ಆದ್ಯೋತ್ ಸುದ್ದಿನಿಧಿ:
ಶಾರ್ವರೀ ನಾಮ ಸಂವತ್ಸರ ಶ್ರಾವಣ ಬಹುಳ ಬಿದಿಗೆ ಬುಧವಾರ ದಿನಾಂಕ:05.08.2020 ರಂಸು ಅಯೋದ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು.
ಶತಶತಮಾನಗಳಿಂದ, ಲಕ್ಷಾಂತರ ಶ್ರೀರಾಮಭಕ್ತರ ಪರಿಶ್ರಮ, ಹೋರಾಟ, ತ್ಯಾಗ, ಬಲಿದಾನಗಳ ಪರಿಣಾಮವಾಗಿ, ಕೊನೆಯ ಘಟ್ಟದಲ್ಲಿ ರಾಷ್ಟ್ರದ ಸಾಧು-ಸಂತರ ಆದೇಶದಂತೆ ವಿಶ್ವ ಹಿಂದೂ ಪರಿಷದ್ ಈ ಹೋರಾಟವನ್ನು ಮುಂದುವರೆಸಿ ಅಂತಿಮವಾಗಿ ಜಯಗಳಿಸಿದೆ. ಇಂದು ವಿಶ್ವದಾದ್ಯಂತ ಎಲ್ಲ ರಾಮಭಕ್ತರು ಸಂತೋಷ-ಸಂಭ್ರಮ-ಸಡಗರ-ಹರ್ಷ-ಉಲ್ಲಾಸಗಳಿಂದ ಪುಳಕಿತರಾಗಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ರಚಿತವಾಗಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್, ಉತ್ತರಪ್ರದೇಶ ಮತ್ತು ಕೇಂದ್ರ ಸರ್ಕಾರಗಳ ಸಹಕಾರ, ಮಾರ್ಗದರ್ಶನದೊಂದಿಗೆ ಮಂದಿರ ನಿರ್ಮಾಣಕ್ಕೆ ವಿಧಿವತ್ತಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಕರೋನ ಆರ್ಭಟದ ಪರಿಣಾಮದಿಂದಾಗಿ ಬೃಹತ್ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗದ ಕಾರಣ ರಾಮ ಭಕ್ತರು ತಾವಿರುವ ಸ್ಥಳಗಳಲ್ಲಿ ಸಂಭ್ರಮಾಚರಣೆಯಲ್ಲಿ ಭಾಗವಹಿಸುವಂತೆ ಯೋಜನೆ ಮಾಡಲಾಗಿದೆ.
ದಿನಾಂಕ: 05.08.2020 ನೇ ಬುಧವಾರ 11.30 ಕ್ಕೆ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಅಯೋಧ್ಯೆಯ ಶ್ರೀರಾಮಜನ್ಮಸ್ಥಾನದಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಗಳ ಆರಂಭಕ್ಕಾಗಿ ಭೂಮಿ ಪೂಜೆಯನ್ನು ಸಲ್ಲಿಸಲಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಸದಸ್ಯರು, ಪೂಜ್ಯ ಸಾಧು-ಸಂತರುಗಳು ಹಾಗೂ ಗಣ್ಯಾತಿಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಾಮಾಜಿಕ ಸಮರಸತೆ, ರಾಷ್ಟ್ರೀಯ ಭಾವೈಕ್ಯತೆ ಮತ್ತು ಎಲ್ಲ ಹಿಂದುಗಳಲ್ಲಿರುವ ಭಾವನೆಗಳ ಸ್ಫುರಣದ ಸಂಕೇತವಾಗಿ ರಾಷ್ಟ್ರದ ಮೂಲೆ ಮೂಲೆಗಳಿಂದ ತರಿಸಿರುವ ವಿವಿಧ ನದಿಗಳ ತೀರ್ಥಗಳು ಮತ್ತು ಪವಿತ್ರ ತೀರ್ಥಕ್ಷೇತ್ರಗಳ ಮೃತ್ತಿಕೆಗಳನ್ನು ಪೂಜಿಸಿ ಸಮರ್ಪಿಸಲಾಗುವುದು..ಕರ್ನಾಟಕ ಉತ್ತರ ಪ್ರಾಂತದಿಂದ 108 ಪುಣ್ಯಕ್ಷೇತ್ರಗಳ ತಿರ್ಥ ಹಾಗೂ ಮೃತ್ತಿಕೆಯನ್ನು ಕಳುಹಿಸಿಕೊಡಲಾಗಿದೆ. ಇಡೀ ವಿಶ್ವವೇ ಶತಶತಮಾನಗಳಿಂದ ನಿರೀಕ್ಷಿಸುತ್ತಿದ್ದ ಅಮೃತಘಳಿಗೆ ಈಗ ಕೈಗೂಡಿ ಬಂದಿದೆ.
