ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯಲ್ಲಿ ಕಾರವಾರ,ಶಿರಸಿ,ದಾಂಡೇಲಿ ನಗರಸಭೆಯಾಗಿದ್ದು,ಭಟ್ಕಳ,ಕುಮಟಾ,ಅಂಕೋಲಾ,ಹಳಿಯಾಳ ಪುರಸಭೆಯಾಗಿದೆ.ಸಿದ್ದಾಪುರ,ಯಲ್ಲಾಪುರ,ಹೊನ್ನಾವರ,ಮುಂಡಗೋಡ,ಜಾಲಿ ಪಟ್ಟಣಪಂಚಾಯತ್ ಆಗಿದೆ.
ಈ ಎಲ್ಲ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ನವಂಬರ 10 ರ ಒಳಗೆ ಆಗಬೇಕು ಎಂದು ಕೋರ್ಟ ಸೂಚನೆ ನೀಡಿದೆ.
ಈಗಾಗಲೇ ವಿಧಾನಪರಿಷತ್ ಚುನಾವಣೆ ಮುಗಿಸಿರುವ ಜಿಲ್ಲಾಡಳಿತ ಇನ್ನು ಸ್ಥಳೀಯ ಸಂಸ್ಥೆಗೆ ಸಜ್ಜಾಗುತ್ತಿದೆ.
ಆದ್ಯೋತ್ ನ್ಯೂಸ್ ತನ್ನ ಮಾಹಿತಿಗನುಸಾರ ಕೆಲವು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಸಂಬವನೀಯರ ಹೆಸರನ್ನು ನೀಡುತ್ತಿದೆ
******
ಭಟ್ಕಳ ಪುರಸಭೆಗೆ ಫರ್ವೇಜ್ ಅಧ್ಯಕ್ಷ ಕೈಸರ್ ಉಪಾಧ್ಯಕ್ಷ
23 ಸದಸ್ಯರ ಬಲವಿರುವ ಭಟ್ಕಳ ಪುರಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆ ಸಾಮಾನ್ಯ ಬಂದಿದ್ದು ಇಲ್ಲಿ ಯಾವಾಗಲೂ ತಂಜೀಮ್ ಪ್ರಾಬಲ್ಯವೇ ಇರುತ್ತಿದ್ದು ಈ ಬಾರಿಯೂ ತಂಜಿಂನ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದಿದ್ದಾರೆ ಆದರೆ ಕಾಂಗ್ರೆಸ್ ಬೆಂಬಲದಿಂದ ಆಯ್ಕೆಯಾಗಿರುವ ವಾರ್ಡ ನಂ.2 ರಲ್ಲಿ ಗೆದ್ದು ಬಂದಿರುವ ಮಾಜಿ ಅಧ್ಯಕ್ಷ ಫರ್ವೆಜ್ ಕಾಶಿಂಜಿ ಅಧ್ಯಕ್ಷ ಸ್ಥಾನಕ್ಕೂ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 16ನೇ ವಾರ್ಡ್ನಿಂದ ಗೆದ್ದಿರುವ ಕೈಸರ್ ಮೋತೆಶಾಂ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ತಂಜಿಂನ ಹೆಚ್ಚಿನ ಸದಸ್ಯರ ಒಲವು ಇವರಕಡೆಗಿದೆ ಎನ್ನಲಾಗುತ್ತಿದೆ. ಇದರಿಂದ ಅಧ್ಯಕ್ಷ ಹುದ್ದೆಗೆ ಹಿರಿಯ ಧುರೀಣ ಅಲ್ತಾಪ್ ಖರೂರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿರಿಯ ಸದಸ್ಯ ರವೂಫ್ ನೈತೆ ಆಕಾಂಕ್ಷಿಯಾಗಿದ್ದರೂ ನಿರಾಸೆ ಅನುಭವಿಸಬೇಕಾಗಿದೆ.
—–
ಸಿದ್ದಾಪುರ ಪಟ್ಟಣಪಂಚಾಯತ್ ಚಂದ್ರಕಲಾ ನಾಯ್ಕ ಅಧ್ಯಕ್ಷ,ರವಿ ನಾಯ್ಕ ಉಪಾಧ್ಯಕ್ಷ
15 ಸದಸ್ಯರ ಬಲವಿರುವ ಸಿದ್ದಾಪುರ ಪಟ್ಟಣಪಂಚಾಯತ್ಗೆ 14 ಸದಸ್ಯರು ಬಿಜೆಪಿಯಿಂದಲೇ ಆಯ್ಕೆಯಾಗಿದ್ದು ಒಂದು ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಅ ವರ್ಗ ಮಹಿಳೆ ಬಂದಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಬಂದಿದೆ. ಕಳೆದ ಎರಡು ಬಾರಿಯೂ ಮಹಿಳೆಯರೇ ಅಧ್ಯಕ್ಷರಾಗಿದ್ದರಿಂದ ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ಬರಬೇಕಿತ್ತು ಆದರೆ ರಾಜಕಿಯ ಆಟದಲ್ಲಿ ಮಿಸಲಾತಿ ಬದಲಾಗಿದೆ ಇದರಿಂದ ಎರಡು ಬಾರಿ ಅಧ್ಯಕ್ಷರಾಗಿದ್ದ ಹಿರಿಯ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್ಗೆ ನಿರಾಸೆಯಾಗಿದೆ.ಒಟ್ಟೂ ಆರು ಮಹಿಳಾ ಸದಸ್ಯರಿದ್ದು ಇದರಲ್ಲಿ ಒಬ್ಬರ ಹೊರತುಪಡಿಸಿ ಉಳಿದೆಲ್ಲರೂ ಅಧ್ಯಕ್ಷ ಪದವಿಗೆ ಅರ್ಹರೆ ಇದ್ದಾರೆ. 2ನೇ ವಾರ್ಡ್ನಿಂದ ಆಯ್ಕೆಯಾಗಿರುವ ಚಂದ್ರಕಲಾ ಸುರೇಶ ನಾಯ್ಕ ಅಧ್ಯಕ್ಷ ಹಾಗೂ 6ನೇ ವಾರ್ಡ್ನಿಂದ ಆಯ್ಕೆಯಾಗಿರುವ ರವಿ ವೆಂಕಟರಮಣ ನಾಯ್ಕ ಉಪಾಧ್ಯಕ್ಷರನ್ನಾಗಿ ಮಾಡುವ ಒಲವು ಬಿಜೆಪಿ ಪ್ರಮುಖರದ್ದಾಗಿದೆ ಎನ್ನಲಾಗುತ್ತಿದೆ.