ರಂಗ ಗಾರುಡಿಗ ಕೆ.ವಿ.ಸುಬ್ಬಣ್ಣ
ಹಾಗೇ ಹೆಗ್ಗೋಡಿಗೆ ಹೋದಾಗೆಲ್ಲ ಸಂಜೆ ಅಲ್ಲೇ ಇದ್ದರೆ ಅದ್ಭುತವಾದ ಚರ್ಚಾಗೋಷ್ಠಿಯೊಂದು ನನಗೆ ದೊರೆಯುತ್ತಿತ್ತು. ಪುರಪ್ಪೆಮನೆ ರಾಮಪ್ಪನವರು, ಪ್ರಭಾಕರರಾವ್ ಮುಂತಾಗಿ ನೀನಾಸಂನ ಹಿರಿಯ ಸದಸ್ಯರು, ಕಿರಿಯ ಸದಸ್ಯರು ಮುಂತಾಗಿ ಹೆಗ್ಗೋಡಿನ ಸುತ್ತಮುತ್ತಲಿನ ನೀನಾಸಂ ಬಳಗದ ಹಲವು ಪ್ರಮುಖರು ಅಲ್ಲಿರುತ್ತಿದ್ದರು. ಕಚೇರಿಯ ಎದುರಿನ ಅಂಗಳದಲ್ಲಿ ಆಗಿದ್ದ ಅಡಕೆ ದಬ್ಬೆ ಜೋಡಿಸಿದ ಬೆಂಚ್ ( ಅದನ್ನೂ ಕಲಾತ್ಮಕವಾಗಿ ಮಾಡಿದ್ದರು) ಮೇಲೆ ಕೂತು ಆ ಹಿರಿಯರೆಲ್ಲ ಪಟ್ಟಾಂಗ ಹೊಡೆಯುತ್ತಿದ್ದರು. ಅವರಲ್ಲಿ ಕಾಂಗ್ರೆಸ್, ಜನತಾದಳ, ಬಿಜೆಪಿ.. ಮುಂತಾಗಿ ಹಲವು ಧೋರಣೆಯವರಿದ್ದರು; ಕೆಲವರು ರಾಜಕೀಯ, ಸಹಕಾರಿ ಜನಪ್ರತಿನಿಧಿಗಳೂ ಇರುತ್ತಿದ್ದರು. ಅದು ಕೇವಲ ಕಾಡು ಹರಟೆಯ, ಯಾರದ್ದೋ ಸುದ್ದಿ ಹೇಳುವ ಪಟ್ಟಾಂಗವಾಗಿರದೇ ಸುತ್ತಲಿನ, ತಾಲೂಕಿನ, ಜನಜೀವನ, ವಿದ್ಯಮಾನಗಳ ಜೊತೆಗೆ ರಾಜ್ಯ, ದೇಶದ ಸಮಕಾಲೀನ ಆಗು,ಹೋಗುಗಳ ಬಗ್ಗೆ ವಿಶ್ಲೇಷಣೆ ಅಲ್ಲಿ ನಡೆಯುತ್ತಿತ್ತು. ಸೋಷಲಿಷ್ಟ ಧೋರಣೆಯ ಸುಬ್ಬಣ್ಣ ಕೂಡ ಅದರಲ್ಲಿ ಪಾಲ್ಗೊಳ್ಳುತ್ತಿದ್ದರು.
ಅವರೊಳಗೆ ನಡೆಯುತ್ತಿದ್ದ ಗಟ್ಟಿಧ್ವನಿಯ ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ ಚರ್ಚೆಗಳು ಎಷ್ಟು ಆರೋಗ್ಯಕರವಾಗಿರುತ್ತಿದ್ದವು ಎಂದರೆ ವೈಯುಕ್ತಿಕತೆಗೆ ಆಸ್ಪದ ಕೊಡದೇ, ತರ್ಕಬದ್ದವಾಗಿ, ವಸ್ತುನಿಷ್ಠವಾಗಿ ಬಿಸಿ,ಬಿಸಿ ಚರ್ಚೆ ನಡೆಸುತ್ತ, ಕವಳ ಹಾಕುತ್ತ, ಎಲ್ಲರೂ ಹತ್ತಾರು ಬಾರಿ ಕಾಫಿ ಕುಡಿದು, ಎಲ್ಲರ ಬಿಲ್ ಯಾರಾದರೂ ಒಬ್ಬರು ಕೊಟ್ಟು, ಆತ್ಮೀಯತೆಯಲ್ಲೇ ಚದುರುತ್ತಿದ್ದರು.
ಇವತ್ತಿನ ಸಂದರ್ಭವನ್ನ ನೋಡುವಾಗ ಅಂಥ ವಾತಾವರಣವೂ ಇತ್ತೇ? ಎಂದು ನನ್ನನ್ನೇ ಪ್ರಶ್ನಿಸಿಕೊಳ್ಳುವಂತಾಗುತ್ತದೆ. ಆ ಚರ್ಚೆಗಳನ್ನು ಕೇಳಲು ನಾನು ಕಾದಿರುತ್ತಿದ್ದೆ. ಕೆಲವೊಮ್ಮೆ ಟಿ.ಪಿ.ಅಶೋಕ್, ಚಿದಂಬರರಾವ್ ಜಂಬೆ, ಚಿಂತಕ, ಪ್ರಸಿದ್ಧ ರಂಗ ನಿರ್ದೇಶಕ ಪ್ರಸನ್ನ ಮುಂತಾದವರ ಮಾತುಕತೆಗಳನ್ನ ಕೇಳಿಸಿಕೊಳ್ಳುವದರ ಜೊತೆಗೆ ಅವರೊಡನೆ ಮಾತನಾಡುವ ಸಂದರ್ಭಗಳು ಲಭ್ಯವಾಗುತ್ತಿತ್ತು. ಓರ್ವ ಪ್ರಸಿದ್ಧ ರಂಗಕರ್ಮಿ ಪುರುಷೋತ್ತಮ ತಲವಾಟ ಅವರು ರೂಪಿಸುತ್ತಿದ್ದ ರಂಗ ವಿನ್ಯಾಸಗಳನ್ನ ನೋಡುವ, ಸ್ವಯಂ ಸಾಧನೆಯಿಂದ ಅತ್ಯುತ್ತಮ ಛಾಯಾಗ್ರಾಹಕ ಎನ್ನಿಸಿಕೊಂಡ ಪಿ.ಎಸ್.ಮಂಜಪ್ಪ ಅವರ ಛಾಯಾಗ್ರಹಣದ ವೈಖರಿಯನ್ನ ನೋಡುವ ಅವಕಾಶ ಅಲ್ಲಿ ದೊರೆಯಿತು.
