ಆದ್ಯೋತ್ ಅಂಕಣದಲ್ಲಿ ಕೊಳಗಿ ನೆನಪು

ಕಾಸರವಳ್ಳಿ ಎಂಬ ಚೈತನ್ಯದ ಚಿಲುಮೆ:
(ಮುಂದುವರಿದ ಭಾಗ)

—– ಹಾಗೇ ಅದೆಷ್ಟೋ ದಿನಗಳ ನಂತರ ಫಿಲಂ ಛೇಂಬರ್ ಆಯೋಜಿಸಿದ ಸಾಹಿತ್ಯ ಕಮ್ಮಟಕ್ಕೆ ನನ್ನನ್ನ ಆಯ್ಕೆ ಮಾಡಿರುವ ಪತ್ರ ಬಂತು. ಅಷ್ಟರಲ್ಲಾಗಲೇ ನನ್ನ ಬದುಕನ್ನ ರೂಪಿಸಿದ, ಈಗಲೂ ನನಗೆ ಮಾದರಿಯಾಗಿರುವ ಪ್ರೀತಿಯ ಅಪ್ಪ ತೀರಿ ಹೋಗಿದ್ದ. ಅಮ್ಮ ಒಬ್ಭಳೇ ಮನೆಯಲ್ಲಿ. ಆದರೂ ಆ ಕಮ್ಮಟಕ್ಕೆ ಹೋದೆ;

ವಿಧಾನಸೌಧದ ಎದುರಿಗಿರುವ ಸರಕಾರಿ ನೌಕರರ ಭವನದ ಸಭಾ ಭವನದಲ್ಲಿ. ಮೊದಲ ದಿನ ಒಳಹೊಕ್ಕಿದ್ದೇ ಆಘಾತ. ಅಲ್ಲಿ ಶಿಭಿರಾರ್ಥಿಗಳು ಯಾರು? ಅಬ್ದುಲ್ ರೆಹಮಾನ್ ಪಾಷಾ, ಜಯಂತ್ ಕಾಯ್ಕಿಣಿ, ಪ್ರತಿಭಾ ನಂದಕುಮಾರ್, ರೇಖಾರಾಣಿ, ಹೂಲಿಶೇಖರ್,! ಮುಂತಾದ ಘಟಾನುಘಟಿಗಳು. ನನಗೆ ಬೆವರೋ ಬೆವರು. ಅಲ್ಲಿದ್ದವರಲ್ಲಿ ನಾನೇ ವಯಸ್ಸಿನಲ್ಲಿ ಸಣ್ಣವ. ಅದಕ್ಕಿಂತ ಸಂತೋಷದ ಸಂಗತಿಯೆಂದರೆ ಆ ಕಮ್ಮಟದ ನಿರ್ದೇಶಕರು ಗಿರೀಶ್ ಕಾಸರವಳ್ಳಿ.
ತುಂಬಾ ವರ್ಷಗಳ ನಂತರ ಮತ್ತೊಮ್ಮೆ ಅವರನ್ನು ಮುಖತಃ ನೋಡಿದೆ. ಹತ್ತು ದಿನಗಳ ಆ ಕಮ್ಮಟದಲ್ಲಿ ನಾನು ಸಾಕಷ್ಟು ಕಲಿತೆ, ಕನ್ನಡದ ಹಲವು ಪ್ರಸಿದ್ಧ ನಿರ್ದೇಶಕ, ನಟರನ್ನ, ಮಹೇಶ ಭಟ್,ಗಿರೀಶ್ ಕಾರ್ನಾಡ್ ಮುಂತಾದ ಹೆಸರಾಂತ ನಿರ್ದೇಶಕರ ಜೊತೆ ಮಾತನಾಡುವ ಅವಕಾಶ ಪಡೆದೆ.

