ಆದ್ಯೋತ್ ಸುದ್ದಿ ನಿಧಿ : ಜಿಲ್ಲೆಯಲ್ಲಿ ಮೊದಲ ಬಾರಿ ಸೋಂಕಿತರು ಬಂದಾಗ ಮೂಲ ಗೊತ್ತಿತ್ತು. ಅದೇ ರೀತಿ ಈಗ ಕೊರೊನಾ ಪಾಸಿಟಿವ್ ಬಂದ 12 ಜನರ ಮೂಲ ಗೊತ್ತಾಗಿರೋದ್ರಿಂದ ನಾವು ಪೂರ್ತಿ ವಿಶ್ವಾಸದಿಂದ ಇದನ್ನ ಎದುರಿಸುತ್ತೇವೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಹೇಳಿದ್ದಾರೆ.
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ. ಹರೀಶ್ ಕುಮಾರ್, ವೈದ್ಯಕೀಯ ಕಾರಣದಿಂದ ಹೊರಗಡೆ ತೆರಳಿ ಚಿಕಿತ್ಸೆ ಪಡೆದ 3 ಕುಟುಂಬಗಳು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ತೆರಳಿದ್ದವು. ಆ 3 ಕುಟುಂಬದ 10 ಜನರಿಗೆ ಅಸ್ಪತ್ರೆಯಿಂದಲೇ ಸೋಂಕು ಬಂದಿದೆ. ಇವರ ಹತ್ತಿರದ ಸಂಪರ್ಕಕ್ಕೆ ಬಂದಿದ್ದ ಪಕ್ಕದ ಮನೆಯ ಒಬ್ಬರಿಗೆ ಹಾಗೂ ಓರ್ವ ಸೋಂಕಿತೆಯ ಗೆಳತಿ ಸೇರಿ ಇನ್ನಿಬ್ಬರಿಗೆ ಬಂದಿದೆ. ಇದರಲ್ಲಿ 5 ತಿಂಗಳ ಮಗುವಿಗೂ ಪಾಸಿಟಿವ್ ಬಂದಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಆ ಆಸ್ಪತ್ರೆಗೆ ತೆರಳಿದ ರೋಗಿಗಳ ಪಟ್ಟಿ ಕೊಡುತ್ತಿದೆ. ಆ ಆಸ್ಪತ್ರೆಗೆ ತೆರಳಿದ ಎಲ್ಲಾ ರೋಗಿ ಹಾಗೂ ಕುಟುಂಬದವರ ಸ್ವಾಬ್ ಕಲೆಕ್ಷನ್ ಮಾಡಬೇಕಿದೆ. ದಯವಿಟ್ಟು ಆ ಆಸ್ಪತ್ರೆಗೆ ತೆರಳಿದರು ಸ್ವಯಂಪ್ರೇರಿತರಾಗಿ ಜಿಲ್ಲಾಡಳಿತಕ್ಕೆ ತಿಳಿಸಿ ಎಂದರು.
ಇನ್ನೂ 55 ಜನರ ವರದಿ ನಾಳೆ ಬರಲಿದೆ. ಜಿಲ್ಲೆಯ ಜನತೆ ಆತಂಕಪಡುವ ಅಗತ್ಯವಿಲ್ಲ. ಸೋಂಕಿನ ಮೂಲ ಪತ್ತೆ ಹಚ್ಚಿದ್ದೇವೆ. ಇದು ಕಂಟೇನ್ಮೆಂಟ್ ಜೋನ್ ಒಳಗಡೆನೆ ಇದೆ. ಭಟ್ಕಳಕ್ಕೆ ಹೋದವರಿಗೆ ಹೋಮ್ ಕ್ವಾರಂಟೈನ್ ಮಾಡಲಾಗುವುದು. ಮಾನವೀಯ ನೆಲೆಯಲ್ಲಿ ಕೂಡ ಭಟ್ಕಳದಲ್ಲಿ ಯಾವುದಕ್ಕೂ ಅವಕಾಶ ನೀಡುವುದಿಲ್ಲ. ಉಳಿದಂತೆ ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ಕೇಂದ್ರ ಸರ್ಕಾರದ ನಿಯಮದಂತೆ ಸಡಿಲಿಕೆ ಇರಲಿದೆ. ಮುಂದಿನ ದಿನಗಳಲ್ಲಿ ಕೈಗೊಳ್ಳುವ ಕಠಿಣ ನಿರ್ಧಾರಗಳಿಗೆ ಎಲ್ಲರೂ ಸಹಕರಿಸಬೇಕು ಎಂದರು.