ಆದ್ಯೋತ್ ಸುದ್ದಿನಿಧಿ:
ಎಲ್ಲರಿಗೂ ಸಿಗದ ಅಪರೂಪದ ಹುದ್ದೆ ಶಿಕ್ಷಕ ವೃತ್ತಿ.ಸಿಕ್ಕರೂ ಅದನ್ನ ಕೇವಲ ವೃತ್ತಿಯಾಗಿ ಸ್ವೀಕರಿಸಿದರೆ ಸಾಲದು ಬೋಧನೆಯಲ್ಲಿ ಸಂಪೂರ್ಣ ನಿವೇದನೆ,ನಿಸ್ವಾರ್ಥ ಸೇವಾ ಮನೋಭಾವ, ನಿರಂತರ ಅಧ್ಯಯನಶೀಲ ಹವ್ಯಾಸಗಳು ಈ ವೃತ್ತಿಯ ಅಗತ್ಯತೆಗಳು.
ಅಂತೆಯೇ ಇಲ್ಲೊಬ್ಬ ಶಿಕ್ಷಕಿ ಈ ಎಲ್ಲಾ ಅಗತ್ಯ ಗುಣಗಳ ಜೊತೆಯಲ್ಲಿ ಶಿಕ್ಷಕ ವೃತ್ತಿಯನ್ನೇ ತನ್ನ ಜೀವನದ ಅನನ್ಯ ಭಾಗವಾಗಿ ಸ್ವೀಕರಿಸಿ ಸಹೋದ್ಯೋಗಿಗಳನ್ನು ತನ್ನ ಕುಟುಂಬದ ಸದಸ್ಯರಂತೆ ಕಾಣುತ್ತಾ, ಶಾಲಾ ಮಕ್ಕಳನ್ನು ತನ್ನ ಸ್ವಂತ ಮಕ್ಕಳೋಪಾದಿಯಲ್ಲಿ ಉಪಚರಿಸುತ್ತಾ, ಊರ ಜನರೊಂದಿಗೆ ಉತ್ತಮ ಬಾಧವ್ಯ ಹೊಂದುವ ಮೂಲಕ ಅಜಾತ ಶತ್ರುವಿನ ರೀತಿಯಲ್ಲಿ ತೀರಾ ಗ್ರಾಮೀಣ ಭಾಗದ ಶಾಲೆಯಲ್ಲಿ 21 ವರ್ಷಗಳ ಕಾಲ ಸಾರ್ಥಕ ಸೇವೆಸಲ್ಲಿಸಿದ್ದಾರೆ.
ಸಿದ್ದಾಪುರ ತಾಲ್ಲೂಕಿನ ಹಳ್ಳಿಬೈಲ್ ಪ್ರೌಢಶಾಲೆಯ ವನಿತಾ ನಾಯ್ಕ ಈ ಅಪರೂಪದ ಶಿಕ್ಷಕಿ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಹೊಸಬೆಟ್ಟು ಪ್ರೌಢಶಾಲೆಯಲ್ಲಿ 01-10-1986ರಲ್ಲಿ ಸಹಶಿಕ್ಷಕಿಯಾಗಿ ನೇಮಕಗೊಂಡು ತಮ್ಮ ಎಂಟು ವರ್ಷಗಳ ಸೇವೆಯ ನಂತರ ವರ್ಗಾವಣೆಗೊಂಡು ಆಗಮಿಸಿದ್ದು ಸಿದ್ದಾಪುರ ತಾಲ್ಲೂಕಿನ ಹಳ್ಳಿಬೈಲ ಪ್ರೌಢಶಾಲೆಗೆ.
ಅಂದಿನ ದುರ್ಗಮ ದಾರಿ, ಸೌಲಭ್ಯಗಳಿಲ್ಲದ ಊರಿನ ಈ ಶಾಲೆಯಲ್ಲಿ ಒಂದೆರಡು ವರ್ಷ ಸೇವೆಸಲ್ಲಿಸಿ ಹೋಗುವರೆಂದು ಊರವರೆಲ್ಲ ಅಂದುಕೊಂಡಿದ್ದರು
ಆದರೆ ತನ್ನ ವೃತ್ತಿಯನ್ನೇ ದೈವೀ ಕಾಯಕವೆಂದು ನಂಬಿದ ವನಿತಾ ನಾಯ್ಕ ಶಾಲೆಯನ್ನು ತನ್ನ ಸ್ವಂತ ಮನೆಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾ, ಬೋಧನೆ ಮಾಡುತ್ತಾ, ಶಾಲೆಯ ಅಭಿವೃದ್ದಿಗೆ ಪಣತೊಟ್ಟು ಒಂದೂ ಕಪ್ಪು ಚುಕ್ಕೆ ಇಲ್ಲದಂತೆ 21 ವರ್ಷಗಳ ಕಾಲ ಈ ಶಾಲೆಯಲ್ಲಿ ನಿಸ್ವಾರ್ಥ ಸೇವೆಸಲ್ಲಿಸಿ ಕಳೆದ ಮೇ 30ರಂದು ನಿವೃತ್ತರಾದರು.
ಸಹಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ ದಿನದಿಂದಲೂ ಜಟಿಲ ಇಂಗ್ಲೀಷ್ ವಿಷಯ ಬೊಧನೆಯನ್ನು ಸುಲಭ ಮತ್ತು ಮನಮುಟ್ಟುವಂತೆ ಪಾಠಮಡುತ್ತಾ ಶೇ 100 ನಿರಂತರ ಫಲಿತಾಂóಶ ನೀಡಿರುವುದು ಇವರ ಬೋಭನಾ ಗುಣಮಟ್ಟಕ್ಕೆ ಸಾಕ್ಷಿಯಾದರೆ, ಶಾಲೆಯು ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ನಿರಂತರ ಶೇ90ಕ್ಕಿಂತ ಹೆಚ್ಚು ಮತ್ತು ಮೂರು ಬಾರಿ ನೂರಕ್ಕೆ ನೂರು ಫಲಿತಾಂಶ ಸಾಧಿಸಿರುವುದು ಇವರ ಉತ್ತಮ ಆಡಳಿತ ನಿರ್ವಹಣೆಗೆ ಸಾಕ್ಷಿಯಗಿದೆ.
ದಿನಾಂಕ 31-08-2013ರಲ್ಲಿ ಮುಖ್ಯಶಿಕ್ಷಕಿಯಾಗಿ ಪದೋನ್ನತಿ ಪಡೆದಾಗ ನಗರ, ಪಟ್ಟಣಗಳ ಹತ್ತಾರು ಶಾಲೆಗಳ ಆಯ್ಕೆಗೆ ಅವಕಾಶವಿದ್ದರೂ ಮತ್ತೆ ಪುನ ಇದೇ ಶಾಲೆಯನ್ನು ಆಯ್ಕೆಮಾಡಿಕೊಂಡಿರುವುದು ಅವರು ಈ ಶಾಲೆ, ಈ ಊರು, ಇಲ್ಲಿನ ಮಕ್ಕಳ ಮೇಲಿಟ್ಟ ಪ್ರೀತಿ, ಅಭಿಮಾನಕ್ಕೆ ಸಾಕ್ಷಿ.
ಉತ್ತಮ ಶಿಕ್ಷಕಿಯಾಗಿ ಉತ್ತಮ ಬೋಧನೆ ಮತ್ತು ಆಡಳಿತ ನಡೆಸಿದ ಇವರು ಎಂದಿಗೂ ಮಕ್ಕಳೊಂದಿಗಾಗಲಿ, ಸಹೋದ್ಯೋಗಿಗಳ ಜೊತೆಯಲ್ಲಾಗಲೀ ಮುಖ್ಯಶಿಕ್ಷಕಿಯಂತೆ ವರ್ತಿಸಿಯೇ ಇಲ್ಲ. ಎಲ್ಲರೊಡನೆ ಬೆರೆಯುತ್ತಾ ನೋವು ನಲಿವುಗಳಿಗೆ ಸ್ಪಂದಿಸುತ್ತಾ ಸದಾ ಹಸನ್ಮುಖಿಯಾಗಿ ಕಾಲಕಳೆದರು.
