ಭೂಸುಧಾರಣೆ ಕಾನೂನು ತಿದ್ದುಪಡಿ ಐತಿಹಾಸಿಕ ಪ್ರಮಾದ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಜಾತ್ಯಾತೀತ ಜನತಾದಳದ ಮುಖಂಡ ಡಾ.ಶಶಿಭೂಷಣ ಹೆಗಡೆ ರಾಜ್ಯಸರಕಾರ ತಿದ್ದುಪಡಿ ಮಾಡಲು ಹೊರಟಿರುವ ಭೂಸುಧಾರಣೆ ಕಾಯ್ದೆ ವಿರುದ್ದ ಸುದ್ದಿಗೋಷ್ಠಿ ನಡೆಸಿದರು.
ದಿ.ರಾಮಕೃಷ್ಣ ಹೆಗಡೆಯವರು ಜಾರಿಗೆ ತಂದಿರುವ ಪಂಚಾಯತ್ ರಾಜ್ ಕಾಯ್ದೆ ಹಾಗೂ ದಿ.ದೇವರಾಜ ಅರಸು ಜಾರಿಗೆ ತಂದಿರುವ ಭೂಸುಧಾರಣೆ ಕಾಯ್ದೆ ದೇಶದಲ್ಲೆ ಐತಿಹಾಸಿಕ ಕಾಯ್ದೆ ಎಂದು ಹೆಸರುಗಳಿಸಿದೆ.ರಾಜ್ಯಸರಕಾರ ಈಗ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರುವುದು ಐತಿಹಾಸಿಕ ಪ್ರಮಾದವಾಗಿದೆ.ರಾಜ್ಯಸರಕಾರ ಉಳ್ಳವರ ಹಿತಾಸಕ್ತಿ ಕಾಪಾಡಲು ಇಂತಹ ಕ್ರಮಕ್ಕೆ ಮುಂದಾಗಿದ್ದು ರೈತರು,ಸಾರ್ವಜನಿಕರು ಸರಕಾರದ ಈ ಕ್ರಮದ ವಿರುದ್ದ ಹೋರಾಟ ನಡೆಸಬೇಕು.
ಬಲಪಂಥೀಯ ವಿಚಾರಧಾರೆ ಹೊಂದಿರುವ ಬಿಜೆಪಿ ಬಂಡವಾಳಶಾಹಿಗಳ ಪರವಾಗಿದ್ದು ರೈತ ವಿರೋಧಿಯಾಗಿದೆ ಎನ್ನುವ ಆರೋಪ ಇದೆ. ಈಗ ಸರಕಾರ ಭೂಸುಧಾರಣೆಯಂತಹ ರೈತಪರ ಕಾಯ್ದೆಯನ್ನು ಬಂಡವಾಳ ಶಾಹಿಗಳಿಗೆ ಅನುಕೂಲವಾಗುವಂತೆ ತಿದ್ದುಪಡಿ ಮಾಡಲು ಹೊರಟಿರುವುದು ನೋಡಿದರೆ ಈ ಆರೋಪ ಸತ್ಯವಾಗಿದೆ ಎನಿಸುತ್ತದೆ ಎಂದು ಡಾ.ಶಶಿಭೂಷಣ ಹೆಗಡೆ ಹೇಳಿದರು.