ಖ್ಯಾತ ಸಿನೇಮಾ ನಿರ್ದೇಶಕ ಮಹೇಶ ಭಟ್ ಜೊತೆ ಗಂಗಾಧರ ಕೊಳಗಿ

ಕೊನೆಯ ದಿನ ಪಾರ್ವತಮ್ಮ ರಾಜಕುಮಾರ್ ಅವರಿಂದ ಪ್ರಮಾಣಪತ್ರ ಪಡೆದೆ ಕಾಸರವಳ್ಳಿಯವರ ಜೊತೆ ಹತ್ತು ದಿನ ಹತ್ತಿರದಿಂದ ಬೆರೆಯುವ ಎರಡನೇ ಅವಕಾಶ ಅದಾಗಿತ್ತು.
ಅಂತಾರಾಷ್ಟ್ರೀಯ ಖ್ಯಾತಿಯ, ದೇಶ,ವಿದೇಶದ ಅಸಂಖ್ಯಾತ ಪ್ರಶಸ್ತಿಗಳನ್ನು ಪಡೆದ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಇಂಥ ಸರಳ ವ್ಯಕ್ತಿಗಳಲ್ಲೊಬ್ಬರು.
ಈಗ್ಗೆ ಕೆಲವು ವರ್ಷಗಳ ಹಿಂದೆ ಸಿದ್ದಾಪುರದ ಶೃಂಗೇರಿ ಶಂಕರಮಠದಲ್ಲಿ ಬೆಂಗಳೂರಿನ ಕೆ.ವಿ.ಸುಬ್ಬಣ್ಣ ಆಪ್ತ ಸಮೂಹ, ಇಲ್ಲಿನ ಸಂಸ್ಕøತಿ ಸಂಪದದ ಸಹಯೋಗದಲ್ಲಿ ಗಿರೀಶ ಕಾಸರವಳ್ಳಿಯವರ ನಿರ್ದೇಶನದ ಚಲನಚಿತ್ರಗಳ ಉತ್ಸವ ಆಯೋಜಿಸಲಾಗಿತ್ತು. ಇನ್ನು ನಾಲ್ಕು ದಿನದಲ್ಲಿ ತಮ್ಮ ಹೊಸ ಚಿತ್ರ ‘ ಕೂರ್ಮಾವತಾರ’ದ ಚಿತ್ರೀಕರಣ ಆರಂಭಗೊಳ್ಳುತ್ತಿದ್ದ ಸಂದರ್ಭದಲ್ಲಿ ದೂರದ ಬೆಂಗಳೂರಿನಿಂದ ಖಾಸಗಿ ಬಸ್ಸೊಂದರಲ್ಲಿ ಚಲನಚಿತ್ರೋತ್ಸವಕ್ಕೆ ಬಂದ ಕಾಸರವಳ್ಳಿ ನಮ್ಮ ಕುಟುಂಬದ ಸದಸ್ಯನೊಬ್ಬ ಬಂದು ಹೋದ ಅನುಭವವನ್ನ ತಂದರು.

ಪಾರ್ವತಮ್ಮ ರಾಜಕುಮಾರರಿಂದ ಪ್ರಮಾಣಪತ್ರ ಪಡೆಯುತ್ತಿರುವ ಗಂಗಾಧರ ಕೊಳಗಿ

ಸ್ವಂತ ಕಾರುಗಳನ್ನ ಹೊಂದಿರುವ ಕಾಸರವಳ್ಳಿ ಇನ್ನಿತರ ಖ್ಯಾತನಾಮರಂತೆ ಹವಾನಿಯಂತ್ರಿತ ವಾಹನದಲ್ಲಿ, ವಂದಿಮಾಗಧರೊಂದಿಗೆ ಅಬ್ಬರದಿಂದಲೇ ಆಗಮಿಸಬಹುದಿತ್ತು. ಆದರೆ ಜನಸಾಮಾನ್ಯನಂತೆ ಬಂದು ಹೋದದ್ದು ಪ್ರಾಯಶ: ಕೆ.ವಿ.ಸುಬ್ಬಣ್ಣನಂಥ ಧೀಮಂತ ವ್ಯಕ್ತಿ ಅವರಿಗೆ ಕಲಿಸಿದ ಮೊದಲ ಪಾಠವಾಗಿರಲೂ ಸಾಕು.
