- ಆದ್ಯೋತ್ ಸುದ್ದಿನಿಧಿ:
ಕರ್ನಾಟಕದ ರಾಜಕೀಯದಲ್ಲಿ ದಿ.ರಾಮಕೃಷ್ಣ ಹೆಗಡೆಯವರ ಹೆಸರು ಅಜರಾಮರ ಹಲವು ಹೊಸಬಗೆಯ ಜನೋಪಯೋಗಿ ಯೋಜನೆಗಳನ್ನು ರಾಜ್ಯಕ್ಕೆ ನೀಡಿದವರು. ಇಂತಹ ಮುತ್ಸದ್ದಿಯ 95ನೇಜನ್ಮ ದಿನಾಚರಣೆ ಶನಿವಾರ.ಇದರ ಪ್ರಯುಕ್ತ ಆದ್ಯೋತ್ ನ್ಯೂಸ್ ಒಂದು ಪುಟ್ಟ ಬರಹವನ್ನು ನೀಡುತ್ತಿದೆ
ನಾಡು ಕಂಡ ಮುತ್ಸದ್ಧಿ ರಾಜಕಾರಣಿ “ದೊಡ್ಮನೆ ರಾಮಕೃಷ್ಣ ಹೆಗಡೆ”
ದೇಶಪ್ರೇಮದ ಹಿನ್ನೆಲೆಯುಳ್ಳ ಕುಟುಂಬದಲ್ಲಿ ರಾಮಕೃಷ್ಣ ಹೆಗಡೆಯವರು ಜನಿಸಿದ್ದು 29 ಅಗಸ್ಟ 1926 ರಂದು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕ ದೊಡ್ಮನೆಯ ಮಹಾಬಲೇಶ್ವರ ಹೆಗಡೆ ಹಾಗೂ ಶ್ರೀಮತಿ ಸರಸ್ವತಿ ಹೆಗಡೆ ದಂಪತಿಗಳ ಮಗನಾಗಿ ಜನಿಸಿದ ಹೆಗಡೆಯವರು ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದು ಸಿದ್ದಾಪುರದಲ್ಲಿ. ವಾರಣಾಸಿಯ ಕಾಶಿ ವಿದ್ಯಾಪೀಠದಲ್ಲಿ ವಿದ್ಯಾಭ್ಯಾಸ ನಡೆಸಿದ ಹೆಗಡೆಯವರು ಬನಾರಸ ಹಿಂದೂ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದವರು. ಹೆಗಡೆಯವರು ಅಲಹಾಬಾದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಸಹ ಪಡೆದವರು. ರಾಜ್ಯದ ಹತ್ತನೇ ಮುಖ್ಯ ಮಂತ್ರಿಯಾಗಿ ವಿಶೇಷವಾಗಿ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ರಾಜ್ಯದ ಚುಕ್ಕಾಣಿ ಹಿಡಿದ ಹೆಗಡೆಯವರು ಮೂರು ಬಾರಿ ಮುಖ್ಯಮಂತ್ರಿ ಗಾದಿಯಮೇಲೆ ಕುಳಿತವರು. ವಿಧಾನಸಭೆಗೆ ಆರು ಸಲ, ರಾಜ್ಯಸಭೆಗೆ ಎರಡು ಸಲ ಆಯ್ಕೆಯಾದವರು.ನಮ್ಮ ಮಣ್ಣಿನ ಮಗನಾಗಿ ತಮ್ಮ ವಿವಿಧ ಯೋಜನೆ-ಯೋಚನೆಗಳ ಮೂಲಕ ರಾಜ್ಯದ ಹೆಸರನ್ನು ದೇಶದುದ್ದಗಲಕ್ಕೂ ಬಿತ್ತರಿಸಿದ ಹಿರಿಮೆ ಹೆಗಡೆಯವರಿಗೇ ಸಲ್ಲುತ್ತದೆ. “ಮರಣ ಮೃದಂಗ”,”ಪ್ರಜಾಶಕ್ತಿ” ಸಿನಿಮಾಗಳಲ್ಲೂ ನಟನೆ ಮಾಡಿರುವ ಹೆಗಡೆಯವರು ಸಾಂಸ್ಕøತಿಕ ಪ್ರಜ್ಞೆ ಮೆರೆದವರು.