ನಂತರದಲ್ಲಿ ಕೆ.ವಿ.ಅಕ್ಷರ ಅಧ್ಯಯನ ಮುಗಿಸಿ ಬಂದ ನಂತರದಲ್ಲಿ ಅವರ ಅಚ್ಚುಕಟ್ಟಾದ, ಶಿಸ್ತುಬದ್ದ ನಿರ್ವಹಣೆ, ಹೊಸ ಮಾದರಿಯ ಪ್ರಯೋಗಗಳನ್ನು ನೋಡಲು ಸಾಧ್ಯವಾಯಿತು. ಅತ್ಯಂತ ಚುರುಕಾಗಿ, ಸ್ಪಷ್ಟವಾಗಿ ಗ್ರಹಿಕೆಯ ಗುಣವಿದ್ದ ಅಕ್ಷರ ಆಗಿನ ಅಷ್ಟೊಂದು ಸಣ್ಣ ವಯಸ್ಸಿನಲ್ಲೇ ತಮ್ಮ ಪ್ರತಿಭೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದರು.
ಮೊದಲು ಉಳಿದ ಕಾರ್ಯಕ್ರಮಗಳ ಜೊತೆಗೆ ಚಲನಚಿತ್ರ ರಸಗ್ರಹಣ ಶಿಬಿರ ನಡೆಯುತ್ತಿತ್ತು. 1973ರಲ್ಲೇ ನೀನಾಸಂ ಚಿತ್ರ ಸಮಾಜ ಅಸ್ತಿತ್ವಕ್ಕೆ ಬಂದು ದೇಶ,ವಿದೇಶಗಳ ( ಕಮರ್ಷಿಯಲ್ ಅಲ್ಲದ) ಚಲನಚಿತ್ರಗಳನ್ನು ಗ್ರಾಮೀಣ ಭಾಗದ ಜನರಿಗೆ ತೋರಿಸಿ, ಅದರ ಜೊತೆಗೆ ಆ ಕುರಿತಾದ ವಿವರಣೆಗಳನ್ನು ಒದಗಿಸುವ ಶಿಬಿರ ಪ್ರತಿ ವರ್ಷ ಅಕ್ಟೋಬರ್‍ನಲ್ಲಿ ನಡೆಯುತ್ತ ಬಂದಿತ್ತಂತೆ. ನಾನು ನಾಲ್ಕಾರು ವರ್ಷ ಆ ಶಿಬಿರದಲ್ಲಿ ಒಂದೆರಡು ದಿನ ಪಾಲ್ಗೊಂಡಿದ್ದೆ. (ನನ್ನದು ಅಧಿಕೃತ ಪಾಲ್ಗೊಳ್ಳುವಿಕೆ ಅಲ್ಲ).
ನಾನು ಅಲ್ಲಿಗೆ ಹೋಗ ತೊಡಗಿ ಎರಡು- ಮೂರು ವರ್ಷಗಳ ನಂತರ ಅದು ರಂಗಭೂಮಿ ಮತ್ತು ಚಲನಚಿತ್ರ ರಸಗ್ರಹಣ ಶಿಬಿರವಾಗಿ, ನಂತರ ಇನ್ನಷ್ಟು ಪರಿಷ್ಕೃತಗೊಂಡುಸಂಸ್ಕತಿ ಶಿಬಿರವಾಗಿ ಮಾರ್ಪಾಟಾಯಿತು. ಈಗ ಈ ಶಿಬಿರ ಸಂಗೀತ,ದೃಶ್ಯಕಲೆ,ನೃತ್ಯ ಪ್ರಾಕಾರಗಳನ್ನ ಒಳಗೊಂಡ ಸಂಸ್ಕತಿ ಶಿಬಿರವಾಗಿ ನಡೆಯುತ್ತಿದೆ.
ಆ ರಸಗ್ರಹಣ ಶಿಬಿರ ನಡೆಯುತ್ತಿದ್ದಾಗ ಸಿನೆಮಾ ನೋಡಲು ಬರುತ್ತಿದ್ದವರಲ್ಲಿ ಕೇವಲ ಮೇಲ್ವರ್ಗದ ಮತ್ತು ಅಕ್ಷರಸ್ಥ ಜನರು ಮಾತ್ರ ಇರುತ್ತಿರಲಿಲ್ಲ.( ಇಲ್ಲಿ ವರ್ಗಗಳ ವಿಭಾಗ ಮಾಡಿದ್ದು ವಿವರಣೆಯ ಅನುಕೂಲಕ್ಕೆ ಹೊರತು ಸಿದ್ಧಮಾದರಿಯ ಮನಸ್ಸಿನಿಂದ ಅಲ್ಲ). ಆಶ್ಚರ್ಯವಾಗಿದ್ದು ಎಂದರೆ ಜೀವನೋಪಾಯಕ್ಕಾಗಿ ಕೂಲಿ ಮಾಡುತ್ತಿದ್ದ ಹೆಗ್ಗೋಡಿನ ಸುತ್ತಲಿನ ಶ್ರಮಜೀವಿಗಳು, ರೈತರು, ಪರಿಶಿಷ್ಠ ಜನಾಂಗದ ಯುವಕರು ತಮಗೆ ತಿಳಿಯದ ಭಾಷೆಯ, ಕೇಳಿಯೂ ಗೊತ್ತಿರದ ದೇಶಗಳ ಸಿನೆಮಾಗಳನ್ನ ಆಸಕ್ತಿಯಿಂದ ನೋಡಲು ಬರುತ್ತಿದ್ದುದು. ಕೇವಲ ನೋಡಿ ಸುಮ್ಮನಾಗುತ್ತಿರಲಿಲ್ಲ. ತಮ್ಮಲ್ಲಿ ಆ ಸಿನೆಮಾಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ನಾನೇ ಹಲವು ಬಾರಿ ಹೆಗ್ಗೋಡಿನಲ್ಲಿ ಬಸ್ಸಿಗೆ ಕಾಯುತ್ತ ನಿಂತಾಗಲೋ, ನಡೆದಾಡುವಾಗಲೋ ಅಂಗಡಿ ಕಟ್ಟೆ ಮುಂತಾಗಿ ಗುಂಪು ಸೇರಿದಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತಿದ್ದುದನ್ನ ಕೇಳಿಸಿಕೊಂಡಿದ್ದೇನೆ.