ತುಂಬ ಸಂಕೋಚದ, ತಮ್ಮ ವರ್ತನೆಯಲ್ಲಿ ಕೃತಕತೆಯನ್ನ ವ್ಯಕ್ತಪಡಿಸದೇ ಆತ್ಮೀಯವಾಗಿ ಮಾತನಾಡುವ ಕಾಸರವಳ್ಳಿ ಅಂದಿನ ಮುಂಜಾನೆಯಲ್ಲಿ ಆಸಕ್ತಿಯಿಂದ ನೋಡಿದ್ದು ಅವರು ಉಳಿದಿದ್ದ ಎಪಿಎಂಸಿ ಪ್ರವಾಸಿ ಮಂದಿರದ ಎದುರಿನ ಹಸಿರು ಗದ್ದೆಗಳನ್ನ.
ಪ್ರಯಾಣದ ಆಯಾಸ ಮರೆತು, ಸುಮಾರು ಎರಡೂವರೆ ತಾಸುಗಳ ಕಾಲ ಆ ಪ್ರವಾಸಿ ಮಂದಿರದ ಬಾಲ್ಕನಿಯಲ್ಲಿ ನಿಂತು ಮಾತನಾಡುತ್ತಲೇ ಎಷ್ಟೋ ದಿನದಿಂದ ಕಾದವರಂತೆ ಆ ಸಹಜಸುಂದರ ದೃಶ್ಯವನ್ನ ಕಣ್ತುಂಬಿಕೊಂಡಿದ್ದರು.
ಒಬ್ಬ ಸಹಜ ಮನುಷ್ಯ ಎಷ್ಟೇ ಎತ್ತರದ ಸ್ಥಾನದಲ್ಲಿರಲಿ, ಖ್ಯಾತಿಯ ಉತ್ತುಂಗದಲ್ಲಿರಲಿ, ತನ್ನ ಬಾಲ್ಯವನ್ನ, ಕಳೆದ ಬದುಕಿನ ಸಂದರ್ಭಗಳನ್ನ ಮರೆಯಲಾರ ಎನ್ನಲು ಗಿರೀಶರೊಂದು ಸಾಕ್ಷಿ.

ಯಾವ ಹಮ್ಮುಬಿಮ್ಮು ತೋರಿಸದೇ, ಆಗ ಊಟದ ಮೇಜಿರದ ನಮ್ಮ ಮನೆಯಲ್ಲಿ ನೆಲದ ಮೇಲೆ ಹಾಕಿದ ಬಾಳೆಲೆಯ ಮುಂದೆ ಚಕ್ಕಳಮಕ್ಕಳ ಹಾಕಿ ಕೂತು ಅವರು ಊಟ ಮಾಡಬಹುದೆಂದು ಯಾರೂ ನಿರೀಕ್ಷಿಸಿರಲೇ ಇಲ್ಲ. ಊಟ ಮಾಡುವಾಗ ನಮ್ಮ ಮನೆಯ ಉಪ್ಪಿನ ಕಾಯಿ ಚಪ್ಪರಿಸುತ್ತ, ತನ್ನ ಅಮ್ಮ ಮಾಡುತ್ತಿದ್ದ ಅಪ್ಪೆಮಿಡಿ ಉಪ್ಪಿನಕಾಯಿ ತಯಾರಿಸುವ ವಿಧಾನ ನೆನಪು ಮಾಡಿಕೊಳ್ಳುತ್ತ, ಅದಕ್ಕೆ ಬಳಸುವ ಕಾಡಿನಲ್ಲಿ ದೊರೆಯುವ ಅರಮಾದಲ ಹರಳು ಎನ್ನುವ ಸಣ್ಣ ಕಾಯಿಯ ವಿವರಣೆ ಮಾಡುತ್ತ, ತಾನು ಚಿಕ್ಕಂದಿನಲ್ಲಿ ಈಜು ಕಲಿತ ಹಳ್ಳಗಳು ಬತ್ತಿ ಹೋದ ಬಗ್ಗೆ ಅದೆಷ್ಟು ಕಕ್ಕುಲತೆಯಿಂದ ಮಾತನಾಡಿದರೆಂದರೆ ಇಷ್ಟು ದೊಡ್ಡ ಮನುಷ್ಯ ಈಗಲೂ ಆ ನೆನಪುಗಳನ್ನು ಇಟ್ಟುಕೊಂಡಿದ್ದಾನಲ್ಲ ಎಂದು ಅಚ್ಚರಿಯಾಗುವಷ್ಟು. ನನ್ನ ಮಡದಿ ಶಾಂತಿ ಎಷ್ಟು ಅಚ್ಚರಿಪಟ್ಟಳೆಂದರೆ ಇವರು ಕಾಸರವಳ್ಳಿಯವರಾ? ಅಲ್ಲವಾ? ಎನ್ನುವಷ್ಟು.
