ಆದ್ಯೋತ್ ಅಂಕಣದಲ್ಲಿ ಕೊಳಗಿ ನೆನಪು

ಹೊಸ ದಿಕ್ಕಿನ ಹರಿಕಾರ ಪಿ.ಲಂಕೇಶ
ಲಂಕೇಶ್ ಆಕಸ್ಮಿಕವಾಗಿ ಪತ್ರಿಕಾರಂಗಕ್ಕೆ ಬಂದವರು ಅಂತ ನನಗೇನೂ ಅನಿಸುವದಿಲ್ಲ. ಆವರೆಗೆ ಕ್ರಿಯಾಶೀಲವಾಗಿದ್ದ ಪತ್ರಕರ್ತರಷ್ಟೇ ಸ್ಪಷ್ಟವಾಗಿ ಗ್ರಹಿಸುವ ಶಕ್ತಿ ಪಡೆದುಕೊಂಡದ್ದು ಉದ್ದೇಶಪೂರ್ವಕವಾಗಿ ಅಂತಲೂ ಭಾವಿಸುವದಿಲ್ಲ.( ಜಾಗತಿಕ ಮಟ್ಟದ ಪ್ರಮುಖ ಸಾಹಿತಿಗಳಾದ ಮಾಕ್ರ್ವೇಜ್, ಹೇಮಿಂಗ್ವೇ ಮುಂತಾದವರೆಲ್ಲ ಪತ್ರಕರ್ತರಾಗಿ ಕೆಲಸ ಮಾಡಿದವರೇ). ಲಂಕೇಶರೊಳಗೆ ಹಲವು ಮೇಧಾವಿತನದಂತೆ ಪತ್ರಕರ್ತನ ಅಂತ:ಸತ್ವವೂ ಇತ್ತೇನೋ?

ನಾನು ಓದತೊಡಗಿದ ಕಾಲಕ್ಕೆ ಗುಂಡೂರಾವ್, ಬಂಗಾರಪ್ಪ ಮುಂತಾದವರು, ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಹಲವರನ್ನ ಲಂಕೇಶ ಪತ್ರಿಕೆ ಮುಖ ಮುಲಾಜಿಲ್ಲದೇ ಝಾಡಿಸುತ್ತಿತ್ತು. ಅಷ್ಟರ ನಂತರದಲ್ಲಿ ಅತ್ಯಂತ ಪ್ರಮುಖ ಎದುರಾಳಿಯಾಗಿ ಸಿಕ್ಕವರು ರಾಮಕೃಷ್ಣ ಹೆಗಡೆ. ನಾನು ಲಂಕೇಶ್ ಪತ್ರಿಕೆ ಓದುತ್ತ, ಸಮಕಾಲೀನ ಜಗತ್ತಿನ ಒಂದಿಷ್ಟು ಅರಿವನ್ನ ಪಡೆದುಕೊಳ್ಳುತ್ತಿದ್ದೇನೆ ಅಂದುಕೊಳ್ಳುತ್ತಿರುವಾಗ ಅವರು ಹೊಸ ದಾರಿಯತ್ತ ಹೊರಳಿದ್ದರು.
ಲಂಕೇಶ ದಶಕಗಳ ಕಾಲ ಕರ್ನಾಟಕ ರಾಜಕೀಯದ ಪ್ರತಿ ಸಂಚಲನವನ್ನೂ, ಆಗುಹೋಗುಗಳನ್ನು ಗಮನಿಸುತ್ತ, ಅದನ್ನು ಪತ್ರಿಕೆಯ ಮೂಲಕ ಓದುಗರ ಮುಂದಿಡುತ್ತ ಬಂದ ಲಂಕೇಶರ ಬಗ್ಗೆ ಕೌತುಕ ಹುಟ್ಟುತ್ತದೆ. ಓರ್ವ ಅಧ್ಯಾಪಕನಾಗಿ, ಲೇಖಕ, ಕವಿ, ನಾಟಕಕಾರನ ಮನಸ್ಸು ವಾಸ್ತವಿಕ ಜಗತ್ತಿನ ಆಗುಹೋಗುಗಳನ್ನ ಅಷ್ಟೊಂದು ತೀವ್ರವಾಗಿ ಗ್ರಹಿಸುತ್ತ, ವಿಭಿನ್ನ ವಿಷಯ, ಸಂಗತಿ, ಮಾಹಿತಿಗಳನ್ನ ವ್ಯಕ್ತಪಡಿಸುತ್ತಿದ್ದರು. ಇವತ್ತಿಗೂ ಪ್ರತಿ ವಾರವೂ ಪತ್ರಿಕೆ ಕಟ್ಟುತ್ತಿದ್ದ ಅವರ ಶಿಸ್ತಿನ ಬಗ್ಗೆ ಮೆಚ್ಚುಗೆ ಹುಟ್ಟುತ್ತದೆ.

ಅಷ್ಟರಲ್ಲಾಗಲೇ ಪತ್ರಿಕೆ ಹೆಗಡೆಯವರ ವಿರುದ್ಧ ಸಮರ ಸಾರಿತ್ತು. ಹೆಗಡೆಯವರ ಬಗ್ಗೆ ನನ್ನ ಊರಿನವರು ಎನ್ನುವದರ ಬಗ್ಗೆ ಮಾತ್ರ ಪ್ರೀತಿಯಲ್ಲ; ಅವರೊಬ್ಬ ಅಪರೂಪದ ರಾಜಕಾರಣಿ ಅನ್ನುವದು ಈಗ ಅರ್ಥವಾಗುತ್ತಿದೆ. ಅವರೊಬ್ಬ ಗಿಮಿಕ್ ಮನುಷ್ಯ ಎನ್ನುವದನ್ನ ನಾನು ಒಪ್ಪಲಾರೆ. ಅವರೊಳಗೊಬ್ಬ ರಾಜಕಾರಣವನ್ನು ಮೀರಿದ ಮನುಷ್ಯನಿದ್ದ, ಸಂವೇದನಾಶೀಲ ಮನಸ್ಸಿತ್ತು. ಅತ್ಯಂತ ಸ್ಪಷ್ಟವಾದ, ತೀವ್ರವಾದ ವೈಚಾರಿಕ ಒಳನೋಟಗಳಿದ್ದವು ಎನ್ನುವದು ಅವರ ಹಲವು ಲೇಖನಗಳನ್ನ ಈಗ ಓದುವಾಗ ಅವೆಲ್ಲ ಎಷ್ಟೊಂದು ಸತ್ಯವಾದವು ಅಂತಾ ಅರ್ಥವಾಗುತ್ತಿದೆ.

