ಕಂದಾಯ ಸಚೀವರಿಂದ ನೆರೆ ಸಂತ್ರಸ್ತರ ಭೇಟಿ : ಸರಕಾರದ ಬಳಿ ಹಣವಿಲ್ಲ ಎನ್ನುವುದು ಆಧಾರ ರಹಿತ ಆರೋಪ

ಆದ್ಯೋತ್ ಸುದ್ದಿನಿಧಿ:
ಕಂದಾಯ ಸಚೀವ ಆರ್.ಅಶೋಕ ಶುಕ್ರವಾರ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನೆರೆ ಪೀಡಿತ ಪ್ರದೇಶಗಳಾದ ಚಿಕ್ಕನಕೋಡು ಗ್ರಾಮದ ಖಾಳಜಿ ಕೇಂದ್ರ ಹಾಗೂ ಹಡಿನಬಾಳದ ಹೊಳೆಯ ಸಮೀಪವಿರುವ ಮನೆಗಳಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಅಲ್ಲಿದ್ದ ನೆರೆ ಪೀಡಿತರು,ಕಳೆದ 30 ವರ್ಷಗಳಿಂದ ಮಳೆಗಾಲದಲ್ಲಿ ಎದುರಾಗುವ ಪ್ರವಾಹದ ಹೊಡೆತವನ್ನು ತಾಳಿಕೊಂಡು ಬಂದಿದ್ದೇವೆ. ನಮಗೆ ತಾತ್ಕಾಲಿಕ ಪರಿಹಾರವನ್ನಾಗಿ ಏನನ್ನೂ ಕೊಡುವುದು ಬೇಡ. ಎತ್ತರದ ಜಾಗದಲ್ಲಿ ಮನೆ ಕಟ್ಟಿಕೊಂಡು ವಸತಿಗೆ ಅವಕಾಶಮಾಡಿಕೊಟ್ಟರೆ ಸಾಕು ಎಂದು ಅಳಲು ತೋಡಿಕೊಂಡರು.
ಶಾಸಕ ಸುನಿಲ್ ನಾಯ್ಕ ಮಾತನಾಡಿ,ಗ್ರಾಮದಲ್ಲಿ ಮೂರು ಎಕರೆ ಕಂದಾಯ ಭೂಮಿ ಇದೆ ಅದರಲ್ಲಿಯೇ ಮನೆ ಕಟ್ಟಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ ಎಂದು ತಿಳಿಸಿದರು.