ಶಾಲಾ ನಾಟಕ ತಂಡ ಮೂರು ಬಾರಿ ರಾಜ್ಯ ಮಟ್ಟವನ್ನು ಪ್ರತಿನಿಧಿಸಿ ಒಮ್ಮೆ ಬಹುಮಾನ ಪಡೆದಿರುವುದು, ವಿಜ್ಞಾನ ನಾಟಕಗಳು ನಾಲ್ಕು ಬಾರಿ ಜಿಲ್ಲಾ ಹಂತಕ್ಕೆ ತಲುಪಿರುವುದು ಪಠ್ಯೇತರ ವಿಷಯಗಳಲ್ಲಿ ಇವರು ಹೊಂದಿದ ಆಸಕ್ತಿಯನ್ನು ತೋರಿಸುತ್ತದೆ ಅಲ್ಲದೇ ಕುಗ್ರಾಮದ ಶಾಲೆಯನ್ನು ರಾಜ್ಯ ಮಟ್ಟದಲ್ಲಿ ಬೆಳಗಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಟಾಲ್ಪ ಯೋಜನೆಯ ಸಮರ್ಪಕ ಅನುóಷ್ಠಾನ, ಸ್ಮಾರ್ಟಕ್ಲಾಸ್ ಸ್ಥಾಪನೆ, ಯು.ಪಿ.ಎಸ್ ಅಳವಡಿಕೆ, 50 ಇಂಚಿನ ಬೃಹತ್ ಟಿ.ವಿ ಹೊಂದಿದ ದೃಕ್-ಶೃವಣ ಕೊಠಡಿ, ಉತ್ತಮ ಮೈದಾನ ನಿರ್ಮಾಣ , ನೂತನ ಆರ್.ಎನ್.ಎಸ್ ಕಟ್ಟಡ ನಿರ್ಮಾಣ ಇವರ ಉತ್ತಮ ಆಡಳಿತದ ವೈಖರಿಗೆ ಸಾಕ್ಷಿಯಾಗಿದೆ.
ಇವರ ಪರಿಶ್ರಮ ಸಾಧನೆಯನ್ನು ಗುರುತಿಸಿ ಜಿಲ್ಲಾ ಹಾಗೂ ರಾಜ್ಯಪ್ರಶಸ್ತಿಗೆ ಪ್ರಸ್ತಾವನೆ ಸಲ್ಲಿಸುವಂತೆ ಒತ್ತಾಯಿಸಿದರೂ ಅದರ ಗೋಜಿಗೆ ಹೋಗದೇ ತನ್ನ ಕಾಯಕದಲ್ಲೇ ತೃಪ್ತಿ ಕಂಡರು. ಎಂದಿಗೂ ಯಾವುದೇ ಪ್ರಶಸ್ತಿ ಹಾಗೂ ಸನ್ಮಾನ ನಿರೀಕ್ಷಿಸದ ಇವರು ಮಕ್ಕಳು ಮತ್ತು ಶಿಕ್ಷಕರಿಂದ ಗಳಿಸಿದ ಪ್ರೀತಿ ಅಭಿಮಾನದ ಎದುರು ಎಲ್ಲಾ ಪ್ರಶಸ್ತಿಗಳೂ ನಗಣ್ಯವೆ ಸರಿ.
ರಾಜ್ಯಪ್ರಶಸ್ತಿ ಪುರಸ್ಕøತ ನಿವೃತ್ತ ಶಿಕ್ಷಕರಾದ ಶಿವಾನಂದ ಬಿ. ನಾಯ್ಕ ಇವರ ಸಹಧರ್ಮಿಣಿಯಾದ ವನಿತಾ ನಾಯ್ಕ ಸಾರ್ಥಕ ಗೃಹಿಣಿಯಾಗಿ ಸಂಸಾರದ ನೊಗವನ್ನು ಮುನ್ನಡೆಸಿದ್ದು.
ಸಾತ್ವಿಕ ಸ್ವಭಾವದ ಪುತ್ರ ಅಭಿಷೇಕ್ ಧಾರವಾಡ ವಿಶ್ವವಿದ್ಯಾಲಯದಲ್ಲಿ ಬಯೋಕೆಮೆಸ್ಟ್ರಿ ಸ್ನಾತಕೋತ್ತರ ಪದವಿ ಅಧ್ಯಯನ ನಡೆಸುತ್ತಿದ್ದಾನೆ.
ತುಂಬಾ ಚೆನ್ನಾಗಿ ಮೂಡಿಬಂದಿದೆ.ಧನ್ಯವಾದಗಳು ಸರ್ ನಮ್ಮ ಪ್ರೌಢಶಾಲೆಯ ಎಲ್ಲಾ ಗುರುಗಳು, ಪಾಲಕ ಪೋಷಕರ ಪರವಾಗಿ.🙏🙏. ತಮ್ಮ ಪ್ರೋತ್ಸಾಹಕ್ಕೂ ಕೂಡ.