ಸಿದ್ದಾಪುರ: ಪ್ರತಿ ಪಟ್ಟಣಗಳಲ್ಲೂ ವಾರಕ್ಕೊಮ್ಮೆ ಸಂತೆ ಸಾಮಾನ್ಯ. ಸಂತೆಗಳಲ್ಲಿ ಗದ್ದಲ, ಗೌಜಿ ಸರ್ವೇ ಸಾಮಾನ್ಯ. ಆದ್ರೆ ಸದಾ ಮಕ್ಕಳ ಆಟ ಪಾಠಗಳಿಂದ ತುಂಬಿರೋ ಶಾಲೆಯಲ್ಲಿ ಸಂತೆಯ ಗದ್ದಲ ಅಂದ್ರೆ ನಂಬುತ್ತೀರಾ?
ಹೌದು.. ಹತ್ತು ರೂಪಾಯಿಗೆ ಎರಡು ಕಟ್ಟು, ಕೆಜಿಗೆ ಹತ್ತು, ಇಪ್ಪತ್ತು, ನಲವತ್ತು. ತರಾವರಿ ತರಕಾರಿಗಳ ವ್ಯಾಪಾರ, ಇವೆಲ್ಲಾ ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳೇ ವ್ಯಾಪಾರ ನಡೆಸಿದ ಪರಿ. ತಾಲೂಕಿನ ಕವಲಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸಂತೆ ಕವಲಕೊಪ್ಪದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆವರಣದಲ್ಲಿ ನಡೆಯಿತು. ಮಕ್ಕಳ ಸಂತೆಯಲ್ಲಿ ವಿಧ್ಯಾರ್ಥಿಗಳು ತರಾವರಿ ತರಕಾರಿ, ಸೊಪ್ಪು, ಸಿಹಿ ಪದಾರ್ಥಗಳು ಸೇರಿದಂತೆ ಹಲವಾರು ಪದಾರ್ಥಗಳನ್ನು ಮಾರಿ ವ್ಯಾಪಾರದ ಅನುಭವ ಪಡೆದುಕೊಂಡರು.
ಮಕ್ಕಳ ಸಂತೆಯಲ್ಲಿ ಸೇವಂತಿಗೆ, ಮಲ್ಲಿಗೆ, ಕನಕಾಂಬರಿ, ಗುಲಾಬಿ ಹೂವುಗಳು, ಜೇನುತುಪ್ಪ, ಮಸಾಲಾ ಮಂಡಕ್ಕಿ, ಸ್ವೀಟ್, ಚಾಕಲೇಟ್, ಒಗ್ಗರಣೆ ಅವಲಕ್ಕಿ, ನೆಲ್ಲಿ ಸೆಟ್, ಚಿಪ್ಸ್, ಅವರೆಕಾಯಿ, ಅಂಗಿಕಸೆ, ತೊಂಡೆಕಾಯಿ, ಬೂದಗುಂಬಳ ಕಾಯಿ, ಹಾಲಗುಂಬಳ ಕಾಯಿ, ಹರವೆ, ಕರಿಬೇವು, ಬಸಳೆ, ಪಾಲಕ್, ಮೂಲಂಗಿ ಸೊಪ್ಪುಗಳು, ಗೆಣಸು, ನುಗ್ಗೆಕಾಯಿ, ರಾಜ ನೆಲ್ಲಿ, ಗುಡ್ಡೆ ನೆಲ್ಲಿ, ಬಾಳೆ ಹಣ್ಣು, ಬೂದ ಬಾಳೆಕಾಯಿ, ಲಿಂಬು, ಹಲಸು, ಅಂಜೂರ್, ಈರುಳ್ಳಿ, ಟೊಮೊಟೋ, ಹಸಿ ಮೆಣಸು, ಸೂಜಿ ಮೆಣಸು, ಬದನೆ, ತೆಂಗಿನ ಕಾಯಿ, ಎಲೆಕೊಸ್ ರಬ್ಬರ್, ಮದುವೆ ಕವರ ಸೇರಿದಂತೆ ಹಲವಾರು ವಸ್ತುಗಳನ್ನು ಸಂತೆಯಲ್ಲಿ ಮಾರಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಮಹೇಶ ಭಟ್ ಸಾಂಕೇತಿಕವಾಗಿ ಸೊಪ್ಪುಗಳನ್ನು ಖರೀದಿಸುವ ಮೂಲಕ ಸಂತೆಗೆ ಚಾಲನೆ ನೀಡಿದರು. ಸದಸ್ಯರಾದ ಪಾವನ ಹೆಗಡೆ, ರಾಮಕೃಷ್ಣ ಹೆಗಡೆ, ಮುಖ್ಯೋಪಾಧ್ಯಾಯಿನಿ ಮಂಗಲ ಆರ್ ಮಡಿವಾಳ, ಶಿಕ್ಷಕ/ಕಿಯರಾದ ನಾಗರಾಜ ಟಿ, ನಮ್ರತಾ ವಿ. ಶಿವಶಂಕರ ಎನ್ ಕೆ ಹಾಗೂ ಪಾಲಕ ಪೋಷಕರು ಉಪಸ್ಥಿತರಿದ್ದರು.