ಜಾಗತಿಕ ಮಹಾಮಾರಿ ಎಂದೇ ಕರೆಸಿಕೊಂಡಿರುವ, ಈವರೆಗೂ ನಿಶ್ಚಿತ ಔಷಧವಿಲ್ಲದ ಕೊರೋನಾ ವೈರಸ್ (Covid-19) ಸೋಂಕು ಹರಡುವಿಕೆ ತಡೆಗಟ್ಟಲು ಸಾಮಾಜಿಕ ಅಂತರ (Social Distancing) ಒಂದೇ ಉಪಾಯ ಎಂಬುದಾಗಿ ಮಾನ್ಯ ಪ್ರಧಾನಿ ಮೋದೀಜಿ ಸಾರಿ – ಸಾರಿ ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ, ವೈದ್ಯರು, ಎಲ್ಲಾ ಹಂತದ ಸರ್ಕಾರಗಳು ಮತ್ತು ಅಧಿಕಾರಿಗಳು ಕೂಡಾ ಅದನ್ನೇ ಹೇಳುತ್ತಿದ್ದಾರೆ. ಅಲ್ಲದೇ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಬೆತ್ತ ಬೀಸುತ್ತಿದ್ದಾರೆ, ಒಳ್ಳೆಯ ಮಾತಿನಲ್ಲಿ ಕೇಳಿ ಅರ್ಥ ಮಾಡಿಕೊಳ್ಳದೇ ಇದ್ದಾಗ ದಂಡಂ – ದಶಗುಣಂ ಅನಿವಾರ್ಯವೂ ಹೌದು.
ಆದರೆ ಕೊರೋನಾ ವಿರುದ್ಧ ಸಮರದಲ್ಲಿ ಹಳ್ಳಿಗರ ಹೆಜ್ಜೆ – ಮಹಾನಗರಗಳ ಜನತೆ ಮತ್ತು ನಗರಗಳ ಮಹಾಜನತೆಯೂ ನಾಚುವಂತಿದೆ. ಅದೆಷ್ಟೋ ಹಳ್ಳಿಗಳು ಸ್ವಯಂ ನಿರ್ಬಂಧ ವಿಧಿಸಿಕೊಂಡಿವೆ. ಬೇಲಿಯೊ – ಮುಳ್ಳೋ – ಮರದ ಧಿಮ್ಮಿಯೋ ಹಾಕಿ ರಸ್ತೆ ಸಂಚಾರ ಬಂದ್ ಮಾಡಿದ್ದಾರೆ. ಇಪ್ಪತ್ತೊಂದು ದಿನ ಬಿಡಿ ಎರಡು ತಿಂಗಳಿಗೆ ಆಗುವಷ್ಟು ದಿನಸಿ – ಔಷಧಿ ತಂದಿಟ್ಟುಕೊಂಡು ಊರ ಒಳ ಬರುವ – ಹೊರ ಹೋಗುವ ಪ್ರಮೇಯವನ್ನೇ ತಪ್ಪಿಸಿಕೊಂಡಿದ್ದಾರೆ. ಗ್ರಾಮ – ಗ್ರಾಮಗಳಲ್ಲಿ ಅಂಗಡಿ ಎದುರು ನಿಲ್ಲುವಾಗ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
ಸಿದ್ದಾಪುರ ತಾಲೂಕಿನ ಗೋಳಿಮಕ್ಕಿಯ ಹಾಲು ಉತ್ಪಾದಕರ ಸಂಘದಲ್ಲಿ ಸರದಿ ಪ್ರಕಾರ ಹಾಲು ಹಾಕುವ ವ್ಯವಸ್ಥೆ ಮಾಡಲಾಗಿದೆ, ಒಬ್ಬರ ನಂತರವಷ್ಟೇ ಇನ್ನೊಬ್ಬರಿಗೆ ಪ್ರವೇಶ ನೀಡಿದ್ದು – ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ. ಇನ್ನು ಶಿರಸಿಯ ತಾರಗೋಡು ಡೈರಿಯಲ್ಲಿ ಕೂಡಾ ಬಾಕ್ಸ್ ಪದ್ಧತಿ ಮಾಡಿ – ಸರತಿ ಪ್ರಕಾರ ಹಾಲು ಶೇಖರಿಸಲಾಗುತ್ತಿದೆ. ಇನ್ನು ಹಾಲು ಸಂಗ್ರಹಿಸುವವರು ಮಾಸ್ಕ್ ಧರಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅರೆ ನಿತ್ಯ ಕೆಲಕಾಲ ನಿಂತು, ದೇಶದ ಆಗು – ಹೋಗುಗಳ ಬಗ್ಗೆ ಊರವರೊಂದಿಗೆ ಹರಟಿ ಬರುತ್ತಿದ್ದವರು ಈಗ ಮೌನವಾಗಿ ತಮ್ಮ ಕರ್ತವ್ಯ ಪೂರೈಸಿ ಬರುತ್ತಿದ್ದಾರಲ್ಲ ಅದು ಬದಲಾವಣೆ ಹಾಗೂ ಎಲ್ಲರೂ ಅನುಕರಿಸಲೇ ಬೇಕಾದ ಒಳ್ಳೆಯ ನಡುವಳಿಕೆ (Best Practice).