ಹೆಗಡೆಯವರ ಬಗ್ಗೆ ಇರುವಷ್ಟೇ ಪ್ರೀತಿ ನನ್ನ ಪಕ್ಕದ ತಾಲೂಕಿನವರಾದರೂ, ನಮ್ಮೂರಿನವರೇ ಅನ್ನಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಬಗ್ಗೆ ಇತ್ತು. ಬಂಗಾರಪ್ಪನವರ ಭಾಷಣವನ್ನ ಕನ್ನಡ ನಾಲ್ಕನೇ ಕ್ಲಾಸಿನಲ್ಲಿದ್ದಾಗಿನಿಂದ ಕೇಳುತ್ತ, ಅವರನ್ನ ನೋಡುತ್ತ ಬಂದ ಅನುಭವ ನನ್ನದು. ನನ್ನೊಳಗಿದ್ದ ಆ ಹಿರಿಯರ ವ್ಯಕ್ತಿತ್ವದ ಚಿತ್ರಣವನ್ನು, ಅವರ ಮೇಲಿನ ಗೌರವವನ್ನು ನಿರಾಕರಿಸಲು ಲಂಕೇಶ ಪತ್ರಿಕೆ ಓದು ಒತ್ತಾಯಿಸುತ್ತಿತ್ತು. ಆದರೂ ಎರಡನ್ನೂ ಸಂಭಾಳಿಸಿದೆ.
ಇಲ್ಲೊಂದು ಅನುಭವವನ್ನ ಹೇಳಿ ಮುಂದೆ ಹೋಗ್ತೇನೆ-
ಸ್ಪಷ್ಟವಾಗಿ ನೆನಪಿಲ್ಲ, ಬಹುಷ: 2006 ಅಥವಾ 7. ನಾನಾಗ ವಿಜಯ ಕರ್ನಾಟಕ ದಿನಪತ್ರಿಕೆಯ ಸಿದ್ದಾಪುರ ತಾಲೂಕಿನ ವರದಿಗಾರನಾಗಿದ್ದೆ. ಅರಣ್ಯ ಅತಿಕ್ರಮಣದ ಕುರಿತಂತೆ ಒಂದಿಷ್ಟು ಮಾಹಿತಿಗಳು ಬೇಕಿತ್ತು. ಎಸ್. ಬಂಗಾರಪ್ಪನವರು ತಾವು ಮುಖ್ಯಮಂತ್ರಿಯಾಗಿದ್ದಾಗ ಅತಿಕ್ರಮಣದಾರರಿಗೆ ಪಟ್ಟಾ ಕೊಡಿಸಿದ್ದರು. ಆ ಕುರಿತಂತೆ ಕಾನೂನು ಮತ್ತು ಇನ್ನಿತರ ಮಾಹಿತಿ ಬೇಕಿತ್ತು. ಯಾರನ್ನ ಕೇಳೋದು? ಕೇಳಿದರೂ ಅವರು ಕೊಡುವ ವಿವರ ಸಮರ್ಪಕವಾಗಿ ಇರಬೇಕಲ್ಲ?. ಅಂಥ ತೊಳಲಾಟದಲ್ಲಿದ್ದಾಗ ಗೆಳೆಯ ಗುರುಮೂರ್ತಿ ಎನ್. ನಾಯ್ಕ( ಹಿರಿಯ ಸಾಮಾಜಿಕ ಧುರೀಣ, ವಕೀಲ ಎನ್.ಡಿ.ನಾಯ್ಕ ಐಸೂರ ಅವರ ಪುತ್ರ) ಒಂದು ಗುಟ್ಟು ಹೇಳಿದರು. (ಇದನ್ನ ನನ್ನ ಅನುಭವವಾಗಿ ಹೇಳುತ್ತಿದ್ದೇನೆ, ನನ್ನೆಲ್ಲ ಸಹೋದ್ಯೋಗಿ ಗೆಳೆಯರು ನನಗಿಂತ ಹೆಚ್ಚು ಅನುಭವಶಾಲಿಗಳು. ನನ್ನದೇ ಹೆಚ್ಚುಗಾರಿಕೆಯಾಗಬಾರದು ಎನ್ನುವ ಕಾರಣಕ್ಕೆ ಈ ಮಾತು). ಓರ್ವ ಪತ್ರಕರ್ತ ಎಷ್ಟೊಂದು ಬಗೆಯಲ್ಲಿ ಕಲಿಯಬಹುದು ಅನಿಸಿದ್ದು ಆ ನಂತರ. ಆಗ ಮೊಬೈಲ್ ಇರಲಿಲ್ಲ. ನಾನು ಬರೆಯುವದೆಲ್ಲ ಈ ಜಗತ್ತಿನ ಲಾಂಛನವಾದ ಮೊಬೈಲ್ ಎಂಬ ಯಂತ್ರ ಬಾರದ ಕಾಲದ್ದು)

ಗುರುಮೂರ್ತಿ ಒಂದು ಹಿಂಟ್ಸ ಕೊಟ್ಟರು. ‘ ಬಂಗಾರಪ್ಪ ಬೆಳಿಗ್ಗೆ 9.30ರ ನಂತರ ಅವರ ಮನೆಯ ಲ್ಯಾಂಡ್‍ಪೋನ್ ಹತ್ತಿರ ಕೂತಿರ್ತಾರೆ, ಬರುವ ಕಾಲ್‍ಗಳನ್ನ ತಗೋತಾರೆ. ಒಂದು ತಾಸು ಮಾತ್ರ ಅಲ್ಲಿರೋದು. ನೀವು ಮೊದಲು ಕಾಲ್ ಮಾಡಿದ್ರೆ ಸಿಗ್ತಾರೆ’ ಅಂದ್ರು. ಈಗಲಾದ್ರೆ ಕೂತಲ್ಲಿ, ನಿಂತಲ್ಲಿ ಕಾಲ್ ಮಾಡುವ ಮೊಬೈಲ್ ಎನ್ನುವ ಮಾಯಾಂಗನೆ ಇದೆ. ಆಗ? ಏನೇನೋ ಕಸರತ್ತು ಮಾಡಿ ಬಂಗಾರಪ್ಪನವರ ಮನೆ ಲ್ಯಾಂಡ್ ಸಂಖ್ಯೆ ಸಂಗ್ರಹಿಸಿದೆ. ಮರುದಿನ ಬೆಳಿಗ್ಗೆ ಬೇಗ ಎದ್ದು ಒಂಬತ್ತರೊಳಗೆ ನನ್ನ ಆಪೀಸ್ ತಲುಪಿ ಆ ನಂಬರ್‍ಗೆ ಕಾಲ್ ಮಾಡಿದೆ. ಯಾರೂ ಎತ್ತಲಿಲ್ಲ. ಅರ್ಧ ಗಂಟೆಯವರೆಗೂ ಕಾಲ್ ಮಾಡ್ತಾನೆ ಇದ್ದೆ, ಅಷ್ಟರೊಳಗೆ ಬೇರೆಯವರು ಎಂಟ್ರಿ ಕೊಡಬಾರದಲ್ಲ. ಸಡನ್ನಾಗಿ ರಿಸೀವ್ ಆಯ್ತು. ಭಯ, ಕಂಪನ.. ಬಂಗಾರಪ್ಪನವರ ಬಳಿ ಮಾತಾಡೋದು ಹುಡುಗಾಟಿಕೆನಾ?
ಅದೇ ಧ್ವನಿ, ಅದೇ ಸ್ವರ. ಅವರು ಬಂಗಾರಪ್ಪ! ನನ್ನ ಕರೆಯನ್ನ ತೆಗೆದುಕೊಂಡು ‘ಯಾರೂ?’ ಅಂತ ಕೇಳಿದ್ರು. ನಾನು ನನ್ನ ಪರಿಚಯ ಹೇಳಿ ಈ ಕಾರಣಕ್ಕಾಗಿ ಫೋನ್ ಮಾಡಿದ್ದು ಅಂತಾ ಹೇಳಿದೆ. ಯಾರೂ ನಂಬುವ ಹಾಗಿಲ್ಲ, ‘ಓಹೋ, ಸಿದ್ದಾಪುರದವರಾ?’ ಎಂದು ಪ್ರಶ್ನಿಸಿ, ನನ್ನ ವೈಯುಕ್ತಿಕ ಮಾಹಿತಿ ಪಡೆದುಕೊಂಡ ಆ ಹಿರಿಯ ಮನುಷ್ಯರು ಕನಿಷ್ಠ ಒಂದೂವರೆ ಗಂಟೆ ಮಾತಾಡಿದರು! ನಾನು ಅದನ್ನು ನಿರೀಕ್ಷಿಸಿಯೇ ಇರಲಿಲ್ಲ. ಅವರು ಮೂಡ್ ಹೇಗಿದೆಯೋ ಹಾಗೆ, ಸಿಡುಕೋದು, ಗದರಿಸೋದು ಮಾಡ್ತಾರೆ ಅಂದೆಲ್ಲ ಅವರ ಹಲವು ಅಭಿಮಾನಿಗಳಿಂದ ಕೇಳಿದ್ದೆ. ಆದರೆ ನನ್ನ ಪಾಲಿಗೆ ಅವೆಲ್ಲ ಸುಳ್ಳಾಗಿಬಿಟ್ಟಿತು. ನಾನು ಕೇಳಿದ ಮಾಹಿತಿಯ ಸಂಪೂರ್ಣ ವಿವರ ನೀಡುವದರ ಜೊತೆಗೆ, ಇನ್ನುಳಿದ ಗ್ರಾಮೀಣ ಪ್ರದೇಶದ ಸಾಮಾಜಿಕ, ರಾಜಕೀಯ, ಆರ್ಥಿಕ ಸೌಲಭ್ಯಗಳ ಅಗತ್ಯದ ಬಗ್ಗೆ ಮಾತಾಡಿದ್ದರು. ನನ್ನ ಅದೃಷ್ಠ ಅದು. ಸ್ನೇಹಶೀಲವಾಗಿ, ಖುಷಾಲಿನಲ್ಲಿ ಅವರು ನನ್ನೊಡನೆ ಮಾತನಾಡಿದ್ದು ನನ್ನ ಜೀವನದ ಒಂದು ಅವಿಸ್ಮರಣೀಯ ಘಳಿಗೆ ಎಂದೇ ಭಾವಿಸಿದ್ದೇನೆ. ಎಲ್ಲಿಯ ಎಸ್.ಬಂಗಾರಪ್ಪ, ಎಲ್ಲಿಯ ಸಾಮಾನ್ಯ ಪತ್ರಕರ್ತ.
ರಾಜಕಾರಣಿಗಳನ್ನು ವಿಮರ್ಶಿಸುವಾಗ ನಮ್ಮ ನೆಲೆ ಪರಿಕ್ಷಿಸಿಕೊಳ್ಳಬೇಕಾದ್ದು ಪ್ರತಿ ಪತ್ರಕರ್ತನ ಕರ್ತವ್ಯ. ನಾವೇ ಹೊಲಸಾಗಿ, ಅವರ ಬಗ್ಗೆ ಟೀಕೆ ಮಾಡಲು ನಮಗೆ ನೈತಿಕತೆ ಇದೆಯೇ?. ನಮ್ಮ ಹಿಂದಿರುವ ಪತ್ರಿಕೆಗೆ ಅವರು ಭಯ ಪಡಬಹುದು, ಆದರೆ ರಾಜಕಾರಣಿಗಳು ನುರಿತವರು, ಎಲ್ಲಿ, ಯಾವಾಗ, ಏನು ಮಾಡಬೇಕು ಎನ್ನುವದನ್ನ ಮೊದಲೇ ನಕ್ಷೆಯಾಗಿ ಸಿದ್ಧಗೊಳಿಸಿಟ್ಟುಕೊಳ್ಳಬಲ್ಲ ಚಾಣಾಕ್ಷರು ಎನ್ನುವದನ್ನೆಲ್ಲ ಲಂಕೇಶ್ ಪತ್ರಿಕೆ ಓದುವಾಗ, ಆ ನಂತರದಲ್ಲಿ ಪತ್ರಿಕಾರಂಗಕ್ಕೆ ಬಂದಾಗ ಅರಿವಾಯಿತು.

