ಆದ್ಯೋತ್ ಅಂಕಣದಲ್ಲಿ ಕೊಳಗಿ ನೆನಪು

ಹೊಸ ದಿಕ್ಕಿನ ಹರಿಕಾರ ಪಿ.ಲಂಕೇಶ*****
ನಿಂತ ನೀರಾಗಿದ್ದ ಕನ್ನಡ ಪತ್ರಿಕೋದ್ಯಮಕ್ಕೆ ಹೊಸದಿಕ್ಕು ತೋರಿಸಿದ. ಪಿ.ಲಂಕೇಶರ ಕುರಿತು ಕೊಳಗಿ ನೆನಪು

ನನ್ನವ್ವ ಫಲವತ್ತಾದ ಕಪ್ಪು ನೆಲ, ಅಲ್ಲಿ ಹಸಿರು ಪತ್ರದ ಹರವು,ಬಿಳಿಯ ಹೂ ಹಬ್ಬ.- ಪಿ.ಲಂಕೇಶ್ ( ಅವ್ವ ಕವಿತೆ)
ಅವತ್ತು ಸಣ್ಣದಾದ ಭಯ, ಒಂದಿಷ್ಟು ಹಿಂಜರಿಕೆಯಲ್ಲೇ ಬೆಂಗಳೂರಿನ ಬಸವನಗುಡಿಯ ಗೋವಿಂದಪ್ಪ ರಸ್ತೆಯಲ್ಲಿ ಎರಡೂ ಮಗ್ಗುಲಿನ ಕಟ್ಟಡಗಳನ್ನು,ಅಂಗಡಿಗಳನ್ನು ನೋಡುತ್ತ, ಅಲ್ಲಿರುವ ಬೋರ್ಡಗಳನ್ನು ಓದುತ್ತ ಹೆಜ್ಜೆ ಹಾಕುತ್ತಿದ್ದೆ. ಬೆಳಗಿನ ಹನ್ನೊಂದರ ಹೊತ್ತಿನ ಆ ವೇಳೆಯಲ್ಲಿ ಮುಂದೆ ಹೆಜ್ಜೆ ಹಾಕಿದಷ್ಟೂ ಹಿಂದಕ್ಕೆ ಜಗ್ಗುವ ಮನಸ್ಸನ್ನು ನಿಯಂತ್ರಣಕ್ಕೆ ತರಲು ಒದ್ದಾಡುತ್ತಿದ್ದೆ. ಅಷ್ಟರಲ್ಲೇ ಎದುರಿನಲ್ಲಿ ಕಂಡಿತ್ತು ; ಲಂಕೇಶ್ ಪತ್ರಿಕೆ ಬೋರ್ಡ.
ಗಕ್ಕನೆ ಆ ಕಟ್ಟಡದ ಎದುರು ನಿಂತವನು ಗಮನಿಸಿದೆ. ಪತ್ರಿಕೆಯ ಕಚೇರಿ ಮಹಡಿಯ ಮೇಲಿತ್ತು. ಅಲ್ಲಿಗೆ ಹೋಗುವ ಮೆಟ್ಟಿಲುಗಳ ಈಚೆ ಗೇಟ್ ಇತ್ತು. ಆಗಲೂ ನನ್ನ ಪಲ್ಸ್ ಜೋರಾಗಿಯೇ ಮಿಡುಕುತ್ತಿತ್ತು. ಹೊಳೆಯಲ್ಲೋ, ಕೆರೆಯಲ್ಲೋ, ಸಮುದ್ರದಲ್ಲೋ ನೀರಿನಲ್ಲಿ ತಲೆ ಅದ್ದಿ ಮುಳುಗುವ ಮುನ್ನ ಆಗುತ್ತಲ್ಲ, ಆ ಥರಾ ತಳಮಳವಾಗುತ್ತಿದ್ದರೂ ಏನಾದರಾಗಲಿ ಎಂದು ಗೇಟ್ ಸರಿಸಿಯೇ ಬಿಟ್ಟೆ.
ಗೇಟ್ ದೂಡುತ್ತಲೇ ಮೇಲ್ಗಡೆ ಕತ್ತೆತ್ತಿ, ಆ ಕಚೇರಿಯ ಸಾಕಷ್ಟು ಅಗಲದ ಕಿಡಕಿಯತ್ತ ದೃಷ್ಟಿ ಹಾಯಿಸಿದೆ. ಹೊರಗಿನ ಬಿಸಿಲಿಗಿರಬೇಕು, ಒಳಗಿನ ಆ ಮಸುಕಿನ ಬೆಳಕಿನಲ್ಲೂ ಕನ್ನಡಕದ ಗ್ಲಾಸ್‍ಗಳು ಛಕ್‍ನೆ ಹೊಳೆದವು. ಮುಖ ಕಾಣದಿದ್ದರೂ ಯಾರೋ ಅಲ್ಲಿಂದಲೇ ನನ್ನ ಗಮನಿಸಿದ್ದಾರೆ ಅನ್ನುವದಂತೂ ಸ್ಪಷ್ಟವಾಗಿತ್ತು. ಮೆಟ್ಟಿಲೇರಿ ಹೋಗಿ ಹೊರಗಡೆಯಿದ್ದ ಸೆಕ್ಯೂರಿಟಿ ಮನುಷ್ಯನಿಗೆ ನನ್ನ ವಿವರ ಹೇಳಿದೆ. ಅಲ್ಲಿದ್ದ ಕುರ್ಚಿಯೊಂದರಲ್ಲಿ ಕೂರಲು ತಿಳಿಸಿ, ಆತ ಒಳಗೆ ಹೋದ. ಸ್ವಲ್ಪ ಹೊತ್ತಿನಲ್ಲೇ ಬಂದು ಒಳ ಬರುವಂತೆ ಹೇಳಿದ.