ಸಮಾಜದ ಮುಖ್ಯವಾಹಿನಿಯಿಂದ ದೂರವಾದವರು ಎಂದು ಹಣೆಪಟ್ಟಿ ಕಟ್ಟಿ, ಅವರನ್ನು ಮತ್ತಷ್ಟು ದೂರವಿರಿಸುತ್ತಲೇ ಬಂದ ಆ ಪ್ರತಿಭಾಶಾಲಿಗಳನ್ನ ಈ ಮೂಲಕ ಉಳಿದವರೊಂದಿಗೆ ಬೆರೆಯುವಂತೆ ಮಾಡಿ, ಅವರಲ್ಲಿ ಆತ್ಮವಿಶ್ವಾಸ, ಅರಿವನ್ನು ಹೆಚ್ಚಿಸುತ್ತ, ಕೀಳರಿಮೆಯನ್ನು ದೂರ ಮಾಡಿದ್ದು ಸುಬ್ಬಣ್ಣ ಮತ್ತು ನೀನಾಸಂನ ಬಹುದೊಡ್ಡ ಕೆಲಸ. ಸರಕಾರ ಮಾಡಲಾಗದ ಕಾರ್ಯವನ್ನು ಯಾವ ಲಾಭ,ಪ್ರಯೋಜನದ ಉದ್ದೇಶವಿಲ್ಲದೇ ಎಲೆಮರೆಯ ಕಾಯಿಯಂತೆ ಮಾಡಿದರು. ಎಲ್ಲ ಮನುಷ್ಯರೂ ಸಮಾನರು, ಎಲ್ಲರಿಗೂ ಸಮಾನ ಅವಕಾಶಗಳಿರಬೇಕು ಎನ್ನುವ ನಂಬಿಕೆಯ ಸುಬ್ಬಣ್ಣ ಸಾಮಾಜಿಕ ನ್ಯಾಯವನ್ನು ನೀನಾಸಂ ಮೂಲಕ ಅನುಷ್ಠಾನಗೊಳಿಸಿದರು ಕೂಡ.
ಈ ಸಂದರ್ಭದಲ್ಲಿ ನನ್ನಷ್ಟಕ್ಕೆ ವಿಸ್ಮಯಪಡುತ್ತಿದ್ದೇನೆ, ಯು.ಆರ್. ಅನಂತಮೂರ್ತಿಯವರ ಪ್ರಸಿದ್ಧ ಕಾದಂಬರಿ ಭಾರತಿಪುರ ಬಹುತೇಕ ಎಲ್ಲ ಓದಿರಬೇಕು. ಅದನ್ನು ಅನಂತಮೂರ್ತಿ ಸುಬ್ಬಣ್ಣನ ಮನೆಯಲ್ಲೇ ಬರೆದದ್ದು ಎಂದು ಕೇಳಿದ್ದೆ. ಅದರಲ್ಲಿ ನಾಯಕ ಜಗನ್ನಾಥ ಸಮಾಜ ಸುಧಾರಣೆಯ ಕನಸಿನವನು. ಅವನು ತನ್ನ ತೋಟದ ಕೆಲಸ ಮಾಡುವ ಪರಿಶಿಷ್ಠರಲ್ಲಿನ ಕೀಳರಿಮೆ, ಅನಗತ್ಯ ಭಯ ಕಡಿಮೆ ಮಾಡಿ ಅವರಲ್ಲಿ ಆತ್ಮವಿಶ್ವಾಸ ಹುಟ್ಟಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಮನೆಯ ಪೂಜೆ ಮಾಡುವ ಸಾಲಿಗ್ರಾಮವನ್ನು ಮುಟ್ಟುವಂತೆ ಅವರಲ್ಲಿ ಕೇಳುವ ಸನ್ನಿವೇಶ ಬರುತ್ತದೆ. ಅವರು ಮುಟ್ಟದೇ ಹಿಂಜರಿಯುತ್ತಾರೆ. ಅನಂತಮೂರ್ತಿಯವರ ಮನಸ್ಸಿನಲ್ಲಿನ ಆಶಯವನ್ನು ಮತ್ತೊಂದು ತೆರನಾಗಿ ಸುಬ್ಬಣ್ಣ ಸಾಕಾರಗೊಳಿಸಿದರಲ್ಲ! ಕಲ್ಪನೆ ಮತ್ತು ಕ್ರಿಯೆಯ, ಸಿದ್ಧಾಂತ ಮತ್ತು ಸಾಧ್ಯತೆಯ ವ್ಯತ್ಯಾಸವನ್ನ ಸೂಕ್ಷ್ಮವಾಗಿ ತೋರಿಸಿಕೊಟ್ಟದ್ದು, ವಾಸ್ತವದಲ್ಲಿ ಅದನ್ನು ಪರಿಣಾಮಕಾರಿಯಾಗಿ ಅಳವಡಿಸಿದ್ದರ ಬಗ್ಗೆ ಈಗಲೂ ವಿಸ್ಮಯವೆನ್ನಿಸುತ್ತದೆ.
ಒಮ್ಮೆ ಯಾವುದೋ ನಾಟಕೋತ್ಸವ ಜರುಗುತ್ತಿತ್ತು. ರಾಜ್ಯದಿಂದ ಮಾತ್ರವಲ್ಲ, ದೇಶದ ಹಲವೆಡೆಗಳಿಂದ ಅನೇಕ ಲೇಖಕರು, ರಂಗಕರ್ಮಿಗಳು, ಆಸಕ್ತರು ಬಂದಿದ್ದರು. ನಾನೊಂದು ದಿನ ಹೋದಾಗ ಸಂಜೆಯ ನಾಟಕ ಪ್ರದರ್ಶನದ ಮೊದಲು ರಂಗಮಂದಿರದ ಎದುರು ಸ್ಥಳೀಯ ಪರಿಶಿಷ್ಠ ಯುವಕರಿಂದ ಕೋಲಾಟ ಪ್ರದರ್ಶನ. ನಾನು ಚಿಕ್ಕವನಿದ್ದಾಗ ದೀಪಾವಳಿ ನಂತರದಲ್ಲಿ ಅಡಕೆ ಕೊಯ್ಲು ಮುಗಿದ ನಂತರದಲ್ಲಿ ಹತ್ತಿರದ ಬಳ್ಳಟ್ಟೆ, ಕಾನಳ್ಳಿ ಮುಂತಾದ ಊರುಗಳಿಂದ ಪರಿಶಿಷ್ಠ ಜನಾಂಗದ ಕೋಲಾಟದ ತಂಡ ಬಂದು ಊರಲ್ಲಿ ಒಂದೆರಡು ಕಡೆ ಆಡುತ್ತಿದ್ದರು. ಆವಾಗ ನೋಟುಗಳಿದ್ದರೂ ಎಂಟಾಣೆ, ಒಂದು ರೂಪಾಯಿ ಬಿಲ್ಲೆಗಳನ್ನ ಅವರ ಮಧ್ಯೆ ಎಸೆದರೆ ಅದನ್ನು ಕೋಲಾಡುತ್ತಲೇ ಬಾಗಿ, ಕಚ್ಚಿಕೊಳ್ಳುತ್ತಿದ್ದ ಕಸರತ್ತನ್ನು ನೋಡಿದ್ದೆ. ಅವರೇನೂ ಹಣಕ್ಕೆ ಬರುತ್ತಿರಲಿಲ್ಲ, ಒಂದು ಹವ್ಯಾಸ ಮತ್ತು ಕವಳಕ್ಕೆ ಅಡಕೆ ಬೆಟ್ಟೆ ಸಂಪಾದನೆಗೆ.
ಅವತ್ತು ಹೆಗ್ಗೋಡಿನಲ್ಲಿ ನೋಡಿದ ಕೋಲಾಟದ ನೃತ್ಯ ಜೀವಮಾನದಲ್ಲಿ ಕಾಣಲು ಸಾಧ್ಯವೇ ಇಲ್ಲ. ಸ್ಪರ್ಧೆಯಲ್ಲದ ಆ ಕಾರ್ಯಕ್ರಮದಲ್ಲಿ ತಮ್ಮ ಕೌಶಲ್ಯವನ್ನ, ಶಕ್ತಿಯನ್ನ, ಸಾಮರ್ಥವನ್ನ ಆ ಕಲಾವಿದರು ಹೇಗೆ ತೋರಿಸಿದರು ಅಂದರೆ ಅದನ್ನು ನೋಡುತ್ತಿದ್ದ ಬುದ್ದಿಜೀವಿಗಳಿಗೆ ನಿಮ್ಮಷ್ಟೇ ನಮಗೂ ಪ್ರತಿಭೆ, ಸಾಮಥ್ರ್ಯ ಇದೆ, ಆದರೆ ಅದನ್ನು ಪೋಕಸ್ ಮಾಡುವ ಮಾರ್ಗ ಗೊತ್ತಿಲ್ಲ ಎಂದು ಅಪರೋಕ್ಷವಾಗಿ ಹೇಳಿದಂತಿತ್ತು. ನನ್ನ ಸಮೀಪವೇ ನಿಂತು ನೋಡುತ್ತಿದ್ದ ಅಂತಾರಾಷ್ಟ್ರೀಯ ಮಟ್ಟದ ರಂಗ ನಿರ್ದೇಶಕ ರುಸ್ತುಂ ಭರೂಚಾ ‘ ವಾಟ್ ಎ ಸ್ಟ್ರೆಂತ್’ ಎಂದು ಉದ್ಗರಿಸಿದ್ದರು.
ಆರ್ಥಿಕ ಅನಾನುಕೂಲತೆ ಕಾರಣದಿಂದ ನಿತ್ಯ ಕಾಲೇಜಿಗೆ ಹೋಗಲಾಗದೇ ಎಕ್ಸರ್ಟನಲ್ ಆಗಿ ಸೆಕೆಂಡ್ ಇಯರ್ ಮುಗಿಸಿ, ಪದವಿಯನ್ನು ಎಕ್ಸರ್ಟನಲ್ ಆಗಿ ಕಟ್ಟಿದ್ದ ಅಕ್ಕ ವನಜಾ ಓದಲಾಗದ ಕಾರಣಕ್ಕೆ ಬೇಸರದಲ್ಲಿದ್ದಳು. ಅವಳ ಕೊರಗು ನನಗೆ, ಅಪ್ಪ,ಅಮ್ಮನಿಗೂ ಅರ್ಥವಾಗುತ್ತಿತ್ತು. ಆದರೆ ಏನೂ ಮಾಡುವಂತಿರಲಿಲ್ಲ. ಒಮ್ಮೆ ಸುಬ್ಬಣ್ಣನವರ ಬಳಿ ಮಾತನಾಡುವಾಗ ಅವಳ ಮಾನಸಿಕ ಕ್ಲೇಶದ ಬಗ್ಗೆ ಹೇಳಿಕೊಂಡಿದ್ದೆ. ಅವರು ಆಕೆಯನ್ನು ಆ ವರ್ಷದ ರಂಗಶಿಕ್ಷಣ ತರಬೇತಿಯ ಕೋರ್ಸಗೆ ಸೇರಿಸುವಂತೆ ಹೇಳಿದರು. ಆಕೆ ಸೇರಿಕೊಂಡಳು. ನಂತರದಲ್ಲಿ ಆಕೆ ಏನಿಲ್ಲವೆಂದರೂ 15-20 ಮಕ್ಕಳ ನಾಟಕಗಳನ್ನು ನಿರ್ದೇಶಿಸಿದ್ದಳು. ಬಿ.ವಿ.ಕಾರಂತರು ಭೂಪಾಲ್‍ನಲ್ಲಿ ಕೇಂದ್ರವನ್ನು ಮಾಡಿದ್ದಾಗ ಎರಡು ತಿಂಗಳು ಅಲ್ಲಿಯೂ ತರಬೇತಿ ಪಡೆದು ಬಂದಳು. ಈಗ ರಂಗಭೂಮಿಯ ಜೊತೆ ಸಂಪರ್ಕವಿಲ್ಲದಿದ್ದರೂ ಆಕೆಯಲ್ಲಿ ಜೀವನ್ಮುಖಿ ಭರವಸೆಯನ್ನ, ಚೈತನ್ಯವನ್ನ ತಂದುಕೊಳ್ಳುವಲ್ಲಿ ಈ ಅವಧಿ ನೆರವಾಯಿತು. ಆ ಕೋರ್ಸನಲ್ಲಿದ್ದವರು ನಂತರದಲ್ಲಿ ನಟರಾಗಿ, ನಿರ್ದೇಶಕರಾಗಿ ಹೆಸರು ಮಾಡಿದರು. ದಿ| ಏಣಗಿ ನಟರಾಜ್ ಸೇರಿದಂತೆ ಮಂಡ್ಯ ರಮೇಶ್, ವಿನೋದ್ ಅಂಬೇಕರ್, ರಮಾನಂದ ಐನಕೈ, ಸರೋಜ ತುಮರಿ ಮುಂತಾಗಿ ಅನೇಕರಿದ್ದರು. ಪ್ರಾಯಶ: ನೀನಾಸಂನಲ್ಲಿ ತರಬೇತಿ ಪಡೆದವರು ರಾಜ್ಯದ ಪ್ರತಿ ತಾಲೂಕಿನಲ್ಲೂ ಕನಿಷ್ಠ ಇಬ್ಬರಾದರೂ ಇದ್ದಾರೆ.
