ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯ ಕನ್ನಡ ತಾಯಿ ಶ್ರೀ ಭುವನೇಶ್ವರೀ ದೇವಿಯ ಸನ್ನಿಧಾನದಲ್ಲಿ ವಿವಿಧ ಕನ್ನಡಪರ ಸಂಘಟನೆಯವರಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಮಾತೃವಂದನಾ ಸಮಿತಿಯವರಿಂದ ಮಾತೃವಂದನಾ ಕಾರ್ಯಕ್ರಮ:
ಸ್ಥಳೀಯ ಮಾತೃವಂದನಾ ಸಮಿತಿ,ಭುವನಗಿರಿ ದೇವಾಲಯದ ಆಡಳಿತ ಮಂಡಳಿ,ಗುಂಗೋಡಿನ ಅಶೋಕ ಯುವಕ ಮಂಡಳಿ ಇವರ ಸಹಯೋಗದಿಂದ ಆಯೋಜಿಸಿದ್ದ ಮಾತೃವಂದನಾ ಕಾರ್ಯಕ್ರಮವನ್ನು ತಹಸೀಲ್ದಾರ ಮಂಜುಳಾ ಭಜಂತ್ರಿ ಉದ್ಘಾಟಿಸಿದರು.
ಮಾತೃವಂದನಾ ಸಮಿತಿಯ ಕಾರ್ಯಾಧ್ಯಕ್ಷ ಹಿರಿಯ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ,
ಕನ್ನಡ ತಾಯಿ ಭುವನೇಶ್ವರಿ ಇರುವ ಸಿದ್ದಾಪುರ ತಾಲೂಕು ಸ್ವಾತಂತ್ರ್ಯ ಸಂಗ್ರಾಮದಲ್ಲೂ ಮಹತ್ವದ ಕೊಡುಗೆ ನೀಡಿದೆ
ಕಳೆದ 15 ವರ್ಷದಿಂದ ಮಾತೃವಂದನಾ ಸಂಸ್ಥೆ ಕನ್ನಡರಾಜ್ಯೋತ್ಸವವನ್ನು ಭುವನೇಶ್ವರಿಯ ಸನ್ನಿಧಾನದಲ್ಲಿ ನಡೆಸುತ್ತಿದೆ. ಐತಿಹಾಸಿಕ ಹಿನ್ನಲೆ ಇರುವ ಭುವನೇಶ್ವರಿ ಬಿಳಗಿ ಅರಸರ ಆರಾಧ್ಯ ದೇವತೆ ಇಂತಹ ಪುಣ್ಯಸ್ಥಳದಲ್ಲಿ ಕನ್ನಡ ಆರಾಧನೆ ನಡೆಯುತ್ತಿದೆ. ಇಲ್ಲಿ ಎಲೆಮರೆಯ ಕಾಯಿಯಂತೆ ಸಾಮಾಜಿಕ ಕೆಲಸವನ್ನು ಮಾಡುವವರನ್ನು ಗುರುತಿಸಿ ಸನ್ಮಾನಿಸುತ್ತಿದೆ ಈ ಬಾರಿಯೂ ಸಾಧಕರನ್ನು ಸನ್ಮಾನಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಹಸೀಲ್ದಾರ ಮಂಜುಳಾ ಭಜಂತ್ರಿ ಮಾತನಾಡಿ,ಕನ್ನಡ ಭಾಷೆಯ ಬೆಳವಣಿಗೆಗೆ ಕಾರಣರಾಗಿರುವ ಅರಸರು, ದಾಸರು,ವಚನಕಾರರು ಸೇರಿದಂತೆ ಹಲವರು ನಾಡು-ನುಡಿ ನೆನಪಿಸುವ ಕೆಲಸ ಮಾಡುತ್ತಲೇ ಬಂದಿದ್ದಾರೆ.ಮಕ್ಕಳಿಗೆ ಕನ್ನಡ ನಾಡು ಹಾಗೂ ನುಡಿಯ ಬಗ್ಗೆ ಪ್ರೀತಿ ಬೆಳೆಯುವಂತೆ ನಾವು ಮಾಡಬೇಕಾಗಿದೆ ಕನ್ನಡತನ ನಮ್ಮಲ್ಲಿ ಯಾವತ್ತೂ ಇರಬೇಕು. ಕನ್ನಡವನ್ನು ಪ್ರೀತಿಸಬೇಕು ಎಂದ ಮಾತ್ರಕ್ಕೆ ಬೇರೆ ಭಾಷೆಗಳನ್ನು ಕೀಳಾಗಿ ನೋಡಬೇಕಾಗಿಲ.