ಆದ್ಯೋತ್ ಅಂಕಣದಲ್ಲಿ ಕೊಳಗಿ ನೆನಪು

ಕಾಸರವಳ್ಳಿ ಎಂಬ ಚೈತನ್ಯದ ಚಿಲುಮೆ——

ಆಗ ಬಾಲ್ಯದಿಂದ ಯೌವನಕ್ಕೆ ದಾಟಿಕೊಳ್ಳುತ್ತಿರುವ ವಯಸ್ಸು.ಕೃಷಿ, ಅಭ್ಯಾಸ ಮತ್ತು ರಂಗಭೂಮಿ, ಸಾಹಿತ್ಯ ಎನ್ನುವ ನೂರೆಂಟು ತರಲೆಗಳನ್ನ ಹಚ್ಚಿಕೊಂಡು ಓಡಾಡುತ್ತಿದ್ದ ಸಮಯ.
ಯಾವುದನ್ನೂ ಸರಿಯಾಗಿ ಮಾಡೋದಿಲ್ಲ, ಎಲ್ಲಾನೂ ಹಿಂಡ್ಕೊಂಡು ಹೋದ್ರೆ ಯಾವುದನ್ನೂ ದಡ ಹಚ್ಚೋಕೆ ಆಗೋದಿಲ್ಲ ಎಂದು ನನ್ನ ಅಪ್ಪ, ಅಮ್ಮ ನನ್ನ ನಡವಳಿಕೆಗೆ ಬೇಸತ್ತು ಗದರುತ್ತಿದ್ದರು. ಅವರು ಎಷ್ಟೇ ಗದರಿದರೂ ನಾನೇನು ತಪ್ಪಿನ ಕೆಲಸ ಮಾಡುತ್ತಿಲ್ಲ ಎನ್ನುವ ಒಳ ಸಮಾಧಾನ ಅವರಿಗಿತ್ತು ಎನ್ನುವದು ಮೇಲ್ನೋಟಕ್ಕೇ ತಿಳಿಯುತ್ತಿತ್ತು. ಉಳಿದವರು ನನ್ನನ್ನು ತೀರಾ ಬೇಜವಾಬ್ದಾರಿ ಹುಡುಗ, ಅಪ್ಪ, ಅಮ್ಮನನ್ನು ಸರಿಯಾಗಿ ನೋಡ್ಕೋತಾನೆ ಅನ್ನುವ ಗ್ಯಾರಂಟಿಯಿಲ್ಲ ಎಂದು ಸಮಯ ಸಿಕ್ಕಾಗೆಲ್ಲ ನನ್ನ ಬಗ್ಗೆ ವ್ಯಾಖ್ಯಾನಿಸುತ್ತಿದ್ದರು. ಓದುವ ಹುಚ್ಚು ಬೇರೆ ಗಂಟು ಬಿದ್ದಿತ್ತಲ್ಲ, ಈ ಎಲ್ಲ ಉಪದ್ವಾಪಗಳ ನಡುವೆ ಒಂದು ಅಪರೂಪದ ಕ್ಷಣದಲ್ಲಿ ಕೆ.ವಿ. ಸುಬ್ಬಣ್ಣನವರ ಪರಿಚಯವಾಗಿತ್ತು. ಕನಿಷ್ಠ ಹದಿನೈದು ದಿನಕ್ಕೆ ಒಮ್ಮೆಯಾದರೂ ಹೆಗ್ಗೋಡಿಗೆ ಹೋಗಿ ನೀನಾಸಂ ಕಚೇರಿಯೆದುರು,ಆಗಿದ್ದ ಅಡಕೆದಬ್ಬೆ ಹೆಣೆದು ಮಾಡಿದ ಬೆಂಚ್ ಮೇಲೆ ಕುಳಿತು ಸುಬ್ಬಣ್ಣವರ ಬಳಿ ಮಾತನಾಡಿ, ಹಾಸ್ಟೆಲಿನ ಕಾಕಾಲ್ ಅವರ ಕಾಫಿ ಕುಡಿದು, ರಂಗಮಂದಿರದಲ್ಲಿ ನಡೆಯುತ್ತಿದ್ದ ರಂಗ ತರಬೇತಿ ವಿದ್ಯಾರ್ಥಿಗಳ ರಿಹರ್ಸಲ್ ನೋಡಿ ಬಾರದಿದ್ದರೆ ಸಮಾಧಾನವಿರುತ್ತಿರಲಿಲ್ಲ. ನಾಟಕವಿದ್ದರೆ ಸಂಜೆಯವರೆಗೆ ಇದ್ದು ಅದನ್ನು ನೋಡಿ,ರಾತ್ರಿ ಸಾಗರಕ್ಕೆ ಬಂದು, ಅಲ್ಲಿ ಬೆಳಗಿನಜಾವದ ತನಕ ಕಾದು ಬೆಂಗಳೂರಿನಿಂದ ಬರುವ ದಾಂಡೇಲಿ ಬಸ್‍ನಲ್ಲಿ, ಕೆಲವೊಮ್ಮೆ ಟ್ರಕ್ ಸಿಕ್ಕರೆ ಅದರಲ್ಲಿ ಸಿದ್ದಾಪುರಕ್ಕೆ ಬಂದು ಮತ್ತೆ ನಾಲ್ಕು ಮೈಲಿ ನಡೆದು ಮನೆ ಸೇರುತ್ತಿದ್ದೆ.