ಒಳಗೆ ಕಾಲಿಟ್ಟರೆ ಅದು ಪತ್ರಿಕಾ ಪ್ರಪಂಚ. ಉದ್ದನೆಯ ಹಜಾರದಲ್ಲಿ ಎರಡೂ ಸಾಲಿನಲ್ಲಿದ್ದ ಮೇಜುಗಳ ಮೇಲೆ ರಾಶಿ ಪೇಪರ್‍ಗಳು, ಹಾಳೆಗಳು. ಹಿಂದುಗಡೆ ಛೇರ್‍ನಲ್ಲಿ ಕೂತ ಉಪ ಸಂಪಾದಕರುಗಳು, ಟೈಪಿಸ್ಟಗಳು. ಅವರೆಲ್ಲ ತಮ್ಮೊಳಗೆ ಏನೇನೋ ಚರ್ಚಿಸುತ್ತ ಕೆಲಸದಲ್ಲಿದ್ದರು. ಎಲ್ಲ ಪತ್ರಿಕೆಗಳ ಕಾರ್ಯಾಲಯದಲ್ಲಿದ್ದಂತೆ ಇದೂ ಜೇನುಗೂಡಿನಂತೆ ಕಲರವಿಸುತ್ತಿತ್ತು.
ಅತ್ತಿತ್ತ ನೋಡುತ್ತ ನಿಂತಂತೆಯೇ ಥಟ್ಟನೆ ಈ ತುದಿಯಲ್ಲಿನ ಕೊಠಡಿಯ ಬಾಗಿಲೊಂದು ತೆರೆದುಕೊಂಡು ಓರ್ವ ವ್ಯಕ್ತಿ ಹೊರಬಂದರು. ಬಿಳಿಯ ಸ್ಯಾಂಡೋ ಬನಿಯನ್, ಬಾದಾಮಿ ಕಲರ್‍ನ ಬರ್ಮುಡಾ ಚೆಡ್ಡಿ ತೊಟ್ಟ ಅವರನ್ನ ನಿಬ್ಬೆರಗಾಗಿ ನೋಡಿದೆ. ಅವರು ಲಂಕೇಶ್! ಕನ್ನಡ ಪತ್ರಿಕಾರಂಗದಲ್ಲಿ ಪ್ರಪ್ರಥಮ ಬಾರಿಗೆ ಹೊಸ ಸಾಧ್ಯತೆಯನ್ನು ರೂಪಿಸಿದ, ಹೊಸ ರಕ್ತ, ಜೀವಧಾತು ತುಂಬಿದ, ನೇರ,ನಿರ್ಭೀಡೆಯ ವಾತಾವರಣವನ್ನು ತಂದ, ಅಕ್ಷರಶ: ಜಾಣ,ಜಾಣೆಯರ ಪತ್ರಿಕೆಯೊಂದನ್ನ ಕಟ್ಟಿಕೊಟ್ಟ ಲಂಕೇಶ್ ಅವರಾಗಿದ್ದರು.
ಅವರನ್ನು ಮೊಟ್ಟಮೊದಲು ನೋಡಿದ್ದು ಸಂಸ್ಕಾರ ಸಿನೆಮಾದಲ್ಲಿ; ನಾರಣಪ್ಪನ ಪಾತ್ರದಲ್ಲಿ, ಮತ್ತು ಪತ್ರಿಕೆಗಳಲ್ಲಿ. ನೇರವಾಗಿ ದೂರದಿಂದ ನೋಡಿದ್ದು ಮೈಸೂರಿನ ವಿಶ್ವ ಕನ್ನಡ ಸಮ್ಮೇಳನದಲ್ಲಿ. ಇಷ್ಟೊಂದು ಸಮೀಪದಿಂದ ನೋಡುತ್ತಿರುವದು ಅದೇ ಮೊದಲು. ಅಷ್ಟರಲ್ಲಾಗಲೇ, ಅವರ ಖ್ಯಾತಿ, ಅಪಖ್ಯಾತಿಗಳನ್ನ ಸಾಕಷ್ಟು ತಿಳಿದಿದ್ದೆ. ಅವರೊಬ್ಬ ಸಾಹಿತಿಗಳಾಗಿ ನನ್ನನ್ನ ಆಕರ್ಷಿಸಿದ್ದರು.