ಅಲಂಕರಿಸಿದ ವಿವಿಧ ಹುದ್ದೆಗಳು: ವಿಧಾನ ಪರಿಷತ್ತಿನ ವಿರೋಧಪಕ್ಷಗಳ ನಾಯಕರಾಗಿ,ಮಂತ್ರಿಯಾಗಿ,ಮುಖ್ಯಮಂತ್ರಿಯಾಗಿ,ರಾಷ್ಟ್ರೀಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಕೇಂದ್ರ ಸಚಿವರಾಗಿ, ದಕ್ಷ ಸೇವೆ ಸಲ್ಲಿಸಿದ್ದ ಹೆಗಡೆಯವರು ಬದುಕಿನ ಸಮಗ್ರ ಗ್ರಹಿಕೆಗಳಿಂದ,ನೀತಿ,ಸಾತ್ವಿಕತೆ,ಜಾತ್ಯಾತೀತ ಮನೋಭಾವದಿಂದ ಕೂಡಿದ ಪರಿಪಕ್ವ ವ್ಯಕ್ತಿತ್ವವನ್ನು ಹೊಂದಿದ್ದರು.ಓದು,ಸಂಗೀತ,ನಾಟಕ,ಕಲೆ,ಸಂಸ್ಕøತಿ,ಪರಿಸರ,ಪ್ರಕೃತಿ ವಿಷಯಗಳಿಗೂ ರಾಜಕೀಯದಷ್ಟೇ ಮಹತ್ವ ನೀಡುತ್ತ ಬಂದಿದ್ದ ಹೆಗಡೆಯವರ ಸರಳತೆ,ಜಾಣತನ,ಜನರ ಕಷ್ಟ_ಸುಖಗಳಿಗೆ ಸ್ಪಂದನೆ ಮಾದರಿಯಾಗಿತ್ತು.ಹೆಗಡೆಯವರು ಅಧಿಕಾರದಲ್ಲಿ ಇರಲಿ,ಇಲ್ಲದಿರಲಿ ಅಭಿಮಾನಿಗಳನ್ನು ಆಯಸ್ಕಾಂತದಂತೆ ಸೆಳೆದುಕೊಳ್ಳುವ ಶಕ್ತಿಯನ್ನು ಹೊಂದಿದ್ದರು.
ಜನತಾದಳದ ರೂವಾರಿ: ಕಾಂಗ್ರೆಸ್‍ಗೆ ಪರ್ಯಾಯವಾಗಿ ರಾಷ್ಟ್ರಮಟ್ಟದಲ್ಲಿ ಜನತಾದಳ ರೂಪುಗೊಳ್ಳುವಲ್ಲಿ ಅವಿರತ ಶ್ರಮವಹಿಸಿದವರು ರಾಮಕೃಷ್ಣ ಹೆಗಡೆಯವರು. 1983 ರಲ್ಲಿ ಹೆಗಡೆಯವರು ಮುಖ್ಯಮಂತ್ರಿಗಳಾದ ನಂತರ ನಜೀರ ಸಾಹೇಬರ ಮುಖಾಂತರ ಮಂಡಲ ಪಂಚಾಯತ ಮತ್ತು ಜಿಲ್ಲಾ ಪರಿಷತ್‍ಗಳ ಕಾಯ್ದೆಯನ್ನು ಮಾಡಿ ಇಡೀ ದೇಶಕ್ಕೇ ಮಾದರಿ ತೋರಿದರು.