ಎಲ್ಲವನ್ನೂ ಸರಕಾರ ಮಾಡುತ್ತದೆ ಎಂದು ನಾವು ಸುಮ್ಮನೆ ಇರಬಾರದು

ಆದ್ಯೋತ್ ನ್ಯೂಸ್ ಡೆಸ್ಕ್: ಕೊರೊನಾದಂತಹ ಭೀಕರ ಖಾಯಿಲೆ ಜಗತ್ತನ್ನೇ ನಡುಗಿಸುತ್ತಿದ್ದು ಇದರಿಂದ ಜನರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಇಂತಹ ಸಮಯದಲ್ಲಿ ಎಲ್ಲವನ್ನು ಸರಕಾರವೇ ಮಾಡುತ್ತದೆ ಎಂದು ನಾವು ಸುಮ್ಮನೆ ಇರಬಾರದು ಎಂದು ಬಿಜೆಪಿ ಮುಖಂಡ ಕೆ.ಜಿ.ನಾಯ್ಕ ಹಣಜೀಬೈಲ್ ಹೇಳಿದ್ದಾರೆ.


ಅವರು ಸಿದ್ದಾಪುರದಲ್ಲಿ ಕೊರೊನಾ ಲಾಕ್ ಡೌನ್ ಪರಿಣಾಮ ಸಂತ್ರಸ್ತರಾಗಿರುವ ಬಡವರಿಗೆ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ವಿವಿಧ ಆಹಾರ ಧಾನ್ಯಗಳ ಕಿಟ್ ವಿತರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ 21ದಿನದಿಂದ ಜಾರಿಯಲ್ಲಿದ್ದ ಲಾಕ್ ಡೌನ್ ಮೇ3 ನೇ ದಿನಾಂಕದ ತನಕ ಮುಂದುವರಿದಿದೆ. ಕೊರೊನಾ ತಡೆಯಲು ಇದು ಅನಿವಾರ್ಯವೂ ಹೌದು. ಇದರಿಂದ ಕೂಲಿಕಾರ್ಮಿಕರಿಗೆ, ಸಣ್ಣ ಕೃಷಿಕರಿಗೆ, ಹೊಲಿಗೆ, ಕ್ಷೌರಿಕ ಇತ್ಯಾದಿ ಕೆಲಸ ಮಾಡುವವರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಇಂತಹ ಸಮಯದಲ್ಲಿ ಆರ್ಥಿಕವಾಗಿ ಸಬಲರಾಗಿರುವವರು, ಸೇವಾಮನೋಭಾವನೆಯುಳ್ಳವರು ಇಂತಹವರ ನೆರವಿಗೆ ಬರಬೇಕಾಗಿದೆ. ಈ ದಿಸೆಯಲ್ಲಿ ಸಮಾನಮನಸ್ಕ ದಾನಿಗಳ ಜೊತೆ ಸೇರಿ ನಾವು ಆಹಾರ ಧಾನ್ಯಗಳ ಕಿಟ್ ವಿತರಣೆಯನ್ನು ಮಾಡುತ್ತಿದ್ದೇವೆ. ಪಟ್ಟಣ ವ್ಯಾಪ್ತಿಯಲ್ಲಿ ನೂರು ಜನರಿಗೆ ಹಾಗೂ ಗ್ರಾಮೀಣ ಭಾಗದಲ್ಲಿ ನೂರು ಜನರಿಗೆ ಕಿಟ್ ವಿತರಿಸಲಾಗುವುದು. ಮುಂದಿನ ದಿನಗಳಲ್ಲಿ ಅವಶ್ಯಕತೆಗನುಗುಣವಾಗಿ ದಾನಿಗಳ ಸಹಕಾರದಿಂದ
ಇನ್ನಷ್ಟು ಕಿಟ್ ಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರದ ಹಿರಿಯ ಗುತ್ತಿಗೆದಾರ ಲಯನ್ಸ್ ಎ.ಜಿ.ನಾಯ್ಕ, ವ್ಯಾಪಾರೋದ್ಯಮಿ ಅನಿಲ ದೇವನಹಳ್ಳಿ, ಜಿಪಂ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ, ಪಪಂ ಸದಸ್ಯರಾದ ಸುಧೀರ್ ನಾಯ್ಕ, ವಿಜೇಂದ್ರ ಗೌಡರ್, ಮಾರುತಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.


ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಪಟ್ಟಣದ ವಿನಾಯಕ ಸೌಹಾರ್ದ ಕೋ ಅಪರೇಟಿವ್ ಲಿ.ಯವರು ಸಿದ್ದಾಪುರ ಪಟ್ಟಣದ ಹೊಸೂರು ಜನತಾ ಕಾಲೋನಿಯಲ್ಲಿ ಗುರುವಾರ 20 ಬಡಕುಟುಂಬಗಳಿಗೆ ಸುಮಾರು ₹900 ಮೌಲ್ಯದ ಆಹಾರ ಧಾನ್ಯಗಳ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಆನಂದ ಈರಾ ನಾಯ್ಕ,ವ್ಯವಸ್ಥಾಪಕ ಶ್ರೀಧರ ಹೆಗಡೆ, ವಿನಾಯಕ ಆನಂದ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಸ್ಥಳೀಯರಾದ ನಾಗರಾಜ ಭಂಡಾರಿ ವಿತರಣೆಗೆ ಸಹಕರಿಸಿದರು.

About the author

Adyot

1 Comment

Leave a Comment