ಆದ್ಯೋತ್ ಸುದ್ದಿನಿಧಿ:
ವನ್ಯಜೀವಿ ಸಪ್ತಾಹ–2020 ಅಂಗವಾಗಿ ಸೈಕಲ್ ಜಾಥಾ
66ನೇ ವನ್ಯಜೀವಿ ಸಪ್ತಾಹ-2020ರ ಅಂಗವಾಗಿ ಅರಣ್ಯ ಇಲಾಖೆಯವರು ಜನಸಾಮಾನ್ಯರಿಗೆ ರಣಹದ್ದುಗಳ ಸಂರಕ್ಷಣೆ ಮತ್ತು ಆನೆ ಕಾರಿಡಾರ ಮಹತ್ವದ ಅರಿವು ಮೂಡಿಸುವ ಸಲುವಾಗಿ ಅಕ್ಟೋಬರ್-2 ರಿಂದ ಅಕ್ಟೋಬರ್-8 ವರೆಗೆ
ಸೈಕ್ಲೋಥಾನ್ ಸೈಕಲ್ ಜಾಥಾ ಏರ್ಪಡಿಸಿದೆ.
“ಭವಿಷ್ಯಕ್ಕಾಗಿ ರಣಹದ್ದುಗಳು“ಮತ್ತು” ಆನೆ ಕಾರಿಡಾರ ಸಂರಕ್ಷಣೆ” ಪರಿಕಲ್ಪನೆಯ ಈ ಜಾಥಾ ಬೆಳಗಾವಿಯ ಹೆಮ್ಮಡಗಿಯಿಂದ ಚಿಕ್ಕಮಗಳೂರಿನಲ್ಲಿ ಮುತ್ತೋಡಿಯವರೆಗೆ ಒಂದು ತಂಡ ಸೈಕಲ್ ಜಾಥಾ ನಡೆಸಿದರೆ,ಇನ್ನೊಂದು ತಂಡ ಮುತ್ತೋಡಿಯಿಂದ ಬೆಂಗಳೂರಿನ ತನಕ ಸೈಕಲ್ ಜಾಥಾ ನಡೆಸಲಿದೆ.
ಇದರ ಉದ್ದೇಶ ಅವನತಿಯ ಅಂಚಿನತ್ತ ಸಾಗುತ್ತಿರುವ ರಣಹದ್ದುಗಳನ್ನು ಸಂರಕ್ಷಿಸುವುದು ಮತ್ತು ಆನೆಕಾರಿಡಾರ ಸಂರಕ್ಷಣೆ ಮಾಡುವುದು.
ರಣಹದ್ದುಗಳು ಈ ಪ್ರಕೃತಿಯಲ್ಲಿ ವಿಶಿಷ್ಟವಾದ,ಅತಿಅವಶ್ಯಕ ಕಾರ್ಯವನ್ನು ಮಾಡುತ್ತವೆ.ನಮ್ಮ ದೇಶದಲ್ಲಿ ಒಂಬತ್ತು ಜಾತಿಯ ರಣಹದ್ದುಗಳಿದ್ದು ಎಲ್ಲಾ ಭಾಗದಲ್ಲಿ ವಾಸಮಾಡುತ್ತವೆ.ಸತ್ತು ಹೋಗಿರುವ ಪ್ರಾಣಿ,ಪಕ್ಷಿಗಳನ್ನು ತಿನ್ನುವುದರ ಜೊತೆಗೆ ಮಲೆನಾಡಿನ ತೋಟಗಳಿಗೆ ಮಾರಕವಾಗಿರುವ ಮಂಗಗಳ ಮರಿಯನ್ನು ಎಗರಿಸುವುದರಿಂದ ಅವುಗಳ ಸಂತತಿ ನಿಯಂತ್ರಣದಲ್ಲಿತ್ತು.ಆದರೆ ಕಳೆದ ಮೂರು ದಶಕಗಳಿಂದ ಇವುಗಳ ಸಂತತಿ ಇಳಿಕೆಯಾಗುತ್ತಿದೆ.ಇದಕ್ಕೆ ಕಾರಣ ನಮ್ಮ ಅವೈಜ್ಞಾನಿಕ ಚಟುವಟಿಕೆಯೇ ಕಾರಣವಾಗಿದೆ.ಕ್ಷೀರಕ್ರಾಂತಿಯ ಪರಿಣಾಮ ನಾವು ಗೋವುಗಳಿಗೆ ರಾಸಾಯನಿಕ ಔಷಧಗಳನ್ನು ನೀಡಲಾಗುತ್ತಿದೆ ಸತ್ತ ಗೋವುಗಳನ್ನು ತಿನ್ನುವ ರಣಹದ್ದುಗಳು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿವೆ.