ನಾನೇನು ನೀನಾಸಂ ವಿದ್ಯಾರ್ಥಿಯಲ್ಲ, ಅದರಲ್ಲಿ ಯಾವುದೇ ವಿಧದಲ್ಲಿ ಭಾಗಿಯಾದವನೂ ಅಲ್ಲ; ನನ್ನ ಸಂಬಂಧವೇನಿದ್ದರೂ ಸುಬ್ಬಣ್ಣನವರ ಜೊತೆ. ಆಗ ಕೆ.ವಿ.ಸುಬ್ಬಣ್ಣ ನೀನಾಸಂ ಹಾಗೂ ಪುಣೆಯ ಫಿಲಂ ಆರ್ಖೈವ್ ಮೂಲಕ ಜನಸ್ಪಂದನ ಎನ್ನುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದರು.
ಗ್ರಾಮೀಣ ಪ್ರದೇಶದಲ್ಲಿ ದೇಶದ, ವಿದೇಶದ ಸದಭಿರುಚಿಯ ಸಿನೆಮಾಗಳ ಪ್ರದರ್ಶನ ಕೂಡ ಆ ಯೋಜನೆಯಲ್ಲಿತ್ತು. ಒಮ್ಮೆ ನಿಮ್ಮೂರ ಸುತ್ತಮುತ್ತ ಕಾರ್ಯಕ್ರಮ ಆಯೋಜನೆ ಮಾಡಲಿಕ್ಕಾಗುತ್ತಾ ನೋಡಿ’ ಎಂದಿದ್ದರು. ಅದರಂತೆ ನಮ್ಮ ತಾಲೂಕಿನ ಇಟಗಿ ಮುಂತಾದ ತೀರಾ ಗ್ರಾಮೀಣ ಭಾಗದ ಊರುಗಳಲ್ಲಿ ಎರಡು ದಿನಗಳ ಸಿನೆಮಾ ಪ್ರದರ್ಶನ ಮಾಡಿದ್ದೆವು. ಆಗಲೇ ನನಗೊಂದು ಉಮೇದು ಬಂತು. ಪಟ್ಟಣದಲ್ಲೇ ಯಾಕೆ ಸಿನೆಮಾ ಪ್ರದರ್ಶನ ಮಾಡಬಾರದು? ಎಂದು. ಆ ಬಗ್ಗೆ ಸುಬ್ಬಣ್ಣನವರ ಬಳಿ ಹೇಳಿದೆ. ‘ಆಯ್ತು ಮಾಡೋಣ, ಮೂರು ದಿನದ್ದು ಇಟ್ಕೊಳ್ಳೋಣ’ ಎಂದು ಅದರ ಬಗ್ಗೆ ಸಿದ್ಧತೆ ನಡೆಸಲು ಹೇಳಿದರು.
ಮುಖ್ಯವಾದ ವೆಚ್ಚಗಳನ್ನು ಸುಬ್ಬಣ್ಣ ಭರಿಸಿದರೂ ಒಂದಿಷ್ಟಾದರೂ ಖರ್ಚುಗಳು ಇರುತ್ತವಲ್ಲ. ನನ್ನ ಬಳಿ ಏನಿಲ್ಲ, ಉಮೇದಿಯ ಹೊರತು. ಆಗ ಸಿದ್ದಾಪುರದಲ್ಲಿ ಜೇಸಿಸ್ ಕ್ಲಬ್ ಎನ್ನುವ ಸಂಘಟನೆ ಕ್ರಿಯಾಶೀಲವಾಗಿತ್ತು. ಆದಾಯ ತೆರಿಗೆ ಇಲಾಖೆ ಹಿರಿಯ ಅಧಿಕಾರಿಯಾಗಿ ನಿವೃತ್ತರಾಗಿರುವ ಎಸ್.ಎಂ.ಹೆಗಡೆ ಬಣಗೆ ಆಗ ನಮ್ಮೂರ ಕಾಲೇಜಿನ ಉಪನ್ಯಾಸಕರಾಗಿದ್ದರು. ಅವರಂತೆ ಕಾಲೇಜಿನ ಲೈಬ್ರರಿಯನ್ ಆಗಿದ್ದ ಹಿರೇಮಠ್, ಎಸ್.ಬಿ.ಎಂ.ನಲ್ಲಿದ್ದ ಕಾಮತ್ ಮುಂತಾದವರು ಜೇಸಿಸ್ ನೇತೃತ್ವವಹಿಸಿದ್ದರು. ಅದೂ,ಇದೂ ಕಾರ್ಯಕ್ರಮಗಳು ಎಂದು ಅವರ ನಿಕಟ ಸಂಪರ್ಕವೂ ನನಗಿತ್ತು. ಅವರ ಬಳಿ ಪ್ರಸ್ತಾವವಿಟ್ಟೆ. ಅವರೆಲ್ಲ ನನಗಿಂತ ಎಷ್ಟೋ ಹಿರಿಯರು. ಉತ್ಸಾಹ, ತಹತಹ ಬಿಟ್ಟರೆ ಅವರೆದುರು ವಯಸ್ಸು ಸೇರಿದಂತೆ ಎಲ್ಲದರಲ್ಲೂ ನಾನು ಬಚ್ಚಾ; ಆದರೂ ಅವರೆಲ್ಲ ಖುಷಿಯಿಂ ದಲೇ ಒಪ್ಪಿಕೊಂಡರು.