ಒಂದರ ಹಿಂದೊಂದರಂತೆ ಎಲೆ ಅಡಿಕೆ ಮೆಲ್ಲುತ್ತ, ಮಾತನಾಡುತ್ತ ಕೂತದ್ದು ಗಿರೀಶರ ಚಿತ್ರದ ಫ್ರೇಮೊಂದರಂತೆ ಕಣ್ಣಿಗೆ ಕಟ್ಟಿದೆ.

ಸಂಜೆ ಕಾರ್ಯಕ್ರಮದ ಮುಗಿದ ನಂತರ ಮನೆಗೆ ಬಂದರು. ಗ್ರಹಚಾರಕ್ಕೆ ಆ ವೇಳೆಗೆ ವಿದ್ಯುತ್ ಕೈ ಕೊಟ್ಟಿತ್ತು. ಮೇಣಬತ್ತಿ, ಚಾರ್ಜರ್ ಲ್ಯಾಂಪ್ ಬೆಳಕಿನಲ್ಲೇ ಚಾಪೆಯೆಳೆದು ಅಡುಗೆ ಮನೆಯ ಗೋಡೆಗೊರಗಿ ಕೂತು, ಪ್ರಯಾಣ ಮಾಡುವ ಕಾರಣಕ್ಕೆ ಊಟ ಮಾಡದೇ ಒಂದೆರಡು ಚಪಾತಿ ತಿಂದರು. ತನ್ನೊಳಗಿನ ನೋವು, ಒತ್ತಡ, ಮುಂದಿನ ಕೆಲಸದ ಸಿದ್ಧತೆಯ ತುರ್ತು ಎಲ್ಲವನ್ನ ಮರೆತು ಸಹಜ ಆತ್ಮೀಯತೆಯಿಂದ ಓರ್ವ ಅಂತಾರಾಷ್ಟ್ರೀಯ ಖ್ಯಾತಿಯ ವ್ಯಕ್ತಿ ಮಾತನಾಡುವದು ಕಣ್ಣೆದುರಿನ ಘಟನೆಯಾದರೂ ಇಂದಿನ ಹಮ್ಮು ಬಿಮ್ಮಿನ ಜಗತ್ತಿನಲ್ಲಿ ಸುಳ್ಳಾಗಿರಬಹುದೇ ಎಂದು ಒಂದು ಕ್ಷಣ ಅನಿಸುವಂತಿದೆ.
ನನಗೆ ಪರಿಚಿತರಾದ ಹಲವು ಹಿರಿಯರಂತೆ ಇವರಿಂದಲೂ ಆಹ್ಲಾದಕರವಾದ ನೆನಪು, ಸ್ವಚ್ಛ ಸ್ನೇಹ, ಧನ್ಯತಾ ಭಾವವನ್ನ ಪಡೆದಿದ್ದೇನೆ ಮಾತ್ರ. ಅವರ ಸಿನೆಮಾದಲ್ಲಿ ಛಾನ್ಸ ಕೇಳಬಹುದಿತ್ತಲ್ಲ ಎಂದು ಹಲವರು ಸೂಚಿಸಿದ್ದರೂ ಆ ತಪ್ಪನ್ನೂ ಮಾಡಿಲ್ಲ.
