ಸಿದ್ದಾಪುರ : ಕನ್ನಡ ತಾಯಿ ರಾಜರಾಜೇಶ್ವರಿ ಭುವನಗಿರಿಯ ಭುವನೇಶ್ವರಿ ದೇವಿಯ ಮಹಾರಥೋತ್ಸವ ಫೆಬ್ರವರಿ 9 ಭಾರತ ಹುಣ್ಣಿಮೆಯ ರವಿವಾರ ಜರುಗಲಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯಲ್ಲಿ ಮಹಾರಥೋತ್ಸವ ಜರುಗಲಿದೆ. ಕರ್ನಾಟಕದಲ್ಲಿ ತ್ರಿಕಾಲ ಪೂಜೆ ನಡೆಯೋ ಕನ್ನಡಾಂಬೆಯ ಏಕೈಕ ದೇಗುಲ ಇದಾಗಿದ್ದು, ರಥೋತ್ಸವದ ವಿಧಿ ವಿಧಾನಗಳು ಈಗಾಗಲೇ ಪ್ರಾರಂಭಗೊಂಡಿದೆ. ರವಿವಾರದಂದು ತಾಯಿಯ ಮಹಾರಥೋತ್ಸವ ಜರುಗಲಿದ್ದು, ಭುವನೇಶ್ವರಿ ದೇವಿಯ ವಿಗ್ರಹವನ್ನ ಮರದ ರಥದಲ್ಲಿ ಕುಳ್ಳಿರಿಸಿ ರಥವನ್ನ ಎಳೆಯೋ ದೃಶ್ಯ ಭಕ್ತರಲ್ಲಿನ ಭಾವ ಪರವಶತೆಯನ್ನ ಇಮ್ಮಡಿಗೊಳಿಸಲಿದೆ. ರಥವನ್ನು ಎಳೆಯುವಾಗ ದೇವಿಗೆ ಹರಕೆ ಹೇಳಿಕೊಂಡ ಭಕ್ತಾದಿಗಳು ಅಕ್ಕಿ, ಬಾಳೆಹಣ್ಣು, ಕಡಲೆ ಮುಂತಾದ ಸುವಸ್ತುಗಳನ್ನು ರಥಕ್ಕೆ ಎಸೆಯೋ ಮುಖಾಂತರ ತಮ್ಮ ಹರಕೆಯನ್ನ ತೀರಿಸಿಕೊಳ್ಳುತ್ತಾರೆ. ಪ್ರತಿವರ್ಷ ಭಾರತ ಹುಣ್ಣಿಮೆ ದಿನದಂದು ನಡೆಯೋ ರಥೋತ್ಸವಕ್ಕೆ ರಾಜ್ಯದ ವಿವಿದಧೆಡೆಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನವನ್ನು ಪಡೆಯುತ್ತಾರೆ.