ಸಿದ್ದಾಪುರದಲ್ಲಿ “50 ” ಕ್ಕೆ ಏರಿದ ಮಂಗನಖಾಯಿಲೆ ಪೀಡಿತರು

ಆದ್ಯೋತ್ ಸುದ್ದಿನಿಧಿ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರ, ಸಿದ್ದಾಪುರ, ಜೊಯಿಡಾ, ಅಂಕೋಲಾ ತಾಲೂಕಿನಲ್ಲಿ ಮಂಗನಖಾಯಿಲೆ ಕಾಣಿಸಿಕೊಂಡಿದ್ದು ಸಿದ್ದಾಪುರ ಹೊರತುಪಡಿಸಿ ಉಳಿದ ತಾಲೂಕಿನಲ್ಲಿ ನಿಯಂತ್ರಣದಲ್ಲಿದೆ.
ಆದರೆ ಸಿದ್ದಾಪುರದಲ್ಲಿ ದಿನದಿಂದ ದಿನಕ್ಕೆ ಮಂಗನಖಾಯಿಲೆ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು ರವಿವಾರ ವಾಜಗೋಡು ಗ್ರಾಪಂ ವ್ಯಾಪ್ತಿಯ ಕುಡಗುಂದ ಗ್ರಾಮದ ಮುಂಡಗೆತಗ್ಗುವಿನ 50 ವರ್ಷದ ವ್ಯಕ್ತಿಯಲ್ಲಿ ಮಂಗನಖಾಯಿಲೆ ಇರುವುದು ಖಚಿತವಾಗಿದ್ದು ತಾಲೂಕಿನಲ್ಲಿ ಮಂಗನಖಾಯಿಲೆ ಪೀಡಿತರ ಸಂಖ್ಯೆ “50” ಕ್ಕೆ ತಲುಪಿದೆ. ತಾಲೂಕಿನ ಕಾನಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ -7 ಪ್ರಕರಣ, ಬಿಳಗಿ-2, ದೊಡ್ಮನೆ-8, ಕೊರ್ಲಕೈ-12 ಹಾಗೂ ಕ್ಯಾದಗಿ‌ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 21 ಪ್ರಕರಣಗಳು ದಾಖಲಾಗಿವೆ.


ಮಣಿಪಾಲ ಆಸ್ಪತ್ರೆಯಲ್ಲಿ ಇಬ್ಬರು ಹಾಗೂ ಸ್ಥಳೀಯ ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗಾರರಿಗೆ ಶನಿವಾರ ಮಾಹಿತಿ ನೀಡಿದ್ದು ರವಿವಾರ ಕಂಡುಬಂದಿರುವ ವ್ಯಕ್ತಿಗೆ ಎಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವುದು ತಿಳಿದು ಬಂದಿಲ್ಲ. ಕೊರ್ಲಕೈ ಗ್ರಾಪಂ ವ್ಯಾಪ್ತಿಯ ಜೋಗಿನಮಠ ಭಾಗದಲ್ಲಿ ಉಣ್ಣೆ ನಿಯಂತ್ರಣಕ್ಕಾಗಿ ದೊಡ್ಡ ಮಟ್ಟದಲ್ಲಿ, ಜಿಲ್ಲಾಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಔಷಧ ಸಿಂಪರಣೆ ಮಾಡಲಾಗಿದೆ. ಉಳಿದ ಭಾಗದಲ್ಲಿ ಔಷಧ ಸಿಂಪರಣೆ ಮಾಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಂಗನಖಾಯಿಲೆ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಎಂದು ಹೇಳುತ್ತಾರೆ ಆದರೆ ಮಂಗನಖಾಯಿಲೆ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.

About the author

Adyot

Leave a Comment