ಸ್ವಲ್ಪ ಕೀರ್ತಿ, ಒಂದಿಷ್ಟು ಸಂಪತ್ತು ಬಂದಾಕ್ಷಣ ತಾನುಂಟು, ಮೂರು ಲೋಕವುಂಟು ಎಂದು ಗತ್ತು, ಗಾಂಭಿರ್ಯದಿಂದ ವರ್ತಿಸುವ ಜನಗಳ ನಡುವೆ ಕೆಲವು ವ್ಯಕ್ತಿಗಳು ತಮ್ಮ ರಕ್ತಗತವಾಗಿ ಬಂದ ಗುಣ, ನಡವಳಿಕೆಯಿಂದ, ಸಹಜವಾದ ಸರಳತೆ, ಸಜ್ಜನಿಕೆಗಳಿಂದ ಮತ್ತಷ್ಟು ಗೌರವಕ್ಕೆ ಪಾತ್ರರಾಗುತ್ತಾರೆ. ತಮ್ಮ ಸಿದ್ಧಿ, ಪ್ರಸಿದ್ಧಿಗಳನ್ನು ಗಣನೆಗೆ ತೆಗೆದುಕೊಳ್ಳದೇ ಎಲ್ಲರೊಂದಿಗೂ ಮುಕ್ತವಾಗಿ, ಸ್ವಚ್ಛವಾಗಿ ಬೆರೆಯುತ್ತಾರೆ. ವಯಸ್ಕರೊಂದಿಗೆ ಹೇಗೋ ಹಾಗೆ ಮಕ್ಕಳೊಂದಿಗೂ ಅವರಂತಾಗಿಬಿಡುತ್ತಾರೆ. ಅವರು ಭಾವನಾತ್ಮಕ ಮನಸ್ಸಿನವರು.
ಬದುಕಿನ ಎಲ್ಲ ಅನುಭವ, ಅವಸ್ಥೆಗಳನ್ನು ಗ್ರಹಿಸುವ, ಆ ಮೂಲಕ ತನ್ನನ್ನು ಇನ್ನಷ್ಟು ಬೆಳೆಸಿಕೊಳ್ಳುವ ಗಿರೀಶ್ ಕಾಸರವಳ್ಳಿಯಂಥವರು ಶಿವರಾಮ ಕಾರಂತ, ಕೆ.ವಿ.ಸುಬ್ಬಣ್ಣ, ತೇಜಸ್ವಿಯಂಥವರ ಮುಂದಿನ ಕೊಡುಗೆಯಾಗಿ ನಮ್ಮೊಂದಿಗಿರುವದೇ ಒಂದು ಭರವಸೆ.
ಗಿರೀಶ ಕಾಸರವಳ್ಳಿಯವರ ಬಗ್ಗೆ ಒಂದಿಷ್ಟು ವಿವರಗಳನ್ನು ನನಗೆ ತಿಳಿದಷ್ಟು ಕೊಡುವ ಪ್ರಯತ್ನ ಮಾಡಿದ್ದೇನೆ.
ಕನ್ನಡ ಕಲಾತ್ಮಕ ಚಲನಚಿತ್ರ ಲೋಕದಲ್ಲಿ ಒಂದು ಅಪೂರ್ವ ಹೆಸರು ಗಿರೀಶ ಕಾಸರವಳ್ಳಿ. ಚಲನಚಿತ್ರವನ್ನು ಒಂದು ಕಲಾಕೃತಿಯೆಂದೇ ಪರಿಗಣಿಸುವ, ಅದಕ್ಕೆ ಜೀವಂತಿಕೆಯನ್ನು ತುಂಬುವ ಗಿರೀಶ ಕಾಸರವಳ್ಳಿಯವರ 12ಕ್ಕೂ ಹೆಚ್ಚು ಚಲನಚಿತ್ರಗಳು ಒಂದಕ್ಕಿಂತ ಒಂದು ಉತ್ಕಷ್ಠವಾದಂಥವು.