ಟಿ.ಪಿ.ಅಶೋಕ್ ಗುರುತಿಸುವಂತೆ ಸುಬ್ಬಣ್ಣನವರ ಮೂರು ಮುಖ್ಯ ಕಾಳಜಿಗಳು, ಆದರ್ಶಗಳು ಎಂದರೆ ಸಮಾನತೆ, ಸಹಕಾರ ಮತ್ತು ವಿಕೇಂದ್ರಿಕರಣ.ಸುಬ್ಬಣ್ಣ ಹೊರಗಿನದು ಮಾತ್ರವಲ್ಲ, ತಮ್ಮೊಳಗನ್ನು ವಿಮರ್ಶಿಸುತ್ತಲೇ ಬಂದವರು.ಸ್ವಂತದಿಂದ ಆರಂಭಿಸಿ ತಮ್ಮ ಜಾತಿ,ವರ್ಗ, ಸಂಸ್ಕತಿಗಳ ಒಳವಿಮರ್ಶೆಯನ್ನು ಕಟುವಾಗಿ, ನಿಷ್ಠುರವಾಗಿ ಮಾಡಿದವರು.ಹವ್ಯಕ ಬ್ರಾಹ್ಮಣರಾಗಿ ಹವ್ಯಕ ಸಮ್ಮೇಳನವನ್ನು ಬಹಿರಂಗವಾಗಿ ವಿರೋಧಿಸಿದವರು. ಸಾಗರದ ಎಲ್.ಬಿ.ಕಾಲೇಜು ಸ್ಥಾಪನೆಯಲ್ಲಿ ಪಾಲ್ಗೊಂಡು ಆಡಳಿತ ಸಮಿತಿ ಕಾರ್ಯದರ್ಶಿಯಾಗಿ ಕೆಲಸ ಮಾಡಿ, ಅಲ್ಲಿ ರಾಜಕಾರಣ ನುಸುಳತೊಡಗಿದಾಗ ಅಲ್ಲಿಂದ ಹೊರಬಂದವರು. ಆಗ ಕನ್ನಡದ ಪ್ರಮುಖ ಕವಿ ಗೋಪಾಲಕೃಷ್ಣ ಅಡಿಗರನ್ನು ಪ್ರಿನ್ಸಿಪಾಲರಾಗಿ ಕರೆತರುವಲ್ಲಿ ಇವರದ್ದು ಶ್ರಮವಿತ್ತು ಎಂದು ಕೇಳಿದ್ದೇನೆ. ಅಡಿಗರ ಸಾಕ್ಷಿ ಪತ್ರಿಕೆಯ ಪ್ರಕಟಣೆಯ ಜವಾಬ್ದಾರಿಯೂ ಸುಬ್ಬಣ್ಣನವರದಿತ್ತು. ಎರಡು ದಶಕದ ಹಿಂದೆ ಅಡಿಗರು, ಲಂಕೇಶ್ ಮುಂತಾದವರು ಜಾಗೃತ ಸಾಹಿತ್ಯ ಸಮಾವೇಶ ಮಾಡಿದಾಗ ಅವರು ಸಾಹಿತ್ಯದಲ್ಲಿ ಶ್ರೇಷ್ಠತೆ ಅಗತ್ಯವೇ ಎನ್ನುವದನ್ನು ಪ್ರಶ್ನಿಸಿ, ತಮ್ಮ ಅನ್ಯೋನ್ಯರಾದ ಅಡಿಗರ ನಿಲುವನ್ನು ವಿರೋಧಿಸಲು ಹಿಂಜರಿಯಲಿಲ್ಲ( ಶ್ರೇಷ್ಠತೆಯ ವ್ಯಸನ ಎಂದು ನಂತರ ಲೇಖನವಾಗಿ ಬಂತು).ವರ್ತಮಾನದ ಬದುಕಿನ ಅಗತ್ಯಗಳೇ ಮುಖ್ಯ ಆದ್ಯತೆಯಾಗಿ ನಂಬಿದ್ದರೂ ಪರಂಪರೆಯೊಂದಿಗಿನ ಸಂಬಂಧವನ್ನ ಅವರು ದೂರಮಾಡಿಕೊಂಡಿಲ್ಲ.ಓರ್ವ ಗ್ರಾಮಸ್ಥರಾಗಿ, ಗ್ರಹಸ್ಥರಾಗಿ,ತಮ್ಮ ಪುಟ್ಟ ಊರಿನಲ್ಲಿದ್ದುಕೊಂಡೇ ವಿಶಾಲವಾದ ಕಾಲ,ದೇಶಗಳಿಗೆ ತೆರೆದುಕೊಂಡ ಶಕ್ತಿ ಅವರದ್ದು. ಅವರು ತಮ್ಮ ಆಧುನಿಕ ಕನ್ನಡ ಸಾಹಿತ್ಯಕ್ಕೆ ಹೀಗೆ ಬನ್ನಿ ಎನ್ನುವ ಲೇಖನದಲ್ಲಿ ಬರೆಯುತ್ತಾರೆ- ಈ ಆಧುನಿಕ ಕಾಲದಲ್ಲಿ ಬದುಕುತ್ತಿರುವ ಸಮಾಜಬದ್ದ ಮನುಷ್ಯನಾದ ನನಗೆ ಅಡಕೆ ಬೇಸಾಯ ಜೀವನ ವೃತ್ತಿಯಾಗಿದ್ದೂ ಅದೇ ಸರ್ವಸ್ವವಲ್ಲ.ಜಗತ್ತಿನ ಇತರ ಎಷ್ಟೆಷ್ಟೋ ಸಂಗತಿಗಳು ನನಗೆ ಬೇಕು.ಬೇರೆ ವ್ಯವಸಾಯಗಾರರ ವಿಷಯ ಬೇಕು.ಬೇರೆಯವರ ಅನಿಸಿಕೆ, ತಿಳುವಳಿಕೆಗಳನ್ನು ನಾನು ಕೇಳಿಸಿಕೊಳ್ಳಬೇಕು.ನನ್ನದ್ದನ್ನು ಅವರಿಗೆ ಹೇಳಿಕೊಳ್ಳಬೇಕು. -ಬಹಿರಂಗ ಮಾತ್ರವಲ್ಲ, ಅಂತರಂಗ ಕೂಡ.ಹಾಗೆ ನಾನು ಸಮಾಜದ ಬಲೆಯಲ್ಲಿನೇಯ್ದು ಹೋಗಿದ್ದೇನೆ.ದಿನನಿತ್ಯದ ಭಾಷೆಗಿಂತ ಸಾಹಿತ್ಯದ ಭಾಷೆ ಹೆಚ್ಚು ಸಂಕೀರ್ಣ,ಪರಿಣಾಮಕಾರಿ.ಕಲಾ ಅಭಿವ್ಯಕ್ತಿಗಳೆಲ್ಲವೂ ಹಾಗೆಯೇ- ವ್ಯಾವಹಾರಿಕ ಅಭಿವ್ಯಕ್ತಿಗಿಂತ ಹೆಚ್ಚು ಆಳವಾದ ಅರಿವನ್ನು ಹುಟ್ಟಿಸಿಕೊಡುವಂಥದ್ದು. ಆದ್ದರಿಂದ ಸಾಹಿತ್ಯ, ಕಲೆ ನನಗೆ ಮತ್ತೂ ಹೆಚ್ಚಿನ ಅಗತ್ಯ. ಈ ಸಾಲುಗಳು ಸುಬ್ಬಣ್ಣನವರ ಆಶಯ,ಉದ್ದೇಶಗಳನ್ನ ಪ್ರತಿಫಲಿಸುವಂತಿದೆ.
