ಜಗತ್ತನ್ನು ಆವರಿಸಿರುವ ಕರೊನಾ ಎಂಬ ಕತ್ತಲು ಕಳೆದು ಬೆಳಕು ಎಲ್ಲಡೆ ಮೂಡಲಿ–ರಾಘವೇಶ್ವರ ಶ್ರೀ
ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಅಶೋಕೆಯಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿಯವರು ಚಾತುರ್ಮಾಸ್ಯವನ್ನು ಕೈಗೊಂಡಿದ್ದಾರೆ.
ಜುಲೈ5 ರಿಂದ ಸೆಪ್ಟೆಂಬರ್ 2ರವರೆಗೆ ಚಾತುರ್ಮಾಸ್ಯ ನಡೆಯಲಿದೆ.ಶನಿವಾರ ಪುರಪ್ರವೇಶ ಮಾಡಿರುವ ಶ್ರೀಗಳು ರವಿವಾರ ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿದ್ಯಾಪೀಠದ
ಪರಿಸರದಲ್ಲಿ 27ನೇ ಚಾತುರ್ಮಾಸ್ಯದ ವ್ಯಾಸಪೂಜೆ ನೆರವೇರಿಸಿ
ಶಿಷ್ಯವರ್ಗಕ್ಕೆ ಆಶೀರ್ವಚನ ನೀಡಿದರು.
“ಜಗತ್ತನ್ನು ಮಾರಕ ವ್ಯಾಧಿ ಪೀಡಿಸುತ್ತಿದ್ದು, ಇಡೀ ಜಗತ್ತೇ ಕಂಗಾಲಾಗಿದೆ. ನಿಜಕ್ಕೂ ಜಗತ್ತು ಕತ್ತಲಲ್ಲಿದೆ, ಕಷ್ಟದಲ್ಲಿದೆ, ಬೆಳಕು ಸಿಗುತ್ತಿಲ್ಲ. ಜಗತ್ತಿನ ಅಮಾವಾಸ್ಯೆ ಪೂರ್ಣಿಮೆಯಾಗಿ ಪರಿವರ್ತನೆಯಾಗಲಿ ಎಂದು ಹೇಳಿದ ಶ್ರೀಗಳು,ಅಂತರಂಗದಲ್ಲಿ ಜ್ಞಾನದ ಬೆಳಕು ಹಾಗೂ ಚೈತನ್ಯದ ತಂಪನ್ನು ಉಂಟುಮಾಡುವಂತಹದ್ದು ಗುರುಪೂರ್ಣಿಮೆ. ಶಾರ್ವರಿ ಎಂದರೆ ಕತ್ತಲು, ಪೂರ್ಣಿಮೆ ಎಂದರೆ ಬೆಳಕು. ಕತ್ತಲೆಯ ಮಧ್ಯೆ ಬೆಳಗುವಂತಹ ಬೆಳಕು. ಸೂರ್ಯನ ಬೆಳಕಿನ ತಾಪ, ಧಗೆಯನ್ನು ಉಂಟು ಮಾಡುತ್ತದೆ. ಆದರೆ ಪೂರ್ಣಮಿಯ ಬೆಳಕು ತಂಪು ನೀಡುತ್ತದೆ. ಶಾರ್ವರಿ ಗುರುಪೂರ್ಣಿಮೆ ಎಂದರೆ ಗುರು ತಂದ ಬೆಳಕಾಗಿದೆ ಎಂದರು.
ಭಾರತದಲ್ಲಿ ಉಂಟಾದ ಜ್ಞಾನ ಪ್ರಕಾಶ ಪ್ರಪಂಚದಲ್ಲೆಲ್ಲೂ ಆಗಿಲ್ಲ. ಇಂತಹ ದೊಡ್ಡ ಜ್ಞಾನಧನದ ವಾರಸುದಾರರು ನಾವಾಗಿದ್ದು, ಎಲ್ಲವನ್ನೂ ಇವತ್ತು ಕಳೆದುಕೊಂಡಿದ್ದೇವೆ. ದೇಶ ಜ್ಞಾನವನ್ನೆಲ್ಲಾ ಕಳೆದುಕೊಂಡ ಕಾರಣ ಕತ್ತಲು ದೇಶಕ್ಕೆ ಆವರಿಸಿದೆ. ಈ ಕತ್ತಲೆಯನ್ನು ನಿವಾರಿಸಲು ಗುರುಪೂರ್ಣಿಮೆಯೇ ಬೇಕಾಗಿದೆ ಒಂದು ವಿದ್ಯಾ ಪೀಠ ಬೇಕಾಗಿದೆ. ಈ ಚಾತುರ್ಮಾಸ್ಯದ ಉದ್ದೇಶವೇ ವಿದ್ಯೆ. ವಿದ್ಯೆ ಉಳಿಯಬೇಕು, ವಿದ್ಯೆ ಬೆಳೆಯಬೇಕು, ವಿದ್ಯೆ ಬೆಳಗಬೇಕು, ಮತ್ತೊಮ್ಮೆ ವಿದ್ಯೆಯ ಪುನಪ್ರತಿಷ್ಠಾಪನೆ ಆಗಬೇಕಾಗಿದೆ ಎಂಬ ಕಾರಣಕ್ಕೆ ಒಂದು ವಿಶ್ವ ವಿದ್ಯಾ ಪೀಠ, ಐದು ಗುರುಕುಲಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಈಮೂಲಕ ದೇಶದ ಕತ್ತಲನ್ನು ದೂರ ಮಾಡುವ ಕಾರ್ಯ ಮಾಡಲಾಗುತ್ತಿದೆ ವ್ಯಾಧಿ ತಂದ ಕಷ್ಟ, ವ್ಯಾಧಿ ತಂದ ನಷ್ಟ, ಯುದ್ಧ ಭೀತಿ ಈ ಮುಬ್ಬಗೆಯ ಕಷ್ಟದಲ್ಲಿ ಕತ್ತಲೆಯಲ್ಲಿ ದೇಶ ಇರುವ ಹೊತ್ತು. ದೇಶಕ್ಕೆ ಬಂದ ಕತ್ತಲೆ ನಿವಾರಣೆಯಾಗಲಿ, ದೇಶ ಬೆಳಕಾಗಲಿ, ದೇಶಕ್ಕೆ ಒಳಿತಾಗಲಿ ಎಂದು ಶಂಕರಾಚಾರ್ಯ ಪರಂಪರೆಯ ಪೀಠ ಹಾರೈಸುತ್ತದೆ ಎಂದು ರಾಘವೇಶ್ವರ ಶ್ರೀಗಳು ಹೇಳಿದರು.
********
ಉತ್ತರಕನ್ನಡ ಜಿಲ್ಲೆಯ ಶಿರಸಿ ಸೊಂದಾ ಸ್ವರ್ಣವಲ್ಲಿಯಲ್ಲಿ,ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರು ವ್ಯಾಸಪೂಜೆ ಮಾಡುವ ಮೂಲಕ ಚಾತುರ್ಮಾಸ್ಯ ವ್ರತ ಪ್ರಾರಂಭಿಸಿದರು
ಜಗದ್ಗುರುವಾದ ಶ್ರೀ ಕೃಷ್ಣನನ್ನು ಗೋಪಾಲಕೃಷ್ಣನ ರೂಪದಲ್ಲಿ ಪೂಜಿಸಲಾಯಿತು. ವಾರ್ಷಿಕ ಪದ್ದತಿಯಂತೆ ಶ್ರೀ ಸಂಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ಸಮಸ್ತ ಶಿಷ್ಯ- ಭಕ್ತರ ಪರವಾಗಿ ಶ್ರೀ ಗುರುಗಳ ಪಾದಪೂಜೆ ನಡೆಸಿದರು.
ಆಸ್ಥಾನ ವಿದ್ವಾನ್ ಭಾಲಚಂದ್ರ ಶಾಸ್ತ್ರಿಗಳು ಆಡಳಿತ ಮಂಡಳಿ ಹಾಗೂ ಸಮಸ್ತ ಶಿಷ್ಯ ಭಕ್ತರ ಪರವಾಗಿ ಯತಿಶ್ರೇಷ್ಠರು ಚಾತುರ್ಮಾಸ್ಯ ಮಾಡುವ ಸಮಯವೆಂದರೆ ಅದು ಸಾಮಾನ್ಯವಲ್ಲ. ಆ ಸಮಯದಲ್ಲಿ ಆ ಸ್ಥಳದಲ್ಲಿ ದೇವಾನುದೇವತೆಗಳ ಸಾನ್ನಿಧ್ಯವಿರುತ್ತದೆ. ಅದರಿಂದ ಸಮಸ್ತ ಜನರಿಗೂ ಕಲ್ಯಾಣವಾಗುತ್ತದೆ, ಅಲ್ಲಿ ಧಾರ್ಮಿಕ ಪ್ರಭಾವ ಹೆಚ್ಚುತ್ತದೆ. ಹಾಗಾಗಿ ತಾವು ಇಲ್ಲಿಯೇ ತಮ್ಮ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳಬೇಕೆಂದು ಪ್ರಾರ್ಥಿಸಿದರು. ಅಲ್ಲದೆ ತಮ್ಮ ಚಾತುರ್ಮಾಸ್ಯಕ್ಕೆ ಯಾವುದೇ ತೊಂದರೆ ಆಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಈಗಿನ ಕರೋನಾ ಮಾರಿಯ ನಿಮಿತ್ತ ರೋಗ ತಡೆಗಾಗಿ ಎಲ್ಲಾ ಶಿಷ್ಯ ಭಕ್ತರೂ ತಮ್ಮ ಮನೆಯಲ್ಲಿಯೇ ಇದ್ದುಕೊಂಡು ತಮ್ಮಿಂದಾದ ಸೇವೆ ಸಲ್ಲಿಸಿ ವ್ರತ ನಿರತ ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ತಿಳಿಸಿದರು.
ದ್ವಿಜಪೂಜ್ಯರು ಕೈಗೊಂಡ ಚಾತುರ್ಮಾಸಕ್ಕೆ 🙏🙌🙏