ಕೊರೊನಾ ವಿರುದ್ಧ ಸುಳ್ಳು ವದಂತಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ : ಡಿಸಿ

ಆದ್ಯೋತ್ ನ್ಯೂಸ್ ಡೆಸ್ಕ್ : ಉತ್ತರ ಕನ್ನಡ ಜಿಲ್ಲೆಯು ಪ್ರಜ್ಞಾವಂತರ ಜಿಲ್ಲೆಯಾಗಿದ್ದು, ಇಂತಹ ಜಿಲ್ಲೆಯಲ್ಲಿ ಕರೋನಾ ವೈರಸ್ ಕುರಿತು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಎಚ್ಚರಿಕೆ ನೀಡಿದರು.

ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಜನರಲ್ಲಿ ಅನಗತ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕರೋನಾ ವೈರಸ್ ಬಗ್ಗೆ ಸುಳ್ಳು ವದಂತಿಗಳು ಹರಿದಾಡುತ್ತಿರುವುದು ಕಂಡುಬರುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಮುಂದಿನ ಕ್ರಮಗಳಿಗಾಗಿ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದರು. ವಿದೇಶದಿಂದ ಬಂದವರ ಅಂಕಿ-ಸಂಖ್ಯೆಗಳನ್ನು ಸಂಗ್ರಹಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡು ಜಿಲ್ಲಾಡಳಿತವು ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ ಎಂದರು.


ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ರೋಷನ್ ಮಾತನಾಡಿ, ಜಿಲ್ಲಾಡಳಿತವು ಇಪ್ಪತ್ತು ಸಾವಿರ ಮೂರು ಪದರಿನ ಮಾಸ್ಕ್ ಗಳನ್ನು ಸಂಗ್ರಹಿಸಿಡುವುದರೊಂದಿಗೆ ಜಿಲ್ಲಾಸ್ಪತ್ರೆಯಲ್ಲಿ 10, ಖಾಸಗಿ 4 ಹಾಗೂ ನೌಕಾನೆಲೆಯ ಆಸ್ಪತ್ರೆಯಲ್ಲಿ 23 ಹಾಸಿಗೆಗಳ ವಿಶೇಷ ವಾರ್ಡ್ ಗಳನ್ನು ಸ್ಥಾಪಿಸಲಾಗಿದ್ದು, ಅಗತ್ಯ ಬಿದ್ದಲ್ಲಿ ನೌಕಾನೆಲೆಯ ಆಸ್ಪತ್ರೆಯಲ್ಲಿ 100 ಹಾಸಿಗೆಗಳವರೆಗೆ ವಿಶೇಷ ವಿಸ್ತರಿಸುವ ಅವಕಾಶವಿದೆ. ಅದೇ ರೀತಿ ಶಿರಸಿ ಮತ್ತು ಮುರುಡೇಶ್ವರದಲ್ಲಿ ಖಾಸಗಿ ಆಸ್ಪತ್ರೆಗಳು ಕೂಡ ತುರ್ತು ಸಂದರ್ಭದಲ್ಲಿ ಸಹಾಯ ಹಸ್ತ ನೀಡಲು ಸನ್ನದ್ಧವಾಗಿದೆ. ಮುಂದಿನ 20 ದಿನಗಳವರೆಗೆ ದಟ್ಟ ಜನಸಂದಣಿ ಸೇರುವಂತ ಜಾತ್ರೆಗಳನ್ನು ನಿಷೇಧಿಸಲಾಗಿದೆ. ಕಾರವಾರ ಬಂದರಿನಲ್ಲಿ ಇಲ್ಲಿವರೆಗೆ 112 ಜನರನ್ನು ಸ್ಕ್ರೀನಿಂಗ್ ಟೆಸ್ಟ್ ಮಾಡಲಾಗಿದೆ ಹಾಗೂ ವ್ಯಾಪಾರಕ್ಕಾಗಿ ವಿದೇಶದಿಂದ ಬರುವಂತಹ ಹಡುಗುಗಳಲ್ಲಿರುವ ಜನರಿಗೆ ಅಗತ್ಯ ಮೂಲಸೌಲಭ್ಯಗಳನ್ನು ಹಡುಗಿನಲ್ಲಿಯೇ ಓದಗಿಸಲಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವಪ್ರಕಾಶ್ ದೇವರಾಜು ಮಾತನಾಡಿ, ಪೊಲೀಸ್ ಇಲಾಖೆ ಸಿಬ್ಬಂದಿಯು ಜನರೊಂದಿಗೆ ಬೆರೆಯುವುದರಿಂದ ಅಗತ್ಯ ಮುಂಜಾಗ್ರತೆ‌ ವಹಿಸುವಂತೆ ಮಾಹಿತಿ ನೀಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕರೋನಾ ಸೋಂಕಿನ ಕುರಿತು ಸುಳ್ಳು ವದಂತಿಗಳನ್ನು ಹರಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

About the author

Adyot

Leave a Comment