ಆದ್ಯೋತ್ ಸುದ್ದಿ ನಿಧಿ : ಜಿಲ್ಲೆಯನ್ನು ಆರೆಂಜ್ ಜೋನ್ ನಲ್ಲಿ ಗುರುತಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನೀಡಿರುವ ಸಡಿಲಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಪ್ರಕಟಿಸಿದರು.
ಶಿರಸಿಯಲ್ಲಿ ಅಧಿಕಾರಿಗಳ ಸಭೆ ನಂತರ ಮಾತನಾಡಿದ ಹೆಬ್ಬಾರ್, ಜಿಲ್ಲೆಯ ಭಟ್ಕಳದಲ್ಲಿ ಯಥಾಸ್ಥಿತಿ ಮುಂದುವರಿಸಲಾಗುತ್ತದೆ. ಜಿಲ್ಲೆಯ ಉಳಿದ ಪಟ್ಟಣಗಳಲ್ಲಿ ಬೆಳಿಗ್ಗೆ 7 ರಿಂದ 1 ಗಂಟೆಯವರೆಗೆ ಎಲ್ಲಾ ಅಂಗಡಿಗಳು ತೆರೆಯಲು ಅನುಮತಿ ನೀಡಲಾಗಿದೆ. ಹಳ್ಳಿ ಪ್ರದೇಶಗಳಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 7 ರವರೆಗೆ ಅಂಗಡಿ ತೆರೆಯಲು ಅವಕಾಶವಿದೆ. ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಹೇರ್ ಕಟಿಂಗ್ ಸಲೂನ್, ಬ್ಯುಟಿ ಪಾರ್ಲರ್ ಹಾಗೂ ಐಸ್ಕ್ರೀಂ ಪಾರ್ಲರ್ ಗಳು 7 ರಿಂದ 1 ರ ವರೆಗೆ ತೆರೆಯಬಹುದಾಗಿದೆ. ಆಟೋಗಳಲ್ಲಿ ಒಬ್ಬರನ್ನ ಕೂರಿಸಿಕೊಂಡು ಹೋಗಲು ಮಾತ್ರ ಅವಕಾಶ ನೀಡಲಾಗಿದೆ. ಆದರೆ ಈ ಎಲ್ಲ ಸಡಿಲಿಕೆಗಳಲ್ಲೂ ಸಾಮಾಜಿಕ ಅಂತರ ಕಾದುಕೊಳ್ಳುವುದು ಅನಿವಾರ್ಯವಾಗಿದೆ. ಹೋಟೆಲ್ ಗಳಲ್ಲಿ ಪಾರ್ಸಲ್ ಗಳಿಗೆ ಮಾತ್ರ ಅವಕಾಶವಿದೆ. ಜಿಲ್ಲೆಯಲ್ಲಿ ಬಾರ್ ಗಳು 9 ಗಂಟೆಯಿಂದ 3 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗುತ್ತದೆ. ಈ ಎಲ್ಲಾ ಸಡಿಲಿಕೆಗಳು ನಾಳೆ ಬೆಳಿಗ್ಗೆಯಿಂದ ಮೇ 14 ರ ವರೆಗೆ ಅನ್ವಯವಾಗುತ್ತದೆ. ಉಳಿದಂತೆ ಕೇಂದ್ರ ಸರ್ಕಾರದ ನಿಯಮಗಳು ಅನ್ವಯವಾಗುತ್ತವೆ. ಜನರು ದಯವಿಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂದರು.
ಇನ್ನು ಗೋವಾದಿಂದ ರಾಜ್ಯಕ್ಕೆ ಬರೋ ಪ್ರಯಾಣಿಕರಿಗೆ ನಾಳೆ ಅವಕಾಶ ನೀಡಲಾಗುತ್ತಿದೆ. ಗೋವಾ ಗಡಿಯವರೆಗೆ ಗೋವಾದ ಬಸ್ ಅವರನ್ನ ಕರೆತರಲಿದ್ದು, ಅಲ್ಲಿಂದ ಜಿಲ್ಲೆಯ ಬಸ್ ನಲ್ಲಿ ಅವರನ್ನ ಕರೆತಂದು ಆರೋಗ್ಯ ತಪಾಸಣೆ ಮಾಡಲಿದೆ. ನಂತರ ಬೇರೆ ಜಿಲ್ಲೆಗಳಿಗೆ ತೆರಳಲಿರೋ ಪ್ರಯಾಣಿಕರನ್ನು ಅಲ್ಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದರು.
Good news
ಒಳ್ಳೇ ಸುದ್ದಿ