ಯಕ್ಷಗಾನ ಕಲಾವಿದ ಬಣ್ಣದ ಕುಷ್ಠ ( ಕೃಷ್ಣ ಗಾಣಿಗ ) ಜಲವಳ್ಳಿ ನಿಧನ

‘ಆದ್ಯೋತ್ ಸುದ್ದಿನಿಧಿ:
ಯಕ್ಷಗಾನದ ಹಿರಿಯ ಕೊಂಡಿಗಳು ಕಳಚುತ್ತಿದ್ದು ಕಳೆದ ಮೂರು- ನಾಲ್ಕು ದಿನದ ಹಿಂದೆ ಶ್ರೀಪಾದ ಹೆಗಡೆ ಹಡಿನಬಾಳರನ್ನು ಕಳೆದುಕೊಂಡಿದ್ದ ಯಕ್ಷಗಾನ ಲೋಕ ರವಿವಾರ ಇನ್ನೊಬ್ಬ ಹಿರಿಯ,ಅಪರೂಪದ ಬಣ್ಣದವೇಷದ ಬಣ್ಣದ ಕುಷ್ಠ ಎಂದೇ ಖ್ಯಾತರಾಗಿದ್ದ 88 ವರ್ಷದ ಕೃಷ್ಣ ಗಾಣಿಗರನ್ನು ಕಳೆದುಕೊಂಡಿದೆ.

ಯಕ್ಷಗಾನ ಪ್ರಸಂಗಗಳಲ್ಲಿ ಬಣ್ಣದವೇಷಕ್ಕೆ ಇರುವ ಅವಧಿ ಬಹಳ ಕಡಿಮೆ ಎರಡು-ಮೂರು ಪದ್ಯಕ್ಕೆ ಸೀಮಿತ ಆದರೆ ಈ ಪಾತ್ರದ ತಯಾರಿಗೆ 3-4 ತಾಸುಗಳೇ ಬೇಕು.ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಪ್ರಸಂಗದಲ್ಲಿ ಈ ಪಾತ್ರಗಳೇ ಮಾಯವಾಗಿದೆ.ಬಣ್ಣದವೇಷ ಎಂದೇ ಕರೆಯಲ್ಪಡುವ
ರಾಕ್ಷಸನ ಪಾತ್ರ ಪೋಷಕ ಪಾತ್ರವಷ್ಟೆ.ವೇಷಧಾರಿ, ಚೌಕಿಮನೆಯಲ್ಲಿ ಕುಳಿತು ತಮ್ಮ ಮುಖವರ್ಣಿಕೆಯನ್ನು ಬರೆಯಲಾರಂಭಿಸುತ್ತಾರೆ. ಇಂಥ ಬಣ್ಣದ ವೇಷಗಳನ್ನು ಸಮರ್ಥವಾಗಿ ನಿಭಾಯಿಸಿ ಕೃಷ್ಣ ಗಾಣಿಗ ಯಕ್ಷಗಾನ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.ವೈಶಿಷ್ಟ್ಯಗಳಿಂದ ಕೂಡಿರುವ ಬಣ್ಣದ ವೇಷಧಾರಿಯ ವೇಷಭೂಷಣಗಳನ್ನು ಜಾಗರೂಕತೆಯಿಂದ ತೊಟ್ಟುಕೊಳ್ಳಬೇಕು. ತೊಟ್ಟಿದ್ದನ್ನು ಜಾಗ್ರತೆಯಿಂದ ಉಳಿಸಿಕೊಳ್ಳುವ ಚಾಕಚಕ್ಯತೆ, ತಾಳ್ಮೆ ಕಲಾವಿದನಿಗೆ ಬೇಕು. ಪರದೆಯ ಹಿಂದೆ ನಿಂತ ‘ಬಣ್ಣದ ವೇಷಧಾರಿ’ ಭಾಗವತನ ಪದ್ಯದ ನಡುವೆ ಕರ್ಕಶ ಧ್ವನಿಯಲ್ಲಿ ಗರ್ಜಿಸಲು ಆರಂಭಿಸುತ್ತಿದ್ದಂತೆ ರಾಕ್ಷಸನ ಪ್ರವೇಶದ ಮುನ್ಸೂಚನೆ ಸಿಕ್ಕು ನಿದ್ದೆಗೆ ಜಾರಿದ್ದ ಪ್ರೇಕ್ಷಕರೂ ಎದ್ದು ಕೂರುವಂತಾಬೇಕು.

ನಾಲ್ಕನೇ ತರಗತಿಯವರೆಗೆ ಓದಿದ್ದ ಕೃಷ್ಣಗಾಣಿಗರು ಎಳೆಯ ವಯಸ್ಸಿನಲ್ಲೇ ‘ಯಕ್ಷಗಾನ ರಂಗ ಶಾಲೆ’ ಪ್ರವೇಶಿಸಿದ್ದರು.ಇಡಗುಂಜಿ ಮೇಳದ ಖಾಯಂ ಕಲಾವಿದರಾಗಿದ್ದ ಇವರು ತಮ್ಮ ಕಲಾಜೀವನದ ಹೆಚ್ಚಿನ ಅವಧಿಯನ್ನು ಈ ಮೇಳದಲ್ಲೆ ಕಳೆದಿದ್ದಾರೆ.ಅಮೃತೇಶ್ವರಿ,ಗುಂಡಬಾಳಮೇಳದಲ್ಲು ಕೆಲವು ವರ್ಷ ಕಲಾಸೇವೆ ಮಾಡಿದ್ದಾರೆ.
ತಾವು ಮಾಡಿದ ಬಣ್ಣದ ವೇಷಗಳಿಂದಾಗಿ ಕೃಷ್ಣ ಗಾಣಿಗ ಅವರು ಗ್ರಾಮೀಣರ ಬಾಯಲ್ಲಿ ‘ಬಣ್ಣದ ಕುಷ್ಠ’ ಎಂದೇ ಪ್ರಸಿದ್ಧಿಯಾದರು. ರಕ್ತಜಂಘಾಸುರ, ಹಿಡಂಬಾಸುರ, ಘಟೋತ್ಕಚ ಮೊದಲಾದ ಪಾತ್ರಗಳು ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟ ಪಾತ್ರಗಳು.

ಯಕ್ಷಗಾನ ಅಕಾಡೆಮಿ ಪ್ರಶಸ್ತಿ,ಉಡುಪಿಯ ಯಕ್ಷಗಾನಕಲಾರಂಗ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಸಾಕಷ್ಟು ಪ್ರಶಸ್ತಿಯನ್ನು ಪಡೆದಿದ್ದಾರೆ. ಹೊನ್ನಾವರ ತಾಲೂಕು ಸಾಹಿತ್ಯಪರಿಷತ್ತು ಇವರನ್ನು ಗೌರವಿಸಿತ್ತು.



About the author

Adyot

Leave a Comment