ಲಯನ್ಸ್ ಕ್ಲಬ್ ನಿಂದ ಆಸ್ಪತ್ರೆಗೆ ಪಿಪಿಕಿಟ್ ವಿತರಣೆ : ಆರ್ಯ ಈಡಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮನವಿ

ಆದ್ಯೋತ್ ಸುದ್ದಿನಿಧಿ:
ಲಯನ್ಸ್ ಕ್ಲಬ್‍ನಿಂದ ಆಸ್ಪತ್ರೆಗೆ ಪಿಪಿಕಿಟ್ ವಿತರಣೆ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ತಾಲೂಕು ಸರಕಾರಿ ಆಸ್ಪತ್ರೆಗೆ ಸ್ಥಳೀಯ ಲಯನ್ಸ್ ಕ್ಲಬ್‍ವತಿಯಿಂದ ಶುಕ್ರವಾರ ಕೊವಿಡ್ ಚಿಕಿತ್ಸೆಗೆ ಅನುಕೂಲವಾಗುವ ಸುಮಾರು 275 ಪಿಪಿಕಿಟ್‍ನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಮೂಲಕ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ,ಕೊವಿಡ್ ಪ್ರಾರಂಭದ ದಿನದಲ್ಲಿ ಅದರ ನಿಯಂತ್ರಣಕ್ಕೆ ಅವಶ್ಯಕವಾದ ಸ್ಯಾನಿಟೈಸರ್,ಮಾಸ್ಕ,ಪಿಪಿಕಿಟ್ ಎಲ್ಲವನ್ನು ಬೇರೆ ದೇಶದಿಂದ ಆಮದು ಮಾಡಿಕೊಳ್ಳಬೇಕಿತ್ತು ಆದರೆ ಪ್ರದಾನಿ ನರೇಂದ್ರ ಮೋದಿಯವರ ಆಶಯದಂತೆ ನಮ್ಮ ದೇಶದ ಉದ್ಯಮಿಗಳು ಇವೆಲ್ಲವನ್ನು ತಯಾರಿಸುವ ಮೂಲಕ ಆತ್ಮನಿರ್ಭರವನ್ನು ಸಾಧಿಸಿದರು. ಇನ್ನು ಕೆಲವೇ ದಿನದಲ್ಲಿ ಕೊವಿಡ್ ಲಸಿಕೆಯನ್ನು ನಾವು ತಯಾರಿಸಲಿದ್ದೇವೆ ಎಂದು ಹೇಳಿದ ಕಾಗೇರಿಯವರು ಸಿದ್ದಾಪುರ ಸರಕಾರಿ ಆಸ್ಪತ್ರೆ ಉತ್ತಮ
ಆಸ್ಪತ್ರೆಯಾಗಿದ್ದು ಜನಸಾಮಾನ್ಯರಿಗೆ ಅವಶ್ಯವಿರುವ ಚಿಕಿತ್ಸೆಯನ್ನು ನೀಡಲಾಗುತ್ತಿದೆ.ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು ಇಲ್ಲಿಯ ಬಸ್ ನಿಲ್ದಾಣದ ಕೆಲಸಗಳು ತ್ವರಿತಗತಿಯಲ್ಲಿ ನಡೆಸುವಂತೆ ಹುಬ್ಬಳ್ಳಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಸೂಚಿಸಲಾಗಿದೆ.ಸುಮಾರು 5ಕೋಟಿರೂ. ಕಾಮಗಾರಿಗಳ ಶಂಕುಸ್ಥಾಪನೆ ನಡೆಸಲಾಗಿದೆ.1.09ಕೋಟಿರೂ. ವೆಚ್ಚದ ಕ್ಯಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು,34ಲಕ್ಷರೂ ವೆಚ್ಚದ ಪಟ್ಟಣದ ಪಶುಸಂಗೋಪನಾ ಇಲಾಖೆಯ ಕಟ್ಟಡವನ್ನು ಉದ್ಘಾಟನೆ ಮಾಡಲಾಗಿದೆ ಎಂದು ಹೇಳಿದರು.