ಆರಂಭದಲ್ಲಿ ಒಂದು ಕವನ ಸಂಕಲನ ಹೊರತಂದದ್ದು ಬಿಟ್ಟರೆ ಪ್ರಾಯಶ: ಸುಬ್ಬಣ್ಣ ಕವಿತೆ,ಕಥೆ,ಕಾದಂಬರಿ ರಚನೆಗೆ ಮುಂದಾಗಲಿಲ್ಲ. ಆದರೆ ಬರೆದ ಲೇಖನಗಳು ಒಂದೊಂದು ಆಕರ ಗ್ರಂಥವಾಗುವಂಥದ್ದು.ವ್ಯಾಸ, ವಾಲ್ಮೀಕಿ, ಕಾಳಿದಾಸ, ಪಂಪರಷ್ಟೇ ಅವರಿಗೆ ಬೇಂದ್ರೆ, ಕುವೆಂಪು, ಕಾರಂತರಿಂದ ತೊಡಗಿ ಕಿರಿಯ ಲೇಖಕರು ಮುಖ್ಯವಾಗಿದ್ದರು. ಮಹಾತ್ಮಾ ಗಾಂಧಿ, ಲೋಹಿಯಾ, ಅಂಬೇಡ್ಕರ್ ಮುಖ್ಯವಾಗಿ ಅವರನ್ನು ಪ್ರಭಾವಿಸಿದ್ದರು. ಸ್ಥಳೀಯ ಗ್ರಾಮ ಪಂಚಾಯತಿಯಿಂದ ವಿಶ್ವ ರಾಜಕಾರಣದವರೆಗೆ ಅವರ ಯೋಚನಾಕ್ರಮವಿತ್ತು. ಅವರ ಸೃಜನಶೀಲತೆಗೆ ಕೆಲವು ಉದಾಹರಣೆಗಳೆಂದರೆ ಅವರೇ ರೂಪಾಂತರಿಸಿದ ಲೋಕ ಶಾಂಕುಂತಲ,ಚಾಣಕ್ಯ ಪ್ರಪಂಚ, ಮಿಸ್ ಸದಾರಮೆ,ಸಾಹೇಬರು ಬರುತ್ತಾರೆ, ಕಪ್ಪು ಜನ, ಕೆಂಪು ನೆರಳು ನಾಟಕಗಳು. ಶೇಕ್ಷಫಿಯರ್, ಮೋಲಿಯರ್ ,ಬ್ರೆಕ್ಟ ಮುಂತಾದವರ ನಾಟಕಗಳನ್ನ ನೇರವಾಗಿ ಅನುವಾದಿಸಿ ಪ್ರಯೋಗಿಸಿದ್ದಾರೆ. ನೀನಾಸಂ ಸದಸ್ಯರಿಗಾಗಿ ಸಂಗ್ಯಾ ಬಾಳ್ಯಾ ನಾಟಕ ನಿರ್ದೇಶಿಸಿದ್ದರು ಎಂದು ಕೇಳಿದ್ದೇನೆ. ನೋಡಿಲ್ಲ. ಸುಮಾರು 22 ಪ್ರಮುಖ ರಂಗಕೃತಿಗಳನ್ನ ರಂಗ ನಿರ್ದೇಶನ ಮಾಡಿದ್ದರು. ಸುಮಾರು 40 ಕೃತಿ ಮತ್ತು ರಂಗಕೃತಿಗಳನ್ನ ಪ್ರಕಟಿಸಿದ್ದಾರೆ. ನಾವು ತಿನ್ನುವ ಅಡಕೆ, ಜೇನು ಸಾಕುವ ಬಗೆ, ಅಡಕೆಯ ಮಾನ ಮುಂತಾದ ಸ್ಥಳೀಯ ಸಂಗತಿ,ಸಂದರ್ಭಗಳಿಂದ ತೊಡಗಿ ಮ್ಯಾಕ್ಸ್ಮತ್ತು ಗಾಂಧಿ( ಅನುವಾದ) ಮುಂತಾದ ಪ್ರಮುಖ ವಿಷಯಗಳ ಕುರಿತು ಅವರ ಬರವಣಿಗೆ ಸಾಗಿ ಬಂದಿದೆ.
ಇಲ್ಲಿ ಸುಬ್ಬಣ್ಣನವರ ಪ್ರಮುಖ ಬರಹಗಳ ಬಗ್ಗೆ ಹೇಳದಿದ್ದರೆ ನನಗೇ ಬೇಸರವಾಗುತ್ತದೆ. ನನ್ನ ಪ್ರಭಾವಿಸಿದ, ಆ ಮೂಲಕ ಒಂದಿಷ್ಟು ಅರಿವನ್ನು ಪಡೆದುಕೊಳ್ಳಲು ಹಚ್ಚಿದ ಲೇಖನಗಳು ಹಲವು. ನಮ್ಮ ಚಳುವಳಿಗಳು ಮತ್ತು ಪ್ರಜಾಪ್ರಭುತ್ವ, ಕನ್ನಡವು ದಕ್ಕಿಸಿಕೊಂಡ ಅರಿವು ಮತ್ತು ಎಚ್ಚರ,ಪಂಪನ ಕವಿತೆ; ಅನುಸಂಧಾನಕ್ಕೆ ಮಾರ್ಗ, ಆಧುನಿಕ ಕನ್ನಡ ಸಾಹಿತ್ಯಕ್ಕೆ ಹೀಗೆ ಬನ್ನಿ,ಗೋಕುಲ ನಿರ್ಗಮನ, ಈ ಶತಮಾನದ ಹೊಸ ಭಾಷೆ ಸಿನೆಮಾ, ಬಿ.ವಿ.ಕಾರಂತ; ಒಂದು ರಂಗಪ್ರಯೋಗ ಮುಂತಾದವುಗಳ ಜೊತೆಗೆ ಕವಿರಾಜ ಮಾರ್ಗವು ನಿರ್ಮಿಸಿದ ಕನ್ನಡ ಜಗತ್ತು ಎನ್ನುವ ಬರಹ ನನ್ನ ಅರಿವಿನ ಪರಿಧಿಯನ್ನ ವಿಸ್ತರಿಸಿದೆ. ಗ್ರಾಂಥಿಕವೆನ್ನಿಸದ, ಸರಳವಾದ ರೀತಿಯಲ್ಲಿ ನಿರೂಪಿತವಾದ ಈ ಬರಹಗಳು ಪೂರ್ಣ ತೆಕ್ಕೆಗೆ ಸಿಗದಿದ್ದರೂ ಮತ್ತೆ ಮತ್ತೆ ಓದಲು ಹಚ್ಚುತ್ತಿದೆ. ಸುಬ್ಬಣ್ಣನವರ ಒಳಗಿನ ವಿದ್ವತ್, ಅಧ್ಯಯನ, ನಿರೂಪಣೆಯ ಕ್ರಮ ಓದಿದಾಗ ಲಭ್ಯವಾಗುತ್ತದೆ.