ಅವರದೇ ನಿರ್ದೇಶನದ ಎಲ್ಲಿಂದಲೋ ಬಂದವರು ಸಿನೆಮಾವನ್ನ ನಮ್ಮೂರ ಟಾಕೀಸಿನಲ್ಲಿ ನೋಡಿದ್ದೆ. ಆ ಸಿನೆಮಾಕ್ಕೆ ಬಳಸಿಕೊಂಡಿದ್ದ ಅವರದೇ ಕವಿತೆಗಳಾದ ‘ಎಲ್ಲಿದ್ದೆ ಇಲ್ಲಿತಂಕ, ಎಲ್ಲಿಂದ ಬಂದ್ಯವ್ವ ಹಾಗೂ ಕೆಂಪಾದವೋ, ಎಲ್ಲ ಕೆಂಪಾದವೋ’ ಹಾಡುಗಳು ಆಗಾಗ್ಗೆ ಕನ್ನಡದ ಆಕಾಶವಾಣಿಯಲ್ಲಿ ಕೇಳಿ, ಕೇಳಿ ಉರು ಹೊಡೆದುಕೊಂಡಿದ್ದೆ. ಉಮಾಪತಿಯ ಸ್ಕಾಲರ್‍ಶಿಪ್ ಯಾತ್ರೆ, ನಾನಲ್ಲ, ಕೆರೆಯ ನೀರನು ಕೆರೆಗೆ ಚೆಲ್ಲಿ ಸಂಕಲನಗಳ ಕಥೆಗಳನ್ನ, ಸಂಕ್ರಾಂತಿ, ಕ್ರಾಂತಿ ಬಂತು ಕ್ರಾಂತಿ, ಗುಣಮುಖ ನಾಟಕಗಳನ್ನ, ಕೆಲವು ಕವಿತೆಗಳನ್ನ ಓದಿದ್ದೆ.( ನನ್ನ ದುರಾದೃಷ್ಟಕ್ಕೆ ಆ ಮೊದಲೇ ಪ್ರಕಟವಾಗಿದ್ದ ಕನ್ನಡದ ಪ್ರಮುಖ ಕಾದಂಬರಿಗಳಲ್ಲೊಂದಾದ ಅವರ ಮುಸ್ಸಂಜೆಯ ಕಥಾ ಪ್ರಸಂಗ ಕಾದಂಬರಿ ಓದಿದ್ದು ಆ ನಂತರವೇ. ಆಗ ನನಗೆ ಅದು ಸಿಕ್ಕಿರಲೇ ಇಲ್ಲ) ಓರ್ವ ಬರೆಹಗಾರರಾಗಿ ಮೊದಲೇ ಸೆಳೆದಿದ್ದ ಲಂಕೇಶ್ ಪತ್ರಿಕೆಗಳಲ್ಲಿನ ತಮ್ಮ ಬರೆಹಗಳ ಮೂಲಕ ಇನ್ನಷ್ಟು ಆಕರ್ಷಿಸಿದ್ದರು. ಸಾಕಷ್ಟು ದಢೂತಿ ದೇಹಾಕೃತಿಯ, ಗುಂಡಾದ ದಪ್ಪನೆಯ ಮುಖದ, ಬಾಗಿದ ಸಂಪಿಗೆ ಹೂನಂಥ ಮೂಗಿನ, ಸಮ್ಮೋಹನದ ಕಾಂತಿಯಿರಬಹುದಾದ ಕಣ್ಣುಗಳ ಮುಂದಿನ ಕನ್ನಡಕದ ಲಂಕೇಶ್‍ರನ್ನು ಆ ವೇಷದಲ್ಲಿ ಕಾಣಬಹುದೆಂದು ಊಹಿಸಿರಲೇ ಇಲ್ಲ. ಅಷ್ಟೊಂದು ಹೆಸರಾಗಿದ್ದ ಪತ್ರಿಕೆಯ, ಅಷ್ಟೊಂದು ಪ್ರಸಿದ್ಧವಾದ ಲೇಖಕ, ಸಂಪಾದಕ ಇಷ್ಟೊಂದು ಸರಳವಾದ ಉಡುಗೆಯಲ್ಲಿ ಇರಬಲ್ಲ ಎನ್ನುವದನ್ನ ಅರಗಿಸಿಕೊಳ್ಳಲಾಗಲಿಲ್ಲ, ತಬ್ಬಿಬ್ಬಾಗಿ ಬಿಟ್ಟಿದ್ದೆ. ಆ ತಬ್ಬಿಬ್ಬಿನಲ್ಲೂ ಕಿಟಕಿಯಲ್ಲಿ ಹೊಳೆದ ಕನ್ನಡಕದ ಗ್ಲಾಸು ಲಂಕೇಶರದ್ದೇ ಎಂದು ಖಾತ್ರಿಪಡಿಸಿಕೊಂಡಿದ್ದೆ. ಕೈಯಲ್ಲಿ ಒಂದಿಷ್ಟು ಬರೆದ ಹಾಳೆಗಳನ್ನು ತೆಗೆದುಕೊಂಡು ನೇರವಾಗಿ ಆ ತುದಿಯಲ್ಲಿ ಕುಳಿತಿದ್ದ ಸಹಸಂಪಾದಕನ ಬಳಿ ಹೋಗಿ, ಅವನ್ನು ಕೊಟ್ಟು ಏನೋ ವಿವರಿಸತೊಡಗಿದರು.
ಅವರು ವಾಪಸ್ ಬರುವ ತನಕ ನಾನೊಂದಿಷ್ಟು ಪ್ಲಾಶ್‍ಬ್ಯಾಕ್‍ಗೆ ಹೋಗಿ ಬರಲು ಅವಕಾಶ ದೊರಕಿದಂತಾಯಿತು.
ಆಗ ನಮ್ಮೂರು ಸಿದ್ದಾಪುರದಲ್ಲಿ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆಗಳಿಗೆಲ್ಲ ಓರ್ವರೇ ವಿತರಕರು.
ಹೇರ್ಲೇಕರ್ ಎಂದೇ ಪ್ರಸಿದ್ಧರಾಗಿದ್ದ ಅವರಲ್ಲಿ ಕೆಲವೊಂದು ಪುಸ್ತಕಗಳೂ ದೊರೆಯುತ್ತಿದ್ದವು. ಅವರು ತುಂಬ ವ್ಯವಸ್ಥಿತವಾದ, ಅಚ್ಚುಕಟ್ಟಾದ ವ್ಯವಹಾರಸ್ಥರೆಂದು ಹಿರಿಯರು ಹೇಳುತ್ತಿದ್ದರು. ಗಂಭೀರ ವ್ಯಕ್ತಿತ್ವದ ಹೇರ್ಲೇಕರರ ಬಳಿ ತಿಂಗಳಿಗೊಮ್ಮೆ ಚಂದಮಾಮ, ಬಾಲಮಿತ್ರ ಕೊಂಡುಕೊಳ್ಳಲು ಹೋಗಲೂ ಹೆದರುತ್ತಿದ್ದೆವು. ಆಗ ಸಂಯುಕ್ತ ಕರ್ನಾಟಕದ ಭರಾಟೆ ಇದ್ದ ಸಮಯ. ಪ್ರಜಾವಾಣಿ ಮಧ್ಯಾಹ್ನ 11-12ರ ಸುಮಾರಿಗೆ ವಿತರಣೆಯಾಗುತ್ತಿತ್ತು. ಸಂ.ಕ. ಹುಬ್ಬಳ್ಳಿಯಲ್ಲಿ ಪ್ರಿಂಟ್ ಆಗುತ್ತಿದ್ದ ಕಾರಣಕ್ಕೆ ಬೇಗ ದೊರೆಯುತ್ತಿತ್ತೇನೋ? ಹೈಸ್ಕೂಲಿಗೆ ಹೋಗುವ ಆ ದಿನಗಳಲ್ಲಿ ಬರುವ, ಹೋಗುವಾಗ ಬಸ್ ಸ್ಟಾಂಡ್ ಎದುರಿನಲ್ಲಿದ್ದ ಅವರ ಅಂಗಡಿಯತ್ತ ಕಣ್ಣು ಹಾಯಿಸುವದು ಮಾಮೂಲಿಯಾಗಿತ್ತು.