ಈಗ ರಣಹದ್ದುಗಳ ಸಂತತಿ ಹೆಚ್ಚಿಸಲು ಹರಿಯಾಣ,ಪಶ್ಚಿಮ ಬಂಗಾಳ,ಅಸ್ಸಾಂ ರಾಜ್ಯಗಳಲ್ಲಿ ಕೃತಕ ಸಂತಾನೋತ್ಪತ್ತಿ ಕೇಂದ್ರ ತೆರೆಯಲಾಗಿದೆ.ಕರ್ನಾಟಕದಲ್ಲಿ ರಾಮನಗರ ಸಮೀಪದ ರಾಮದೇವರ ಬೆಟ್ಟದಲ್ಲಿ ಇಂತಹ ಕೇಂದ್ರಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗಿದೆ.
ನಮ್ಮದೇಶದಲ್ಲಿ ಅತಿ ಹೆಚ್ಚು ಆನೆಗಳಿರುವ ರಾಜ್ಯ ಕರ್ನಾಟಕವಾಗಿದೆ.ಪ್ರಾಕೃತಿಕ ಸಮತೋಲನಕ್ಕೆ ಅತಿಮುಖ್ಯವಾದ ಸಸ್ತಿನಿ ಆನೆಯಾಗಿದೆ.ಆನೆಗಳು ಆಹಾರ,ಆತ್ಮರಕ್ಷಣೆ ಹಾಗೂ ಸಂತಾನೋತ್ಪತ್ತಿಗಾಗಿ ಒಂದು ಆವಾಸ ಸ್ಥಾನದಿಂದ ಇನ್ನೊಂದು ಆವಾಸ ಸ್ಥಾನಕ್ಕೆ ಹೋಗುತ್ತಿರುತ್ತವೆ.ಇವು ವರ್ಷಾನುಗಟ್ಟಲೆ ಒಂದು ಕಡೆ ಇರುತ್ತವೆ ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯರು ಇಂತಹ ಆನೆ ಓಡಾಡುವ ಕಾರಿಡಾರನ್ನು ಅತಿಕ್ರಮಿಸಿ ಬಿಟ್ಟಿದ್ದೇವೆ
ಇದರಿಂದಲೇ ಆನೆ ಮತ್ತು ಮಾನವನ ನಡುವೆ ಸಂಘರ್ಷ ಹೆಚ್ಚುತ್ತಿದೆ. ಪ್ರತಿವರ್ಷ 50ಕ್ಕೂ ಹೆಚ್ಚು ಆನೆಗಳು ಸಾಯುತ್ತಿದ್ದರೆ,ಮನುಷ್ಯರು ಪ್ರಾಣಕಳೆದುಕೊಳ್ಳುವುದರ ಜೊತೆಗೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯನ್ನು ಅನುಭವಿಸುತ್ತಿದ್ದಾರೆ.
ಇದೆಲ್ಲವನ್ನು ತಪ್ಪಿಸಲು ಕೇವಲ ಅರಣ್ಯ ಇಲಾಖೆಯಿಂದ ಸಾಧ್ಯವಿಲ್ಲ ಇದಕ್ಕೆ ಸಾರ್ವಜನಿಕರ ಕೈಜೋಡಿಸುವಿಕೆಯೂ ಅವಶ್ಯಕ.ಇದನ್ನು ಮನಗಂಡಿರುವ ಅರಣ್ಯ ಇಲಾಖೆ ಪರಿಸರ ಪ್ರಿಯರ ಸಹಭಾಗಿತ್ವದಲ್ಲಿ ಸೈಕಲ್ ಜಾಥಾ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದೆ.
ಅಕ್ಟೋಬರ್-2 ರಂದು ಹೊರಟಿದ್ದ ಸೈಕಲ್ ಜಾಥಾ ರವಿವಾರ ಸಿದ್ದಾಪುರ ಹೊಸೂರು ವೃಕ್ಷೋದ್ಯಾನ ವನಕ್ಕೆ ಬಂದಿಳಿಯಿತು.