ಸತ್ಯಜೀತ್ ರೇಯವರ ‘ಪಥೇರ್ ಪಾಂಚಾಲಿ’, ಜಪಾನಿನ ಅಕಿರಾ ಕುರೋಸವಾನ ‘ರಶೋಮನ್’ ಮುಂತಾದವು ಪೌರಾತ್ಯ ಜಗತ್ತಿನ ಕಲಾತ್ಮಕ ಚಲನಚಿತ್ರರಂಗದಲ್ಲಿ ಅಚ್ಚಳಿಯದೇ ಉಳಿದಂಥವು. ಭಾರತೀಯ ಕಲಾತ್ಮಕ ಚಿತ್ರ ರಂಗದ ಮೃಣಾಲ್ ಸೇನ್, ಋಕೇಶ ಮುಖರ್ಜಿ, ಎಂ.ಎಸ್. ಸತ್ಯು, ಶ್ಯಾಂ ಬೆನಗಲ್, ಕೆ.ಬಾಲಚಂದರ್, ಮಣಿರತ್ನಂ ಮುಂತಾದ ಪ್ರಬುದ್ಧ ನಿರ್ದೇಶಕರಷ್ಟೇ ಸಮರ್ಥರಾದವರು ಗಿರೀಶ್ ಕಾಸರವಳ್ಳಿ. ಲಕ್ಷ್ಮೀನಾರಾಯಣ್ ಅವರ ‘ನಾಂದಿ’, ಜಿ.ವಿ.ಅಯ್ಯರ್‍ರ ‘ ಹಂಸಗೀತೆ’ ಬಿ.ವಿ.ಕಾರಂತರ ‘ ಚೋಮನ ದುಡಿ’ ಮುಂತಾದ ಕಲಾತ್ಮಕ ಚಿತ್ರಗಳಿಗೆ ಸರಿಸಾಟಿಯಾಗಿ ಮೂಡಿ ಬಂದಿದ್ದು ಗಿರೀಶ ಕಾಸರವಳ್ಳಿ ನಿರ್ದೇಶಿಸಿದ ಚಿತ್ರಗಳು. ತಾಂತ್ರಿಕತೆ, ನಿರೂಪಣೆ, ವಸ್ತುವಿನ ಆಯ್ಕೆ, ಕ್ಯಾಮರಾದ ಬಳಕೆ.. ಹೀಗೇ ಚಲನಚಿತ್ರವೊಂದಕ್ಕೆ ಅಗತ್ಯವಾದ ಪ್ರತಿಯೊಂದನ್ನು ಬಳಸಿಕೊಂಡದ್ದು ಗಿರೀಶ ಕಾಸರವಳ್ಳಿಯವರ ಹೆಚ್ಚುಗಾರಿಕೆ. ಕನ್ನಡ ಕಲಾತ್ಮಕ ಚಲನಚಿತ್ರ ರಂಗವನ್ನು ಶ್ರೀಮಂತಗೊಳಿಸಿದ ಪಟ್ಟಾಭಿರಾಮ ನಾಯ್ಡುರ ‘ಸಂಸ್ಕಾರ’, ಸಿ.ಆರ್.ಸಿಂಹರ ‘ಕಾಕನ ಕೋಟೆ’, ಗಿರೀಶ್ ಕಾರ್ನಾಡರ ‘ಕಾನೂರು ಹೆಗ್ಗಡತಿ’, ಲಂಕೇಶರ ‘ಎಲ್ಲಿಂದಲೋ ಬಂದವರು’, ಕಂಬಾರರ ‘ ಕಾಡುಕುದುರೆ’, ಬರಗೂರರ ‘ ಬೆಂಕಿ’….. ಮುಂತಾದವುಗಳ ಜೊತೆಗೆ ನಾಗತಿಹಳ್ಳಿ, ನಾಗಾಭರಣ, ಶೇಷಾದ್ರಿ ಮುಂತಾದವರು ಸದಭಿರುಚಿಯ ಚಿತ್ರಗಳನ್ನು ನೀಡಿದ್ದಾರೆ. ಗಿರೀಶರ ಒಂದು ವಿಶೇಷತೆಯೆಂದರೆ ಅವರ ಬಹುತೇಕ ಎಲ್ಲ ಚಿತ್ರಗಳೂ ಸ್ತ್ರೀ ಪ್ರಧಾನವಾದ ಕತಾವಸ್ತುವನ್ನು ಹೊಂದಿರುವದು.