ಅಂತೂ ಐದು ದಿನಗಳ ಸಿನೆಮಾ ಉತ್ಸವಕ್ಕೆ ದಿನ ನಿಗಧಿಯಾಗೇಬಿಟ್ಟಿತು. ಆಗ ಸಿದ್ದಾಪುರದಲ್ಲಿ ನಡೆಯುವ ರಾಜಕೀಯ, ಸಾಂಸ್ಕøತಿಕ ಕಾರ್ಯಕ್ರಮಗಳು, ಮಳೆಗಾಲದ ಯಕ್ಷಗಾನ ಎಲ್ಲವಕ್ಕೂ ಆಶ್ರಯತಾಣವಾಗಿದ್ದು ಸಿ.ಆರ್.ಹಾಲ್. ಕರ್ನಾಟಕ ಸಂಘದ ಉಸ್ತುವಾರಿಯಲ್ಲಿದ್ದ ಸಿ.ಆರ್.ಹಾಲ್ ನಲ್ಲೇ ನಮ್ಮ ಚಲನ ಚಿತ್ರೋತ್ಸವ ಏರ್ಪಾಟಾಯಿತು.
ಅಷ್ಟರ ಮಧ್ಯೆ ಒಮ್ಮೆ ಹೆಗ್ಗೋಡಿಗೆ ಹೋಗಿ ಕೆ.ವಿ. ಸುಬ್ಬಣ್ಣ ನವರ ಬಳಿ ಕಾರ್ಯಕ್ರಮದ ರೂಪುರೇಷೆ ಪಡೆದು ಕಾರ್ಯಕ್ರಮದ ಕರಪತ್ರದ ಮಾದರಿಯನ್ನೂ ತಂದು ಮುದ್ರಣಕ್ಕೆ ಕೊಟ್ಟೆ. ನಂತರ ಸುಬ್ಬಣ್ಣ ಪತ್ರ ಬರೆದು ಮೊದಲ ಮತ್ತು ಎರಡನೇ ದಿನ ಗಿರೀಶ್ ಕಾಸರವಳ್ಳಿ ಹಾಗೂ ಇನ್ನಿತರ ಒಂದೆರಡು ಜನ ಬರುತ್ತಾರೆಂತಲೂ, ಅವರಿಗೆ ವಸತಿ ಮತ್ತು ಊಟೋಪಚಾರದ ವ್ಯವಸ್ಥೆ ಸಮರ್ಪಕವಾಗಿರಬೇಕೆಂತಲೂ ತಿಳಿಸಿದ್ದರು.

ನನಗೆ ಆಗಲೇ ಒಂಥರಾ ಉತ್ಸಾಹ ಪುಟಿದೇಳತೊಡಗಿತ್ತು. ಘಟಶ್ರಾದ್ಧ ಸಿನೆಮಾಕ್ಕೆ ಸ್ವರ್ಣಕಮಲ ಪ್ರಶಸ್ತಿ ಪಡೆದ ಹೆಸರಾಂತ ಸಿನೆಮಾ ನಿರ್ದೇಶಕರು ನಮ್ಮೂರಿಗೆ ಬರುತ್ತಿದ್ದಾರೆ ಎಂದರೆ ಹುಡುಗಾಟಿಕೆಯ ಮಾತೇ? ಕರಪತ್ರ ಮುದ್ರಣ, ಅದರ ವಿತರಣೆ ಎಲ್ಲವನ್ನ ನಾವೆಲ್ಲ ಸೇರಿ ಮಾಡುತ್ತಿದ್ದರೂ ಅವರ್ಯಾರಿಗೂ ಬಾಧಿಸದ ತಲೆನೋವೊಂದು ನನಗಿತ್ತು. ಕಾಸರವಳ್ಳಿ ಬರ್ತೀದಾರೆ, ಸುಬ್ಬಣ್ಣ ಅವರಿಗೆ ಸಮರ್ಪಕ ವ್ಯವಸ್ಥೆ ಆಗಬೇಕೆಂದು ಹೇಳಿದ್ದಾರೆ, ಅದೂ ಅಲ್ಲದೇ ಅಂಥಾ ಪ್ರಸಿದ್ಧರು ನಮ್ಮೂರಿಗೆ ಬಂದಾಗ ಅವರಿಗೆ ತೊಂದರೆಯಾಗಬಾರದಲ್ಲ ಎನ್ನುವ ಒಳತುಡಿತ ಎಲ್ಲ ಸೇರಿ ಏನು ಮಾಡೋದು ಎಂದು ಜೇಸಿಸ್‍ನವರ ಎದುರು ವಿಷಯ ಇಟ್ಟೆ.
‘ ಪಿ.ಡಬ್ಲು.ಡಿ. ಐಬಿಯಲ್ಲಿ ರೂಮ್ ಮಾಡಿಸೋಣ, ಏನು ಸಮಸ್ಯೆ ಇಲ್ಲ’ ಎಂದು ಒಂದೇಕ್ಷಣದಲ್ಲಿ ಬಗೆಹರಿಸಿದರೂ ನನಗೆ ಅನುಮಾನ. ರೂಮ್ ಸಿಗದಿದ್ದರೆ?