ಕರ್ನಾಟಕದ ಆ 70ರ ದಶಕದ ರಾಜಕಾರಣವನ್ನ ಗಮನಿಸುತ್ತ, ಗ್ರಹಿಸುತ್ತ, ಅದರ ಮೌಲ್ಯಮಾಪನ ಮಾಡುತ್ತ ಬಂದದ್ದಕ್ಕಿರಬೇಕು. ಅವರೊಳಗೊಂದು ಹೊಸ ಅಭೀಪ್ಸೆ ಚಿಗುರೊಡೆಯಿತು ಅಂತ ಕಾಣುತ್ತೆ. ಅಥವಾ ಅವರ ಎಲ್ಲ ಅವತಾರಗಳಂತೆ ಅವರ ವ್ಯಕ್ತಿತ್ವದ ಒಳ ಮನಸ್ಸಿನಲ್ಲಿದ್ದ ರಾಜಕಾರಣದ ಒಲವು ಸ್ಪೋಟಗೊಂಡಿತೋ?
ಪತ್ರಿಕೆಯಲ್ಲಿ ಕರ್ನಾಟಕಕ್ಕೆ ಹೊಸ ರಾಜಕಾರಣವನ್ನ ಪರಿಚಯಿಸುವ ಪ್ರಯತ್ನಗಳು ಶುರುವಾದವು. ಒಂದೆಡೆ ಹೆಗಡೆಯವರ ಸರಕಾರದ ಹಗರಣಗಳನ್ನು ವ್ಯವಸ್ಥಿತವಾಗಿ ಹೊರಗೆಡಹುವ( ಇದನ್ನ ನಾನು ವೈಯುಕ್ತಿಕ ಗ್ರಹಿಕೆಯ ಮೂಲಕ ಹೇಳುತ್ತಿದ್ದೇನೆ. ಸರಕಾರದ ಆ ಎಲ್ಲ ಅಧಿಕೃತ ಮಾಹಿತಿಗಳು ಓರ್ವ ವರದಿಗಾರನಿಗೆ ಲಭ್ಯ ಹೇಗಾಗುತ್ತದೆ ಅಂತ ಆಗ ಗೊತ್ತಿರಲಿಲ್ಲ, ನಾನು ವರದಿಗಾರನಾದ ಮೇಲೆ ಅರ್ಥವಾಯಿತು. ಆ ಎಲ್ಲ ಮಾಹಿತಿಗಳ ಹಿಂದೆ ಈಗಲೂ ಬದುಕಿರುವ ರಾಷ್ಟ್ರಮಟ್ಟದ ಧುರೀಣರಿದ್ದರು ಎನ್ನುವದು).
ಕೆ.ರಾಮದಾಸ್ ಮುಂತಾದವರ ಒಡಗೂಡಿ ಲಂಕೇಶ್ ಕರ್ನಾಟಕ ಪ್ರಗತಿರಂಗ ಎನ್ನುವ ರಾಜಕೀಯ ವೇದಿಕೆ( ಪಕ್ಷ ಎನ್ನಲಾರೆ) ಅಸ್ತಿತ್ವಕ್ಕೆ ತರುವ ಪ್ರಯತ್ನ ನಡೆಸಿದ್ದರು. ಅದನ್ನು ಈಗಲೂ ಆ ಸಮಯದ ಲಂಕೇಶ್ ಪತ್ರಿಕೆ ನಿಮ್ಮ ಬಳಿ ಇದ್ದರೆ ಗಮನಿಸಬಹುದು. ಆ ಸಂದರ್ಭದಲ್ಲಿ ನನಗೆ ಹಲವಾರು ಪತ್ರಗಳನ್ನೂ ಬರೆದಿದ್ದರು. ನನಗೆ ಈಗಲೂ ಬೇಸರ ಅಂದರೆ ಲಂಕೇಶ ನನಗೆ ಸಾಹಿತ್ಯದ ಕುರಿತಾದ ಚರ್ಚೆಗಿಂತ ಹೆಚ್ಚು ಪ್ರಗತಿರಂಗದ ಕುರಿತಾದ ಚರ್ಚೆಯನ್ನೇ ಹೆಚ್ಚು ನಡೆಸಿದ್ದು. ಆ ದಿನಗಳಲ್ಲಿ ಲಂಕೇಶ ಮೇಲಿನ ಅಭಿಮಾನ, ಗೌರವ ಮುಖ್ಯವಾಗಿ ರಾಜ್ಯಕ್ಕೆ ಒಳ್ಳೆಯದನ್ನು ಕಲ್ಪಿಸಲು ಹೊರಟ ಅವರನ್ನು ಬೆಂಬಲಿಸಿ( ಅಳಿಲು ಸೇವೆ ಅನ್ನಬಹುದು) ಅವರು ಕರೆದ ಒಂದೆರಡು ಸಭೆಗಳಿಗೂ ಹೋಗಿದ್ದೆ. ಭೇಟಿಯಾದಾಗಲೂ ಇದೇ ಮಾತು; ಪತ್ರದಲ್ಲೂ.