1950ರಲ್ಲಿ ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿಯಲ್ಲಿ ಜನಿಸಿದ ಗಿರೀಶ ಕಮ್ಮರಡಿ, ಕೆಸಲೂರುಗಳಲ್ಲಿ ಶಿಕ್ಷಣ ಪಡೆದು ಉನ್ನತ ಶಿಕ್ಷಣದ ನಂತರ ಸೇರಿದ್ದು ಪೂನಾದ ಫಿಲಂ ಇನಸ್ಟಿಟ್ಯೂಟ್. ಅಲ್ಲಿಯೇ ಹಲವು ಕಿರು ಚಿತ್ರಗಳ ನಿರ್ದೇಶನದ ಅನುಭವ ಪಡೆದ ಗಿರೀಶ್‍ರ ಮೊಟ್ಟ ಮೊದಲ ಚಲನಚಿತ್ರ ಘಟಶ್ರಾದ್ಧ(1977)ಕ್ಕೆ ಸ್ವರ್ಣ ಕಮಲ ಪ್ರಶಸ್ತಿ ದೊರಕಿತು. ನಂತರದಲ್ಲಿ ಒಂದಕ್ಕಿಂತ ಮತ್ತೊಂದು ಉತ್ಕೃಷ್ಠವಾದ ಚಿತ್ರಗಳ ಸಾಲು ಸಾಲು. ಆಕ್ರಮಣ(1979), ಮೂರು ದಾರಿಗಳು(1981), ತಬರನ ಕತೆ(1987), ಬಣ್ಣದ ವೇಷ(1989), ಮನೆ(1989), ಹಿಂದಿ ಭಾಷೆಯಲ್ಲಿ ಏಕ್ ಘರ್( 1991), ಕ್ರೌರ್ಯ(1996), ತಾಯಿ ಸಾಹೇಬ(1998), ದ್ವೀಪ(2002), ಹಸೀನಾ(2005), ನಾಯಿ ನೆರಳು(2006), ಗುಲಾಬಿ ಟಾಕೀಸ್(2008) ಹಾಗೂ ಕನಸೆಂಬ ಕುದುರೆಯೇರಿ(2010), ಕೂರ್ಮಾವತಾರ-
2012- ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ-2020 ಮುಂತಾದ ಚಿತ್ರಗಳನ್ನ ಕನ್ನಡ ಚಿತ್ರರಂಗಕ್ಕೆ ಕೊಟ್ಟವರು ಕಾಸರವಳ್ಳಿ. ಈ ನಡುವೆ ಭೈರಪ್ಪನವರ ಗೃಹಭಂಗ ಕಾದಂಬರಿಯ ದೂರದರ್ಶನ ಧಾರಾವಾಹಿಯನ್ನೂ ಅವರು ನಿರ್ದೇಶಿಸಿದರು. ಒಟ್ಟೂ 4 ಸ್ವರ್ಣ ಕಮಲ ಪ್ರಶಸ್ತಿ ಪಡೆದ ದೇಶದ ಮೂವರು ನಿರ್ದೇಶಕರಲ್ಲಿ ಇವರೊಬ್ಬರು. ಸತ್ಯಜೀತ್ ರೇ 6, ಮೃಣಾಲ್ ಸೇನ್ 4 ಬಾರಿ ಪಡೆದುಕೊಂಡಿದ್ದರು.