ಈ ಸಂದರ್ಭದಲ್ಲಿ ಆದ್ಯೋತ್ ನ್ಯೂಸ್ ಜೊತೆಗೆ ಪರಿಸರ ಪ್ರೇಮಿಗಳು ಒಂದಿಷ್ಟು ವಿಷಯ ಹಂಚಿಕೊಂಡರು.
ಸಿದ್ದಾಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿ ಅಜೀಜ್ ಅಹ್ಮದ್, ಪ್ರಕೃತಿಯ ಸಮತೋಲನವಾಗಿರಬೇಕಾದರೆ ಪ್ರತಿಯೊಂದು ಪ್ರಾಣಿಯು ಭೂಮಿಯಲ್ಲಿರಬೇಕು ಆದರೆ ನಮ್ಮ ಪರಿಸರವನ್ನು ಸ್ವಚ್ಛವಾಗಿರಿಸುವ ಕೆಲಸ ಮಾಡುವ ರಣಹದ್ದುಗಳ ಸಂತತಿ ಕ್ಷೀಣಿಸುತ್ತಿದೆ ಅವುಗಳನ್ನು ಉಳಿಸುವ ಕೆಲಸವನ್ನು ಮಾಡಬೇಕಾಗಿದೆ ಅದೇ ರೀತಿ ಆನೆ ಮತ್ತು ಮನುಷ್ಯನ ನಡುವೆ ಸಂಘರ್ಷ ಏರ್ಪಡುತ್ತಿದೆ ಇದಕ್ಕೆ ಮುಖ್ಯ ಕಾರಣ ಆನೆಗಳ ಕಾರಿಡಾರ್ ನಾಶವಾಗಿರುವುದು ಇವನ್ನು ಪುನಃ ಸ್ಥಾಪಿಸಬೇಕು, ಜನರಲ್ಲಿ ಜಾಗೃತಿ ಮೂಡಿಸ ಬೇಕು ಎಂಬ ಉದ್ದೇಶದಿಂದ ಅರಣ್ಯ ಇಲಾಖೆ ವಿವಿಧ ಉದ್ಯೋಗದಲ್ಲಿರುವ ಪರಿಸರ ಪ್ರೇಮಿ ಜನರ ಜೊತೆಗೂಡಿ ಸೈಕ್ಲೋಥಾನ ಸೈಕಲ್ ಜಾಥಾ ಏರ್ಪಡಿಸಿದೆ.
ಸೈಕಲ್ ಜಾಥಾದಲ್ಲಿ ಭಾಗವಹಿಸಿದವರು
ಡಾ.ಮಹಾಂತೇಶ ಬಿರಾದಾರ ಬಿಜಾಪುರ —
ರಣಹದ್ದುಗಳ ರಕ್ಷಣೆ ಮತ್ತು ಆನೆ ಕಾರಿಡಾರಗಳ ಸಂರಕ್ಷಣೆ ಈ ಎರಡು ಘೊಷಣೆಗಳೊಂದಿಗೆ ವನ್ಯಜೀವಿ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಇದು ಕೇವಲ ಅರಣ್ಯ ಇಲಾಖೆಯವರಿಗೆ ಸಂಬಂಧಿಸಿದ್ದು ಎಂದು ಯಾರೂ ತಿಳಿಯಬಾರದು ಇದು ಎಲ್ಲರ ಕರ್ತವ್ಯವಾಗಿದೆ.ರಣಹದ್ದು ಒಂದು ಅಪರೂಪದ ಪ್ರಭೇದವಾಗಿದ್ದು ಅವುಗಳನ್ನು ಉಳಿಸಬೇಕಾಗಿದೆ.
ಅರಣ್ಯ ಇಲಾಖೆ ಇದೇ ಪ್ರಥಮ ಬಾರಿಗೆ ಸೈಕಲ್ ಜಾಥಾ ಏರ್ಪಡಿಸಿದೆ ಇದು ಪರಿಸರಕ್ಕೆ ಪೂರಲವಾಗಿದೆ ಮಿತವ್ಯಯದಲ್ಲಿ ಪರಿಸರ ವೀಕ್ಷಣೆಗೆ ಅನುಕೂಲವಾಗಿದೆ.ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ಜೊತೆಗೆ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸೈಕಲ್ ಜಾಥಾ ನಡೆಸಬೇಕಾಗಿದೆ.