ವೈಯುಕ್ತಿಕವಾಗಿ ನನಗೆ ಕೇವಲ ಹಣ ಗಳಿಕೆಯೇ ಮುಖ್ಯವಾದ ರಾಜಕಾರಣಿಗಳನ್ನ ಹೊರತುಪಡಿಸಿ ರಾಜಕಾರಣದ ಬಗ್ಗೆ, ರಾಜಕಾರಣಿಗಳ ಬಗ್ಗೆ ಈಗಲೂ ಅಪಾರವಾದ ಗೌರವವಿದೆ. ರಾಜಕಾರಣವೆಂದರೆ ಸುಲಭದ, ಹುಡುಗಾಟಿಕೆಯ ಕ್ಷೇತ್ರವಲ್ಲ ಎನ್ನುವದೂ ಅರಿವಾಗಿದೆ. ಟಿ.ಎನ್.ಸೀತಾರಾಮ್ ಅವರ ಪ್ರಾಯಶ: ಮುಕ್ತ ಧಾರಾವಾಹಿಯಲ್ಲಿ ಇರಬೇಕು. ಮುಖ್ಯಮಂತ್ರಿಯಾದ ಓರ್ವ ಪಾತ್ರಧಾರಿ ಹೇಳ್ತಾನೆ, ‘ನಾನು ಮುಖ್ಯಮಂತ್ರಿಯಾಗಲು 60 ವರ್ಷ ಶ್ರಮಿಸಿದೆ. ಕಂಡ ಕಂಡವರ ಕಾಲು ಹಿಡಿದೆ.ಒದ್ದಾಡಿದೆ’ ಎನ್ನುವ ಅರ್ಥದಲ್ಲಿ ಮಾತಾಡ್ತಾನೆ. ರಾಜಕಾರಣ ಅತ್ಯಂತ ತಾಳ್ಮೆಯನ್ನ, ಶ್ರಮವನ್ನ, ತ್ಯಾಗವನ್ನ ಕೇಳುವ ಕ್ಷೇತ್ರ. ಸಣ್ಣ ವ್ಯತ್ಯಾಸವಾದರೂ ಆವರೆಗೆ ದುಡಿದದ್ದೆಲ್ಲ ಸತ್ಯನಾಶ. ರಾಜಕಾರಣವನ್ನ ಹಗುರವಾಗಿ ಪರಿಗಣಿಸುವವರು ಸಮಕಾಲೀನ ಸಂದರ್ಭವನ್ನ ಗ್ರಹಿಸಲು ವಿಫಲರು ಅಂತಲೇ ನನಗೆ ಅನ್ನಿಸುತ್ತದೆ.
ಆದರೆ ವೈಯುಕ್ತಿಕವಾಗಿ ನಾನು ರಾಜಕಾರಣ ಮಾಡಲು ಸಾಧ್ಯವಾಗದ ಮನಸ್ಥಿತಿಯ ಮನುಷ್ಯ. ನನಗೆ ಹೆಚ್ಚು ಆಪ್ತವಾಗುವದೇ ಸಂವೇದನಾಶೀಲ ಕ್ಷೇತ್ರ. ಹಾಗಾಗಿ ಲಂಕೇಶರು ಆರಂಭಿಸಿದ ಆ ಚಟುವಟಿಕೆಗಳಲ್ಲಿ ಮೊದ.ಮೊದಲು ಪಾಲ್ಗೊಂಡರೂ ನಂತರ ನಿಧಾನಕ್ಕೆ ಹಿಂದೆ ಸರಿದುಬಿಟ್ಟೆ. ಅಷ್ಟರಲ್ಲೇ ಅಪ್ಪ ತೀರಿಕೊಂಡ ಸಂಸಾರದ ಬಹುಪಾಲು ಜವಾಬ್ದಾರಿ ನನ್ನದೇ ಆಗಿದ್ದರೂ ಅಪ್ಪ ಇರುವ ಧೈರ್ಯವಿತ್ತು
ಅದು ಉಡುಗಿಹೋಯಿತು. ನನ್ನ ಮತ್ತು ನನ್ನ ಕುಟುಂಬದ ಭವಿಷ್ಯ ಆ ಸಮಯದಲ್ಲಿ ಅತಿ ಮುಖ್ಯವಾಗಿತ್ತು. ಒಂದು ರೀತಿಯಲ್ಲಿ ಅಜ್ಞಾತವಾಸಕ್ಕೆ ಹೋಗಿಬಿಟ್ಟೆ. ಆದರೆ ಲಂಕೇಶ ಪತ್ರಿಕೆಯ ಓದು ಮತ್ತು ಅವರ ಸಂಪರ್ಕ ಬಿಟ್ಟಿರಲಿಲ್ಲ.
ಈಗ ಎಷ್ಟೊಂದು ವಿಸ್ಮಯ ಅನ್ನಿಸುತ್ತದೆ ಎಂದರೆ ನನ್ನ ಅಪ್ಪನೂ ಲಂಕೇಶ ಪತ್ರಿಕೆ ಓದುತ್ತಿದ್ದ. ಹಾಗೇ ಅಮ್ಮನೂ. ಆದರೆ ಅಮ್ಮ ಒಂದು ಹೆಜ್ಜೆ ಮುಂದೆ. ಪ್ರತಿವಾರ ಕರಾರುವಕ್ಕಾಗಿ ಒಂದು ದಿನ ಮೊದಲೇ ‘ನಾಳೆ ಲಂಕೇಶ ಪತ್ರಿಕೆ ಬರೋದು ಅಲ್ವಾ?, ಎಂದು ನೆನಪಿಸುತ್ತಿದ್ದಳು! ( ಅಪ್ಪನನ್ನು ಮದುವೆಯಾಗಿ ಕರ್ನಾಟಕಕ್ಕೆ ಬಂದ ಮೇಲೆ ಕನ್ನಡ ಮಾತನಾಡಲು, ಓದಲು ಕಲಿತವಳುÀ ನನ್ನಮ್ಮ).
