ಮಂಗನಖಾಯಿಲೆ ಪ್ರಕರಣ 58 ಕ್ಕೆ ಏರಿಕೆ

ಆದ್ಯೋತ್ ಸುದ್ದಿನಿಧಿ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಕ್ಯಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ವಂದಾನೆ ಹಾಗೂ ಕೆರೆಕಾನಿನ ಇಬ್ಬರು ಮಹಿಳೆಯರಲ್ಲಿ ಮಂಗನಖಾಯಿಲೆ ಇರುವುದು ದೃಢಪಟ್ಟಿದೆ.

ಕಳೆದ ಫೆಬ್ರವರಿ ತಿಂಗಳಲಿನಲ್ಲಿ ಕಾಣಿಸಿಕೊಂಡ ಮಂಗನಖಾಯಿಲೆ ಇಲ್ಲಿಯವರೆಗೆ 58 ಜನರಲ್ಲಿ ಕಾಣಿಸಿಕೊಂಡಿದ್ದು ಇಬ್ಬರು ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ,ಇಬ್ಬರು ಸಿದ್ದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಟಗಿ ಗ್ರಾಪಂ ವ್ಯಾಪ್ತಿಯ ವ್ಯಕ್ತಿಯೊಬ್ಬರು ಮರಣ ಹೊಂದಿದ್ದಾರೆ.
ಮಂಗನಖಾಯಿಲೆ ಪ್ರಾರಂಭಿಕ ಹಂತದಲ್ಲಿದ್ದರೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಖಾಯಿಲೆ ಉಲ್ಬಣಿಸಿದರೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಮಣಿಪಾಲ ಆಸ್ಪತ್ರೆಯಲ್ಲಿ ಈ ಖಾಯಿಲೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ.

ಮಾರ್ಚ ತಿಂಗಳಲ್ಲಿ ಕ್ಯಾದಗಿಯಲ್ಲಿ ನಡೆದ ಸಭೆಯೊಂದರಲ್ಲಿ
ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ನೀಡಿದ ಭರವಸೆಯಂತೆ ಮಣಿಪಾಲದಲ್ಲಿ ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ಆದರೆ ಅದಕ್ಕಿಂತಲೂ ಮೊದಲು ಚಿಕಿತ್ಸೆ ಪಡೆದವರು ಮಣಿಪಾಲದಲ್ಲಿ ಹಣ ಪಾವತಿಸಿದ್ದಾರೆ.ಅಲ್ಲದೆ ಕೆಲವರ ಪಡಿತರ ಚೀಟಿಯ ತಾಂತ್ರಿಕ ತೊಂದರೆಯಿಂದಾಗಿ ಹಣ ಪಾವತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇವರೆಲ್ಲರೂ ಬಡವರು, ಮದ್ಯಮ ವರ್ಗದವರಾಗಿದ್ದು ಸಾಲ ಮಾಡಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸರಕಾರ ಇಂತಹವರ ನೆರವಿಗೆ ಬರಬೇಕಾಗಿದೆ. “ಸಿದ್ದಾಪುರ ತಾಲೂಕಿನ ದೊಡ್ಮನೆ ಜಿಪಂ ವ್ಯಾಪ್ತಿಯಲ್ಲಿ ಮಂಗನಖಾಯಿಲೆ ಪ್ರಕರಣ ಹೆಚ್ಚಾಗಿದೆ. ಈ ಭಾಗದಲ್ಲಿ ಬಡವರು, ಮಧ್ಯಮವರ್ಗದವರು ಹೆಚ್ಚಾಗಿದ್ದಾರೆ. ಮಣಿಪಾಲದಲ್ಲಿ ದುಬಾರಿ ವೆಚ್ಚದ ಚಿಕಿತ್ಸೆ ಪಡೆದು ಅವರೆಲ್ಲ ಸಾಲಗಾರರಾಗಿದ್ದಾರೆ. ಸರಕಾರ ಇವರ ನೆರವಿಗೆ ಬರಬೇಕಾಗಿದೆ ಈ ಬಗ್ಗೆ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರರಿಗೆ ಮನವಿ ಸಲ್ಲಿಸಲಾಗಿದೆ. ಅವರಿಂದ ಭರವಸೆಯನ್ನೂ ಪಡೆದಿದ್ದೇವೆ” ಎಂದು ದೊಡ್ಮನೆ ಜಿಪಂ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ ಆದ್ಯೋತ್ ನ್ಯೂಸ್ ಗೆ ತಿಳಿಸಿದ್ದಾರೆ.

ಸಿದ್ದಾಪುರದಲ್ಲಿ ಬಸ್ ಪ್ರಯಾಣಿಕರಿಗೆ ಸ್ಕ್ರೀನಿಂಗ್: ಕೊವಿಡ್ 19 ಭೀತಿಯ ಹಿನ್ನಲೆಯಲ್ಲಿ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಬುಧವಾರ ಸ್ಥಳೀಯ ಆರೋಗ್ಯ ಇಲಾಖೆಯವರು ಪ್ರಯಾಣಿಕರ ಸ್ಕ್ರೀನಿಂಗ್ ನಡೆಸಿದರು.


ಯಲ್ಲಾಪುರ ಹಾಗೂ ಶಿರಸಿಯಿಂದ ಬೆಂಗಳೂರಿಗೆ ನಾಲ್ಕು ಬಸ್ ಗಳನ್ನು ಬಿಟ್ಟಿದ್ದು ಸಿದ್ದಾಪುರದಿಂದ ಸುಮಾರು 20 ಪ್ರಯಾಣಿಕರು ಬೆಂಗಳೂರಿಗೆ ಪ್ರಯಾಣಿಸಿದ್ದಾರೆ. ಇವರೆಲ್ಲರ ಸ್ಕ್ರೀನಿಂಗ್ ನಡೆಸಲಾಗಿದೆ. ಯಾರಲ್ಲೂ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ಆದ್ಯೋತ್ ನ್ಯೂಸ್ ಗೆ ತಿಳಿಸಿದ್ದಾರೆ.

About the author

Adyot

1 Comment

Leave a Comment