ನಾವೆಲ್ಲ ಹೈಸ್ಕೂಲ್ ದಾಟುವವರೆಗೂ ಹತ್ತಿರ ಹೋಗದಿದ್ದ ಲೋಕೋಪಯೋಗಿ ಇಲಾಖೆಯ ಪ್ರವಾಸಿಮಂದಿರ ಸಿದ್ದಾಪುರದಲ್ಲಿತ್ತು. ಇತ್ತೀಚೆಗೆ ನಾನು ನೋಡಿದ ಪ್ರವಾಸಿಮಂದಿರಗಳಲ್ಲಿ ಉಳಿದೆಲ್ಲವಕ್ಕಿಂತ ತೀರ್ಥಹಳ್ಳಿಯ ಪ್ರವಾಸಿಮಂದಿರ ನಮ್ಮೂರ ಐಬಿಗೆ ಹೋಲಿಸಿದರೆ ಪರವಾ ಇಲ್ಲ. ಏಕದಂ ಎತ್ತರವಾಗಿರದ, ನಿಧಾನ ಎತ್ತರದ ಗುಡ್ಡದ ಮೇಲಿರುವ ಬಂಗ್ಲೆ ಗುಡ್ಡ ಎಂದೇ ಕರೆಸಿಕೊಳ್ಳುವ ನಮ್ಮೂರ ಪ್ರವಾಸಿಮಂದಿರ ಉದಯಿಸುವ ಮತ್ತು ಅಸ್ತಮಿಸುವ ಸೂರ್ಯೋದಯವನ್ನ, ಅರ್ಧದಷ್ಟು ಪಟ್ಟಣವನ್ನ, ದೂರದಿಗಂತದವರೆಗೂ ಗುಡ್ಡ,ಬೆಟ್ಟ,ಹಸುರಿನ ಸಾಲುಗಳನ್ನ ನೋಡಬಹುದಾದ ವಿನ್ಯಾಸದಲ್ಲಿದೆ. ಈಗ ಮತ್ತೊಂದು ವಿಶಾಲ ಕಟ್ಟಡವಾಗಿದ್ದರೂ ಮೊದಲಿದ್ದ ಕಟ್ಟಡ ಇನ್ನೂ ಮೊದಲಿನಂತೆ ಇದೆ.

ನನಗೆ ತಲೆಬಿಸಿ ಹುಟ್ಟಿಸಿದ್ದು ಆಗ ಐಬಿಯಲ್ಲಿದ್ದದ್ದು ಮೂರೇ ಕೊಠಡಿಗಳು, ಒಂದರಲ್ಲಿ ಆಗಿದ್ದ ಪೊಲೀಸ್ ಇನಸ್ಪೆಕ್ಟರ್ ಉಳಿದಿದ್ದರು. ಇನ್ನೆರಡು ಕೊಠಡಿಗಳನ್ನ ಯಾವುದಾದರೂ ರಾಜಕಾರಣಿ ಯಾವುದೇ ಕ್ಷಣದಲ್ಲೂ ವಿರಾಮ ಪಡೆಯಲು ಬಳಸಿಕೊಳ್ಳುವ ಸಾಧ್ಯತೆ ಇತ್ತು.
ಎತ್ತರದ ಗುಡ್ಡದ ಮೇಲೆ, ಸುತ್ತೆಲ್ಲ ಗಾರ್ಡನ್ ಇರುವ ಆಕರ್ಷಕವಾದ ಬಂಗ್ಲೆಗುಡ್ಡದ ಪ್ರವಾಸಿಮಂದಿರವನ್ನ ಆವರೆಗೆ ದೂರದಿಂದಲೇ ನೋಡಿದ್ದೇವೆ ಹೊರತು ಅದರ ಹತ್ತಿರ ಹೋಗಿರಲಿಲ್ಲ!
ಆಗ ಐಬಿಗಳೆಂದರೆ ದೊಡ್ಡಮನುಷ್ಯರಿಗೆ ಮಾತ್ರ ಎನ್ನುವ ಅಲಿಖಿತ ಅನಿಸಿಕೆ ಎಲ್ಲರಲ್ಲೂ ಇತ್ತು. ಅದೊಂದು ಮಜಾ ಮಾಡುವ ತಾಣ ಎನ್ನುವದನ್ನ ನಮ್ಮ ಹಿರಿಯರು ಹೇಳದಿದ್ದರೂ ನಮಗೆ ಅದು ತಿಳಿಯುತ್ತಿತ್ತು. ಬಂಗ್ಲೆಗುಡ್ಡದ ಹತ್ತಿರ ಸುಳಿದ ಚಿಕ್ಕವರಿರಲಿ, ದೊಡ್ಡವರಿಗೂ ಸಣ್ಣ ಕಳಂಕ ತಟ್ಟಿಯೇ ತಟ್ಟುತ್ತಿತ್ತು. ಅಲ್ಲಿ ಹೋದವರಿಗೆ ‘ಅವಾ ಹಾಳಾದೋಗ್ನಾ’ ಎನ್ನುವ ಅರ್ಥಗರ್ಭಿತ ಮಾತುಗಳನ್ನ ಆಗ ಕೇಳಿದ ನೆನಪು ಈಗಲೂ ಇದೆ. ಒಂದು ರೀತಿಯಲ್ಲಿ ಸರಕಾರಿ ಪ್ರವಾಸಿಮಂದಿರಗಳು ನೈತಿಕನೆಲೆಯಲ್ಲಿ ನಿಷೇಧಿತ ಪ್ರದೇಶಗಳಾಗಿದ್ದವು ಆಗ. ಶ್ರೀಮಂತರು ಮಾತ್ರ ಹತ್ತಿರಹೋಗಬಹುದಾಗಿದ್ದ ಸ್ಥಳ ಅದಾಗಿತ್ತು.