ಅಪ್ಪ ತೀರಿಕೊಂಡ ನಂತರದಲ್ಲಿ ನನಗೆ ವ್ಯಾವಹಾರಿಕವಾಗಿ ಕೆಲವೊಂದು ಅನಿವಾರ್ಯತೆ ಇತ್ತು. ನಮ್ಮ ಕುಟುಂಬದ ಆಸ್ತಿಯ ವಾರಸುದಾರರಾಗಿ ನಾನು ಅಥವಾ ಅಮ್ಮ ಆಗಬೇಕಿತ್ತು. ಅವರ ಹೆಸರಿನಲ್ಲೇ ಸಹಕಾರಿ ಸಂಘ, ಬ್ಯಾಂಕ್ ಮುಂತಾಗಿ ವ್ಯವಹಾರ ನಡೆಯಬೇಕಿದ್ದರಿಂದ ಅಮ್ಮ, ಅಕ್ಕಂದಿರು ನನಗೇ ಆ ಹಕ್ಕನ್ನು ಕೊಡಲು ಮುಂದಾಗಿದ್ದರು. ಅಪ್ಪ ತೀರಿದ ನಂತರ ನಮ್ಮ ಭಾಗದ ಗ್ರಾಮದ ಗ್ರಾಮ ಲೆಕ್ಕಿಗರು( ಆಗ ಶ್ಯಾನುಭೋಗರು ಅನ್ನುತ್ತಿದ್ದರು) ಬಂದು ಪಂಚನಾಮೆ ಮಾಡಿ ‘ಈಗ ಪೆನ್ಸಿಲ್ ಎಂಟ್ರಿ ಆಗಿರುತ್ತದೆ, ಇನ್ನು ತಿಂಗಳ ನಂತರ ಲೇಖಿ ಆಗುತ್ತದೆ. ನಿಮ್ಮದೆಲ್ಲ ಕಾರ್ಯ ಮುಗಿದ ನಂತರ ನನ್ನ ಬಂದು ನೋಡಿ’ ಎಂದು ಹೋದರು. ಅಪ್ಪನ ಕ್ರಿಯಾಕರ್ಮಗಳನ್ನ ಮುಗಿಸಿದ ನಂತರ ಹೋಗಿ ಕಂಡೆ. ‘ ನೋಡು, ಕಾಗದ ಪತ್ರ ಮಾಡೋದು, ಮೇಲಿನವರಿಗೆ ಕೊಡೋದು, ಇದೆಲ್ಲ ಕೆಲಸ ಮಾಡೋದಕ್ಕೆ ರೊಕ್ಕ ಖರ್ಚಾಗ್ತದೆ. ಕೊಡೋ ಹಾಗಿದ್ರೆ ಮಾಡ್ತೀನಿ’ ಅಂದರು. ನನಗೆ ಅನಿವಾರ್ಯತೆ ಇತ್ತು. ‘ಆಯ್ತು, ಎಷ್ಟು ಕೊಡಬೇಕು?’ ಅಂದೆ. ‘250 ರೂ.ಕೊಡು’ ಅಂದರು. ಆಗ ನಾನು ಅಕ್ಷರಶ: ಬರಿಗೈ ಭಿಕಾರಿ. ಫಸಲು ಕೊಯ್ಲಾಗಿರಲಿಲ್ಲ, ಅಡಕೆ ಸೊಸೈಟಿಯಲ್ಲಿ ಅಪ್ಪನ ಹೆಸರಿನಲ್ಲಿ ಖಾತೆ ಇದ್ದ ಕಾರಣ ಹಣ ದೊರಕುತ್ತಿರಲಿಲ್ಲ. ಕ್ರಿಯಾವಿಧಿಗಳಿಗೆ ಸಾಕಷ್ಟು ಹಣ ಖರ್ಚಾಗಿ, ಒಂದಿಷ್ಟು ಸಾಲವನ್ನೂ ಮಾಡಿದ್ದೆ. ಅವರ ಬಳಿ ಕೊಸರಾಡಿ, ಅಂತೂ 200 ರೂ.ಗೆ ಒಪ್ಪಿಸಿದೆ. ಆಗಿನ 200 ಈಗಿನ 10-12 ಸಾವಿರವಾಗಬಹುದೇನೋ? ಮತ್ತಷ್ಟು ದಿನ ಬಿಟ್ಟು ಹಣ ಹೊಂದಿಸಿಕೊಂಡು ಹೋದರೆ ಆ ಆಸಾಮಿ ವರಸೆ ಬದಲಾಯಿಸಿದ್ದ.’ ಇಷ್ಟು ಕಡಿಮೆ ದುಡ್ಡಿಗೆ ಯಾರು ಮಾಡ್ತಾರೆ? 400ರ ಕಮ್ಮಿ ಆಗೋದೇ ಇಲ್ಲ’ ಎಂದು ಹೇಳಿದ್ದಲ್ಲದೇ ‘ಬೆಲ್ಲ ಹಾಕಿದಷ್ಟೂ ಸಿಹಿ ಆಗ್ತದೆ’ ಎನ್ನಬೇಕೆ. ಮೊದಲೇ ಸಂಕಟ, ತಳಮಳದಲ್ಲಿ ಇದ್ದ ನನಗೆ ದಿಕ್ಕೇ ತೋಚದ ಹಾಗಾಯಿತು. ಲಂಕೇಶ ಪತ್ರಿಕೆ ಓದುತ್ತಿದ್ದ ಕಾರಣ ಒಳಗಿದ್ದ ಕೆಚ್ಚು ಗರಿಗೆದರಿತು. ಸೀದಾ ಆಗಿನ ತಹಸೀಲದಾರರ ಬಳಿ ಹೋದೆ. ಆಗ ಎಜಾಕ್ ಅಹಮದ್ ಎನ್ನುವವರು