ಅದರ ಯಶಸ್ಸನ್ನು ಮನಗಂಡು ಅಂದಿನ ಪ್ರಧಾನಮಂತ್ರಿಗಳಾಗಿದ್ದ ರಾಜೀವಗಾಂಧಿಯವರು ಸಂವಿಧಾನವನ್ನೇ ತಿದ್ದುಪಡಿಮಾಡಿ ಪಂಚಾಯತ ಹಾಗೂ ನಗರಸಭೆಗಳ ಆಡಳಿತಕ್ಕೆ ಹೊಸ ರೂಪ ಸ್ಥಾನಮಾನ ನೀಡಿದ್ದು ಸದಾ ಸ್ಮರಣೀಯ. ವಿಧವಾ ವೇತನ,ವೃದ್ಧಾಪ್ಯ ವೇತನ,ಬಾಣಂತಿಯರಿಗೆ ವೇತನ ಸಹಿತ ಮೂರು ತಿಂಗಳ ರಜೆ,ತಾಳೀಭಾಗ್ಯ,ಭಾಗ್ಯಜ್ಯೋತಿ,ಗಂಗಾಕಲ್ಯಾಣ,ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್,ಉಚಿತ ಪಠ್ಯ-ಪುಸ್ತಕ,ಸಮವಸ್ತ್ರ,ಬಡಜನರಿಗೆ ಸೀರೆ-ಪಂಚೆ,ಹಸಿರು ಕಾರ್ಡ ಮೂಲಕ ಕಡಿಮೆ ದರದಲ್ಲಿ ಆಹಾರಧಾನ್ಯ,ಹಳ್ಳಿ ಹೆದ್ದಾರಿ ಯೋಜನೆ, ಹೀಗೆ ಹತ್ತಾರು ಜನಹಿತಕಾರಿ ಯೋಜನೆಗಳನ್ನು ಹೆಗಡೆಯವರು ಜಾರಿಗೆ ತಂದಿದ್ದು ಕೇಂದ್ರ ಮತ್ತು ಅನೇಕ ರಾಜ್ಯ ಸರಕಾರಗಳು ಅವನ್ನು ಅನುಕರಣೆ ಮಾಡುವಂತಾಯಿತು.18 ವರ್ಷದವರಿಗೆ ಮತದಾನದ ಹಕ್ಕು ಮತ್ತು ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ಪದ್ಧತಿ ಜಾರಿಗೆ ತಂದು ಸಂವಿಧಾನಕ್ಕೆ ಸವಾಲು ಒಡ್ಡಿದವರು ಹೆಗಡೆಯವರು.ಉತ್ತರಕನ್ನಡ ಜಿಲ್ಲೆಯ ಕಾಳಿನದಿ ಯೋಜನೆ,ಕೈಗಾ ಅಣು ಸ್ಥಾವರ,ಕಾರವಾರ ಬಂದರು,ಸೀಬರ್ಡ ಯೋಜನೆಯ ಜೊತೆಯಲ್ಲಿ ಕೊಂಕಣ ರೈಲ್ವೆ ಅಸ್ತಿತ್ವ ಪಡೆಯುವಲ್ಲಿ ಹೆಗಡೆಯವರ ಮಾರ್ಗದರ್ಶನ ಲಭಿಸಿದೆ.ಜಿಲ್ಲೆಯ ಅನೇಕ ಹಳ್ಳಿಗಳು ಬೆಳಕು ಕಂಡಿದ್ದು ಹೆಗಡೆಯವರಿಂದ.ಜಿಲ್ಲೆಯಲ್ಲಿಯ ಅನೇಕ ರಸ್ತೆ,ಸೇತುವೆ,ವಿದ್ಯುತ್ ಸಂಪರ್ಕ,ಶಾಲೆ ಕಾಲೇಜು ಸ್ಥಾಪನೆಯಲ್ಲಿ ಹೆಗಡೆಯವರ ಕೊಡುಗೆ ಅನನ್ಯ.