ಅಂಥ ಒಂದು ದಿನ ಅವರ ಅಂಗಡಿಯಲ್ಲಿ ತೂಗು ಹಾಕಿದ ಆವರೆಗೆ ನೋಡಿದ ಪತ್ರಿಕೆಗಳಿಗಿಂತ ಭಿನ್ನವಾದ, ಮುಖಪುಟದಲ್ಲಿ ದೊಡ್ಡ,ದೊಡ್ಡ ಶೀರ್ಷಿಕೆಗಳ ಜೊತೆಗೆ ಚಿತ್ರಗಳಿದ್ದ ಪತ್ರಿಕೆ ಕಣ್ಣಿಗೆ ಬಿತ್ತು. ಹತ್ತಿರ ಹೋಗಿ ಗಮನಿಸುವ ಅಂದರೆ ಮಕ್ಕಳು ಓದುವ ಚಂದಮಾಮ, ಬಾಲಮಿತ್ರ ಕೊಳ್ಳಲು ಹೋದರೇ ಹೆದರಿಸುವ ಹೇರ್ಲೇಕರ್ ಅಜ್ಜ ಇವನ್ನು ನೋಡಲು ಹೋದರೆ ಏನು ಮಾಡಬಹುದು? ಎನ್ನುವ ಅಂಜಿಕೆಯಲ್ಲೇ ಅವರಿಗೆ ಕಾಣದಂತೆ ಪಕ್ಕದ ಅಂಗಡಿಯೆದುರು ನಿಂತು ಅದನ್ನು ಗಮನಿಸಿದೆ. ಕಪ್ಪು,ಬಿಳುಪು ಮುದ್ರಣದ ಆ ಪತ್ರಿಕೆಯ ಮೇಲ್ಗಡೆ ದೊಡ್ಡದಾಗಿ ಲಂಕೇಶ ಪತ್ರಿಕೆ ಎನ್ನುವ ಶೀರ್ಷಿಕೆಯಿತ್ತು.
ಕೆಲಗಡೆ ಗುಂ, ಬಂ. ಮುಂತಾದ ಕಾರ್ಟೂನ್ ಚಿತ್ರಗಳಿದ್ದವು. ಇದೇನಪ್ಪಾ ಈ ಹೆಸರು! ಈವರೆಗೂ ಕೇಳಿರದ ಲಂಕೇಶ್ ಎನ್ನುವ ಹೊಸ ಹೆಸರು ಎಂದು ಅಚ್ಚರಿಪಟ್ಟೆ. ನಂತರದಲ್ಲಿ ಸಂಬಂಧಿಕರ ಮನೆಯಲ್ಲಿ ಅದು ಓದಲು ಸಿಕ್ಕಿತು. ಅದರ ಹಿಂದಿನ ನಾಲ್ಕಾರು ವಾರದ ಪತ್ರಿಕೆಗಳೂ ಸಿಕ್ಕವು. ಆವರೆಗೆ ಓದಿದ ಪತ್ರಿಕೆಗಳಿಗಿಂತ ಬೇರೆಯದೇ ಆದ, ಭಾಷೆ, ಶೈಲಿ, ಚಿತ್ರ ಮುಂತಾದವುಗಳಿಂದ ಸಂಪೂರ್ಣ ಭಿನ್ನವಾದ ಅದು ಏಕೋ,ಏನೋ ಸೆಳೆದುಬಿಟ್ಟಿತ್ತು. ಹೈಸ್ಕೂಲಿಗೆ ಹೋಗುತ್ತಿದ್ದ ನನಗೆ ರಾಜಕೀಯ, ಸಾಹಿತ್ಯ, ರಾಜಕಾರಣಿಗಳು ಮುಂತಾದ ಇಂಥದ್ದರ ಬಗ್ಗೆ ಆಸಕ್ತಿ, ಕುತೂಹಲ ಇತ್ತೇ ಹೊರತು ನಯಾಪೈಸೆ ಜ್ಞಾನವಿರಲಿಲ್ಲ. ನಮ್ಮದೇನಿದ್ದರೂ ಅದು,ಇದು ತಿಂಡಿ ತಿನ್ನಲು ದುಡ್ಡು ಹೊಂದಿಸುವದು, ಕ್ಲಾಸ್‍ಗೆ ಚಕ್ಕರ್ ಹೊಡೆದು ಸಿನೆಮಾ ನೋಡುವದು, ಹುಡುಗಿಯರಿಗೆ ಪ್ರೇಮಪತ್ರ ಬರೆದು, ಅವರಿಗೆ ಅದನ್ನ ಕೊಡುವ ಧೈರ್ಯವಿಲ್ಲದೇ ಕಿಸೆಯಲ್ಲಿಟ್ಟುಕೊಂಡು ಅಡ್ಡಾಡುವದು ಮುಂತಾದ ಉಡಾಳತನವಷ್ಟೇ.
