ಆದ್ಯೋತ್ ಉತ್ತರ ಕನ್ನಡ ಜಿಲ್ಲಾ ಸುದ್ದಿಗಳು

ಆದ್ಯೋತ್ ನ್ಯೂಸ್ ಡೆಸ್ಕ್ :
ಸಿದ್ದಾಪುರ : ಕೊರೊನಾ ರೋಗ ಹರಡದಂತೆ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ. ಅದರಂತೆ ಬಡವರಿಗೆ ಸಹಾಯ ಹಸ್ತ ಚಾಚುತ್ತಿವೆ. ಈ ಕಾರ್ಯಕ್ಕೆ ದಾನಿಗಳೂ ಕೂಡ ಮುಂದಾಗುವುದರ ಮೂಲಕ ಬಡವರಿಗೆ ಸಹಾಯ ಮಾಡಬೇಕು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.


ಸಿದ್ದಾಪುರದಲ್ಲಿ ಅಡಿಕೆ ವರ್ತಕರ ಸಂಘ ನೀಡಿದ ಆಹಾರದ ಕಿಟ್ ಗಳನ್ನು ವಿತರಿಸಿ ಕಾಗೇರಿ ಮಾತನಾಡಿದರು. ಸಿದ್ದಾಪುರದ ಅಡಿಕೆ ವರ್ತಕರ ಸಂಘ ಸುಮಾರು 209 ತಾಲ್ಲೂಕಿನ ಬಡವರಿಗೆ ಕಿಟ್ ಗಳನ್ನ ವಿತರಣೆ ಮಾಡುತ್ತಿದೆ. ಈ ಸಂದರ್ಭದಲ್ಲಿ ತಹಸೀಲ್ದಾರ್ ಮಂಜುಳಾ ಭಜಂತ್ರಿ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಪ್ರಕಾಶ್ ಹೆಗಡೆ, ಆರ್.ಎಸ್ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

ಸಿದ್ದಾಪುರ : ತಾಲೂಕಿನ ಶಿರಳಗಿ ಭಾಗದಲ್ಲಿ ಮಾಜಿ ತಾಲೂಕಾ ಪಂಚಾಯತ್ ಸದಸ್ಯ ವಸಂತ ನಾಯ್ಕ ಹಾಗೂ ತಾಲೂಕಾ ಪಂಚಾಯತ್ ಸದಸ್ಯ ನಾಸೀರ್ ಖಾನ್ ಆಹಾರದ ಕಿಟ್ ಗಳನ್ನು ವಿತರಿಸಿದರು.

ಶಿರಸಿ: ತರಕಾರಿ ವಾಹನದಲ್ಲಿ ಜನರನ್ನು ಸಾಗಾಟ ಮಾಡುತ್ತಿದ್ದ ಚಾಲಕನೊರ್ವನನ್ನು ಶಿರಸಿ ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.


ಉತ್ತರಕನ್ನಡ ಜಿಲ್ಲೆಯಾದ್ಯಂತ ಸಾಂಕ್ರಾಮಿಕ ರೋಗವಾದ ಕೋವಿಡ್ -19 ಕಾಯಿಲೆ ಹರಡದಂತೆ ತಡೆಗಟ್ಟುವ ಸಲುವಾಗಿ 144 ಕಲಂ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಹ ತರಕಾರಿಗೆ ಪಾಸ್ ಪಡೆದ ವಾಹನದಲ್ಲಿ ಜನರನ್ನ ಕೂರಿಸಿಕೊಂಡು ಹೋಗುತ್ತಿದ್ದ ಹಾನಗಲ್ ನ ಮಹಮ್ಮದ್ ಜಾಫರ್ ಕಮಲ್ ಭಾಷಾ ಅನ್ನುವವನು ಬಂಧಿತ ಆರೋಪಿ. ಹಾನಗಲ್ಲ ದಿಂದ ಮಂಗಳೂರಿಗೆ ತರಕಾರಿಯನ್ನು ತೆಗೆದುಕೊಂಡು ಹೋಗಲು ಪಾಸ್ ಪಡೆದು, ಹಾನಗಲ್ಲ ದಿಂದ ಸಿರಸಿಗೆ ಜನರನ್ನು ಕರೆದುಕೊಂಡು ಬಂದ ವೇಳೆ ಈತನ ಮೇಲೆ ಶಿರಸಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅರೋಪಿಯನ್ನು ಬಂಧಿಸಿ, ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರವಾರ : ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಜಿಲ್ಲೆಯ ವಿವಿಧ ಕಾರ್ಮಿಕರ ಶಿಬಿರ ಗಳಿಗೆ ಭೇಟಿ ನೀಡಿದರು.