ಗಟ್ಟಿಯಾದ ಕತಾವಸ್ತುವನ್ನು ತಮ್ಮ ಚಿತ್ರಕ್ಕೆ ಆಯ್ದುಕೊಳ್ಳುವ ಕಾಸರವಳ್ಳಿ ಯು.ಆರ್.ಅನಂತಮೂರ್ತಿ, ಎಸ್.ಎಲ್.ಭೈರಪ್ಪ, ಯಶವಂತ ಚಿತ್ತಾಲ, ಪೂರ್ಣಚಂದ್ರ ತೇಜಸ್ವಿ, ನಾ.ಡಿಸೋಜಾ, ಟಿ.ಜಿ.ರಾಘವ ಮುಂತಾದವರ ಬರೆಹಗಳನ್ನು ಒಂದು ಕಲಾಕೃತಿಯಾಗಿ ಕಟ್ಟಲು ಸಾಧ್ಯವಾಗಿದ್ದು ಗಿರೀಶರ ಸಾಹಿತ್ಯಿಕ ಆಸಕ್ತಿ ಕಾರಣ. ಸಾಹಿತ್ಯವನ್ನು ಅದರ ಮೂಲ ಸತ್ವದೊಂದಿಗೆ ಗ್ರಹಿಸುವ ಶಕ್ತಿ ಗಿರೀಶ ಕಾಸರವಳ್ಳಿಯವರದ್ದು.
ಅವರ ಮೊದಲ ನಿರ್ದೇಶನದ ಘಟಶ್ರಾದ್ಧ ಚಲನಚಿತ್ರಕ್ಕೆ ರ್ಟ್ರಾೀಯ ಅತ್ಯುತ್ತಮ ಚಲನಚಿತ್ರ ಪುರಸ್ಕಾರ ಪಡೆದ ಕಾಸರವಳ್ಳಿ ನಂತರ ನಿರ್ದೇಶಿಸಿದ ಎಲ್ಲ ಚಿತ್ರಗಳೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪುರಸ್ಕಾರವನ್ನು ಪಡೆದಿವೆ. ತಾಯಿ ಸಾಹೇಬ ಚಿತ್ರಕ್ಕೆ ಸ್ವರ್ಣ ಕಮಲ ಪ್ರಶಸ್ತಿ ಪಡೆದ ಕಾಸರವಳ್ಳಿ ಪದ್ಮಶ್ರೀ ಪ್ರಶಸ್ತಿಯ ಜೊತೆಗೆ 4 ಬಾರಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದವರು. ರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲದೇ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಅವರ ಚಲನಚಿತ್ರಗಳು ಪ್ರದರ್ಶಿತಗೊಂಡು ಪುರಸ್ಕಾರ ಪಡೆದುಕೊಂಡಿವೆ.
ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರ ನಿರ್ದೇಶಕನಾದರೂ ಪುಟ್ಟ ಮಗುವಿಗಿರುವ ಕುತೂಹಲ, ಸರಳತೆ, ಸೌಜನ್ಯ, ವಸ್ತುವಿನ ಗ್ರಹಿಕೆ, ಸಮಕಾಲೀನ ಬದುಕಿನ ಅರಿವು ಇವೆಲ್ಲವನ್ನೂ ಉಳಿಸಿಕೊಂಡಿರುವ ಗಿರೀಶ ಕಾಸರವಳ್ಳಿ ಕನ್ನಡ ಚಿತ್ರರಂಗವನ್ನು ಬೆಳೆಸಿದ್ದಾರೆ; ಉಳಿಸಿದ್ದಾರೆ. ಒಂದು ಚಲನಚಿತ್ರ ಒಂದು ಸಾಹಿತ್ಯ ಕೃತಿಯಂತೆ ಮೌಲಿಕವಾದದ್ದು, ಅದನ್ನೂ ಕೂಡ ಉತ್ಕøಷ್ಟವಾಗಿ ನಿರೂಪಿಸಬಹುದು ಎನ್ನುವದನ್ನು ಕಾಣಿಸಿದವರು ಕಾಸರವಳ್ಳಿ.
——ಗಂಗಾಧರ ಕೊಳಗಿ

(ಮುಗಿಯಿತು)
ಮುಂದಿನವಾರ ಇದೇ ಅಂಕಣದಲ್ಲಿ ಕೆ.ವಿ.ಸುಬ್ಬಣ್ಣ

About the author

Adyot

Leave a Comment