ಮಂಗನಖಾಯಿಲೆ : ಆರೋಗ್ಯ ಇಲಾಖೆಯ ನಿರ್ಲಕ್ಷದಿಂದ ಸಾವು ವಿಧಾನಸಭೆಯಲ್ಲಿ ಶಾಸಕ ಹಾಲಪ್ಪ ಆರೋಪ

ಆದ್ಯೋತನ್ಯೂಸ್: ಆರೋಗ್ಯ ಇಲಾಖೆಯವರ ನಿರ್ಲಕ್ಷದಿಂದಾಗಿ ಸಾಗರ ತಾಲೂಕಿನಲ್ಲಿ ಮಂಗನಖಾಯಿಲೆಯಿಂದಾಗಿ ಜನರು ಸಾಯುತ್ತಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದ ವರ್ಷ ಚಿಕಿತ್ಸೆ ನೀಡಿದ ಹಣ ಸಂದಾಯವಾಗದ ಕಾರಣ ಅವರು ಉಚಿತ ಚಿಕಿತ್ಸೆ ನೀಡುತ್ತಿಲ್ಲ. ಬಡವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಷ್ಟು ಹಣವಿಲ್ಲ. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಸಾವಿನ ಕೂಪವಾಗಿದ್ದು ಅಲ್ಲಿಯ ನಿರ್ಲಕ್ಷದಿಂದಲೇ ಸಾವು ಸಂಭವಿಸುತ್ತಿದೆ ಎಂದು ಸಾಗರದ ಶಾಸಕ ಹರತಾಳ ಹಾಲಪ್ಪ ಕಿಡಿ ಕಾರಿದರು.


ಅವರು ಸೋಮವಾರ ವಿಧಾನಸಭಾ ಅಧಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರು. ಹಿಂದಿನ ಸರಕಾರದ ಅವಧಿಯಲ್ಲಿ ಅರಳಗೋಡು ಪ್ರಾಥಮಿಕ‌ ಆರೋಗ್ಯ ಕೇಂದ್ರದಲ್ಲಿ ವೆಂಟಿಲೇಟರ್ ಅಳವಡಿಸಿದ್ದ ಮೂರು ಆಂಬುಲೆನ್ಸ್ ನೀಡಲಾಗಿತ್ತು. ಮಣಿಪಾಲದಲ್ಲಿ ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಮ್ಮ ಸರಕಾರದ ಅವಧಿಯಲ್ಲಿ ಇದ್ಯಾವ ವ್ಯವಸ್ಥೆಯನ್ನೂ ಮಾಡಲಾಗಿಲ್ಲ. ಇದೆಲ್ಲವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ತಪ್ಪು ಮಾಹಿತಿ ನೀಡುತ್ತಾರೆ ಎಂದು ಹಾಲಪ್ಪ ಗುಡುಗಿದರು. ಮಾಜಿ ಆರೋಗ್ಯಮಂತ್ರಿ ಶಿವಾನಂದ ಪಾಟೀಲ, ನನ್ನ ಅವಧಿಯಲ್ಲಿ 5 ಕೋಟಿ ರೂಪಾಯಿ ನೀಡಿದ್ದಲ್ಲದೆ ಎಲ್ಲಾ ಸೌಲಭ್ಯವನ್ನು ಕಲ್ಪಿಸಿದ್ದೆ. ಸಂಶೋಧನಾ ಕೇಂದ್ರ ತೆರೆಯುವ ಪ್ರಯತ್ನ ಮಾಡಿದ್ದೆ ಮುಂದೆ ಏನಾಯಿತು ಗೊತ್ತಾಗಲಿಲ್ಲ ಎಂದು ಹೇಳಿದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ನಮ್ಮ ಕ್ಷೇತ್ರದಲ್ಲೂ ಮಂಗನಖಾಯಿಲೆ ಪೀಡಿತರಿದ್ದು ಈ ಖಾಯಿಲೆಯಿಂದ ಒಬ್ಬರು ಮರಣವನ್ನೂ ಹೊಂದಿದ್ದಾರೆ. ಎಂದು ಹೇಳಿದರು.


ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಶ್ರೀರಾಮುಲು, ಈಗಾಗಲೇ ಮಂಗನಖಾಯಿಲೆಗೆ ಸಂಭಂಧಿಸಿದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಾಗರದಲ್ಲಿ ಸಂಶೋಧನಾ ಕೇಂದ್ರ ತೆರೆಯಲು ಆರು ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಅಧಿಕಾರಿಗಳು ಸ್ಪಂದಿಸದಿದ್ದರೆ ಅಂತಹವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

About the author

Adyot

Leave a Comment