ಸಿದ್ದಾಪುರ : ಸಾಮಾನ್ಯ ಜ್ವರವಿದ್ದರೂ ಕೂಡ ಜನರು ಆಸ್ಪತ್ರೆಗಳಿಗೆ ಬರುತ್ತಿದ್ದು, ಜನರಿಗಾಗಿ ಜ್ವರದ ಕ್ಲಿನಿಕ್ ತೆರೆಯಲಾಗಿದೆ ಎಂದು ಸಿದ್ದಾಪುರ ತಾಲೂಕಾ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ತಿಳಿಸಿದ್ದಾರೆ.
ಯಾವುದೇ ಜ್ವರವಿಲ್ಲದಿದ್ದರೂ ಕೂಡ ಬೆಂಗಳೂರಿನಿಂದ ಬಂದ ಜನರು ತಪಾಸಣೆಗಾಗಿ ತಾಲೂಕಾ ಆಸ್ಪತ್ರೆಗೆ ಬರುತ್ತಿದ್ದಾರೆ. ಜ್ವರವಿಲ್ಲದಿದ್ದರೆ ಆಸ್ಪತ್ರೆಗೆ ಬರುವ ಅವಶ್ಯಕತೆಯಿಲ್ಲ. ಆದರೆ 14 ದಿನಗಳ ಹೋಮ್ ಕ್ವಾರಂಟೈನ್ ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಒಂದುವೇಳೆ ಜ್ವರ ಕಂಡುಬಂದಲ್ಲಿ ಫೀವರ್ ಕ್ಲಿನಿಕ್ ಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಸಾಮಾನ್ಯ ಜ್ವರಕ್ಕೆ ಔಷಧಿಗಳನ್ನ ಪಡೆದು ಮನೆಯಲ್ಲೇ ವಿಶ್ರಾಂತಿ ಪಡೆಯಬೇಕು. ಕೊರೊನಾದ ಲಕ್ಷಣಗಳು ಕಂಡುಬಂದಲ್ಲಿ ಕ್ವಾರಂಟೈನ್ ಸೆಂಟರ್ ನಲ್ಲಿ ಇಟ್ಟು ಸ್ವಾಬ್ ಅನ್ನು ಪರೀಕ್ಷೆಗೆ ಕಳಿಸಲಾಗುವುದು. ಒಂದು ವೇಳೆ ನೆಗೆಟಿವ್ ಕಂಡುಬಂದಲ್ಲಿ ಮನೆಯಲ್ಲಿ ವಿಶ್ರಾಂತಿ ಪಡೆಯಬೇಕು. ಪಾಸಿಟಿವ್ ಲಕ್ಷಣಗಳಿದ್ದಲ್ಲಿ ಸಂಬಂಧಿತ ಆಸ್ಪತ್ರೆಗೆ ಕಳಿಸಲಾಗುವುದು ಎಂದರು.
ತಾಲೂಕಾ ಆಸ್ಪತ್ರೆಯಲ್ಲಿ ಫೀವರ್ ಕ್ಲಿನಿಕ್ ಪ್ರಾರಂಭವಾದ 6 ದಿನಗಳಲ್ಲಿ 150 ಜನರನ್ನ ತಪಾಸಣೆಗೊಳಪಡಿಸಲಾಗಿದೆ. ದಿನಕ್ಕೆ 25 ಜನರು ಸರಾಸರಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡುತ್ತಿದ್ದಾರೆ. ಜನರು ಮನೆಗಳಲ್ಲೇ ಮಾಸ್ಕ್ ತಯಾರಿಸಬಹುದಾಗಿದ್ದು, ಕಾಟನ್ ಬಟ್ಟೆಯನ್ನ 20 ನಿಮಿಷ ಕುದಿಸಿ ಅದನ್ನು ಮಾಸ್ಕ್ ಆಗಿ ಪರಿವರ್ತಿಸಬಹುದು. ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಜನರು ರೋಗಗಳಿಂದ ದೂರವಿರಬೇಕು ಎಂದರು.