ಬನವಾಸಿ : ಪಂಪನ ನಾಡು ಕದಂಬರ ಬೀಡು ಬನವಾಸಿಯಲ್ಲಿ ನಡೆಯುತ್ತಿರೋ ಪ್ರತಿಷ್ಠಿತ ಕದಂಬೋತ್ಸವ ಭರ್ಜರಿಯಾಗಿ ನಡೆದು ಇಂದು ಅದ್ದೂರಿಯಾಗಿ ಮುಕ್ತಾಯವಾಯಿತು.
ಶನಿವಾರ ಸಂಜೆ ಸಿ.ಎಂ ಯಡಿಯೂರಪ್ಪರಿಂದ ಉದ್ಘಾಟನೆಗೊಂಡ ಕದಂಬೋತ್ಸವಕ್ಕೆ ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರಧಾನ ವಿಶೇಷ ಕಳೆ ತಂದಿತು. ದಲಿತ ಕವಿ ಖ್ಯಾತಿಯ ಡಾ.ಸಿದ್ದಲಿಂಗಯ್ಯ ಪಂಪ ಪ್ರಶಸ್ತಿ ಸ್ವೀಕರಿಸಿದರು. ನಂತರ ಮುಂಬೈನ ಎಂ.ಜೆ ನೃತ್ಯ ತಂಡದ ವಿಶೇಷ ನೃತ್ಯ ಗಮನಸೆಳೆದರೆ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದ ಲೈವ್ ಕಾನ್ಸರ್ಟ್ ನೋಡುಗರ ಮನರಂಜಿಸಿತು.
ರವಿವಾರ ನಡೆದ ಮಕ್ಕಳ ಸಾಹಸ ಪ್ರದರ್ಶನ, ಮಹಿಳಾ ಗೋಷ್ಠಿ, ಯುವ ಗೋಷ್ಠಿ, ಪ್ರವಾಸೋದ್ಯಮ ಗೋಷ್ಠಿ, ಮಾಧ್ಯಮಗೋಷ್ಠಿ, ಸಾಂಸ್ಕೃತಿಕ ನಡಿಗೆ, ಅಡಿಗೆ ಸ್ಪರ್ಧೆ, ಶ್ವಾನ ಹಾಗೂ ಜಾನುವಾರು ಪ್ರದರ್ಶನಗಳು ಜನರಿಗೆ ತಿಳುವಳಿಕೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ನೂತನ ಸಚಿವ ಶಿವರಾಮ್ ಹೆಬ್ಬಾರ್, ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎಂ.ರೋಷನ್ ಸೇರಿದಂತೆ ಹಲವು ಅಧಿಕಾರಿಗಳು, ರಾಜಕಾರಣಿಗಳು ಉಪಸ್ಥಿತರಿದ್ದರು. ನಂತರ ನಡೆದ ಪ್ರವೀಣ್ ಗೋಡ್ಕಿಂಡಿ ಅವರ ಕೊಳಲು ವಾದನ ಜನರನ್ನ ಮಂತ್ರಮುಗ್ಧಗೊಳಿಸಿದರೆ, ಅಂತಾರಾಷ್ಟ್ರೀಯ ಖ್ಯಾತಿಯ ಗ್ಯಾಮಿ ಅವಾರ್ಡ್ ವಿನ್ನರ್ ರಿಕ್ಕಿ ಕೇಜ್ ಅವರ ಅಂತಾರಾಷ್ಟ್ರೀಯ ಗಾಯನ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರುಗು ನೀಡಿತು. ಈ ಪ್ರದರ್ಶನದೊಂದಿಗೆ 2020 ರ ಕದಂಬೋತ್ಸವ ಅದ್ದೂರಿ ತೆರೆಕಂಡಿತು.