ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಎಪಿಎಂಸಿ ಚುನಾವಣೆ ಬುಧವಾರ ಮುಗಿದಿದ್ದು ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶ್ರೀನಿವಾಸ ಎಸ್.ಘೋಟ್ನೇಕರ್ ಹಾಗೂ ಉಪಾಧ್ಯಕ್ಷರಾಗಿ ಅದೇ ಪಕ್ಷದ ಸಂತೋಷ ಮಿರಾಶಿ ಆಯ್ಕೆಯಾಗಿದ್ದಾರೆ.
ಅಪಹರಣಕ್ಕೊಳಗಾಗಿದ್ದಾರೆ ಎನ್ನಲಾಗಿದ್ದ ಕೃಷ್ಣಮೂರ್ತಿ ರಾಮಚಂದ್ರ ಪಾಟೀಲ ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಪಹರಣ ಪ್ರಕರಣ ಸುಖಾಂತ್ಯ ಕಂಡಂತಾಗಿದೆ. ಆದರೆ ಇನ್ನೊಬ್ಬ ಸದಸ್ಯ ವಸಂತ ಸುಗಣ ಹರಿಜನ ಗೈರಾಗಿದ್ದು ಅವರ ಅಪಹರಣವಾಗಿದೆ ಎಂದು ರಾಮನಗರದಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟೂ ಹದಿನಾರು ಸದಸ್ಯರಿದ್ದ ಹಳಿಯಾಳ ಎಪಿಎಂಸಿಯಲ್ಲಿ ಒಬ್ಬ ಸದಸ್ಯ ಗೈರಾಗಿದ್ದಾರೆ ಉಳಿದ 15 ಸದಸ್ಯರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀನಿವಾಸ ಘೋಟ್ನೆಕರ್ ಹಾಗೂ ಸಂತೋಷ ಮಿರಾಶಿ ತಲಾ ಎಂಟು ಮತ ಪಡೆದು ಆಯ್ಕೆಯಾದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ
ಸೋನಪ್ಪ ರುದ್ರಪ್ಪ ಸುಣಕಾರ ಹಾಗೂ ಗೀತಾ ಮೋರಿಯವರಿಗೆ ತಲಾ ಏಳು ಮತಗಳು ಬಿದ್ದವು
ಒಟ್ಟಾರೆ ಬಿಜೆಪಿ ಬೆಂಬಲಿತ ಸದಸ್ಯರೊಬ್ಬರನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಂಡು ಮುಖಭಂಗ ತಪ್ಪಿಸಿಕೊಂಡಿದೆ.
ಮೂರನೇ ಅವಧಿಗೂ ಶ್ರೀನಿವಾಸ ಘೋಟ್ನೇಕರ್ ಅಧ್ಯಕ್ಷರಾಗುವ ಮೂಲಕ ಎಸ್.ಎಲ್. ಘೋಟ್ನೇಕರ್ ತಾಲೂಕಿನಲ್ಲಿ ತನ್ನ ಹಿಡಿತವನ್ನು ಬಲಗೊಳಿಸಿಕೊಂಡಿದ್ದಾರೆ