ಆದ್ಯೋತ್ ಸುದ್ದಿನಿಧಿ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಮಂಗನಖಾಯಿಲೆ ಪ್ರಕರಣಗಳು ಕಂಡುಬರುತ್ತಿದ್ದರೂ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಶನಿವಾರ ಸಿದ್ದಾಪುರ ಪಟ್ಟಣದ ತಾಪಂ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ತಾಲೂಕಿನಲ್ಲಿ 49 ಮಂಗನಖಾಯಿಲೆ ಪೀಡಿತರಿದ್ದು 2 ಜನರು ಮಣಿಪಾಲ ಆಸ್ಪತ್ರೆಯಲ್ಲಯೂ,2 ಜನರು ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರು ಮರಣ ಹೊಂದಿದ್ದು ಉಳಿದವರು ಗುಣಮುಖರಾಗಿದ್ದಾರೆ. 238 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ ಯಾರಲ್ಲೂ ಸೊಂಕಿನ ಲಕ್ಷಣಗಳಿಲ್ಲ. ಲಾಕ್ ಡೌನ್ ಉತ್ತಮವಾಗಿ ನಡೆಯುತ್ತಿದ್ದು ಮೇ17 ರ ವರೆಗೆ ಲಾಕ್ ಡೌನ್ ಮುಂದುವರಿದಿದ್ದು ಸಡಿಲಿಕೆಯ ನಿಯಮಗಳ ಕುರಿತು ಇನ್ನು ಒಂದೆರಡು ದಿನದಲ್ಲಿ ಜಿಲ್ಲಾ ಉಸ್ತುವಾರಿ ಸಚೀವರು ಮಾಹಿತಿ ನೀಡಲಿದ್ದಾರೆ. ಆದರೆ ಜನರು ಲಾಕ್ ಡೌನ್ ಘೋಷಣೆಯಾದಾಗ ಯಾವ ರೀತಿ ನಿಯಮ ಪಾಲಿಸುತ್ತಿದ್ದರೋ ಅದೇ ರೀತಿ ಕಟ್ಟುನಿಟ್ಟಾಗಿ ಲಾಕ್ ಡೌನ್ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.
ಕುಡಿಯುವ ನೀರಿನ ಸಮಸ್ಯೆ ತಾಲೂಕಿನಲ್ಲಿ ಉಂಟಾಗಿಲ್ಲ ಕುಡಿಯುವ ನೀರಿನ ಯೋಜನೆಗಾಗಿ 50 ಲಕ್ಷ ರೂಪಾಯಿ ಮಂಜೂರಾಗಿದೆ. 18 ಕೊಳವೆ ಬಾವಿಗಳನ್ನು ತೆಗೆಯಲಾಗಿದೆ. ಅವಶ್ಯಕವಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು. ಮಳೆಗಾಲ ಪ್ರಾರಂಭವಾಗಲಿದ್ದು ಗಟಾರ ಸ್ವಚ್ಚಗೊಳಿಸುವುದರಿಂದ ಹಿಡಿದು ಹೆಸ್ಕಾಂನವರಿಂದ ವಿದ್ಯುತ್ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಮದ್ಯಪಾನ ನಿಷೇಧಕ್ಕೆ ನನ್ನ ಸಂಪೂರ್ಣ ಒಲವಿದ್ದು ಈ ಕುರಿತು ಸಾಕಷ್ಟು ಬಾರಿ ಹಲವಾರು ವೇದಿಕೆಯಲ್ಲಿ ಪ್ರತಿಪಾದಿಸಿದ್ದೇನೆ
ಆದರೆ ಇದನ್ನು ಒಮ್ಮೇಲೆ ಜಾರಿಗೆ ತರದೆ ಹಂತ ಹಂತವಾಗಿ ಜಾರಿಗೆ ತರಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ಪ್ರದಾನಿ ನರೇಂದ್ರ ಮೋದಿಯವರು ಕೊರೊನಾ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಇಂತಹದೇ ನಿಯಮವನ್ನು ರಾಜ್ಯದಲ್ಲೂ ತರುವ ಮೂಲಕ ಮುಖಮಂತ್ರಿ ಯಡಿಯೂರಪ್ಪ ಕೊರೊನಾ ಹಿಮ್ಮೇಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ ಈಗ ಕೆಲವು ಸಡಿಲಿಕೆಗಳನ್ನು ನೀಡಲಿದ್ದು ಜನರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕಾಗೇರಿ ಜನರಲ್ಲಿ ಮನವಿ ಮಾಡಿದರು.
ತಹಸೀಲ್ದಾರ ಮಂಜುಳಾ ಭಜಂತ್ರಿ, ಸಿಪಿಐ ಪ್ರಕಾಶ, ತಾಪಂ ಮುಖ್ಯಾಧಿಕಾರಿ ಪ್ರಶಾಂತ, ಪ.ಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ, ಡಾ.ನಂದಕುಮಾರ ಪೈ, ಹೆಸ್ಕಾಂ ಅಧಿಕಾರಿ ಡಿ.ಟಿ.ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಿದ್ದಾಪುರ ತಾಲೂಕಿನ ನೆರಳಮನೆಯಲ್ಲಿ ಅರಣ್ಯ ಇಲಾಖೆಯವರು ಮನೆ ಬೀಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಮಾಲಿಕ ನಾರಾಯಣ ನಾಯ್ಕ ಮನೆ ಉಳಿಸಿಕೊಡುವಂತೆ ವಿಶ್ವೇಶ್ವರ ಹೆಗಡೆ ಕಾಗೇರಿಯವರಲ್ಲಿ ಮನವಿ
ಮಾಡಿಕೊಂಡರು. ಸಕಾರಾತ್ಮಕವಾಗಿ ಸ್ಪಂದಿಸಿದ ಕಾಗೇರಿ ಅರಣ್ಯ ಇಲಾಖೆಯವರ ಜೊತೆಗೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ.
ವಾಸ್ತವ್ಯಕ್ಕೆ ತೊಂದರೆಯಾದರೆ ಸ್ಥಳೀಯ ಆಡಳಿತಕ್ಕೆ ವಸತಿ ವ್ಯವಸ್ಥೆ ಮಾಡುವಂತೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.