ಲಯನ್ ಡಾ.ರವಿ ಹೆಗಡೆ ಹೂವಿನಮನೆ ಮಾತನಾಡಿ,ಲಯನ್‍ಕ್ಲಬ್‍ನ 317 ಬಿ ಜಿಲ್ಲೆಯ ವ್ಯಾಪ್ತಿಯ ಉತ್ತರಕನ್ನಡ ಜಿಲ್ಲೆಗೆ ಸುಮಾರು 30ಲಕ್ಷರೂ. ಮೌಲ್ಯದ ಪಿಪಿಕಿಟ್,ಮಾಸ್ಕ ಇತ್ಯಾದಿಗಳನ್ನು ನೀಡಲಾಗಿದೆ. ಕೇವಲ ಕೊವಿಡ್ ಅಷ್ಟೆ ಅಲ್ಲದೆ ನೆರೆಯಿಂದ ಸಂತ್ರಸ್ತರಾದವರಿಗೂ ಲಕ್ಷಾಂತರ ಮೌಲ್ಯದ ಅಗತ್ಯ ವಸ್ತುಗಳ ಕಿಟ್‍ನ್ನು ನೀಡಲಾಗಿದೆ. ಕೊವಿಡ್ ನಿಯಂತ್ರಣವಾಗಿದೆ ಎಂದು ನಾವು ಭಾವಿಸಬೇಕಿಲ್ಲ ಬೇರೆ ಬೇರೆ ರಾಜ್ಯಗಳಲ್ಲಿ ಎರಡನೇ ಅಲೆ ಪ್ರಾರಂಭವಾಗಿದೆ ಹೀಗಾಗಿ ಎಲ್ಲರೂ ಕೊವಿಡ್ ನಿಯಮವನ್ನು ಪಾಲಿಸುವುದು ಉತ್ತಮ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ,ಎಂ.ಜಿ.ಹೆಗಡೆ ಗೆಜ್ಜೆ,ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ,ಉಪಾಧ್ಯಕ್ಷ ರವಿಕುಮಾರ ನಾಯ್ಕ ಆಸ್ಪತ್ರೆ ವೈದ್ಯ ಡಾ.ರವಿಕುಮಾರ ಮುಂತಾದವರು ಉಪಸ್ಥಿತರಿದ್ದರು.
*****
ಆರ್ಯಈಡಿಗ ನಿಗಮ ಸ್ಥಾಪನೆಗೆ ಬೆಂಬಲ ನೀಡಲು ಮನವಿ
ಶುಕ್ರವಾರ ಪಟ್ಟಣದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಬ್ರಹ್ಮರ್ಷಿನಾರಾಯಣಗುರು ಧರ್ಮಪರಿಪಾಲನಾ ಸಂಘದ(ಬಿಎಸ್‍ಎನ್‍ಡಿಪಿ) ಸ್ಥಳೀಯ ಘಟಕದ ಸದಸ್ಯರು ಅಧ್ಯಕ್ಷ ವಿನಾಯಕ ಆರ್ ನಾಯ್ಕ ನೇತೃತ್ವದಲ್ಲಿ ಆರ್ಯಈಡಿಗ ನಿಗಮ ಸ್ಥಾಪನೆಗೆ ಬೆಂಬಲ ನೀಡಬೇಕೆಂದು ಮನವಿ ನೀಡಿದರು.
20 ಉಪಪಂಗಡವನ್ನು ಒಳಗೊಂಡ ಆರ್ಯಈಡಿಗ ಸಮಾಜದವರು ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ವಾಸವಾಗಿದ್ದಾರೆ.ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮಾಜದವರಾದರೂ ಕೃಷಿ,ಸಾಂಸ್ಕøತಿಕ ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ತಮ್ಮದೇ ಸೇವೆ ಹಾಗೂ ಸಾಧನೆ ಮಾಡುತ್ತಾ ಬಂದಿದ್ದಾರೆ.ರಾಜ್ಯದ ಪ್ರಸಕ್ತ ಸರಕಾರದಲ್ಲಿ ನಮ್ಮ ಸಮಾಜಕ್ಕೆ ಸೇರಿದ ಆರು ವಿಧಾನಸಭಾ ಸದಸ್ಯರು,3 ಜನ ವಿಧಾನಪರಿಷತ್ ಸದಸ್ಯರು ಇದ್ದಾರೆ ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲೂ ಬಹುಸಂಖ್ಯಾತರಾಗಿದ್ದೇವೆ ನಾಲ್ಕು ಬಾರಿ ನಿಮ್ಮ ಗೆಲುವಿಗೆ ನಮ್ಮ ಸಮಾಜದವರ ಸಂಪೂರ್ಣ ಬೆಂಬಲ ನೀಡಿದ್ದೇವೆ ಹೀಗಾಗಿ ನಮ್ಮ ಸಮಾಜದ ಸಮಗ್ರ ಸರ್ವತೋಮುಖ ಅಭಿವೃದ್ಧಿಗೆ ಆರ್ಯಈಡಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕೆಂದು ತಾವು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಉಪಾದ್ಯಕ್ಷ ಅಣ್ಣಪ್ಪ ಜಿ.ನಾಯ್ಕ ಕಡಕೇರಿ,ಸಂಘಟನಾ ಕಾರ್ಯದರ್ಶಿ ಯಶವಂತ ಜಿ.ನಾಯ್ಕ ಬಾಲಿಕೊಪ್ಪ,ಮುಂತಾಧವರು ಉಪಸ್ಥಿತರಿದ್ದರು.

About the author

Adyot

Leave a Comment