ಸ್ವರ್ಣವಲ್ಲಿ ಶ್ರೀ ಗಳಿಂದ ಸುದ್ದಿಗೋಷ್ಠಿ: ಜನವರಿ–15ರಿಂದ ಧನಸಂಗ್ರಹ ಅಭಿಯಾನ ಪ್ರಾರಂಭ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ಸೋಂದಾಸ್ವರ್ಣವಲ್ಲೀ ಮಠದಲ್ಲಿ
ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸೋಮವಾರ ಸುದ್ದಿಗೋಷ್ಠಿ ನಡೆಸಿದರು.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಯೋಜನೆಯ ಅನ್ವಯ ಸಮಸ್ತ ಹಿಂದೂ ಸಮಾಜದಿಂದ ಮಂದಿರ ನಿರ್ಮಾಣಕ್ಕಾಗಿ ಧನ ಸಂಗ್ರಹಣೆಗೆ ಸಂಪೂರ್ಣ ಸಹಯೋಗ ನೀಡಲು ವಿಶ್ವ ಹಿಂದೂ ಪರಿಷದ್ ಮುಂದಾಗಿದ್ದು, ಶಿರಸಿ ಜಿಲ್ಲೆಯಲ್ಲಿ ಅಭಿಯಾನದ ಉದ್ಘಾಟನೆ ಜ. 15 ರಂದು ಶಿರಸಿಯ ಯೋಗ ಮಂದಿರದಲ್ಲಿ ನಡೆಯಲಿದೆ. ಅಯೋಧ್ಯೆ ಧರ್ಮದಲ್ಲಿ ಎದ್ದು ಕಾಣುವ ಮೊದಲ ಹೆಸರಾಗಿದೆ. ಮತ್ತೆ ರಾಮಧಾಮ ನಿರ್ಮಾಣ ಆಗುತ್ತಿರುವುದು ಸಂತಸದ ವಿಷಯ. ಅಯೋಧ್ಯೆಗೆ ಪ್ರಾಗೈತಿಹಾಸಿಕ ಇತಿಹಾಸವಿದೆ. ಶ್ರೀರಾಮಜನ್ಮ ಆಗುವ ಮೊದಲೂ ಆ ಸ್ಥಳ ಪವಿತ್ರ ಸ್ಥಳ. ಅದನ್ನು ಮೋಕ್ಷದಾಯಕ ಸ್ಥಳ ಎನ್ನಲಾಗುತ್ತದೆ, ಎಂದು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಇದು ಪೂರ್ಣವಿರಾಮದ ಕಾರ್ಯಕ್ರಮ. ಶತಮಾನಗಳಿಂದ ನಡೆಯುತ್ತಿದ್ದ ಹೋರಾಟ,ದಶಕಗಳ ತೀವ್ರ ಹೋರಾಟ ಸಂಪೂರ್ಣ ಇತ್ಯರ್ಥವಾಗಿದೆ. ರಾಮಮಂದಿರ ನಿರ್ಮಾಣದ ನಂತರ ಆ ವಿಷಯವೇ ತಟಸ್ಥವಾಗಲಿದೆ. ಪಾರದರ್ಶಕ ವ್ಯವಸ್ಥೆಯಲ್ಲಿ ಹಣ ಸಂಗ್ರಹ, ವಿನಿಯೋಗ ಕಲ್ಪಿಸಲಾಗುತ್ತಿದೆ. ಎಲ್ಲ ಜನರ ಭಕ್ತಿ ಮನಸ್ಸನ್ನು ಅಲ್ಲಿಗೆ ತಲುಪಿಸಲಾಗುತ್ತಿದೆ. ಅತಿ ದೊಡ್ಡ ಅಭಿಯಾನ ಇದಾಗಲಿದೆ. ಯಾವುದೇ ಭಿನ್ನಾಭಿಪ್ರಾಯ, ಆಗ್ರಹಗಳಿಲ್ಲದೇ ವ್ಯವಸ್ಥೆ ಆಗುತ್ತಿದೆ. ನೂರಾರು ವರ್ಷದ ಹೋರಾಟ ಮುಕ್ತಾಯ ಕಾಣಲಿದೆ. ಶಿರಸಿ ಧರ್ಮ ರಕ್ಷಾ ಸಮಿತಿ ಉದ್ಘಾಟನಾ ಕಾರ್ಯಕ್ರಮ ಸಂಘಟಿಸಲಿದೆ. ಕಾರ್ಯಕರ್ತರ ಮುಂದೆ ಅಭಿಯಾನ ನಡೆಸಲಾಗುತ್ತಿದೆ ಎಂದರು.

ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ
ಕೇಶವ ಹೆಗಡೆ ಮಾತನಾಡಿ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಫೆ.2020 ರಲ್ಲಿ ಸರಕಾರದಿಂದ ನಿಯೋಜನೆಗೊಂಡ ಟ್ರಸ್ಟ ಆಗಿದೆ. ದೇವಾಲಯ ಭೂಮಿ ಸಮತಟ್ಟು ಮಾಡುವಾಗ ಅನೇಕ ಮೂರ್ತಿಗಳು ದೊರೆತಿದೆ. ಇಡೀ ದೇಶದ ಪುಣ್ಯಜಲವನ್ನು ಸಂಚಯಿಸಿ ಅಗಷ್ಟನಲ್ಲಿ ಭೂಮಿಪೂಜೆ ಮಾಡಲಾಗಿದೆ. ರಾಜಸ್ಥಾನದ ಪಿಂಕ್ ಸ್ಟೋನ್ ಬಳಸಿ ಮಂದಿರ ನಿರ್ಮಾಣಮಾಡಲಾಗುತ್ತಿದೆ. ರಾಮಮಂದಿರ ನಿರ್ಮಾಣಕ್ಕೆ ಪ್ರತೀ ಭಕ್ತರಿಂದ ಆರ್ಥಿಕ ಸಹಾಯ ಪಡೆಯಲು ಆರ್.ಎಸ್ಎಸ್, ಹಿಂದೂ ಜಾಗರಣಾ ವೇದಿಕೆ, ವಿಶ್ವಹಿಂದು ಪರಿಷತ್ ಸೇರಿದಂತೆ 40ಕ್ಕೂ ಹೆಚ್ಚು ಸಂಘಟನೆಗಳ ಒಕ್ಕೂಟ ನಿಧಿ ಸಂಚಯನವನ್ನು ಮಾಡಲು ಹೊರಟಿದೆ, ಎಂದರು.
4 ಲಕ್ಷ ಗ್ರಾಮಗಳಲ್ಲಿ ಶಿಲಾಪೂಜೆಯಾಗಿತ್ತು.22 ಕೋಟಿ ಹಿಂದೂ ಮನೆಗಳಿವೆ.11 ಕೋಟಿ ಕುಟುಂಬಗಳನ್ನು ತಲುಪಲಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 27,500 ಹಳ್ಳಿಗಳನ್ನು, ಸುಮಾರು 90 ಲಕ್ಷ ರಾಮಭಕ್ತರನ್ನು ತಲುಪುವ, ಹಾಗೂ ರಾಮಮಂದಿರಕ್ಕೆ ಧನ ಸಂಗ್ರಹಿಸುವ ಯೋಜನೆಯನ್ನು ವಿಹಿಂಪ ಹಾಕಿಕೊಂಡಿದೆ. ರೂ 10, ರೂ100, ರೂ 1000 ದ ಮುದ್ರಿತ ಕೂಪನ ಗಳ ಸಹಾಯದಿಂದ ಧನಸಂಗ್ರಹ ನಡೆಯಲಿದೆ. ರೂ. 2000 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಅರ್ಪಿಸಿದ ಭಕ್ತರಿಗೆ ರಸೀದಿ ನೀಡಲಾಗುವುದು ಹಾಗೂ ಈ ಭಕ್ತರು ಭಾರತೀಯ ಆದಾಯ ತೆರಿಗೆ ಕಾಯ್ದೆಯ 80ಜಿ ಸೆಕ್ಷನ್ ಅಡಿಯಲ್ಲಿ ತೆರಿಗೆ ವಿನಾಯತಿಯ ಸೌಲಭ್ಯ ಪಡೆಯಬಹುದಾಗಿದೆ. ಭಕ್ತರ ಸಹಭಾಗಿತ್ವ ಇರಲು ಈ ಯೋಜನೆ ರೂಪಿಸಲಾಗಿದೆ. ಕರಪತ್ರ, ಫೋಲ್ಡರ್ಗಳನ್ನು ಟ್ರಸ್ಟ ಪೂರೈಸಲಿದೆ. ಆನ್ಲೈನ್ನಲ್ಲಿ ಪಾವತಿಸಿದ ಹಣಕ್ಕೆ ಅಲ್ಲಿಂದಲೇ ರಸೀದಿ ಬರಲಿದೆ ಎಂದು ಹೆಗಡೆ ಮಾಹಿತಿ ನೀಡಿದರು.

