ಆದ್ಯೋತ್ ಸುದ್ದಿನಿಧಿ:
ಮೆಡಿಕಲ್ ಕಾಲೇಜ ಆಸ್ಪತ್ರೆ ವಿಸ್ತರಣೆ, ಕಾರಾಗೃಹ ಸ್ಥಳಾಂತರ ಹಾಗೂ ಆಸ್ಪತ್ರೆಯಲ್ಲಿ ಕೊರತೆ ಇರುವ ವೈದ್ಯರ ಹುದ್ದೆ ಮಂಜೂರು ಮಾಡುವಂತೆ ಒತ್ತಾಯಿಸಿ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ, ಮುಖ್ಯಮಂತ್ರಿ ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ,ಗೃಹಸಚೀವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದರು.
ಕಾರವಾರ ವೈದ್ಯಕೀಯ ಕಾಲೇಜು ನೂತನವಾಗಿ ನಿರ್ಮಾಣಗೊಂಡಿದ್ದು, ಜಿಲ್ಲಾ ಆಸ್ಪತ್ರೆಯನ್ನು ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸಲಾಗಿದೆ. ಸುಸಜ್ಜಿತ ಆಸ್ಪತ್ರೆಗೆ ಅನುದಾನವನ್ನೂ ಒದಗಿಸಲಾಗಿದೆ. ಇಲ್ಲಿನ ಆಸ್ಪತ್ರೆಯನ್ನು 700ಹಾಸಿಗೆ ಸಾಮಥ್ರ್ಯಕ್ಕೆ ವಿಸ್ತರಿಸಲು ಹಾಗೂ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಜಾಗದ ಕೊರತೆ ನೀಗಿಸಲು ಪಕ್ಕದಲ್ಲಿರುವ ಕಾರಾಗೃಹದ ಜಾಗವನ್ನು ನೀಡಿ ಆಸ್ಪತ್ರೆ ವಿಸ್ತರಣೆಗೆ ಅವಕಾಶ ನೀಡಬೇಕು.
ಎಂಸಿಐ ಅನುಮತಿಗೂ ಜಾಗ ಇಲ್ಲದಿರುವುದೆ ತೊಡಕಾಗಿದೆ. ಎಂಸಿಐ ಅನುಮತಿ ಇಲ್ಲದಿದ್ದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ.ಮೆಡಿಕಲ್ ಕಾಲೇಜ ಆಸ್ಪತ್ರೆಗೆ ಸ್ಥಳದ ಕೊರತೆ ನಿವಾರಣೆಗಾಗಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ನಿಗದಿ ಪಡಿಸಿದ 3.5ಎಕರೆ ಅರಣ್ಯ ಜಾಗದಲ್ಲಿ ಕಾರಾಗೃಹ ಸ್ಥಳಾಂತರ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿತ್ತು
ಈ ಮನವಿಗಳಿಗೆ ಸಕಾರಾತ್ಮಕ ಸ್ಪಂದನೆ ದೊರಕಿದೆ.
ಕಾರಾಗೃಹ ಸ್ಥಳಾಂತರದ ಮನವಿಗೆ ಸ್ಪಂದಿಸಿದ ಸಚಿವ ಬಸವರಾಜ ಬೊಮ್ಮಾಯಿ ಈ ಬಗ್ಗೆ ಸರ್ಕಾರದ ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಸಚಿವ ಸುಧಾಕರ ಅವರೂ ಸಕಾರಾತ್ಮಕವಾಗಿ ಸ್ಪಂದಿಸಿ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಮಂಜೂರಾದ ಹುದ್ದೆ ನೇಮಕಾತಿಗೆ ಮನವಿ:
ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಇದ್ದು ಸಾರ್ವಜನಿಕರು ಆರೋಗ್ಯ ಸೇವೆಗೆ ಪರದಾಡುವಂತಾಗಿದೆ. ಇದರಿಂದಾಗಿ ಜಿಲ್ಲೆಯ ಹಾಗೂ ತಾಲೂಕಿನ ಜನರು ಉನ್ನತ ಚಿಕಿತ್ಸೆಗಾಗಿ ಮಂಗಳೂರು, ಉಡುಪಿ, ಹುಬ್ಬಳ್ಳಿ ಹಾಗೂ ಗೋವಾ ರಾಜ್ಯಕ್ಕೆ ಹೋಗುವ ಅನಿವಾರ್ಯತೆ ಇದೆ. ಸರ್ಕಾರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ವೈದ್ಯರ ನೇಮಕಕ್ಕೆ ಈಗಾಗಲೇ ಚಾಲನೆ ನೀಡಿದ್ದು, ಇದು ಅಂತಿಮ ಹಂತದಲ್ಲಿ ಇದೆ. ಕೂಡಲೇ ನೇಮಕವಾಗಿರುವ ವೈದ್ಯರ ಪಟ್ಟಿಯನ್ನು ಬಿಡುಗಡೆ ಮಾಡಿ ಸಾರ್ವಜನಿಕರಿಗೆ ಸೇವೆ ಲಭಿಸುವಂತೆ ಮಾಡಲು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ ಅವರಿಗೆ ಶಾಸಕರು ಮತ್ತೊಮ್ಮೆ ಮನವಿ ಮಾಡಿದ್ದಾರೆ.