ಆದರೆ ಈ ಹೊತ್ತಿಗೆ ಸಾಕಷ್ಟು ಬದಲಾವಣೆಗಳಾಗಿದ್ದವು. ಬಂಗ್ಲೆಯ ಬಗ್ಗೆ ಮೊದಲಿದ್ದ ದ್ಟೃಷ್ಟಿಕೋನ ಬದಲಾಗಿತ್ತು. ಅಲ್ಲಿ ಜನ ಅಂದುಕೊಂಡಂತೆ ಕಾನೂನುಬಾಹಿರವಾದದ್ದೆಲ್ಲ ನಡೆಯೋದಿಲ್ಲ ಅನ್ನೋದು ಮನದಟ್ಟಾಗಿತ್ತು.
ಜೇಸಿಸ್‍ನಲ್ಲಿ ಲೋಕೋಪಯೋಗಿ ಇಲಾಖೆಯವರೂ ಇದ್ದ ಕಾರಣ ಕೊಠಡಿಯೂ ಸಿಕ್ಕಿತು. ಸುಬ್ಬಣ್ಣ ಪತ್ರ ಬರೆದು ‘ಕಾರ್ಯಕ್ರಮದ ದಿನ ಬೆಳಿಗ್ಗೆ ಸೀದಾ ಬೆಂಗ್ಳೂರಿಂದ ಗಿರೀಶ ಬರ್ತಾರೆ’ ಎಂದು ತಿಳಿಸಿದ್ದರು. ಆಗೆಲ್ಲ ಫೋನ್ ಎಲ್ಲಿ? ಮೊಬೈಲ್ ಎಲ್ಲಿ? ಹತ್ತು ನಿಮಿಷ ಮುಂಚೆ ಹೇಳೋಕೆ. ಮುಂದಿನ ಕಾರ್ಯಕ್ರಮದ ಕುರಿತು ಎರಡುದಿನದ ಮೊದಲೇ ತಲುಪುವಂತೆ ಪತ್ರ ಬರೆಯಬೇಕಿದ್ದ ದಿನಗಳು.
ಬೆಂಗಳೂರಿನಿಂದ ನಮ್ಮೂರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಏಕೈಕ ಬಸ್ ಆದ ಬೆಂಗಳೂರು-ದಾಂಡೇಲಿಯಲ್ಲಿ ಗಿರೀಶ್ ಬಂದಿಳಿದರು. ನಾನು ಬೆಳಿಗ್ಗೆ ಬೇಗ ಎದ್ದು ಸೈಕಲ್ ತುಳಿದುಕೊಂಡು ಬಂದು ನಮ್ಮೂರಿನ ಸಣ್ಣ ಬಸ್‍ನಿಲ್ದಾಣದಲ್ಲಿ ಕಾದುನಿಂತಿದ್ದೆ. ರಾತ್ರಿ ಪ್ರಯಾಣದ ನಿದ್ದೆಗಣ್ಣು, ಸುಸ್ತುಗಳಿಲ್ಲದ ತೇಜೋವಂತ ಮುಖದ ಮನುಷ್ಯಾಕೃತಿಯೊಂದು ಆ ಬಸ್ಸಿನಿಂದ ಇಳಿಯಿತು. ಪತ್ರಿಕೆಗಳಲ್ಲಿ ಹಲವು ಬಾರಿ ಕಂಡಿದ್ದರೂ ಮೊದಲ ಬಾರಿಗೆ ಎದುರಲ್ಲಿ ಕಂಡದ್ದು ಗಿರೀಶ್ ಕಾಸರವಳ್ಳಿ! ಗುಂಗುರುಗುಂಗುರಾಗಿ ಹರಡಿಕೊಂಡ ತಲೆಗೂದಲು, ಸುಂದರವಾದ ಮೀಸೆ, ತಾರುಣ್ಯದ ಶರೀರ.. ಎಲ್ಲಕ್ಕಿಂತ ಮಿಗಿಲಾಗಿ ಹೊಳಪಿನ ಜೊತೆಗೆ ತನ್ನೊಳಗಿನ ಪ್ರತಿಭೆಯನ್ನ ಸೂಸುತ್ತಿದ್ದ ಕಣ್ಣುಗಳು.. ನಿಜಕ್ಕೂ ನಾನು ಪರವಶನಾಗಿಬಿಟ್ಟಿದ್ದೆ. ಅತ್ತಿತ್ತ ನೋಡುತ್ತಿದ್ದ ಅವರನ್ನ ಪರಿಚುಸಿಕೊಂಡ ನಂತರ ಸಮಾಧಾನವಾಗಿರಬೇಕು. ಅವರ ಜೊತೆ ಇನ್ನೊಬ್ಬರಿದ್ದರು. ಅವರನ್ನ ನನಗೆ ಪರಿಚುಸುತ್ತ ‘ ಇವ್ರು ಎ.ಎನ್.ಮುಕುಂದ್ ಅಂತಾ, ಹೆಸರಾಂತ ಸ್ಟಿಲ್ ಫೋಟೊಗ್ರಾಫರ್’ ಎಂದರು. ಮುಕುಂದ ಅವರ ಹಲವು ಛಾಯಾಚಿತ್ರಗಳನ್ನ ಸುಧಾ ಮುಂತಾದ ಪತ್ರಿಕೆಗಳಲ್ಲಿ ನೋಡಿದ್ದರಿಂದ ಹೆಸರು ನೆನಪಿಗೆ ಬಂತು. ಅವರ ಲಗೇಜ್‍ನ್ನ ಸೈಕಲ್ ಮೇಲಿಟ್ಟುಕೊಂಡು ಸಮೀಪದಲ್ಲೇ ಇರುವ ಬಂಗ್ಲೆಗೆ ಕರೆದುಕೊಂಡು ಹೋದೆ.