ರಾಜ್ಯದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಹೆಚ್ಚಾಗಿದ್ದಾರೆ ಇಂತಹವರ ಭೂಮಿಯನ್ನು ಹೆಚ್ಚಿನ ಬೆಲೆಯ ಆಮೀಷ ತೋರಿಸಿಯೋ,ಬೆದರಿಸಿಯೋ ಕಿತ್ತುಕೊಳ್ಳಲಾಗುತ್ತದೆ ಆ ಹಣ ಖರ್ಚಾದ ನಂತರ ರೈತ ಅದೇ ಭೂಮಿಯಲ್ಲಿ ಕೂಲಿಗೆ ಹೋಗುವ ಪ್ರಸಂಗ ಬರುತ್ತದೆ ಅವನ ಮುಂದಿನ ತಲೆಮಾರು
ಭೂರಹಿತನಾಗಿ ಬದುಕ ಬೇಕಾಗುತ್ತದೆ ಇದರಿಂದ ಸಾಮಾಜಿಕ ಅಸಮಾನತೆ ಹೆಚ್ಚಾಗುವುದಲ್ಲದೆ ನಕ್ಸಲಿಯಂನಂತಹ ಹಿಂಸಾತ್ಮಕ ಸಂಘಟನೆಗಳು ಹೆಚ್ಚಾಗುತ್ತವೆ.
ದೇಶದಲ್ಲಿ ಒಬ್ಬ ವ್ಯಕ್ತಿಯ ಮೇಲೆ,ಒಂದು ಸಿದ್ದಾಂತದ ಮೇಲೆ ಅಂಧ ಭಕ್ತಿ ಹೆಚ್ಚಾಗುತ್ತಿದೆ ಇದು ಸರಿಯಲ್ಲ ತಪ್ಪನ್ನು ವಿಶ್ಲೇಷಣೆ
ಮಾಡುವುದನ್ನು ದೇಶದ್ರೋಹ ಎಂಬಂತೆ ಬಿಂಬಿಸಲಾಗುತ್ತಿದೆ.ಆದರೆ ಜನವಿರೋಧಿ ಕಾಯ್ದೆಯನ್ನು ಜಾರಿ ಮಾಡಲು ಹೊರಟರೆ ಅದನ್ನು ವಿರೋಧಿಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ
ಈಗ ತಿದ್ದುಪಡಿ ಮಾಡಲು ಹೊರಟಿರುವ ಜನವಿರೋಧಿ ಕಾಯ್ದೆಯನ್ನು ಆತ್ಮಸಾಕ್ಷಿಯುಳ್ಳ ಬಿಜೆಪಿ ಶಾಸಕರು,ಕಾರ್ಯಕರ್ತರು ವಿರೋಧಿಸಬೇಕಾಗಿದೆ ಎಂದು ಹೇಳಿದರು.
ಈ ಕಾಯ್ದೆ ತಿದ್ದುಪಡಿಯಿಂದ ರೈತರ ಅಸ್ತಿತ್ವವೇ ಅಲುಗಾಡುತ್ತಿದೆ.ಸಹಕಾರಿ ತತ್ವಗಳು ನಾಶವಾಗುವುದರ ಜೊತೆಗೆ ಸಹಕಾರಿ ಸಂಘಗಳೇ ಇಲ್ಲವಾಗುತ್ತದೆ.
ಊಳುವವನೆ ಒಡೆಯನಿಂದ ಉಳ್ಳವನೇ ಒಡೆಯ ಎಂದಾಗುವುದರಿಂದ ರೈತರಿಗೆ ಸಿಗಬೇಕಾದ ರಿಯಾಯತಿಗಳು ತಪ್ಪುತ್ತವೆ ಮತ್ತು ಉಳ್ಳವನು ತನ್ನೆಲ್ಲ ಆದಾಯವನ್ನು ಕೃಷಿ ಉತ್ಪನ್ನದಿಂದ ಎಂದು ತೋರಿಸಿ ಹೆಚ್ಚಿನ ರಿಯಾಯತಿ ಪಡೆಯುವನಲ್ಲದೆ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟುಮಾಡುತ್ತಾನೆ.
ಶ್ರೀಮಂತರನ್ನೆ ಶ್ರೀಮಂತರನ್ನಾಗಿಸುವ ಈ ಕಾಯ್ದೆ ತಿದ್ದುಪಡಿಯಿಂದ ಸಾಮಾಜಿಕ ಅಸಮತೋಲನವಾಗುವುದರ ಜೊತೆಗೆ ನಿರುದ್ಯೋಗ ಸಮಸ್ಯೆ ಹೆಚ್ಚುತ್ತದೆ.ಯುವಕರು ಕೆಲಸವಿಲ್ಲದೆ ನಕ್ಸಲೀಯಂನಂತಹ ಸಂಘಟನೆಯತ್ತವಾಲುತ್ತಾರೆ
ಹೀಗೆ ಹಲವಾರು ದುಷ್ಪರಿಣಾಮಗಳನ್ನು ಬೀರುವ ಈ ಕಾಯ್ದೆ ತಿದ್ದುಪಡಿಯನ್ನು ಕೈಬಿಡುವಂತೆ ಆಗ್ರಹಿಸಿ ಕರ್ನಾಟಕದ ಜನತೆ ಪಕ್ಷಾತೀತವಾಗಿ ಹೋರಾಟ ನಡೆಸಬೇಕಾಗಿದೆ ಎಂದು ಶಶಿಭೂಷಣ ಹೆಗಡೆ ಹೇಳಿದರು.

About the author

Adyot

1 Comment

  • ನಿಜ. ಈ ತಿದ್ದುಪಡಿಯಲ್ಲಿ ೧೦೮ ಎಕರೆ ವರೆಗೆ ಮಿತಿ ಇಟ್ಟಿದ್ದು ಸರಿಯಲ್ಲ 5 -10 ಎಕರೆ ಖರೀದಿಸಲು ಅವಕಾಶ ಇದ್ದರೆ ಸಾಕಾಗಿತ್ತು. ಮತ್ತೆ ಜಮೀನಿನ ಮುಖವನ್ನೇ ನೋಡದವನು ಜಮೀನ್ದಾರರ ಅಗುವ ಸಾಧ್ಯತೆ ಹೆಚ್ಚಿರುತ್ತದೆ‌

Leave a Comment