ಡಾ.ಮಲ್ಲಿಕಾರ್ಜುನ ಆಯುರ್ವೇದಿಕ್ ವೈದ್ಯರು,ಮತ್ತು ಉಪನ್ಯಾಸಕರು—
ಇಂದು ವಾಹನಗಳ ಅತಿಹೆಚ್ಚಿನ ಓಡಾಟದಿಂದ ಪರಿಸರ ಮಾಲಿನ್ಯವಾಗುತ್ತಿದೆ.ನಾವು ನಾಲ್ಕು ಹೆಜ್ಜೆ ನಡೆಯುವುದನ್ನು ಬಿಟ್ಟಿದ್ದೇವೆ ಸೈಕಲ್ ಮೇಲೆ ಓಡಾಡುವುದು ಆರೋಗ್ಯ ವೃದ್ಧಿಗೂ ಸಹಾಯವಾಗುವುದು ನಮ್ಮ ದೇಹದ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ ಸೈಕಲ್ ಪರಿಸರಕ್ಕೆ ಪೂರಕವಾಗಿದ್ದು ಅರಣ್ಯ ಇಲಾಖೆ ಉತ್ತಮ ಕೆಲಸ ಮಾಡಿದ್ದು ಮುಂದಿನ ದಿನಗಳಲ್ಲಿ ಇದನ್ನು ಮುಂದುವರಿಸಲಿ.
ಸಂಗಮೇಶ ಪಡನಾಡ್ ಕೆನರಾ ಬ್ಯಾಂಕ್ ಅಧಿಕಾರಿ–ಹಸಿರು ಜಗತ್ತು ನಿರ್ಮಿಸಲು,ರೋಗಮುಕ್ತ ಭಾರತ ನಿರ್ಮಿಸಲು ಸೈಕ್ಲಿಂಗ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಸರಕಾರ ಸ್ಮಾರ್ಟ ಸಿಟಿ ಯೋಜನೆಯಲ್ಲಿ ಸೈಕ್ಲಿಂಗ್ ಅಳವಡಿಸಿಕೊಳ್ಳಬೇಕು.ಅರಣ್ಯ ಇಲಾಖೆಯವರು ನಡೆಸುತ್ತಿರುವ ಇಂತಹ ಪ್ರಯೋಗಗಳನ್ನು ಇತರ ಇಲಾಖೆಯವರು ಅಳವಡಿಸಿಕೊಳ್ಳಬೇಕು.
ನಿರಂಜನ ಪಾಟೀಲ ಪೊಲೀಸ್ ಅಧಿಕಾರಿ—
ಒಂದು ಮಹೋನ್ನತ ಉದ್ದೇಶದಿಂದ ಅರಣ್ಯ ಇಲಾಖೆಯ ಜೊತೆಗೆ ಸಮಾನ ಮನಸ್ಕರು ಕೈಜೋಡಿಸಿ ಈ ಸೈಕಲ್ ಜಾಥಾವನ್ನು ನಡೆಸಲಾಗುತ್ತಿದೆ
ಈ ಜಾಥಾದಲ್ಲಿ ಬೆಳಗಾವಿ,ಬಿಜಾಪುರ,ಬಾಗಲಕೋಟೆ,ಹುಬ್ಬಳ್ಳಿ ಭಾಗದ ವೈದ್ಯಾಧಿಕಾರಿಗಳು,ಬ್ಯಾಂಕ್,ಆರ್.ಟಿ.ಓ. ಪೊಲೀಸ್ಅಧಿಕಾರಿಗಳು ಸೇರಿದಂತೆ ಹಲವು ಸೈಕ್ಲೀಸ್ಟ್ ಗಳು ಭಾಗವಹಿಸಿದ್ದಾರೆ.ಸುಮಾರು 500 ಕಿ.ಮಿ. ಜಾಥಾ ಇದಾಗಿದ್ದು ಮುಂದಿನ ಪೀಳಿಗೆಯವರಿಗೆ ಪರಿಸರದ ಮಹತ್ವ ತಿಳಿಸಲು ಮತ್ತು ಸಂರಕ್ಷಿಸುವ ಉದ್ದೇಶವನ್ನು ಹೊಂದಿದ್ದೇವೆ.
ಈ ಸಂದರ್ಭದಲ್ಲಿ ಸಿದ್ದಾಪುರ ಅರಣ್ಯ ಇಲಾಖೆಯ ಸಹಾಯಕ ಅರಣ್ಯಾಧಿಕಾರಿ ಶಿವಾನಂದ ನಿಂಗಾಣಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು,ಸಿಬ್ಬಂದಿಗಳು ಉಪಸ್ಥಿತರಿದ್ದರು.