ಸೋಂಪುರ ವಂಶದ ಚಂದ್ರಕಾಂತ ಸೋಂಪುರ ವಾಸ್ತುಶಿಲ್ಪ ನಿರ್ಮಿಸಿದ್ದು, ಯಾವುದೇ ಕಬ್ಬಿಣ, ಸಿಮೆಂಟ್ ಬಳಸದೇ ಮಂದಿರ ನಿರ್ಮಾಣವಾಗಲಿದೆ. ಯಾವುದೇ ವಸ್ತುರೂಪದ ದಾನ ನೀಡಬಾರದೆಂದು ಸಂದೇಶ ನೀಡಲಾಗಿದೆ.ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ತಂಡ ರಚನೆಯಾಗಿದ್ದು ಸಂಕ್ರಾತಿಯಿಂದ ಮಾಘ ಪೂರ್ಣಿಮೆ ಫೆ.15 ರ ತನಕ ಅಭಿಯಾನ ನಡೆಯಲಿದೆ. ಸಂಗ್ರಹವಾದ ಅಷ್ಟೂ ಹಣವನ್ನು 48 ಗಂಟೆಗಳೊಳಗೆ ತೀರ್ಥಕ್ಷೇತ್ರ ಟ್ರಸ್ಟ್ ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ತನ್ನ ತಂಡದಲ್ಲಿ ಸಂಗ್ರಹವಾದ ಹಣವನ್ನು ಜಮೆ ಮಾಡುವ ಪ್ರತಿ ಕಾರ್ಯಕರ್ತರಿಗೆ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಬ್ಯಾಂಕ್ ಆಫ್ ಬರೋಡಾ ಅಥವಾ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ
ನೋಂದಣಿ ಸಂಖ್ಯೆ ನೀಡಲಾಗಿರುತ್ತದೆ. ಹಣ ಸಂಗ್ರಹಣೆ, ಖಾತೆಗೆ ಪಾವತಿಸುವಲ್ಲಿ ವ್ಯವಸ್ಥೆಯು ಸಂಪೂರ್ಣ ಪಾರದರ್ಶಕವಾಗಿರುತ್ತದೆ ಎಂದು ಹೇಳಿದರು.
ಇದು ಕೇವಲ ಗುಡಿ ಕಟ್ಟುವ ಅಭಿಯಾನವಲ್ಲ, ಇದು ಹಿಂದೂ ಸಮಾಜ ಕಟ್ಟುವ ಅಭಿಯಾನ. ದೇಶದ ಮರ್ಯಾದಾ ಪುರುಷೋತ್ತಮನ ಗೌರವ ಇದಾಗಿದೆ. ಕೀಳರಿಮೆ, ಜಾತೀಯತೆ ತೊಡೆದು ಹಾಕುವುದೇ ಇದರ ಉದ್ದೇಶ ಎಂದರು.
ಈ ಸಂದರ್ಭದಲ್ಲಿ ವಿಭಾಗ ನಿಧಿ ಪ್ರಮುಖರಾದ ದಿನೇಶ ಕುಮಾರ್, ಸೀತಾರಾಮ ಭಟ್ಟ ಕೆರೆಕೈ, ಗಂಗಾಧರ ಹೆಗಡೆ, ಶ್ರೀಕಾಂತ, ಜನಾರ್ಧನ ಹಾಗೂ ಇತರರು ಉಪಸ್ಥಿತರಿದ್ದರು.

About the author

Adyot

Leave a Comment