ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ದೊಡ್ಮನೆ ಸಮೀಪದ ಬಿಳಗೋಡುನಲ್ಲಿ ರವಿವಾರ ನಡೆದ ಮಹಿಳೆಯ ಕೊಲೆ ಪ್ರಕರಣವನ್ನು ಪೊಲೀಸ್‍ರು ಭೇದಿಸಿದ್ದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೊಡ್ಮನೆ ಸಮೀಪದ ಉಡ್ಡಳಿಯ ರಾಜು ತಿಮ್ಮಾ ಗೌಡ(28) ಆರೋಪಿಯಾಗಿದ್ದು ಬಂಗಾರದ ಆಸೆಗಾಗಿ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಅಲ್ಲದೆ ಕೊಲೆಗೆ ಉಪಯೋಗಿಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‍ರು ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ಪ್ರಕಾಶ ಹಾಗೂ ಸ್ಥಳೀಯ ಪೊಲೀಸ್ ರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದು ಆರೋಪಿಯ ಬಂಧನದಿಂದ ತಾಲೂಕಿನ ಜನರು ನಿರಾಳವಾಗಿದ್ದಾರೆ.
ಬೇಟೆಯಾಡಲು ಮೀಸಲು ಅರಣ್ಯ ಪ್ರವೇಶ ಬಂದೂಕು ಸಹಿತ ಆರೋಪಿಗಳ ಬಂಧನ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಹೊನ್ನೆಹದ್ದ ಗ್ರಾಮದ ಮೀಸಲು ಅರಣ್ಯ ಸ.ನಂ.48ರಲ್ಲಿ ಕಾನೂನು ಬಾಹಿರವಾಗಿ ಬಂದೂಕು ಹಿಡಿದು ವನ್ಯಪ್ರಾಣಿಗಳನ್ನು ಭೇಟೆ ಆಡಲು ಪ್ರಯತ್ನಿಸುತ್ತಿರುವಾಗ ಚಂದ್ರಶೇಖರ ಕನ್ನಾ ನಾಯ್ಕ ಕೊಳಗಿಜಡ್ಡಿ ಹಾಗೂ ರಾಮಚಂದ್ರ ಮೂಕಾ ನಾಯ್ಕ ಸಂಪೇಸರ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಬಂಧಿಸಿದ್ದಾರೆ.
ಆರೋಪಿಗಳಿಂದ ಒಂದು ಬಂದೂಕು, ಎರಡು ಹೆಡ್ ಬ್ಯಾಟರಿ ಹಾಗೂ ಬಂದೂಕು ಸಿಡಿಸುವ ಸಾಮಗ್ರಿಗಳಿರುವ ಚೀಲವನ್ನು ವಶಪಡಿಸಿಕೊಂಡಿದ್ದಾರೆ.
ಶಿರಸಿ ಉಪಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ, ಸಿದ್ದಾಪುರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಜೀಜ್ ಅಬ್ದುಲ್ ಶೇಖ್ ಅವರ ಮಾರ್ಗದರ್ಶನದಲ್ಲಿ ಆರ್‍ಎಪ್‍ಒ ಶಿವಾನಂದ ನಿಂಗಾಣಿ, ಉಪವಲಯ ಅರಣ್ಯಾಧಿಕಾರಿ ವಿನಾಯಕ ಪಿ.ಮಡಿವಾಳ, ಸಂತೋಷ ವಿ.ಶೆಟ್ಟಿ, ಅರಣ್ಯ ರಕ್ಷಕ ಮಾರುತಿ ಜಿ.ನಾಯ್ಕ, ಹನುಮಂತಪ್ಪ ಕಿಲಾರಿ, ದೇವಿದಾಸ ಎಸ್.ನಾಯ್ಕ ಹಾಗೂ ಚಾಲಕ ರಾಜು ಟಿ.ನಾಯ್ಕ ಅವರು ದಾಳಿ ನಡೆಸಿದ್ದರು. ಈ ಕುರಿತು ಪ್ರಕರಣ ದಾಖಲಾಗಿದೆ.