ಸಿ.ಆರ್.ಹಾಲ್‍ನಲ್ಲಿ ಹೆಗ್ಗೋಡಿನಿಂದ ದೊಡ್ಡದಾದ ಪ್ರೊಜೆಕ್ಟರ್, ಸಿನೆಮಾರೋಲ್ ಇರುವ ಅಗಲವಾದ ತಟ್ಟೆಗಳು ಬಂದಿಳಿದಿದ್ದವು; ಅದರ ಜೊತೆ ಅವನ್ನೆಲ್ಲ ನಿರ್ವಹಿಸುವ ಒಂದಿಬ್ಬರು ಆಪರೇಟರ್‍ಗಳು. ನಾನು ಅವರಿಗೆ ಅಗತ್ಯವಾದುದನ್ನ ಒದಗಿಸುವದರ ಜೊತೆಗೆ ಬಂಗ್ಲೆಯಲ್ಲಿದ್ದವರನ್ನು ನೋಡಿಕೊಳ್ಳಬೇಕಾಗಿತ್ತು. ಸೈಕಲ್‍ನಲ್ಲಿ ಅರ್ಧರ್ಧ ಗಂಟೆಗೆ ಬಂದು ವಿಚಾರಿಸುತ್ತಿದ್ದೆ. ಯಾಕೆಂದರೆ ಸುಬ್ಬಣ್ಣ ಹೇಳಿದ್ದರಲ್ಲ, ಅದಲ್ಲದೇ ಅಂಥ ಪ್ರಸಿದ್ಧರು ನಮ್ಮೂರಿಗೆ ಬಂದಾಗ ಅವರ ಯೋಗಕ್ಷೇಮ ಸರಿಯಾಗಿ ನೋಡದಿದ್ದರೆ ನನ್ನೂರಿಗೆ ಕೆಟ್ಟ ಹೆಸರಲ್ಲವೇ?
ನಾನು ಅಂಟಿಕೊಂಡೇ ಇರುತ್ತಿದ್ದುದು ಗಿರೀಶರಿಗೆ ಇರಿಸುಮುರುಸಾಗಿರಬೇಕು. ‘ ನೀವು ಪ್ರೊಗ್ರಾಂ ತಯ್ಯಾರಿ ಬಗ್ಗೆ ನೋಡಿ, ನಾವು ಹೇಗೂ ಮಾಡ್ಕೋತೇವೆ. ಮಧ್ಯಾಹ್ನ ಒಮ್ಮೆ ಸಿ.ಆರ್.ಹಾಲ್ ಹತ್ರ ಬರ್ತೀವಿ’ ಎಂದರು. ‘ಸರಿ’ ಎಂದು ನಾನು ಬಂದೆ. ಮಧ್ಯಾಹ್ನ ಅವರಿಬ್ಬರೂ ಹಾಲ್ ಹತ್ರ ನಡೆದುಕೊಂಡೇ ಬಂದರು. ನನಗೆ ಅದಾಗಿ ಕೆಲವು ವರ್ಷಗಳ ನಂತರ ಅರಿವಿಗೆ ಬಂತು. ಎಲ್ಲರಿಗೂ ಏಕಾಂತ, ಖಾಸಗಿತನ ಇದ್ದೇಇರುತ್ತದೆ, ಅದರಲ್ಲಂತೂ ಸೆಲಿಬ್ರಿಟಿಗಳಿಗೆ ಅದು ಸಿಗೋದೇ ಕಷ್ಟ. ಕಾಸರವಳ್ಳಿಯವರಿಗೆ ನನ್ನ ಕಾಳಜಿಯೇ ಮುಜುಗುರ ತಂದಿರಬೇಕು ಅನ್ನಿಸಿತ್ತು.
