಬ್ರವರಿ 6 ರಂದು ಗುಡ್ನಾಪುರದಲ್ಲಿ ಕದಂಬೋತ್ಸವ ಪ್ರಯುಕ್ತ ಕ್ರೀಡಾಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.


ಫೆಬ್ರವರಿ 8 ರಂದು ಸಂಜೆ 6 ರಿಂದ 7 ಗಂಟೆಯವರೆಗೆ ಮುಂಬಯಿ ನೃತ್ಯ ತಂಡದಿಂದ ಕಾರ್ಯಕ್ರಮ ನಡೆಯಲಿದ್ದು, 8.30 ರಿಂದ 11.30ರ ವರೆಗೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ 9 ರಂದು ಸಂಜೆ 6 ರಿಂದ 7.30 ಗಂಟೆಯವರೆಗೆ ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿ ಹಾಗೂ ತಂಡದಿಂದ ಕೊಳಲು ವಾದನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8 ರಿಂದ 11.30 ರವರೆಗೆ ಅಂತಾರಾಷ್ಟ್ರೀಯ ಗ್ಯಾಮಿ ಅವಾರ್ಡ್ ಖ್ಯಾತಿಯ ರಿಕಿ ಕೇಜ್ ತಂಡದವರಿಂದ ಅಂತಾರಾಷ್ಟ್ರೀಯ ಗಾಯನ ಹಾಗೂ ನೃತ್ಯ ಕಾರ್ಯಕ್ರಮ ನಡೆಯಲಿದೆ. ಕದಂಬೋತ್ಸವದಲ್ಲಿ ಖ್ಯಾತ ನಟ ರಕ್ಷಿತ್ ಶೆಟ್ಟಿ, ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ ಪಾಲ್ಗೊಳ್ಳಲಿದ್ದಾರೆ.


ರಜತ ಕದಂಬೋತ್ಸವವು ‘ನ ಭೂತೋ ನ ಭವಿಷ್ಯತಿ’ ಅನ್ನೋ ರೀತಿಯಲ್ಲಿ ಆಚರಣೆ ಮಾಡಿ, ಬನವಾಸಿಯ ಕುರಿತು ವಿಶೇಷ ಸಂದೇಶವನ್ನು ನೀಡಬೇಕು ಎಂದು ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಈಗಾಗಲೇ ಸೂಚನೆ ನೀಡಿದ್ದಾರೆ. ಕದಂಬೋತ್ಸವಕ್ಕೆ ಆಗಮಿಸಲು ಜಿಲ್ಲೆಯ ಮೂಲೆ ಮೂಲೆಗಳಿಂದ ಕಲಾಸಕ್ತರು ಆಗಮಿಸಲು ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ಊಟದ ವ್ಯವಸ್ಥೆಯನ್ನು ಮಾರಿಕಾಂಬಾ ದೇವಸ್ಥಾನ ವತಿಯಿಂದ ಮಾಡಲಾಗುತ್ತಿದೆ. ಶೌಚಾಲಯ, ಉತ್ತಮ ಗುಣಮಟ್ಟದ ಆಹಾರ ಮಳಿಗೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತಿದೆ.

About the author

Adyot

1 Comment

  • ಸಕಾಲಿಕ ಲೇಖನ ವರದಿ ಅಭಿನಂದನೆಗಳು. ಹಾಗೂ ನಾಡಿನ ಸಾಂಸ್ಕೃತಿಕ ಹಬ್ಬ ಕದಂಬೋತ್ಸವದ ಶುಭಾಶಯಗಳು.

Leave a Comment