ತಹಸೀಲದಾರರಾಗಿದ್ದರು. ಜನಪರವಾದ, ಪ್ರಾಮಾಣಿಕ ಅಧಿಕಾರಿ ಎಂದು ಹೆಸರಾಗಿದ್ದರು. ಸರಳವಾಗಿ,ಎಲ್ಲರೊಂದಿಗೆ ಬೆರೆಯುವದನ್ನು ದೂರದಿಂದಲೇ ನೋಡಿದ್ದೆ. ( ಸಿದ್ದರಾಮಯ್ಯನವರ ಸರಕಾರದಲ್ಲಿ ಸಚಿವೆಯಾಗಿದ್ದ ಉಮಾಶ್ರೀ ಅವರ ಆಪ್ತ ಕಾರ್ಯದರ್ಶಿಯಾಗಿ ಅವರು ನಿವೃತ್ತಿ ಹೊಂದಿದ್ದನ್ನ ಕೇಳಿದೆ). ಅವರಲ್ಲಿ ನನಗೆ ನ್ಯಾಯ ಸಿಗಬಹುದು ಎಂದು ಹೋಗಿ ಅವರಲ್ಲಿ ವಿಷಯ ಹೇಳಿದೆ. ಚಿಕ್ಕ ಹುಡುಗನಾದ ನನ್ನ ಬಗ್ಗೆ ಅನುಕಂಪವಾಗಿರುವದು ಅವರ ಮುಖದಲ್ಲೇ ತಿಳಿದಿತ್ತು. ಎಲ್ಲ ವಿವರ ಪಡೆದ ಅವರು ‘ಸರಿ ಮಾಡಿ ಕೊಡಿಸ್ತೇನೆ’ ಎಂದು ಭರವಸೆ ಕೊಟ್ಟು ಕಳುಹಿಸಿದರು. ಆದರೆ ಒಂದು ಎಡಬಟ್ಟು ಆಗಿಹೋಗಿತ್ತು. ನಾನು ತಹಸೀಲದಾರರ ಬಳಿ ದೂರು ಹೇಳುತ್ತಿದ್ದುದನ್ನ ಕೇಳಿಸಿಕೊಂಡ ಓರ್ವ ಶ್ಯಾನುಭೋಗರು ನಮ್ಮ ಫಿರ್ಕಾದ ಶ್ಯಾನುಭೋಗರಿಗೆ ಅವೆಲ್ಲ ಚಾಡಿ ಹೇಳಿದ್ದರು. ತಹಸೀಲದಾರರು ಅವರನ್ನು ಕರೆಸಿ ವಿಚಾರಣೆ ನಡೆಸುವಷ್ಟರಲ್ಲಿ ಆತ ‘ಪೆನ್ಸಿಲ್ ಎಂಟ್ರಿ ಮಾಡಿ,ಅದರ ಅವಧಿ ಮುಗಿದ ನಂತರವೂ ಸಂಬಂಧಿಸಿದ ಖಾತೆದಾರರು ಸೂಕ್ತ ದಾಖಲಾತಿ ಕೊಡದ ಕಾರಣ ಅವರ ಕುಟುಂಬದ ಆಸ್ತಿಯನ್ನು ಸಾಮೂಹಿಕ ಮಾಡಲಾಗಿದೆ’ ಎಂದು ಶರಾ ಬರೆದು ದಾಖಲಿಸಿಬಿಟ್ಟಿದ್ದರು. ನಂತರ ಅವರನ್ನು ಬೇರೆ ತಾಲೂಕಿಗೆ ವರ್ಗಾಯಿಸಲಾಯಿತು. ನಾನು ಅಮ್ಮ, ಅಕ್ಕ ಎಲ್ಲರೊಂದಿಗೆ ಕೋರ್ಟಗೆ ಹೋಗಿ ಜಡ್ಜರ ಎದುರು ಅಫಿಡಿವಿಟ್ ಸಲ್ಲಿಸಿ, ಕುಟುಂಬದ ವ್ಯಾವಹಾರಿಕ ಜವಾಬ್ದಾರಿ ತೆಗೆದುಕೊಳ್ಳಬೇಕಾಯಿತು. ಇವೆಲ್ಲ ರಗಳೆ ಆದರೂ ನನಗೆ ಸಮಾಧಾನವಿತ್ತು; ಲಂಚ ಕೊಡದೇ ನನ್ನ ನೈತಿಕತೆಯನ್ನ ಉಳಿಸಿಕೊಂಡೆ ಎನ್ನುವದು. ಅಂಥ ಹೋರಾಟದ ಮನೋಭಾವವನ್ನ, ಒಂಥರಾ ಶುಂಠತನವನ್ನ, ತಿರುಗಿ ಬಿದ್ದರೆ ಯಾರಿಗೂ ಕೇರ್ ಮಾಡದ ಗುಣವನ್ನ ಕಲಿಸಿದ್ದು ಲಂಕೇಶ್ ಮತ್ತು ಪತ್ರಿಕೆ. ( ಮಜಾ ಅಂದರೆ ಕೊನೆಗೂ ನಾನು ಲಂಕೇಶ್ ಪತ್ರಿಕೆ ವರದಿಗಾರನಾಗಲೇ ಇಲ್ಲ, ಮತ್ತೊಬ್ಬ ಮಹಾನುಭಾವರಾದ ರವಿ ಬೆಳಗೆರೆಯವರ ‘ಹಾಯ್ ಬೆಂಗಳೂರ್’ ಗೆ ಎರಡು ವರ್ಷ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದೆ).