ಆದರೆ ಲಂಕೇಶ ಪತ್ರಿಕೆಯನ್ನು ಓದುತ್ತಿದ್ದ, ರಾಜಕಾರಣದ ಬಗ್ಗೆ ಆಸಕ್ತಿಯಿದ್ದ ಹಿರಿಯರ ಮಾತುಗಳಿಂದ ಲಂಕೇಶ ಎನ್ನುವವರೇ ತಮ್ಮ ಹೆಸರಿನ ಪತ್ರಿಕೆಯನ್ನು ತರುತ್ತಿದ್ದಾರೆಂತಲೂ, ರಾಜಕೀಯದವರ ಹುಳುಕು ಹೊರತೆಗೆಯುತ್ತಿದ್ದಾನೆಂದೂ ಅವರವರಲ್ಲೇ ಮಾತಾಡಿಕೊಳ್ಳುವದನ್ನು ಕೇಳುತ್ತಿದ್ದೆ. ಸದ್ಯದಲ್ಲೇ ಅವನು ಆಪತ್ತಿಗೆ ಸಿಲುಕಿಕೊಳ್ಳುವದು ಗ್ಯಾರಂಟಿ ಎಂದೆಲ್ಲ ಹೇಳಿ ಒಂಥರಾ ದಿಗಿಲನ್ನೂ ಹುಟ್ಟಿಸಿದ್ದರು.

ಸಿದ್ದಾಪುರ ಮೊದಲಿನಿಂದಲೂ ರಾಜಕೀಯವಾಗಿ, ಸಾಹಿತ್ಯಿಕವಾಗಿ ಹೆಚ್ಚೇ ಅನ್ನಬಹುದಾದಷ್ಟು ತೀವ್ರಗಾಮಿ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿತ್ತೆಂದು ಕಾಣುತ್ತದೆ. ಯಾವುದೇ ಸಂಗತಿಯನ್ನು ನಿಂತಲ್ಲಿ, ಕೂತಲ್ಲಿ, ನಾಲ್ಕು ಮಂದಿ ಸೇರಿದಲ್ಲಿ ಬಹಿರಂಗವಾಗೇ ಚರ್ಚಿಸುತ್ತಿದ್ದರು. ಅದರಲ್ಲಂತೂ ರಾಜಕಾರಣವಾದರೆ ಮುಗಿದೇಹೋಯಿತು. ವಾಖ್ಯಾನ, ಉಪ ವ್ಯಾಖ್ಯಾನ, ಅಪವ್ಯಾಖ್ಯಾನ ಎಂದೆಲ್ಲ ಸೇರಿ ಬಿಸಿ,ಬಿಸಿ ವಾತಾವರಣವೇ ಆಗುತ್ತಿತ್ತು. ನಮಗೂ ಹಿರಿಯರು ಪರಸ್ಪರ ಆಡಿಕೊಳ್ಳುತ್ತಿದ್ದ ಮಾತುಗಳಿಂದ ಅವೆಲ್ಲವುದರ ನಿಖರ ಮಾಹಿತಿ ಸಿಗದಿದ್ದರೂ ನಡೆಯುತ್ತಿರುವ ವಿದ್ಯಮಾನದ ಒಂದಿಷ್ಟು ಮಾಹಿತಿ ಲಭ್ಯವಾಗುತ್ತಿತ್ತು. ಅದೂ ಅಂಥ ವಿಷಯಗಳಲ್ಲಿ ಆಸಕ್ತಿಯಿದ್ದವರಿಗಾದರೆ.
ಸರಿಯೋ, ತಪ್ಪೋ ಗೊತ್ತಿಲ್ಲ, ನನ್ನ ಅನಿಸಿಕೆ- ಯಾವುದೇ ವ್ಯಕ್ತಿಗೆ ಬಾಲ್ಯದಲ್ಲಿ ಓದಿದ್ದಕ್ಕಿಂತ ಹೆಚ್ಚು ಸ್ಪುಟವಾಗಿ ಸ್ಮರಣೆಯಲ್ಲಿರುವದು ನೋಡಿದ ದೃಶ್ಯಗಳು, ಕೇಳಿದ ಸಂಗತಿಗಳು. ಆಗ ರಾಜಕಾರಣ ನಮ್ಮಲ್ಲಿ ಬಿಸಿ,ಬಿಸಿಯಾಗಿತ್ತು. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ಆಗಿನ ಕಾಂಗ್ರೆಸ್ ಪಕ್ಷದಷ್ಟೇ ನೇಗಿಲು ಹೊತ್ತ ರೈತನ ಜನತಾ ಪಕ್ಷವೂ ಪ್ರಬಲವಾಗಿತ್ತು. ಸ್ಥಳೀಯರಾಗಿದ್ದ ರಾಮಕೃಷ್ಣ ಹೆಗಡೆಯವರಷ್ಟೇ ವರ್ಚಸ್ಸು ಹೊಂದಿದ್ದ ಪಕ್ಕದ ತಾಲೂಕಿನ ಬಂಗಾರಪ್ಪ ಹೆಗಡೆಯವರಷ್ಟೇ ಅಭಿಮಾನಿ, ಬೆಂಬಲಿUರನ್ನ ಹೊಂದಿದ್ದರು. ಈಗಿನಂತೆ ಪಕ್ಷವನ್ನ, ರಾಜಕಾರಣವನ್ನ ಜಾತಿಯ ಮುಖೇನ ಪರಿಗಣಿಸದೇ ಇದ್ದ ಕಾಲ. ಎಲ್ಲ ಪಕ್ಷಗಳಲ್ಲೂ ಎಲ್ಲ ಜಾತಿ,ಜನಾಂಗದವರಿದ್ದರು. ಹೈಸ್ಕೂಲಿಗೆ ಹೋಗುತ್ತಿದ್ದ ನಮಗೆ ಅಲ್ಲೇ ಪಕ್ಕದಲ್ಲಿದ್ದ ಸಿ.ಆರ್.ಹಾಲ್‍ನಲ್ಲಿ Àಜರುಗುತ್ತಿದ್ದ ರಾಜಕೀಯ ಸಭೆಗಳನ್ನು ಹತ್ತಿರದಿಂದ ನೋಡಲು ಅವಕಾಶ ಒದಗುತ್ತಿತ್ತು.