ಕೇವಲ ಸಿನೆಮಾ, ನಾಟಕಗಳ ಬಗ್ಗೆ ಮಾತ್ರ ಸುಬ್ಬಣ್ಣನವರ ಆಸಕ್ತಿಯಿರಲಿಲ್ಲ. ಯಕ್ಷಗಾನ ಮತ್ತು ತಾಳಮದ್ದಳೆ ಅವರ ಆಸಕ್ತಿಯ ಕಲೆಗಳಾಗಿದ್ದನ್ನ ನಾವು ಗುರುತಿಸಬಹುದು. ಮಹಾಬಲ ಹೆಗಡೆ, ಶಂಭು ಹೆಗಡೆ, ದಕ್ಷಿಣ ಕನ್ನಡದ ಹಲವು ಕಲಾವಿದರನ್ನ ಕರೆದು ಯಕ್ಷಗಾನದ ಕುರಿತಾಗಿ ವಿಚಾರ ಸಂಕಿರಣ ನಡೆಸಿದ್ದುದನ್ನ ಕೇಳಿದ್ದೇನೆ. ಒಂದೆರಡು ಬಾರಿ ಪ್ರೇಕ್ಷಕನಾಗಿ ಭಾಗವಹಿಸಿದ್ದೇನೆ. ಯಕ್ಷಗಾನದ ಬೆಳವಣಿಗೆ ಮತ್ತು ಸುಧಾರಣೆಯ ಕುರಿತಂತೆ ಸುಬ್ಬಣ್ಣನವರ ಚಿಂತನೆಗಳನ್ನ ಯಕ್ಷಗಾನ ಕಲಾವಿದರೂ ಒಪ್ಪಿಕೊಳ್ಳುತ್ತಿದ್ದರು.
ನೀನಾಸಂನಲ್ಲಿ ಜನಸ್ಪಂದನ ಯೋಜನೆ ಆರಂಭವಾಗಿ ರಾಜ್ಯದ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಸಿನೆಮಾಗಳ ಪ್ರದರ್ಶನಕ್ಕೆ ಏರ್ಪಾಟಾಗಿತ್ತು. ಸುಬ್ಬಣ್ಣ ನನ್ನ ಬಳಿ ನಿಮ್ಮ ತಾಲೂಕಿನಲ್ಲಿ ಸಿನೆಮಾ ಪ್ರದರ್ಶನ ಮಾಡಲು ಸಾಧ್ಯವೇ? ಅಂದರು. ಪ್ರಯತ್ನ ಮಾಡ್ತೇನೆ ಅಂದವನು ಇಟಗಿ ಮತ್ತು ಸಿದ್ದಾಪುರದಲ್ಲಿ ಏರ್ಪಾಟು ಮಾಡಿದೆ. ಸಂಘ,ಸಂಸ್ಥೆಗಳ, ಸಾರ್ವಜನಿಕರ ಸಹಕಾರವೂ ಸಿಕ್ಕಿತ್ತು. ಸಿದ್ದಾಪುರದಲ್ಲಿ ಮೂರು ದಿನದ ಪ್ರದರ್ಶನ( ಈ ಬಗ್ಗೆ ಗಿರೀಶ್ ಕಾಸರವಳ್ಳಿಯವರ ಬಗ್ಗೆ ಬರೆಯುವಾಗ ವಿವರಿಸಿದ್ದೆ). ಎರಡು ದಿನವೂ ಚೂರು,ಪಾರು ನೋಡಿದ್ದು ಬಿಟ್ಟರೆ ಯಾವ ಸಿನೆಮಾನೂ ಪೂರ್ತಿ ನೋಡಲಾಗಿರಲಿಲ್ಲ. ಅವೆಲ್ಲವೂ ಮೊದಲೇ ಹೆಗ್ಗೋಡಿನಲ್ಲಿ ನೋಡಿದ್ದೆ. ಅವತ್ತು ಏನೇ ಆಗಲಿ ಎಂದು ಹಠಹಿಡಿದು ಮುಂದುಗಡೆಯೇ ಕೂತು ಸತ್ಯಜೀತ್ ರೇ ಅವರ ಪಥೇರ್‍ಪಾಂಚಾಲಿ ನೋಡಿದೆ. ನೋಡನೋಡುತ್ತಿದ್ದಂತೇ ಅಳು ಬಂದುಬಿಟ್ಟಿತ್ತು. ಸುಮ್ಮನೆ ಆ ಕತ್ತಲೆ ಮೂಲೆಯಲ್ಲಿ ಕುಸುಕುಸು ಅತ್ತುಬಿಟ್ಟೆ. ಸಂಘಟಕರಾದವರಿಗೆ ಒಂದಿಷ್ಟು ಜವಾಬ್ದಾರಿ ಇರುತ್ತವಲ್ಲ. ಮಧ್ಯದಲ್ಲಿ ಬರುವ ವಿರಾಮದಲ್ಲಿ ಸುತ್ತಲಿನ ಪರಿಸ್ಥಿತಿ ಹೇಗಿದೆ ಎಂದು ನೋಡಲು ಹೋದೆ. ಕುರ್ಚಿ ಸಾಲಿನ ಹಿಂದೆ ನಿಂತ ಜನಸಮೂಹದ ಮಧ್ಯೆ ಒಂದು ಕಪ್ಪನೆಯ ಲಾಂಗ್‍ಕೋಟ್ ತೊಟ್ಟ ವ್ಯಕ್ತಿಯ ಹಿಂಭಾಗ ಕಂಡಿತು! ಯಾರೋ ಕರಿಗಂಬಳಿ ಹಾಕಿಕೊಂಡು ಬಂದಂತಿತ್ತು. ನಿಜಕ್ಕೂ ಬೆಚ್ಚಿಬಿದ್ದೆ. ಸೀದಾ ಹೋಗಿ ನೋಡಿದರೆ ಸುಬ್ಬಣ್ಣ !. ಅಚ್ಚರಿಯಿಂದ ಅವರನ್ನ ಮಾತನಾಡಿಸಿದರೆ ‘ ಸುಮ್ಮನಿರಿ, ಗಟ್ಟಿ ಮಾತನಾಡಬೇಡಿ, ನಾನು ಇನ್ನರ್ಧ ಗಂಟೆ ಇದ್ದು ದಾಂಡೇಲಿ ಬಸ್ಸಿಗೆ ಹೋಗ್ತೀನಿ. ಒಳ್ಳೆದಾಗಿ ಮಾಡೀದೀರಾ, ಪ್ರೇಕ್ಷಕರು ಚೆನ್ನಾಗಿದಾರೆ. ನಿಮ್ಮ ಕೆಲ್ಸ ನೋಡಿ’ ಅಂದರು.
