ಆದ್ಯೋತ್ ಸುದ್ದಿನಿಧಿ
ಹವ್ಯಕ ಮಹಾಸಭೆಯಿಂದ ಗುರುಭಿಕ್ಷಾ ಸೇವೆ
ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಅಶೋಕೆಯಲ್ಲಿ ಶ್ರೀರಾಮಚಂದ್ರಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಚಾತುರ್ಮಾಸ್ಯವನ್ನು ನಡೆಸುತ್ತಿದ್ದು ಸೋಮವಾರ ಹವ್ಯಕ ಮಹಾಸಭೆಯವರು ಗುರುಭೀಕ್ಷಾಪೂಜೆ,ಗುರುಪಾದುಕಾ ಪೂಜೆ,ಗೋಸೇವೆಗಳನ್ನು ನೆರವೇರಿಸಿದರು.
ಸೇವೆ ಸ್ವೀಕರಿಸಿ ಮಾತನಾಡಿದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ,ಮಠ ಸನಾತನ ಸಂಸ್ಥೆಯಾದರೆ, ಹವ್ಯಕ ಮಹಾಸಭೆಯು ಪುರಾತನ ಸಂಸ್ಥೆಯಾಗಿದೆ. ಸಮಾಜದ ಹಿತ ಸಾಧನೆಯಲ್ಲಿ ನಿರತವಾಗಿರುವ ಮಹಾಸಭೆಯು ಇತ್ತೀಚಿನ ದಿನಗಳಲ್ಲಿ ಅನೇಕಾನೇಕ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ
ಈ ವರ್ಷದ ಚಾತುರ್ಮಾಸ್ಯವನ್ನು “ವಿದ್ಯಾ ಚಾತುರ್ಮಾಸ್ಯ” ವಾಗಿ ಆಚರಿಸಲಾಗುತ್ತಿದೆ.ಭಾರತೀಯ ವಿದ್ಯೆಗೆ,ಮಕ್ಕಳಿಗೆ ಭವಿಷ್ಯದ ಬೆಳಕು ತೋರಿಸುವ, ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ಪೂರಕವಾದ ಗುರುಕುಲಗಳ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಹೇಳಿದ ಸ್ವಾಮೀಜಿಯವರು,ಹವ್ಯಕ ಮಹಾಸಭೆ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ.ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದಂತಹ ಬೃಹತ್ ಕಾರ್ಯಕ್ರಮವನ್ನು ಸಂಘಟಿಸಿದ ದೃಷ್ಟಾಂತ ನಮ್ಮ ಕಣ್ಣ ಮುಂದೆಯೇ ಇದ್ದು, ಸಮಾಜದ ಸಂಘಟನೆಯಲ್ಲಿ ಮಹಾಸಭೆ ತೊಡಗಿಸಿಕೊಂಡಿದೆ. ಮಹಾಸಭೆಗೆ ಮಠದ ಆಶೀರ್ವಾದ ಸದಾ ಇರಲಿದ್ದು, ಇನ್ನಷ್ಟು ಒಳ್ಳೆಯ ಕಾರ್ಯಗಳ ಮೂಲಕ ಮಹಾಸಭೆ ಸಮಾಜಕ್ಕೆ ಬೆಳಕು ನೀಡಲಿ ಎಂದು ಹಾರೈಸಿದರು.
ಅಖಿಲ ಹವ್ಯಕ ಮಹಾಸಭೆಯ ಪರವಾಗಿ ನಿರ್ದೇಶಕರಾದ ಆರ್ ಜಿ ಹೆಗಡೆ ಹೊಸಾಕುಳಿ ಗುರುಪಾದುಕಾ ಪೂಜೆಯನ್ನು ಮಾಡಿದರು. ಪ್ರಸ್ತುತ ಕೊರೋನಾ ನಿಬಂಧನೆಗಳ ಕಾರಣದಿಂದಾಗಿ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಕಾಸರಗೋಡು, ಹೊರರಾಜ್ಯ ಸೇರಿದಂತೆ ಹವ್ಯಕ ಮಹಾಸಭೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ನೇರವಾಗಿ ಉಪಸ್ಥಿತರಿರಲು ಸಾಧ್ಯವಾಗಿರಲಿಲ್ಲ.
ಗೋಪಾಲಕೃಷ್ಣ ಭಟ್ ಹಂಡ್ರಮನೆ, ಸುಬ್ರಾಯ ಭಟ್ ಮೂರೂರು, ಕೃಷ್ಣಮೂರ್ತಿ ಶಿವಾನಿ, ಅರುಣ್ ಹೆಗಡೆ ಸೇರಿದಂತೆ ಮಹಾಸಭೆಯ ಸ್ಥಳೀಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗರುಪ್ರೇರಣೆ ಸದ್ಗತಿಗೆ ಸಾಕ್ಷಿ.