್ಲ ಅಂದರೆ ನಮ್ಮ ನಾಡಿಗೆ ಮತ್ತು ಮಾತೃ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ಶ್ರೀಮಾತಾ ಅನುಗ್ರಹ ಸನ್ಮಾನ : ಸೇವೆ ಹಾಗೂ ಸಾಧನೆಯ ಹಿನ್ನೆಲೆಯಲ್ಲಿ ಭುವನೇಶ್ವರಿ ದೇಗುಲದ ಪ್ರಧಾನ ಅರ್ಚಕ ಶ್ರೀಧರ ಪರಮೇಶ್ವರ ಭಟ್, ಕೃಷಿಕ ಮಹಿಳೆ ಸುಲೋಚನಾ ಪ್ರಭಾಕರ ಶಾಸ್ತ್ರಿ ನಿವೃತ್ತ ಪ್ರಾಚಾರ್ಯ ಡಿ.ಐ.ಫರ್ನಾಕರ್ ಅವರಿಗೆ ‘ಶ್ರೀಮಾತಾ ಅನುಗ್ರಹʼ ಗೌರವಸನ್ಮಾನ ನೀಡಲಾಯಿತು.
ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿರುವ ಅನಿರುದ್ಧ ಗುತ್ತೀಕರ,ಸಾತ್ವಿಕ ಹೆಗಡೆ, ದಿವ್ಯಾ ಹೆಗಡೆ ಅವರಿಗೆ ಪ್ರತಿಭಾ ಪುರಸ್ಜಾರ ನೀಡಲಾಯಿತು.
ಭುವನೇಶ್ವರಿ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು ಅಧ್ಯಕ್ಷತೆ ವಹಿಸಿದ್ದರು. ಬಿಇಒ ಸದಾನಂದ ಸ್ವಾಮಿ, ನಿವೃತ್ತ ಮುಖ್ಯ ಶಿಕ್ಷಕ ಆರ್.ಎಸ್.ಹೆಗಡೆ ಶಿರಸಿ ಮುಖ್ಯ ಅತಿಥಿಗಳಾಗಿದ್ದರು.
ಭಾರತಿ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು.ಕಾರ್ಯದರ್ಶಿ ಪ್ರಶಾಂತ ಹೆಗಡೆ ವಂದಿಸಿದರು. ಗಣಪತಿ ಹೆಗಡೆ ಗುಂಜಗೋಡು ನಿರೂಪಿಸಿದರು.
*****
ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ರಣಧೀರಪಡೆಯವರಿಂದ ಕರೋನಾ ವಾರಿಯರ್ಸಗೆ ಸನ್ಮಾನ
ಕರ್ನಾಟಕರಣಧೀರಪಡೆಯ ಜಿಲ್ಲಾಧ್ಯಕ್ಷ ಹೇಮಂತ ನಾಯ್ಕ ನೇತೃತ್ವದಲ್ಲಿ ಕರ್ನಾಟಕ ರಣಧೀರಪಡೆಯ ಸದಸ್ಯರು ಭುವನೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ ಆಗಿ ಕಾರ್ಯನಿರ್ವಹಿಸಿದ್ದ ಆರೋಗ್ಯ ಇಲಾಖೆಯ ಮಹಿಳಾ ಕಾರ್ಯಕರ್ತೆಯರನ್ನು,ಆಶಾ ಕಾರ್ಯಕರ್ತೆಯರ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
****
ಶಿರಸಿ ಜಿಲ್ಲಾ ಹೋರಾಟಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ನೇತೃತ್ವದಲ್ಲಿ ಶಿರಸಿ ಜಿಲ್ಲೆ ಮಾಡಬೇಕು ಎಂಬ ಆಗ್ರಹದೊಂದಿಗೆ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಸದಸ್ಯರು ಶಿರಸಿಯಿಂದ ಭುವನಗಿರಿಯವರೆಗೆ ಬೈಕ್ ರಾಲಿ ನಡೆಸಲಾಯಿತು.
****
ಅಭಿನಂದನೆಗಳು ಎಲ್ಲಾ ಕನ್ನಡ ಕನಸುಗಾರರಿಗೆ.