ಒಂದು ಸಂದರ್ಭವನ್ನ ಇಲ್ಲೇ ನೆನಪಿಸಿಕೊಳ್ಳುತ್ತೇನೆ. ತುರ್ತು ಪರಿಸ್ಥಿತಿ ಮುಗಿದ ನಂತರದ ದಿನಗಳಲ್ಲಿ ರಾಮಕೃಷ್ಣ ಹೆಗಡೆ ಒಮ್ಮೆ ಸಿದ್ದಾಪುರಕ್ಕೆ ಬಂದಿದ್ದರು. ಅವರ ಬಹಿರಂಗ ಸಭೆ ಹೈಸ್ಕೂಲ್ ಪಕ್ಕದಲ್ಲೇ ಇದ್ದ ಸಿ.ಆರ್.ಹಾಲ್‍ನಲ್ಲಿ ಮಧ್ಯಾಹ್ನ 2 ಗಂಟೆಗೆ ಎಂದು ಡಂಗುರ ಸಾರಲಾಗಿತ್ತು. ನನಗೆ ಹೆಗಡೆಯವರನ್ನ ಹತ್ತಿರದಿಂದ ನೋಡಬೇಕೆನ್ನುವ ಹಂಬಲ. ಹೈಸ್ಕೂಲಿನ ಮಧ್ಯಾಹ್ನದ ಕ್ಲಾಸ್ ಶುರುವಾಗುವದು 2.30ಕ್ಕೆ. ಸುಮಾರು 2.20ರವರೆಗೂ ಹಾಲ್ ಸುತ್ತಮುತ್ತ ಠಳಾಯಿಸುತ್ತಿದ್ದೆ. ಅಲ್ಲಿ ಜನ ಸಂದಣಿ ಹೆಚ್ಚುತ್ತಲೇ ಇತ್ತು. ನನಗೋ ಹೆಗಡೆಯವರನ್ನ ನೋಡಿಕೊಂಡು ಹೋಗಿಬಿಡುವಾ ಅಂತ. ಎಷ್ಟೊತ್ತಾದರೂ ಬರಲಿಲ್ಲ. ಸೀದಾ ಕ್ಲಾಸಿಗೆ ಓಡಿ, ಪುಸ್ತಕ,ಪಟ್ಟಿಯ ಚೀಲ ಹೆಗಲಿಗೇರಿಸಿ ವಾಪಸ್ಸು ಓಡಿಬಂದೆ. ಆಗ ನಮಗೆ ಎಸ್.ಜಿ.ಭಟ್ಟ ಕೆಕ್ಕಾರ ಅಂತ ಕ್ಲಾಸ್ ಟೀಚರ್, ಗ್ರಹಚಾರಕ್ಕೆ ಆ ಮಧ್ಯಾಹ್ನದ ಮೊದಲ ಪಿರೀಯಡ್ ಅವರದ್ದೇ ಇತ್ತು. ಚಕ್ಕರ್ ಹಾಕಿದ್ದಕ್ಕೆ ಏಟು ತಿನ್ನುವದಂತೂ ಗ್ಯಾರಂಟಿ. ಆ ಪ್ರಸಾದ ತಿಂಗಳಿನಲ್ಲಿ ಹತ್ತಾರು ಬಾರಿ ಹೇಗೂ ದೊರೆಯುತ್ತದೆ, ಅದರಲ್ಲಿ ಇದೂ ಒಂದು. ಆದರೆ ಹೆಗಡೆಯವರು ಕಾಣಲು ಸಿಗಬೇಕಲ್ಲ?- ಮತ್ತೊಂದು ತೀವ್ರವಾದ ವಾಂಛೆ ಮನಸ್ಸಿನಲ್ಲಿತ್ತು. ಹೇಗಾದರೂ ಹೆಗಡೆಯವರ ಕೈ ಕುಲುಕಬೇಕು ಎನ್ನುವದು. ಆ ವಯಸ್ಸಿನÀ ಆಸೆ, ಕನಸುಗಳೆಲ್ಲ ಇಂಥವೇ ಅಲ್ಲವೇ? ನನಗಂತೂ ಇಂಥ ಆಶೆಗಳೇ ಹೆಚ್ಚಿದ್ದವು. ಗಟ್ಟಿ ಧೈರ್ಯ ಮಾಡಿ ಸಿ.ಆರ್.ಹಾಲ್ ಒಳಕ್ಕೆ ಹೋಗಲು ಪ್ರಯತ್ನಿಸಿದೆ. ಅಲ್ಲಿದ್ದವರೆಲ್ಲ ವಯಸ್ಕರು, ದೊಡ್ಡವರು. ನಾನು ಚುಲ್ಟಾರಿ. ಮೂರ್ನಾಲ್ಕು ನೂರು ಜನ ಹಿಡಿಸಬಹುದಾದ ಹಾಲ್ ತುಂಬಿ ಹೊರಗೂ ಜನ. ಬಾಗಿಲೊಳಗೆ ಹೊಕ್ಕಲು ಸಾಧ್ಯವಾಗದೇ ಊರ ಹತ್ತಿರದ, ಪರಿಚಯವಿದ್ದ ಪಕ್ಷದ ಕಾರ್ಯಕರ್ತರೊಬ್ಬರ ಬಳಿ ನನ್ನ ಕೋರಿಕೆ ಇಟ್ಟಾಗ ‘ನಿನ್ನಂಥ ಹುಡ್ರಿಗೆ ಇಲ್ಲೇನು ಕೆಲಸ, ಹೆಗಡೆರ ಹತ್ರ ಹೋಗೋದಲ್ಲ, ನೋಡದೂ ಕಷ್ಟ’ ಎಂದು ತಿರಸ್ಕರಿಸಿಬಿಟ್ಟರು. ಸಣ್ಣ ಅವಮಾನವಾದರೂ ಹಠ ಬಿಡದೇ ನಿಧಾನಕ್ಕೆ ಹಾಲ್‍ನೊಳಕ್ಕೆ ಸೇರಿದ್ದ ಹಿರಿಯರ ಕಾಲ ಬುಡದಲ್ಲಿ ನುಸುಳುತ್ತ ಅಂತೂ, ಇಂತೂ ರಾ.ಕೃ.ಹೆಗಡೆಯವರು ಬರುವಷ್ಟರಲ್ಲಿ ವೇದಿಕೆಯ ಸಮೀಪ ಹೋಗಿ ತಲುಪಿದ್ದೆ. ಮಜಾ ಎಂದರೆ ನಾನು ಅವರ ಕಾಲ ಸಂದಿನಲ್ಲಿ ನುಸುಳಿ ಬರುವದು ಅವರಿಗೆ ಗೊತ್ತಾದರೂ ಬಗ್ಗಿ ನೋಡುವಂತಿರಲಿಲ್ಲ. ಎಲ್ಲರೂ ನಿಂತೇ ಇದ್ದಿದ್ದಕ್ಕೆ ನಾನು ಯಾರಿಗೂ ಕಾಣುತ್ತಲೇ ಇರಲಿಲ್ಲ.