ಸಂಜೆ ಸಿನೆಮಾ ಶೋ; ಹಾಲ್‍ನ ಹದಿನೈದಿಪ್ಪತ್ತು ಕಿಟಕಿಗಳಿಗೆ ಎಲ್ಲಿಂದ ಕಪ್ಪುಬಟ್ಟೆ ಕಟ್ಟೋದು? ಹಾಗಾಗಿ ಕತ್ತಲೆಯಾದ ಮೇಲೆ ಶುರುಮಾಡಬೇಕಲ್ಲ. ಮೊದಲನೇ ದಿನ ಘಟಶ್ರಾದ್ಧ, ಬೈಸಿಕಲ್ ಥೀವ್ಸ, ಅದಾದ ನಂತರ ಮತ್ತೊಂದು ಸಣ್ಣ ಸಿನೆಮಾ. ನಮ್ಮ ನಿರೀಕ್ಷೆಗೂ ಮೀರಿ ಪ್ರೇಕ್ಷಕರು ತುಂಬಿಕೊಂಡರು. ಹಾಲ್‍ನಲ್ಲಿ ಸುಮಾರು 300 ಕಬ್ಬಿಣದ ಕುರ್ಚಿಗಳಿದ್ದವು. ಅವೆಲ್ಲ ಭರ್ತಿಯಾಗಿ ನಿಂತುಕೊಂಡೇ ನೋಡುವ ಪ್ರೇಕ್ಷಕರೇ ಜಾಸ್ತಿ. ಅದರಲ್ಲೂ ಮಹಿಳಾ ಪ್ರೇಕ್ಷಕರ ಸಂಖ್ಯೆಯೂ ಸಾಕಷ್ಟಿತ್ತು- ಆಗ ಟಿ.ವಿ ಮತ್ತು ಧಾರಾವಾಹಿಗಳು ಇರಲಿಲ್ಲವಲ್ಲ!).
ಗಿರೀಶ್ ಚಿತ್ರೋತ್ಸವದ ಆರಂಭದಲ್ಲಿ ಇಡೀಯಾಗಿ ಯೋಜನೆಯ ಉದ್ದೇಶ, ಸಿನೆಮಾದ ಗುಣ, ಸಮಾಜದಲ್ಲಿ ಅದರ ಪ್ರಭಾವ,ಅದು ನಿರ್ವಹಿಸುವ ಅಲೌಕಿಕ ಪರಿಣಾಮದ ಬಗ್ಗೆ ಅದ್ಭುತವಾಗಿ ಮಾತನಾಡಿದರು ( ಅವರ ಮಾತುಗಳ ಪ್ರೇರಣೆಯಲ್ಲೇ ನಂತರ ಜಪಾನಿನ ರಶೋಮನ್ ಸಿನೆಮಾ ಚಿತ್ರಕಥೆಯ ಕನ್ನಡ ರೂಪಾಂತರವನ್ನ, ಅದೊಂದು ದೊಡ್ಡ ಕಾದಂಬರಿ ಥರ ಇದೆ. ಓದಿದೆ).
ಶೋ ಮುಗಿದ ನಂತರ ಎಲ್ಲ ನಿರ್ವಹಣೆ ಮುಗಿಸಿ ( ರಾತ್ರಿ ಊಟವನ್ನ ಬಂಗ್ಲೆಗೆ ತಂದುಕೊಡಲು ಮೇಟಿಗೆ ಹೇಳಿದ್ದೆ) ಗಿರೀಶ್-ಮುಕುಂದರನ್ನ ಮಾತನಾಡಿಸಿ ಮನೆಗೆ ಸೈಕಲ್ ಹೊಡೆದೆ.
ಮೊದಲ ದಿನದ ಜಂಜಡವಿಲ್ಲದೇ ಆರಾಮಾಗಿ ಬೆಳಿಗ್ಗೆ ಬಂಗ್ಲೆಗೆ ಬಂದೆ. ಗಿರೀಶ್-ಮುಕುಂದ್ ಆಗಲೇ ಅವರೇ ಹೋಗಿ ಇಷ್ಟಬಂದ ಹೊಟೇಲಿನಲ್ಲಿ ಉಪಾಹಾರ ಮುಗಿಸಿದ್ದರು. ಅವರೆಷ್ಟು ಸೂಕ್ಷ್ಮ ಅನ್ನೋದು ಆಗ ಸ್ವಲ್ಪ ನಜರಿಗೆ ಬಂತು. ‘ ನಿಮ್ಮ ತಹಸೀಲದಾರ ಕಚೇರಿ ನೋಡ್ಬೇಕಲ್ರೀ’ಎಂದರು. ಆಯ್ತು ಹೋಗೊಣ’ ಎಂದು ಅವರನ್ನ ಅಲ್ಲಿಗೆ ಕರಕೊಂಡು ಹೋದೆ.
ಈಗ ಆ ಪುರಾತನ ಕಟ್ಟಡ ಇಲ್ಲ. ಅಲ್ಲಿ ಬೃಹತ್ತಾದ, ಆಧುನಿಕವಾದ, ತನ್ನ ಸ್ವರೂಪದಿಂದಲೇ ಜನರನ್ನು ದೀನರನ್ನಾಗಿಸುವ ಮಿನಿ ವಿಧಾನಸೌಧ ಎನ್ನುವ ಕಟ್ಟಡ ತಲೆಯೆತ್ತಿದೆ.
