ಶಿರಸಿ : ಕರ್ನಾಟಕದ ಅತಿ ದೊಡ್ಡ ಜಾತ್ರೆ ಅಂತಾನೇ ಹೆಸರು ಪಡೆದ ಶಿರಸಿಯ ಮಾರಿಕಾಂಬಾ ಜಾತ್ರೆ ಕಳಶ ಪ್ರತಿಷ್ಠೆ ಹಾಗೂ ದೇವಿಯ ಕಲ್ಯಾಣೋತ್ಸವದ ಮುಖಾಂತರ ಪ್ರಥಮ ದಿನದ ಧಾರ್ಮಿಕ ವಿಧಿ ವಿಧಾನಗಳು ಸಾಗಿದವು.
ಮಾರ್ಚ್ 4 ರಂದು ಸರ್ವಾಲಂಕಾರ ಭೂಷಿತಳಾದ ದೇವಿಯನ್ನು ರಥದ ಮೇಲೆ ಕುಳ್ಳಿರಿಸಿ ಮೆರವಣಿಗೆ ಮುಖಾಂತರ ಶೋಭಾಯಾತ್ರೆ ನಡೆಸಲಾಯಿತು. ಶೋಭಾಯಾತ್ರೆಯಲ್ಲಿ ಡೊಳ್ಳುಕುಣಿತ, ಯಕ್ಷಗಾನ ವೇಷಧಾರಿಗಳು, ಅಸಾದಿಗಳು, ಚಾವಟಿಕೆಯವರು ಸೇರಿದಂತೆ ಅನೇಕರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಭಕ್ತಿಪರವಶತೆಯಲ್ಲಿ ಮುಳುಗಿಹೋದ ಹಲವಾರು ಭಕ್ತರು ದೇವಿಯನ್ನೇ ಆಹ್ವಾನ ಮಾಡಿದ್ದರು. ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವಿಗೆ ಬಾಳೆಹಣ್ಣು, ಕಡಲೆ, ಕಾಯಿ, ಕೋಳಿ ಮುಂತಾದ ವಸ್ತುಗಳನ್ನು ಸಮರ್ಪಿಸಿದರು. ದೇವಿಯ ಶೋಭಯಾತ್ರೆ ಮುಗಿದ ಮೇಲೆ ರಥದಿಂದ ದೇವಿಯನ್ನು ಗದ್ದುಗೆಗೆ ತರುವ ದೃಶ್ಯವೇ ಮನಮೋಹಕ. ದೇವಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸುವುದರೊಂದಿಗೆ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರೆಯಿತು. ಮಾರ್ಚ್ 5 ರಿಂದ ಸರ್ವಸೇವೆಗಳೂ ಜರುಗಲಿದ್ದು ಮಾರ್ಚ್ 11 ಕ್ಕೆ ಕೊನೆಗೊಳ್ಳಲಿದೆ.