ಹೆಗಡೆಯವರು ಬಂದರು. ನೂರಾರು ಮಂದಿ ಗಣ್ಯರು ಅವರಿಗೆ ಹೂಮಾಲೆ ಹಾಕಲು, ವಿಷ್ ಮಾಡಲು ವೇದಿಕೆಯತ್ತ ಹೋದಂತೆ ನಾನು ಮೆಲ್ಲಗೆ ಅವರ ಜೊತೆ ಸರಿದೆ.ನೋಡಿದವರು ನಾನು ಆ ಗಣ್ಯರಲ್ಲಿ ಯಾರದ್ದೋ ಮಗನಿರಬೇಕು ಎಂದು ಭಾವಿಸಿರಬೇಕು. ಹಾಗೇ ಹೋಗಿ ಹೆಗಡೆಯವರ ಮುಂದೆ ನಿಂತು ಕೈ ಚಾಚಿದೆ. ಹೆಗಡೆಯವರು ಬಗ್ಗಿ ನೋಡಿದರು. ಕುಳ್ಳ ಹುಡುಗ ನನ್ನನ್ನ ಆ ಹಿರಿಯರ ದಂಡಿನ ಮಧ್ಯೆ ಕಂಡಿದ್ದಕ್ಕೆ ಅವರಿಗೆ ಅಚ್ಚರಿಯಾದದ್ದು ಅವರ ಮುಖಭಾವದಲ್ಲೇ ಕಾಣುತ್ತಿತ್ತು. ಖುಷಿಯಿಂದಲೇ ಕೈ ಚಾಚಿ ಹಸ್ತಲಾಘವ ಮಾಡಿದವರು ‘ಎಲ್ಲಾಯ್ತು?’ ಎಂದರು. ನನ್ನ ಪ್ರವರ ಹೇಳಿದೆ. (ತುಂಬಾ ಹಿಂದೆ, ಶಾಸಕರಾಗುವದಕ್ಕಿಂತ ಮೊದಲು ನಮ್ಮೂರಿಗೆ ಪಕ್ಷದ sಸಂಘಟನೆ ನಡೆಸಲು ಬಂದಾಗ ನಮ್ಮ ಮನೆಯಲ್ಲೇ ಆ ಸಭೆ ನಡೆಯುತ್ತಿತ್ತಂತೆ. ಅಪ್ಪ ಹಲವು ಬಾರಿ ಅದನ್ನು ಹೇಳಿದ್ದ). ಅದು ನೆನಪಿಗೆ ಬಂದಿರಬೇಕು. ಸರಿ.ಸರಿ ಎಂದಿದ್ದರು. ಅಷ್ಟೇ, ಹಿಂದಿದ್ದ ಜನ ನನ್ನ ಮುಂದೆ ತಳ್ಳಿದ್ದರು. ಮರುದಿನ ಮಾಮೂಲಿ ಭಕ್ಷೀಸಿನ ಜೊತೆಗೆ ಎಸ್.ಜಿ.ಭಟ್ಟ ಸರ್ ವಿಶೇಷ ಕೊಡುಗೆಯನ್ನೂ ನೀಡಿದ್ದರು.