ಸ್ವಂತಿಕೆಯ ಸಾಕಾರ ಮೂರ್ತಿ: ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ 13 ತಿಂಗಳು ಕಾರಾಗ್ರಹ ವಾಸ ಮಾಡಿದ್ದ ಹೆಗಡೆಯವರು ಜನತಾ ಪಕ್ಷದ ವಕ್ತಾರರಾಗಿ,ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು. ಉಪಸಚಿವರಾಗಿ,ಸಂಪುಟ ಸಚಿವರಾಗಿ, ಮುಖ್ಯಮಂತ್ರಿಯಾಗಿ, ಕೇಂದ್ರಸಚಿವರಾಗಿ, ಇಂಡೋ-ಫ್ರೆಂಚ್ ಕಮೀಶನ್ ಚೇರ್‍ಮನ್‍ರಾಗಿ, ನಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದವರು.ಲೋಕಾಯುಕ್ತವನ್ನು,ಕನ್ನಡ ಕಾವಲು ಸಮಿತಿಯನ್ನು ಹುಟ್ಟುಹಾಕಿದವರು.
ನೆನಪು ಚಿರಂತನ: 12 ಜನೆವರಿ 2004 ರಂದು ಸ್ವರ್ಗಸ್ಥರಾದ ಹೆಗಡೆಯವರು ಇಂದು ನಮ್ಮನ್ನಗಲಿ ಹಲವಾರು ವರ್ಷಗಳು ಸಂದಿದ್ದರೂ ಅವರ ಒಡನಾಡಿಗಳಿಗೆ, ಸಂಪರ್ಕದಲ್ಲಿ ಬಂದ ಕಿರಿಯರಿಗೆ ಅವರ ನೆನಪು ಸದಾ ಹಸಿರಾಗಿದೆ. ಮೌಲ್ಯಾಧಾರಿತ ರಾಜಕಾರಣಕ್ಕೆ ಭಾಷ್ಯ ಬರೆದಿದ್ದ ಹೆಗಡೆಯವರ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಅವರ ಆತ್ಮಕ್ಕೆ ಶಾಂತಿಕೋರುವುದು ನಮ್ಮ ಕರ್ತವ್ಯವಾಗಿದೆ. ತಮ್ಮ ಯೋಜನೆಗಳ ಮುಖಾಂತರ ದೀನ ದಲಿತರನ್ನು, ಬಡವರನ್ನು ಮುಖ್ಯವಾಹಿನಿಗೆ ತರುವಲ್ಲಿ ಹತ್ತಾರು ಮಾದರಿ ಕಾರ್ಯಕ್ರಮಗಳನ್ನು ಜಾರಿಗೆ ತಂದ, ರಾಜ್ಯ ಕಂಡ “ಅಪ್ರತಿಮ ಮುತ್ಸದ್ಧಿ ಮುಖ್ಯಮಂತ್ರಿ” ಎಂಬ ಖ್ಯಾತಿಯನ್ನು ಮುಡಿಗೇರಿಸಿಕೊಂಡ ಹೆಗಡೆಯವರ ಜನ್ಮದಿನಾಚರಣೆಯನ್ನು ರಾಜ್ಯ ಸರಕಾರ ಆಚರಿಸುವ ಮೂಲಕ ಕೃತಜ್ಞತೆ ಸಲ್ಲಿಸಬೇಕಾಗಿದೆ. ಸಿದ್ದಾಪುರದ ರಾಮಕೃಷ್ಣ ಹೆಗಡೆ ಚಿರಂತನ(ರಿ)ಸಂಘಟನೆಯು ಹೆಗಡೆಯವರ ಜನ್ಮದಿನೋತ್ಸವವನ್ನು(ಅಗಷ್ಟ 29 ರಂದು) ವಿವಿಧ ವಿಧಾಯಕ ಕಾರ್ಯಕ್ರಮಗಳ ಮೂಲಕ ನಡೆಸಿಕೊಂಡುಬರುತ್ತಿದೆ.
* ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ರಿಯಾಯತಿ ದರದಲ್ಲಿ ಬಸ್ ಪಾಸ್ ಒದಗಿಸಿದವರು ರಾಮಕೃಷ್ಣ ಹೆಗಡೆಯವರು.
* ಸಮಗ್ರ ಶಿಕ್ಷಣ ಕಾಯಿದೆಯನ್ನು ಹುಟ್ಟುಹಾಕಿದ್ದಲ್ಲದೇ ರ್ಯಾಗಿಂಗ್ ನಿಷೇಧವನ್ನು ಹೇರಿದವರು ಹೆಗಡೆಯವರು.