ಲಂಕೇಶರಲ್ಲಿ ನಾನು ಗ್ರಹಿಸಿದಂತೆ ಅವರೊಳಗೆ ಕುದಿವ ಅಶಾಂತಿಯಿತ್ತು. ಅನುಭವಿಸಿದ ಅವಮಾನ, ಅನ್ಯಾಯಗಳು ಅವರನ್ನ ಪದೇ ಪದೇ ಕೆಣಕುತ್ತಿದ್ದವೇನೋ? ವಿಕ್ಷೀಪ್ತ ಎನ್ನಲಾಗದ, ಆ ಅಂಶಗಳು ಸಾಕಷ್ಟಿದ್ದ ಮನಸ್ಥಿತಿ ಅವರದ್ದಾಗಿರಬಹುದು ಎನ್ನುವದು ನನ್ನ ಅನಿಸಿಕೆ. ಅಷ್ಟಾದರೂ ಅವರೊಳಗೊಬ್ಬ ಮನುಷ್ಯನಿದ್ದ; ಸಂವೇದಿಸುವ ಗುಣಗಳಿದ್ದವು. ಪ್ರೀತಿ, ವಿಶ್ವಾಸ, ಹುಂಬ ಪ್ರೇಮದ ಹುಡುಗಾಟತನವಿತ್ತು. ಯಾರೂ ಬರೆಯಲಾಗದ ನೀಲೂ ಪದ್ಯಗಳನ್ನು ಅವರೊಬ್ಬರೇ ಬರೆಯುವದಕ್ಕೆ ಸಾಧ್ಯವಾಗಿದ್ದು ಆ ಕಾರಣಕ್ಕೆ. ಅನಾಮಧೇಯನಾಗಿ, ಭಿಕಾರಿಯಾಗಿ, ತೀರಿಕೊಂಡ ಮೇಲೆ ವಿಖ್ಯಾತನಾದ ಬೋದಿಲೇರ್ ಎನ್ನುವ ಕವಿಯಯನ್ನು ಕನ್ನಡಕ್ಕೆ ಪರಿಚಯಿಸಲು ಅವರಿಗೆ ಸಾಧ್ಯವಾಗಿದ್ದು ಅದೇ ಕಾರಣಕ್ಕೆ( ನಾನು ಬೋದಿಲೇರ್ ಕವಿತೆಗಳನ್ನು ಓದಲು ಅವಕಾಶ ಒದಗಿಸಿದ್ದು ಕೆ.ವಿ.ಸುಬ್ಬಣ್ಣ. 1995 ವೇಳೆಗೆ ಅದನ್ನು ಓದಿ ಏನೂ ಅರ್ಥವಾಗದೇ ಕಂಗಾಲಾಗಿದ್ದೆ).
ನಾನೊಂದು ಮಾತು ಕೇಳಿದ್ದೆ. ಮೊದಲೆಲ್ಲ ಕನ್ನಡ ದಿನಪತ್ರಿಕೆಗಳಲ್ಲಿ ಯಾರೇ ಆಗಿರಲಿ, ಅವರ ಹೆಸರಿನ ಮೊದಲು ಶ್ರೀ ಮತ್ತು ಶ್ರೀಮತಿ ಎಂದು ಬರೆಯುವ ಪರಿಪಾಠವಿತ್ತಂತೆ ( ಇದ್ದಿದ್ದೂ ಹೌದು, ಈಗಿನ ಕೆಲವು ದಿನಪತ್ರಿಕೆಗಳಲ್ಲಿ25 ವರ್ಷದ ಹಿಂದೆ, 50 ವರ್ಷದ ಹಿಂದೆ ಎನ್ನುವ ಕಾಲಂ ನಲ್ಲಿ ಅಂದಿನ ಸುದ್ದಿಗಳ ಪುಟ್ಟ ವಿವರ ಹಾಕುತ್ತಾರೆ. ಅದನ್ನು ನೋಡಿದರೆ ಗೊತ್ತಾಗುತ್ತದೆ) ಲಂಕೇಶ್ ಪತ್ರಿಕೆ ಪ್ರಾರಂಭಿಸುವ ಮುನ್ನ ಪ್ರಜಾವಾಣಿಯಲ್ಲಿ ವಾರಕ್ಕೊಮ್ಮೆ ಕಾಲಂ ಬರೆಯುತ್ತಿದ್ದರಂತೆ. ಅದರಲ್ಲಿ ಯಾರೇ ದೊಡ್ಡ ಮನುಷ್ಯರನ್ನ ಉಲ್ಲೇಖಿಸಬೇಕಿದ್ದರೂ ಶ್ರೀ ಮತ್ತು ಶ್ರೀಮತಿ ಲೆಸ್. ಆ ನಂತರದಲ್ಲಿ ಎಲ್ಲ ಪತ್ರಿಕೆಗಳ ಸುದ್ದಿಗಳಲ್ಲೂ ಶ್ರೀ ಮತ್ತು ಶ್ರೀಮತಿ ಎನ್ನುವ ಪದ ಬಳಕೆ ಬಿಟ್ಟರಂತೆ. ಹಾಗೇ ತಪ್ಪಾದ ವ್ಯವಸ್ಥೆಯನ್ನ ಸರಿಪಡಿಸುವ ನಿಟ್ಟಿನಲ್ಲಿ ಹೆಣಗಾಡುವ, ಮತ್ತು ಅದರಲ್ಲೂ ಯಶಸ್ವಿಯಾಗುವ, ಹಿಡಿದ ಕೆಲಸಗಳಲ್ಲಿ ತನ್ನದೇ ಪ್ರಭುತ್ವ ತೋರಿಸುವ ಶಕ್ತಿ ಇದ್ದವರು ಅವರಾಗಿದ್ದರು ಅನಿಸುತ್ತದೆ. ನಾನು ಅವರ ದುರಭಿಮಾನಿ ಅಲ್ಲ, ಹೊಗಳುಭಟನೂ ಅಲ್ಲ. ಅವರ ಕೆಲವು ವಿಚಾರ, ಅಭಿಪ್ರಾಯಗಳಿಗೆ ಈಗಲೂ ವಿರೋಧವಿದೆ. ಆದರೂ ನಿಷ್ಕಲ್ಮಷವಾಗಿ ಮೆಚ್ಚುವ, ಗುಣ,ಅವಗುಣಗಳೆರಡನ್ನೂ ಕಾಣುವ, ಅವರ ಶಕ್ತಿಗೆ, ವಿದ್ವತ್ತಿಗೆ, ಬರವಣಿಗೆಗೆ ಗೌರವಿಸುವ, ಅಭಿಮಾನ ಪಡುವ ಮನಸ್ಸನ್ನು ಉಳಿಸಿಕೊಂಡಿದ್ದೇನೆ. ಲಂಕೇಶರನ್ನು ನಾವು ಒಪ್ಪದಿರಬಹುದು, ಆದರೆ ತಿರಸ್ಕರಿಸಲು ಸಾಧ್ಯವೇ ಇಲ್ಲ, ಈಗಲೂ.
ಗಂಗಾಧರ ಕೊಳಗಿ
(ಮುಂದಿನ ಭಾಗ 16-8-2020ಕ್ಕೆ)

About the author

Adyot

Leave a Comment