ಮೊದಲಿನದು ಹಾಗಿರಲಿಲ್ಲ. ಬ್ರಿಟಿಷರು ಕಟ್ಟಿದ ಕಟ್ಟಡ. ಅವರದ್ದೇ ವಾಸ್ತುವಿನ್ಯಾಸದ, ಆ ಕಾಲದ ಜನರ ಅಂತ:ಸತ್ವವನ್ನ ಉಡುಗಿಸುವಂತಿದ್ದ ಕಟ್ಟಡ. ( ಈ ಸರಕಾರಿ ಕಟ್ಟಡಗಳ ಬಗ್ಗೆ ನನ್ನದು ಬಹುದೊಡ್ಡ ತಕರಾರಿದೆ, ವಿಧಾನಸೌಧದಿಂದ ಹಿಡಿದು ತಹಸೀಲದಾರ ಕಚೇರಿಯ ಕಟ್ಟಡಗಳನ್ನ ಗಮನಿಸಿ. ಯಾವುದೂ ಜನಪರ,ಜನಸ್ನೇಹಿಯಾಗಿ ಕಾಣುವದೇ ಇಲ್ಲ. ಅಧಿಕಾರವನ್ನ, ಆ ಶಕ್ತಿಯನ್ನ ವಿಜೃಂಭಿಸುವ ವಿನ್ಯಾಸ,ಶೈಲಿಗಳು ಈ ಕಟ್ಟಡಗಳದ್ದು. ನಮ್ಮನ್ನ ಆಳಿಹೋದ,ಈಗ ಆಳುತ್ತಿರುವ ಅಧಿಕಾರಸ್ಥರು ನಿರ್ಮಿಸಿದ ಕಟ್ಟಡಗಳ ಬಗ್ಗೆ ವಿಶೇಷವಾಗಿ ಲೇಖನ ಬರೆದದ್ದನ್ನ ಓದುವಾಗ ಸಿಟ್ಟೇ ಬರುತ್ತದೆ).
ಅವತ್ತು ಗಿರೀಶ್ ಇಡೀ ಕಟ್ಟಡವನ್ನು ಅಮೂಲಾಗ್ರವಾಗಿ ನೋಡಿದರು. ಮುಕುಂದ್ ತಮ್ಮ ಕ್ಯಾಮರಾದಲ್ಲಿ ಆ ಕಟ್ಟಡವನ್ನ ಬೇರೆ ಬೇರೆ ಕೋನಗಳಲ್ಲಿ ಕ್ಲಿಕ್ ಮಾಡುತ್ತಿದ್ದರು. ಒಂದೆರಡು ತಾಸಿನ ನಂತರ ವಾಪಸ್ಸಾದೆವು. ನಂತರ ನನಗೆ ಗೊತ್ತಾಗಿದ್ದು; ಗಿರೀಶ್ ಕಾಸರವಳ್ಳಿ ಆಗ ತೇಜಸ್ವಿಯವರ ‘ತಬರನ ಕಥೆ’ಯನ್ನ ಸಿನೆಮಾ ಮಾಡಲು ಕೈಗೆತ್ತಿಕೊಂಡಿದ್ದರು. ಮತ್ತು ಮುಕುಂದ್ ಜೊತೆಗೆ ಲೊಕೇಶನ್ ನೋಡ್ತಾ ಇದ್ರು ಅಂತಾ.
ಅವತ್ತು ಸಂಜೆ ‘ಸಂಸ್ಕಾರ’ ಮತ್ತು ಅಕಿರಾ ಕುರೊಸುವಾನ ‘ರಶೋಮನ್’ ಸಿನೆಮಾಗಳ ಪ್ರದರ್ಶನ. ಕಾರ್ನಾಡರ ‘ಒಂದಾನೊಂದು ಕಾಲದಲ್ಲಿ’ಸಿನೆಮಾಕ್ಕೆ ಪ್ರೇರಣೆ ಕೊಟ್ಟದ್ದು ಎಂದು ಪಂಡಿತಲೋಕ ಹೇಳುವ ರಶೋಮನ್ ಮತ್ತು ಕಾರ್ನಾಡ್ ನಟಿಸಿದ ( ಇಬ್ಬರೂ ಗಿರೀಶ್ ಆಗಿದ್ದಕ್ಕೆ ಇಷ್ಟವಿಲ್ಲದಿದ್ದರೂ ಅವರ ಸರ್‍ನೇಮ್ ಬಳಸಬೇಕಿದೆ) ಸಂಸ್ಕಾರದ ಪ್ರದರ್ಶನ ಒಂದೇದಿನ. ಅವತ್ತು ಕೆಲಹೊತ್ತು ಇದ್ದ ಕಾಸರವಳ್ಳಿ ನಮ್ಮೂರಿಂದ ಬೆಂಗಳೂರು ತಲುಪುವ ಏಕೈಕ ಬಸ್‍ನಲ್ಲಿ ಹೊರಟುಹೋದರು. ನನಗೆ ಅವರನ್ನ ಬೀಳ್ಕೊಡಲು ಜನ ಬಿಡಬೇಕಲ್ಲ; ಅವರನ್ನು ಸುತ್ತುವರಿದ ಅಭಿಮಾನಿಗಳ ಮದ್ಯೆ ನಾನು ಅಸಹಾಯಕನಾದೆ.
—-ಗಂಗಾಧರ ಕೊಳಗಿ

(ಮುಂದಿನ ಭಾಗ ಜೂನ್14 ರವಿವಾರ)
#########

ತಮ್ಮಣ್ಣ ಬೀಗಾರರ ವ್ಯಂಗ್ಯ ಚಿತ್ರ

About the author

Adyot

2 Comments

Leave a Comment