ಆ ಲಾಂಗ್ ಕೋಟ್ ಆಗ ಇಂಗ್ಲೆಂಡನಲ್ಲಿ ಸ್ಟಡಿ ಮಾಡುತ್ತಿದ್ದ ಅವರ ಮಗ ಕೆ.ವಿ.ಅಕ್ಷರ ಅಪ್ಪನಿಗೆ ಕೊಟ್ಟದ್ದು ಎಂದು ಸುಬ್ಬಣ್ಣನೇ ನಂತರ ಹೇಳಿದ್ದರು. ಸುಬ್ಬಣ್ಣ ಎಷ್ಟು ಪ್ರೀತಿ, ಹೆಮ್ಮೆ, ಭಾವುಕತೆಯಿಂದ ಆ ಕೋಟಿನ ಬಗ್ಗೆ ಹೇಳುತ್ತಿದ್ದರು. ಅಕ್ಷರ ತಂದುಕೊಟ್ಟ ನಂತರ ಆ ಕೋಟಿಲ್ಲದೇ ಸುಬ್ಬಣ್ಣನವರನ್ನ ನಾನು ನೋಡಲೇ ಇಲ್ಲ.
ಅಷ್ಟರ ನಂತರ ಸುಬ್ಬಣ್ಣನವರ ಒತ್ತಾಯದ ಮೇರೆಗೆ ಪ್ರಯೋಗ ಎನ್ನುವ ಸಂಘಟನೆ ರೂಪಿಸಿದೆವು( ಈಗಿನ ಪ್ರಯೋಗ ಸ್ವಯಂಸೇವಾ ಸಂಸ್ಥೆ ಅಲ್ಲ). ರಮಾನಂದ ಐನಕೈ ಅಣ್ಣ ಆರ್.ಆರ್.ಹೆಗಡೆ ಐನಕೈ ಅವರು, ನಾನು ಆಗಷ್ಟೇ ಆರಂಭಗೊಂಡ ನೀನಾಸಂ ತಿರುಗಾಟದ ನಾಟಕಗಳ ಪ್ರದರ್ಶನ ಆಯೋಜಿಸುತ್ತಿದ್ದೆವು. ಆರ್.ಆರ್.ಹೆಗಡೆ ಓರ್ವ ಗಟ್ಟಿ ಸಂಘಟಕ ಮತ್ತು ಪ್ರಾಮಾಣಿಕರೂ ಕೂಡ. ನಾವಿಬ್ಬರೂ ಅವರ ರಾಜದೂತ್ ಬೈಕ್ ನಲ್ಲಿ ತಾಲೂಕಿನ ಹಲವೆಡೆಯ ಆಸಕ್ತರ ಬಳಿ ಹೋಗಿ ಟಿಕೇಟ್ ಮಾರುತ್ತಿದ್ದೆವು. ಹೆಚ್ಚು ಒತ್ತಾಯದಲ್ಲೇ ಕೊಡಬೇಕಾಗುತ್ತಿತ್ತು. ಮೂರ್ನಾಲ್ಕು ವರ್ಷ ಹಲವು ನಾಟಕಗಳನ್ನ ಪ್ರದರ್ಶಿಸಿದೆವು.
ಆನಂತರದಲ್ಲಿ ನಾನು ಪತ್ರಕರ್ತನಾಗುವ ಅನಿವಾರ್ಯತೆ ಎದುರಾಯಿತು. ಮೊದಲಿನಂತೆ ಹೆಗ್ಗೋಡಿಗೆ ಪದೇ,ಪದೇ ಹೋಗಲಾಗುತ್ತಿರಲಿಲ್ಲ. ಆದರೂ ಸಂಪರ್ಕ ಬಿಟ್ಟಿರಲಿಲ್ಲ. ಸುಬ್ಬಣ್ಣನವರ ಜೊತೆ ಪತ್ರ ವ್ಯವಹಾರ ಇದ್ದೇ ಇತ್ತು. ಸುಬ್ಬಣ್ಣ ನಿಧನರಾದ ನಂತರ ಅಲ್ಲಿಗೆ ಹೋದಾಗೆಲ್ಲ ಸುಬ್ಬಣ್ಣ ಗಾಢವಾಗಿ ನೆನಪಾಗುತ್ತಿದ್ದರು.
ಹಳ್ಳಿಯಲ್ಲಿ ಕುಳಿತು, ಸಾಹಿತ್ಯ, ಸಾಂಸ್ಕøತಿಕ, ನೃತ್ಯ ಮುಂತಾಗಿ ಸದಭಿರುಚಿಯ ಕಲೆಗಳಿಗೆ ನೀನಾಸಂ ಎನ್ನುವ ಪರ್ಯಾಯ ವಿಶ್ವವಿದ್ಯಾಲಯವನ್ನೇ ರೂಪಿಸಿದ, ವಿಶ್ವದ ದೃಷ್ಟಿಯನ್ನು ಇತ್ತ ನೋಡುವಂತೆ ಶ್ರಮಿಸಿದ ಕೆ.ವಿ.ಸುಬ್ಬಣ್ಣ ಅಜರಾಮರರಾಗೇ ಉಳಿಯುತ್ತಾರೆ ಖಂಡಿತ.
ಗಂಗಾಧರ ಕೊಳಗಿ
( ಕೆ.ವಿ.ಸುಬ್ಬಣ್ಣ ಎಂಬ ರಂಗ ಗಾರುಡಿಗನ ಬಗ್ಗೆ ಇನ್ನೂ ಸಾಕಷ್ಟು ಬರೆಯುವುದಿದ್ದು ಅಪರೂಪದ ಚಿತ್ರದೊಂದಿಗೆ ಮುಂದಿನ ದಿನಗಳಲ್ಲಿ ಲೇಖನಗಳು ಬರಲಿವೆ-ಗಂಗಾಧರ ಕೊಳಗಿ)
ಜುಲೈ26 ರವಿವಾರ ಲಂಕೇಶ ಕುರಿತಾದ ಬರಹ ಇದೇ ಅಂಕಣದಲ್ಲಿ