ಈ ವೇಳೆ ಕಾರ್ಮಿಕರ ಯೋಗಕ್ಷೇಮವನ್ನು ವಿಚಾರಿಸಿದ ಎಸ್ಪಿ ಶಿವಪ್ರಕಾಶ್ ಅವರಿಗೆ ನೀಡಿರುವ ಆರೋಗ್ಯ, ಆಹಾರ ಇತ್ಯಾದಿ ಸೌಲಭ್ಯಗಳನ್ನು ಪರಿಶೀಲಿಸಿದರು. ಅಲ್ಲದೆ ಮುಂದಿನ ಸೂಚನೆ ನೀಡುವವರೆಗೆ ಕಾರ್ಮಿಕ ಶಿಬಿರಗಳಿಂದ ತೆರಳದಂತೆ ಮತ್ತು ಹೊರಹೋಗದಂತೆ ಅಲ್ಲಿದ್ದ ಕಾರ್ಮಿಕರಿಗೆ ತಿಳಿಸಿದ್ದಾರೆ.

ಹಳಿಯಾಳ : ಉತ್ತರ ಕನ್ನಡ ಜಿಲ್ಲೆಯ 18 ಉದ್ಯೋಗಿಗಳು ಇರುವ ಜಲೇಶ ಕರ್ಣಕ ಎಂಬ ಹಡಗು ಮುಂಬೈ ಬಳಿ ಸಮುದ್ರದಲ್ಲಿ ಲಂಗರು ಹಾಕಿದ್ದು, ಅವರಿಗೆ ಆಹಾರ ಹಾಗೂ ಇಂಧನದ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರಮುಖೇನ ತಿಳಿಸಿದ್ದಾರೆ.


ಹಡಗಿನಲ್ಲಿರುವ ಯಾರಲ್ಲೂ ಸಹ ಕೋವಿಡ್-19 ಸೊಂಕು ಕಂಡು ಬಂದಿಲ್ಲ. ಹಡಗಿನ ಸಿಬ್ಬಂದಿ ಕ್ವಾರೆಂಟೈನ್ ಕಳೆದು ತಿಂಗಳಾದರೂ ಅವರಿಗೆ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಆಹಾರ ಇಂಧನ ದಾಸ್ತಾನು ಕಡಿಮೆಯಾಗುತ್ತಿದೆ ಎಂದು ಹಡಗಿನಲ್ಲಿದ್ದವರು ಆತಂಕ ವ್ಯಕ್ತಪಡಿಸಿದ್ದಾರೆ. ಕೊರೋನ ಹಿನ್ನೆಲೆಯಲ್ಲಿ ಹಡಗಿನಲ್ಲಿ ಪ್ರವೇಶ ಕಲ್ಪಿಸಿಲ್ಲ. ಹೀಗಾಗಿ ಹಡಗಿನಲ್ಲಿದ್ದ ಇಂಧನ ಪ್ರಮಾಣವು ಕಡಿಮೆಯಾಗುತ್ತ ಬಂದಿದೆ. ಸಿಬ್ಬಂದಿ ಆತಂಕದಲ್ಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಹೊನ್ನಾವರ, ಅಂಕೋಲಾದ 18 ರಷ್ಟು ಯುವಕರು ಈ ಹಡಗಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೂಡಲೇ ಸರ್ಕಾರ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಅಂತ ದೇಶಪಾಂಡೆ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

About the author

Adyot

1 Comment

Leave a Comment