ಇದು ಒಂದು ಉದಾಹರಣೆಯಷ್ಟೇ, ಇಂಥ ಹಲವು ಅನುಭವಗಳು, ಹಿರಿಯರ ಮಾತು-ಕತೆ,ಚರ್ಚೆಗಳು ಹೊಸ ಕಾಲದ ದಿಕ್ಕನ್ನು ಸೂಚಿಸುತ್ತಿದ್ದವು. ಹೈಸ್ಕೂಲು ಕೊನೆಯ ವರ್ಷದಲ್ಲಿದ್ದಾಗ ಪ್ರತಿವಾರ ಅಪ್ಪನ ಬಳಿ (ಲಂಕೇಶ ಪತ್ರಿಕೆಗೆ ಆಗ 5-6 ರೂ. ಇತ್ತೆಂದು ನೆನಪು) ಇಸಿದುಕೊಂಡು, ಹೇರ್ಲೇಕರ್ ಬಳಿ ಅಪ್ಪನಿಗೆ ಎಂದು ಲಂಕೇಶ ಪತ್ರಿಕೆ ತರತೊಡಗಿದೆ. (ಪತ್ರಿಕೆ ಖರ್ಚಾಗಿದ್ದಾಗ ನನಗೆ ದೊರಕದಿರುವದು ಬಿಟ್ಟರೆ ಲಂಕೇಶ ತೀರಿಕೊಳ್ಳುವ ತನಕ ಪ್ರತಿ ವಾರವೂ ಪತ್ರಿಕೆ ಕೊಂಡುಕೊಳ್ಳುತ್ತಿದ್ದೆ. (ಈಗಲೂ ನನ್ನ ಬಳಿ ಆಗಿನ ಲಂಕೇಶ ಪತ್ರಿಕೆಯಲ್ಲಿ ಬಂದ ಲಂಕೇಶರ ಟೀಕೆ-ಟಿಪ್ಪಣಿ, ಮರೆಯುವ ಮುನ್ನ ಕಾಲಂಗಳ, ತೇಜಸ್ವಿಯವರ ಅಲೆಮಾರಿಯ ಅಂಡಮಾನ್, ಪರಿಸರದ ಕಥೆಗಳು, ಅದ್ಭುತ ಜಗತ್ತು ಮುಂತಾದ ಕಾಲಂಗಳ, ಚಂದ್ರಶೇಖರ ಆಲೂರರ ಜಾಣ-ಜಾಣೆ ಪ್ರಬಂಧಗಳು, ವೈದೇಹಿ ಬರೆಯುತ್ತಿದ್ದ ಗೆಳತಿ ಕಾಲಂ- ಅವೆಲ್ಲವುಗಳನ್ನ ಕಟಿಂಗ್ಸ ಇವೆ. ಆ ಕಾಲದಲ್ಲೇ ಪ್ರೆಸ್ಸಿನಲ್ಲಿ ಬುಕ್ ಬೈಂಡ್ ಮಾಡಿಸಿದ್ದೆ).
ಅಂದಿನಿಂದ, ಈಗ ಇಲ್ಲಿ ಲಂಕೇಶರೆದುರು ನಿಲ್ಲುವ ಹೊತ್ತಿಗಾಗಲೇ ನಾನು ಸಮಕಾಲಿನ ಜಗತ್ತಿನ ಬಗ್ಗೆ ಸಾಕಷ್ಟು ತಿಳಿದಿದ್ದೇನೆ ಎಂದು ಧೈರ್ಯ ತಾಳಬಲ್ಲ ಆತ್ಮವಿಶ್ವಾಸ ನನಗೆ ಬಂದಿತ್ತು. ಅದನ್ನು ಸ್ವತ: ಲಂಕೇಶ ಮತ್ತು ಲಂಕೇಶ ಪತ್ರಿಕೆ ಕೊಟ್ಟಿತ್ತು. ಸಾಹಿತ್ಯದಿಂದ ನಾವು ಪಡೆದುಕೊಳ್ಳುವ ಕಾಣ್ಕೆಗಳು, ವಿಚಾರಗಳು, ಆಲೋಚನಾ ಕ್ರಮ, ಅರಿವು ಬೇರೆ. ಅದರ ಮಹತ್ವವೇ ಬೇರೆ. ಆದರೆ ಎಲ್ಲೂ ದಾಖಲಾಗದೇ ಮರೆ ಮಾಚಿ ಹೋಗುವ ವಾಸ್ತವಿಕ ಜಗತ್ತಿನ ಸತ್ಯವನ್ನ, ನಿತ್ಯದ ಬದುಕಿನ ಒಳಿತು-ಕೆಡುಕುಗಳನ್ನ ನಾಗರಿಕನೊಬ್ಬನಿಗೆ ತಲುಪಿಸುವ ಪತ್ರಿಕೆಗಳ ಪ್ರಭಾವ, ಪ್ರೇರಣೆಗಳೇ ಬೇರೆ. ಆವರೆಗೂ ಬಹುತೇಕ ಪತ್ರಿಕೆಗಳು ಹೇಳದೇ ಇದ್ದ ಕರ್ನಾಟಕವೆಂಬ ಜಗತ್ತಿನಲ್ಲಿ ಸಂಭವಿಸುತ್ತಿದ್ದ ನೈಜ ವಿಧ್ಯಮಾನಗಳನ್ನ, ಮುಖ್ಯವಾಗಿ ರಾಜಕಾರಣದ ಒಳಜಗತ್ತಿನ ಸತ್ಯಗಳನ್ನ ಲಂಕೇಶ ಪತ್ರಿಕೆ ಓದುಗರೆದುರು ಇಡುತ್ತಿತ್ತು. ಅತಿ ರಂಜಕ, ಏಲಪಕ್ಷೀಯ ಎನ್ನುವ ಭಾವ ಮೂಡಿಸುವಂತಿದ್ದರೂ ಅಲ್ಲಿ ಪ್ರಕಟಗೊಳ್ಳುತ್ತಿದ್ದುದರಲ್ಲಿ 99% ಸತ್ಯ ಎನ್ನುವದನ್ನ ಆ ವೇಳೆಗಾಗಲೇ ಓದುಗರಿಗೆಲ್ಲ ಮನದಟ್ಟಾಗಿತ್ತು.
(ಮುಂದುವರಿಯುವುದು)
ಗಂಗಾಧರ ಕೊಳಗಿ

About the author

Adyot

2 Comments

  • ಬಹಳ ಸೊಗಸಾದ ನಿರೂಪಣೆ. ಅನೇಕ ವಿವರಗಳು ನನಗೂ ಸಿದ್ದಾಪುರದ ಕೆಲವು ನೆನಪುಗಳನ್ನು ಮಾಡಿಸಿದೆವು.

  • ತುಂಬಾ ಚೆನ್ನಾಗಿದೆ. ಕುತೂಹಲ ಹುಟ್ಟಿಸುತ್ತದೆ

Leave a Comment