ಇದೇ ರೀತಿಯಲ್ಲಿ ಮಾದರಿ ಹೆಜ್ಜೆ ಇಟ್ಟಿವೆ ಇನ್ನೂ ಅನೇಕ ಹಾಲು ಉತ್ಪಾದಕರ ಸಂಘಗಳು (Milk Dairy). ರಾಜ್ಯದೆಲ್ಲೆಡೆ ಹಾಗೂ ಹೊರ ರಾಜ್ಯಗಳಿಗೂ ನಮ್ಮ ಹೈನುಗಾರರು ನಿತ್ಯ ಹಾಕುವ ಹಾಲು ತಲುಪುತ್ತಿದೆ. ನಡುವೆ ಅದೆಷ್ಟೋ ಜನ ಸಾಗಾಟದಲ್ಲಿ – ಹಾಲಿನ ಪಾಶ್ಚರೀಕರಣ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಅವರೂ ಕೂಡಾ ಅನಗತ್ಯವಾಗಿ ಯಾರ ಸಂಪರ್ಕಕ್ಕೂ ಒಳಗಾಗದೆ ಜವಾಬ್ಧಾರಿ ನಿರ್ವಹಿಸಬೇಕಾಗಿದೆ.
ಡೈರಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಪ್ರಕ್ರಿಯೆ ಸಾಧ್ಯವಾದದ್ದು ಅಲ್ಲಿನ ಸಿಬ್ಬಂದಿ, ಆಡಳಿತ ಸಮಿತಿಯ ಪದಾಧಿಕಾರಿಗಳು, ಹಾಲು ಒಕ್ಕೂಟದ ನಿರ್ದೇಶಕರುಗಳಿಂದ, ಎಲ್ಲಕ್ಕಿಂತ ಮಿಗಿಲಾಗಿ ನಿತ್ಯ ಎರಡು ಬಾರಿ (ಬಹುತೇಕ ಸಂದರ್ಭಗಳಲ್ಲಿ) ತಪಸ್ಸಿನಂತೆ ಹಾಲು ಹಾಕುವ ನೂರು – ಐನೂರು – ಸಾವಿರ ಜವಾಬ್ಧಾರಿಯುತ ಹೈನುಗಾರರಿಂದ. ತಮ್ಮ ಶಕ್ತ್ಯಾನುಸಾರ ಅರ್ಧವೋ – ಒಂದೋ – ಎರಡೋ ಅಥವಾ ಹತ್ತಿಪ್ಪತ್ತು ಲೀಟರ್ ಹಾಲನ್ನು ನಿತ್ಯ ಈ ದುಡಿವ ಕೈಗಳು ಸಮೀಪದ ಡೈರಿಗೆ ತಂದು ಹಾಕುವವರಿಂದ ಪೇಟೆ, ಪಟ್ಟಣ, ನಗರಗಳ ಜನ ಪ್ಯಾಕೆಟ್ ಹಾಲು ಖರೀದಿಸುತ್ತಿದ್ದೇವೆ.