* 1986 ರಲ್ಲಿ ಲೋಕಾಯುಕ್ತ ಕಾನೂನನ್ನು ರೂಪಿಸಿದವರು ಹೆಗಡೆಯವರು.
* ತಮ್ಮ ಮಗನ ಮೇಲೆ ಎ.ಕೆ.ಸುಬ್ಬಯ್ಯನವರು ಎಂಡಿ ಸೀಟಿನ ಕುರಿತು ಆಪಾದನೆ ಮಾಡಿದಾಗ ನ್ಯಾಯಾಂಗ ತನಿಖೆಗೆ ಒಪ್ಪಿಸಿದವರು ಹೆಗಡೆಯವರು.
* ಬಂಗಾರಪ್ಪನವರು ಗಣೇಶ ಹೆಗಡೆಯವರ ಮೇಲೆ ಅಂತರರಾಜ್ಯ ಅಕ್ಕಿ ಸಾಗಣಿಕೆಯ ಆರೋಪ ಮಾಡಿದಾಗ ಅದರ ತನಿಖೆಗೆ ಆದೇಶಿಸಿದವರು ಹೆಗಡೆಯವರು.
* ದೂರವಾಣಿ ಕದ್ದಾಲಿಕೆಯ ಆರೋಪಕ್ಕೆ ಗುರಿಯಾದಾಗ ತಕ್ಷಣ ರಾಜೀನಾಮೆ ಎಸೆದವರು ಹೆಗಡೆಯವರು.
* 1985 ರಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದಾಗ ರಾಜೀನಾಮೆ ಸಲ್ಲಿಸಿದವರು ಹೆಗಡೆಯವರು.
* ದೇವೇಗೌಡ, ಜೀವಿಜಯ, ಸೋಮಶೇಖರ ಅವರ ಮೇಲೆ ಆಪಾದನೆ ಬಂದಾಗ ಮುಖ್ಯಮಂತ್ರಿಯಾಗಿ ಅವರಿಂದ ರಾಜೀನಾಮೆ ಸ್ವೀಕರಿಸಿ ತನಿಖೆಗೆ ಆದೇಶಿಸಿದವರು ಹೆಗಡೆಯವರು.
* ಕುಟುಂಬ ರಾಜಕಾರಣದಿಂದ ದೂರವಿದ್ದವರು ಹೆಗಡೆಯವರು.
* ಲೋಕಾಯುಕ್ತಕ್ಕೆ ಬೇರೆ ರಾಜ್ಯದ ನ್ಯಾಯಾಧೀಶರನ್ನು ನೇಮಕ ಮಾಡಿದವರು ಹೆಗಡೆಯವರು.
* ಜಿಲ್ಲೆಯಲ್ಲಿ ತೋಟಗಾರಿಕಾ ನಿಗಮ ಹುಟ್ಟುಹಾಕಿದ್ದಲ್ಲದೇ ರಾಜ್ಯದಲ್ಲಿ ರಾಜೀವಗಾಂಧಿ ನ್ಯಾಶನಲ್ ಹಾರ್ಟಿಕಲ್ಚರ್ ಬೋರ್ಡ ಹುಟ್ಟುಹಾಕಿದವರು ಹೆಗಡೆಯವರು.
* ಸಹಕಾರ ಕ್ಷೇತ್ರ ಮುಕ್ತವಾಗಿ, ಸ್ವಾಯತ್ತವಾಗಿ, ಸ್ವಾವಲಂಬಿಯಾಗಿ ಕಾರ್ಯನಿರ್ವಹಿಸಬೇಕು. ಸಹಕಾರ ಕ್ಷೇತ್ರಕ್ಕೆ ಮಂತ್ರಿ ಶಾಖೆ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದವರು ಹೆಗಡೆಯವರು.
* “ಕರ್ನಾಟಕದ ಆಡಳಿತ ಕರ್ನಾಟಕದಿಂದಲೇ.. ದಿಲ್ಲಿಯಿಂದಲ್ಲ” ಎಂದು ಘೋಷಿಸಿದವರು ಹೆಗಡೆಯವರು.