ಕರೋನಾ ಆರ್ಭಟದಿಂದಾಗಿ ಎಲ್ಲಾ ರಾಮಭಕ್ತರು ಪ್ರತ್ಯಕ್ಷವಾಗಿ ಅಯೋಧ್ಯೆಗೆ ಬಂದು ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲದಿರುವುದರಿಂದ ಈ ಕೆಳಗಿನ ಸೂಚನೆಗಳನ್ನು ಪಾಲಿಸಿ ಸಂಭ್ರಮಿಸುವಂತೆ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಸಮಿತಿ ಹಾಗೂ ರಾಮಜನ್ಮಭೂಮಿ ತಿರ್ಥಕ್ಷೇತ್ರ ಟ್ರಸ್ಟ್ ಕರೆ ನೀಡಿದೆ.
ದಿನಾಂಕ: 05.08.2020 ನೇ ಬುಧವಾರಂದು ಬೆಳಿಗ್ಗೆ 10.30ಕ್ಕೆ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ, ದೂರದರ್ಶನದ ಮುಂದೆ ಕುಳಿತು ನೇರ ಪ್ರಸಾರದವನ್ನು ವೀಕ್ಷಿಸುವುದು.
ಅವಕಾಶವಿರುವ ಕಡೆಗಳಲ್ಲಿ, ಮಠ-ಮಂದಿರಗಳಲ್ಲಿ, ಆಶ್ರಮಗಳಲ್ಲಿ, ಗುರುದ್ವಾರಗಲ್ಲಿ, ವಿವಿಧ ಪೂಜಾ ಸ್ಥಳಗಳಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ ದೊಡ್ಡ ಪರದೆಗಳ ಮೂಲಕ ಸಾರ್ವಜನಿಕರು ಈ ಕಾರ್ಯಕ್ರಮವನ್ನು ವೀಕ್ಷಿಸಲು ವ್ಯವಸ್ಥೆಯನ್ನು ಮಾಡುವುದು.
ಮನೆ, ಬೀದಿ, ಗ್ರಾಮ, ದೇವಾಲಯಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ ಭಜನೆ, ಸಂಕೀರ್ತನೆ, ಜಪ, ಪೂಜೆ, ಪುಷ್ಪಾರ್ಚನೆ, ಧೂಪ, ದೀಪ, ನೈವೇದ್ಯಗಳಿಂದ ಶ್ರೀರಾಮನನ್ನು ಆರಾಧಿಸಿ ಪ್ರಸಾದವನ್ನು ವಿತರಿಸುವುದು.
ತಮ್ಮ ತಮ್ಮ ಶಕ್ತ್ಯಾನುಸಾರ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡುವ ಸಂಕಲ್ಪವನ್ನು ಮಾಡುವುದು. ಮುಂದೆ ಸೂಚನೆ ಬಂದಾಗ ಅದನ್ನು ತಲುಪಿಸುವುದು.
ಪ್ರಚಾರದ ಎಲ್ಲಾ ಸಾಧನಗಳನ್ನು ಬಳಸಿ ಈ ಕಾರ್ಯಕ್ರಮವನ್ನು ಎಲ್ಲರೂ ನೇರವಾಗಿ ವೀಕ್ಷಿಸಲು ಸರ್ವ ಪ್ರಯತ್ನಗಳನ್ನು ಮಾಡುವುದು.
ಇವುಗಳೆಲ್ಲದರ ನಡುವೆ ಕರೋನಾದಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಮತ್ತು ಹರಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು.
ಸರ್ಕಾರದ ನಿಯಮಾನುಸಾರವಾಗಿ ಸೂಚನೆಗಳನ್ನು ಪಾಲಿಸಿ ಕಾರ್ಯಕ್ರಮಗಳನ್ನು ಆಯೋಜಿಸುವುದು.
ಸಮಸ್ತ ಸಮಾಜ ಬಾಂಧವರು ರಾಮ ಭಕ್ತರು ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಈ ಮಹಾನ್ ರಾಷ್ಟ್ರೀಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿ ಸವಿನಯದ ಪ್ರಾರ್ಥನೆ ಎಂದು ಕರ್ನಾಟಕ,ಆಂದ್ರಪ್ರದೇಶ,ತೆಲಾಂಗಣ ಭಾಗದ ವಿಶ್ವಹಿಂದೂಪರಿಷತ್ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.