ಜನರ ಬೇಡಿಕೆಗೆ ಒಪ್ಪಿದ ಕಂದಾಯ ಸಚೀವ ಆರ್.ಅಶೋಕ ಮಾತನಾಡಿ,ನೆರೆ ಪರಿಹಾರಕ್ಕೆ ಕಳೆದ ಬಾರಿಗಿಂತ ಮೂರುಪಟ್ಟು ಹೆಚ್ಚು ಅನುದಾನವನ್ನು ನೀಡಲು ಕೇಂದ್ರಸರಕಾರ ಸಿದ್ದವಿದೆ.ಸರಕಾರದ ಬಳಿ ಹಣವಿಲ್ಲ ಎನ್ನುವುದು ಆಧಾರ ರಹಿತ ಆರೋಪವಾಗಿದ್ದು ವಿಪಕ್ಷಗಳು ಹತಾಶೆಗೊಂಡು ಇಂತಹ ಆರೋಪ ಮಾಡುತ್ತಿವೆ ಎಂದು ಹೇಳಿದ ಸಚೀವರು ಜಿಲ್ಲೆಯ ನೆರೆ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ. ಈ ಭಾಗದ ಬೇಡಿಕೆಯಂತೆ 3 ಎಕರೆ ಜಾಗದ ಬಗ್ಗೆ ಸೂಕ್ತ ದಾಖಲೆಯನ್ನು ಒದಗಿಸಿದಲ್ಲಿ ಅವರಿಗೆ ಮನೆ ನಿರ್ಮಾಣ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು ಜಿಲ್ಲೆಯಲ್ಲಿ ನಿರಾಶ್ರಿತರ ಕ್ರೇಂದ್ರ ನಿರ್ಮಾಣಕ್ಕೂ ಹಣ ಬಿಡುಗಡೆ ಮಾಡಿದ್ದು ಸೂಕ್ತ ಸ್ಥಳವನ್ನು ಅಧಿಕಾರಿಗಳು ಗುರುತಿಸಬೇಕಿದೆ. ಮನೆಗೆ ಹಾನಿಯಾದಲ್ಲಿ ಕೂಡಲೇ ಪರಿಹಾರ ಒದಗಿಸಲು ಸೂಕ್ತ ಅನುದಾನ ಜಿಲ್ಲಾಡಳಿತದ ಬಳಿ ಇರುವುದರಿಂದ ಪರಿಹಾರಕ್ಕೆ ವಿಳಂಬವಿಲ್ಲ.
ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ ಇದು ಪ್ರಸುತ್ತ ವರ್ಷದ ಪ್ರಕೃತಿ ವಿಕೋಪದ ಆರಂಭವಾಗಿದ್ದು, ಕೂಡಲೇ ಸರ್ಕಾರದ ಗಮನಕ್ಕೆ ತಂದಿದ್ದು, ಕಂದಾಯ ಸಚಿವರೇ ಖುದ್ದು ವಿಕ್ಷಣೆಗೆ ಬಂದಿದ್ದಾರೆ. ಈ ಭಾಗದ ಹಲವು ವರ್ಷದ ಬೇಡಿಕೆಯಾದ ಬದಲಿ ವಸತಿ ವ್ಯವಸ್ಥೆ ಕಲ್ಪಿಸಲು ಸಚಿವರು ಒಪ್ಪಿಗೆ ಸೂಚಿಸಿದ್ದಾರೆ. ಇನ್ನುಳಿದ ತಾಲೂಕಿನ ಸಮಸ್ಯೆಯನ್ನು ಕೂಡಾ ಹಂತಹಂತವಾಗಿ ಶಾಶ್ವತ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.
ನಂತರ ಹೊನ್ನಾವರದ ಪ್ರತಿಭೋದಯ ಹಾಲ್ ನಲ್ಲಿ ಸಭೆ ನಡೆಸಿದ ಸಚೀವರು,ಪ್ರಕೃತಿ ವಿಕೋಪವನ್ನು ತಡೆಯಲು ಸಾಧ್ಯವಿಲ್ಲ. ಆದರೆ ಅದರಿಂದ ಉಂಟಾಗುವ ಅನಾಹುತಗಳನ್ನು ತಡೆಯಲು ನಾವೆಲ್ಲರೂ ಶ್ರಮವಹಿಸಬೇಕಿದೆ. ಕೊರೋನಾ ಮಧ್ಯೆ ನೆರೆ ಉಂಟಾಗಿರುವುದು ಕಷ್ಟಕರವಾದ ಸನ್ನಿವೇಶವಾದರೂ, ಕಷ್ಟವನ್ನು ಎದುರಿಸಲು ಅಧಿಕಾರಿಗಳು ಸಜ್ಜಾಗಬೇಕು. ಯಾವುದೇ ಅಧಿಕಾರಿಗಳು ರಜೆಯ ಮೇಲೆ ತೆರಳಬಾರದು. ಹಾನಿಗೊಳಗಾದ ಬೆಳೆಯ ಬಗ್ಗೆ ಸರ್ವೆ ಮಾಡಿ ವರದಿ ನೀಡಿದರೆ ಕೇಂದ್ರ ಸರ್ಕಾರದಿಂದ ಪರಿಹಾರ ಒದಗಿಸಲು ಸಾಧ್ಯವಿದೆ. ಕೃಷಿ ಅನುದಾನ ನೇರವಾಗಿ ರೈತರ ಫಲಾನುಭವಿಗಳಿಗೆ ಹೋಗುವದರಿಂದ ಯಾವುದೇ ಅವ್ಯವಹಾರ ಸಂಭವಿಸುವುದಿಲ್ಲ. ಕಾಳಜಿ ಕೇಂದ್ರ ಸಮಪರ್ಕವಾಗಿಲ್ಲ ಎನ್ನುವುದನ್ನು ಇಂದು ನಾನು ಅರಿತಿದ್ದು, ಸೂಕ್ತ ರೀತಿಯ ಬೆಡ್ ಹಾಗೂ ಆಹಾರದ ವ್ಯವಸ್ಥೆ ಕಲ್ಪಿಸಬೇಕು. ಸರ್ಕಾರ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಸಾಕಷ್ಟು ಹಣ ನೀಡುತ್ತದೆ. ಆ ಹಣ ನಮ್ಮದಲ್ಲ ಸಾರ್ವಜನಿಕರ ತೆರಿಗೆ ಹಣವಾಗಿದೆ. ನಿಜವಾದ ಬಡವರು ಕಷ್ಟದಿಂದ ಆಶ್ರಯಕೆಂದ್ರಕ್ಕೆ ಬಂದಾಗ ಊಟ ವಸತಿಯ ವಿಷಯದಲ್ಲಿ ಜಿಪುಣತನ ತೋರಿಸಬೇಡಿ, ಮುಂದೆ ಇಂತಹ ಘಟನೆ ಮರುಕಳಿಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಚಿವ ಶಿವರಾಮ ಹೆಬ್ಬಾರ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮಾತನಾಡಿ, 6 ನದಿಗಳು ಜಿಲ್ಲೆಯಲ್ಲಿ ಹರಿಯುತ್ತಿದ್ದು ಮಳೆಗಾಲದಲ್ಲಿ ಹಲವು ವರ್ಷಗಳಿಂದ ನೆರೆಯ ಭೀತಿ ಎದುರಿಸುತ್ತಿದೆ, ಈ ಸಮಸ್ಯೆಗೆ ಶಾಶ್ವತ ಪರಿಹಾರದ ಅಗತ್ಯವಿದೆ. ಈ ಬಾರಿಯ ರಸ್ತೆ ಸೇತುವೆಗಳು ಹಾನಿಯಾಗಿದ್ದು, ಹೆಸ್ಕಾಂ ಇಲಾಖೆಯ 800 ಕಂಬಗಳು ಕಳೆದ ನಾಲ್ಕು ದಿನದ ಮಳೆಗೆ ನೆಲಕ್ಕೆ ಊರುಳಿದೆ. ಜಿಲ್ಲೆಯ ಜನಸಂಖ್ಯೆ ಕಡಿಮೆ ಇದ್ದರೂ ಅರಣ್ಯ ಪ್ರದೇಶ ಸೇರಿದಂತೆ ವಿಸ್ತೀರ್ಣದಲ್ಲಿ ದೊಡ್ಡದಾಗಿದೆ. ಇದರಿಂದ ಸರ್ಕಾರದ ಅನುದಾನ ಜಿಲ್ಲೆಗೆ ಕಡಿಮೆ ಸಿಗುತ್ತಿದೆ. ರಾಜ್ಯದ ಕರಾವಳಿಯಲ್ಲಿ ಅತಿ ಉದ್ದವಾದ 148 ಕಿಲೋಮೀಟರ್ ಪ್ರದೇಶ ಕಡಲತೀರ ಪ್ರದೇಶ ಹೊಂದಿದ್ದರೂ ನಮಗೆ ಇದುವರೆಗೂ ಸೂಕ್ತ ನ್ಯಾಯ ಸಿಕ್ಕಿಲ್ಲ. ದಶಕಗಳಿಂದ ಕಡಲಕೊರೆತ ಸಮಸ್ಯೆ ಎದುರಿಸುತ್ತಿದ್ದು, ಇದಕ್ಕೂ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮೊದಲು ಪ್ರತಿ ತಾಲೂಕವಾರ ತಹಶೀಲ್ದಾರರು ಹಾನಿಗೊಳಗಾದ ಮನೆಗಳು ಹಾಗೂ ಪರಿಹಾರ ವಿತರಣಾ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.
ಈ ಬಾರಿ ಜಿಲ್ಲೆಯ 507 ಹೆಕ್ಟರ್ ತೋಟಗಾರಿಕಾ ಬೆಳೆ ಹಾಗೂ 2176 ಹೆಕ್ಟೆರ್ ಕೃಷಿ ಬೆಳೆಗಳು ಹಾನಿಯಾಗಿದೆ. ಅದರಲ್ಲೂ ಭತ್ತವು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು. ಕಳೆದ ವರ್ಷ ನೆರೆ ಪೀಡಿತ ಬಳಿಕ ಮಂಜೂರಾದ ಮನೆಗಳ ಪ್ರಗತಿಯ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೊಗೇರ, ಶಾಸಕರಾದ ದಿನಕರ ಶೆಟ್ಟಿ, ಸುನೀಲ ನಾಯ್ಕ, ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ್, ಜಿಲ್ಲಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ರೋಶನ್, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಶಿವಪ್ರಕಾಶ ದೇವರಾಜು
ಮುಂತಾದವರು ಉಪಸ್ಥಿತರಿದ್ದರು

About the author

Adyot

Leave a Comment