* ದೇಶದ ಪ್ರಧಾನಿಯವರು (ಶ್ರೀಮತಿ ಇಂದಿರಾಗಾಂಧಿ) ರಾಜ್ಯಕ್ಕೆ ಆಗಮಿಸಿದಾಗಲೂ ತಮ್ಮ ಮೌನಾಚರಣೆಯನ್ನು ಮುರಿಯದ ವೃತನಿಷ್ಠ ಹೆಗಡೆಯವರು.
* ಚುನಾವಣೆ ಸರಳವಾಗಿರಬೇಕು, ಚುನಾವಣಾ ವೆಚ್ಚವನ್ನು ಸರಕಾರವೇ ಭರಿಸಬೇಕು, ಪ್ರಚಾರದ ಜವಾಬ್ದಾರಿಯನ್ನು ಚುನಾವಣಾ ಆಯೋಗ ಹೊರಬೇಕು ಎಂದು ಅಭಿಪ್ರಾಯ ಪಟ್ಟವರು ಹೆಗಡೆಯವರು.
* ರಾಜೀವಗಾಂಧಿಯವರು ದೇಶದ ಪ್ರಧಾನಿಯಾಗಿದ್ದಾಗ “ಭಾರತೀಯ ರಾಜಕಾರಣಿಗಳಲ್ಲಿ ಅತ್ಯಂತ ಉತ್ತಮರು ಯಾರು?” ಎಂಬ ಇಂಗ್ಲೀಷ್ ಪತ್ರಿಕೆಯ ಪ್ರಶ್ನೆಗೆ ರಾಜೀವಗಾಂಧಿಯವರಿಗಿಂತ ಐದು ಹೆಚ್ಚಿನ ಅಂಕ ಪಡೆದವರು ಹೆಗಡೆಯವರು.
* ಮಧ್ಯರಾತ್ರಿಯಲ್ಲೂ ಮಹಿಳೆಯರು ನಿರ್ಭೀತಿಯಿಂದ ಸಂಚರಿಸುವಂತಾಗಬೇಕು ಎಂದು ಪೊಲೀಸ್ ಇಲಾಖೆಯ ಮೂಲಕ ಪೋಲಿಪುಂಡರ ಹೆಡೆಮುರಿ ಕಟ್ಟಿಸಿದವರು ಹೆಗಡೆಯವರು.
* ತಮ್ಮ ಅಭಿಪ್ರಾಯಗಳನ್ನು ಬೆಂಬಲಿಸದವರನ್ನೂ ಗೌರವದಿಂದಲೇ ಕಾಣುತ್ತಿದ್ದ ಆದರ್ಶ ರಾಜಕಾರಣಿ ಹೆಗಡೆಯವರು.
* ಹೇಳುವುದೊಂದು ಮಾಡುವುದೊಂದು ಮಾಡದೆ ತಾವು ಹೇಳಿದ್ದನ್ನೇ ಜೀವನದುದ್ದಕ್ಕೂ ಪಾಲಿಸಿ ಇತರರಿಗೆ ಮಾದರಿಯಾದವರು ಹೆಗಡೆಯವರು.
ಲೇಖಕರು— ಕೆಕ್ಕಾರು ನಾಗರಾಜ ಭಟ್
ನೈಜತೆಯ ಲೇಖನ. ಅಭಿನಂದನೆಗಳು. ರಾಜ್ಯದ ಲಕ್ಷಾಂತರ ವಿದ್ಯಾರ್ಥಿ ಗಳು ಬಸ್ ಪಾಸ್ ಸೌಲಭ್ಯ ದಿಂದ ಅಕ್ಷರ ಭಾಗ್ಯ ಕಾಣುಂತಾಯಿತು. ದೂರದೃಷ್ಟಿಯ ಮುತ್ಸದ್ದಿ ರಾಜಕಾರಣಿ. ನಮ್ಮ ಹೆಮ್ಮೆ.