ಹೈನುಗಾರಿಕೆಯ ಕಷ್ಟ, ದನಕರುಗಳ ರೋಗ ರುಜಿನ – ಚಿಕಿತ್ಸೆ, ಪಶು ಆಹಾರದ ಬೆಲೆಯ ನಾಗಾಲೋಟ, ನಡುವೆ ಒಂದು – ಎರಡು ರೂಪಾಯಿ ದರ ಹೆಚ್ಚಳಕ್ಕೂ ವರ್ಷಗಟ್ಟಲೆ ಕಾಯುವ ಸ್ಥಿತಿ ಇದ್ದಾಗ್ಯೂ ಅವರು ತಮ್ಮ ತಪಸ್ಸು ಬಿಟ್ಟಿಲ್ಲ. ಬಿಡುವುದೂ ಇಲ್ಲ ಯಾಕಂದರೆ ಅವರೆಲ್ಲ ರೈತರು, ಹೈನುಗಾರರು – ದೇಶದ ದೊಡ್ಡ ದುಡಿಯುವ ವರ್ಗವಿದು.
ಭಾರತ ಬಂದ್ ಅನ್ವಯವಾದ ಮೊದಲದಿನ – ಎರಡನೇ ದಿನಕ್ಕೆ ಇವರಿಗೆ ತಮ್ಮ ಜವಾಬ್ಧಾರಿ ಅರಿವಾಯ್ತು, ತಮ್ಮಿಂದ ಸಾಧ್ಯವಾದದ್ದು ತಾವು ಮಾಡಲೇಬೇಕೆಂಬ ಪ್ರಜ್ಞೆ ಸಾರ್ವತ್ರಿಕವಾಯ್ತು, ತಕ್ಷಣ ತಮಗೆ ತಾವೇ ಕಟ್ಟಳೆ ಹೇರಿಕೊಂಡು ಅನುಶಾಸನ ಬದ್ಧರಾದರಲ್ಲ ಅವರಿಗೆ – ಗ್ರೇಟ್ ಅನ್ನಲೇಬೇಕಿದೆ.
ಅನ್ಯತಾ ಭಾವಿಸದಿದ್ದರೆ ಒಂದು ಮಾತು : ಹಾಲೆಂದರೆ ಅದು ಕೇವಲ ಪ್ಯಾಕೆಟ್ ನಲ್ಲಿ ಬರುವುದಲ್ಲ, ಯಾವೊದೋ ಲ್ಯಾಬೊರೇಟರಿಯ ಉತ್ಪಾದನೆಯಲ್ಲ, ಇಪ್ಪತ್ತೊಂದು ದಿನದ ಗೃಹ ಬಂಧನದಲ್ಲಿ, ಮನೆಯಲ್ಲಿ ಮಕ್ಕಳಿದ್ದರೆ ಹಾಲು ಕೊಡುವ ಆಕಳ ಬಗ್ಗೆ ಹೇಳಿ – ಪುಣ್ಯಕೋಟಿಯ ಕಥೆ ಹೇಳಿ.
ಯಾಕಂದರೆ ತಾಯಿ ಹಾಲಿನ ಹೊರತಾಗಿ ಮಕ್ಕಳಿಗೆ ಕೊಡುವ ಏಕೈಕ ಅಮೃತವೆಂದರೆ ಅದು “ಆಕಳ ಹಾಲು”. ಹಾಲು ಅಂದರೆ ಸಂಪೂರ್ಣ ಆಹಾರ ಎಂಬುದನ್ನು – ಅದರಲ್ಲಿನ ಪೌಷ್ಟಿಕಾಂಶಗಳನ್ನು ಮಕ್ಕಳಿಗೆ ಬಾಯಿಪಾಠ ಮಾಡಿಸುವ ನಾವು; ನಾವು ದುಬಾರಿ ಶುಲ್ಕ ತೆತ್ತಿರುವ ಶಾಲೆಗಳು ಇಂದು ಆಕಳನ್ನು ಗೋಮಾತೆ ಎಂದು ಕರೆಯುತ್ತಿಲ್ಲ, ಪುಣ್ಯಕೋಟಿಯ ಕಥೆ ಎಲ್ಲರ ಸಿಲೆಬಸ್ಸಿನಲ್ಲಿ ಉಂಟಾ ಗೊತ್ತಿಲ್ಲ!?
– ಗುರುಪ್ರಸಾದ ಹೆಗಡೆ,
ಸಾಮಾಜಿಕ ಕಾರ್ಯಕರ್ತ & ಹವ್ಯಾಸಿ ಬರಹಗಾರರು.
👌👌