ಆದ್ಯೋತ್ ಸುದ್ದಿನಿಧಿ:
ಉತ್ತರ ಕನ್ನಡ ಜಿಲ್ಲೆಯನ್ನ ವಿಭಾಗಿಸಿ ಪ್ರತ್ಯೇಕ ಶಿರಸಿ ಜಿಲ್ಲೆ ರಚನೆ ಮಾಡ್ಬೇಕು ಅಂತ ಶಿರಸಿ ಜಿಲ್ಲಾ ಹೋರಾಟ ಸಮಿತಿ ಶಿರಸಿ ಬಂದ್ ಗೆ ಕೊಟ್ಟಿದ್ದ ಕರೆ ಸಂಪೂರ್ಣ ಯಶಸ್ವಿಯಾಗಿದೆ.
ಸುಮಾರು 48 ಸಂಘಟನೆಗಳು ತಮ್ಮ ಬೆಂಬಲ ಘೋಷಿಸಿದ್ದು ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಶಿರಸಿ ನಗರ ಬೆಳಿಗ್ಗೆಯಿಂದಲೇ ಸಂಪೂರ್ಣ ಸ್ತಬ್ಧವಾಗಿತ್ತು. ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು.ಬಸ್ ಸಂಚಾರ ಕೂಡ 10 ಗಂಟೆಯಿಂದ ಬಂದ್ ಆಗಿತ್ತು.
10 ಗಂಟೆಗೆ ಪೋಸ್ಟ್ ಸರ್ಕಲ್ ನಲ್ಲಿ ಸೇರಿದ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಸದಸ್ಯರು ಶಿರಸಿ ಪ್ರತ್ಯೇಕ ಜಿಲ್ಲೆಗೆ ಅಗ್ರಹಿಸಿದರು. ನಂತರ ಬೃಹತ್ ಸಂಖ್ಯೆಯಲ್ಲಿ ವಿವಿಧ ಸಂಘಟನೆಗಳ ಹಾಗೂ ವಿವಿಧ ತಾಲೂಕುಗಳಿಂದ ಬಂದಿದ್ದ ಜನರು ಮೆರವಣಿಗೆಯನ್ನ ಸೇರಿಕೊಂಡಿದ್ದರು.
ಸುಮಾರು 7 ಲಕ್ಷ ಜನಸಂಖ್ಯೆ ಹೊಂದಿರೋ ಘಟ್ಟದ ಮೇಲಿನ ತಾಲೂಕುಗಳನ್ನ ವಿಭಾಗಿಸಿ ಶಿರಸಿ ಪ್ರತ್ಯೇಕ ಜಿಲ್ಲೆ ಘೋಷಣೆಯಾಗಲೇಬೇಕು ಅಂತ ಹೋರಾಟಗಾರರು ಸರ್ಕಾರವನ್ನ ಆಗ್ರಹಿಸಿದರು.
ಉಪೇಂದ್ರ ಪೈ ನೇತೃತ್ವದಲ್ಲಿ ನಡೆದ ಮೆರವಣಿಗೆ ಬಿಡ್ಕಿ ಭೈಲಿನಿಂದ ಆರಂಭವಾಗಿ ನಂತರ ಮಾರಿಕಾಂಬಾ ದೇವಾಲಯ – ಬಿಡ್ಕಿ ಸರ್ಕಲ – ಸಿ.ಪಿ.ಬಜಾರ- ಜ್ಯೂಸರ್ಕಲ ಮಾರ್ಗವಾಗಿ ಎ.ಸಿ.ಕಛೇರಿಗೆ ಬಂದು ಮಾನ್ಯ ಮುಖ್ಯಮಂತ್ರಿಗಳು , ಕರ್ನಾಟಕ ಸರ್ಕಾರ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ,ಶಿರಸಿ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ಮಾತನಾಡಿ, ಶಿರಸಿ ಜಿಲ್ಲೆ ಘೋಷಣೆಯಾಗಬೇಕು.ಇದು 37 ವರ್ಷಗಳ ಬೇಡಿಕೆ,ಉತ್ತರಕನ್ನಡ ಜಿಲ್ಲೆ ವಿಸ್ತಾರವಾಗಿದ್ದು ಘಟ್ಟದ ಮೇಲಿನ 7 ತಾಲೂಕುಗಳಿಗೆ ಜಿಲ್ಲಾ ಕೇಂದ್ರ ದೂರವಾಗುತ್ತದೆ ಆಡಳಿತಾತ್ಮಕ ದೃಷ್ಟಿಯಿಂದ ಹಾಗೂ ಜಿಲ್ಲಾ ಕೇಂದ್ರಕ್ಕೆ ಇತರೆ ಕೆಲಸಕ್ಕೆ ಸಾರ್ವಜನಿಕರಿಗೆ ಕಾರವಾರಕ್ಕೆ ಹೋಗಲು ದೂರ ಮತ್ತು ಹಣ ಮತ್ತು ಸಮಯ ವ್ಯರ್ಥವಾಗಿ ಕೆಲಸ ಕಾರ್ಯಗಳು ಆಗುವುದಿಲ್ಲ. ರಾಜ್ಯದಲ್ಲಿ 3-4 ತಾಲೂಕುಗಳನ್ನು ಸೇರಿಸಿ ಜಿಲ್ಲೆ ರಚನೆ ಮಾಡಿದ್ದಾರೆ. ನಮ್ಮ ಉತ್ತರಕನ್ನಡ ಜಿಲ್ಲೆ 12 ತಾಲೂಕುಗಳಿರುವ ಬೌಗೋಳಿಕವಾಗಿ ವಿಸ್ತಾರವಾದುದಾಗಿದೆ. ಆದ್ದರಿಂದ ಉತ್ತರಕನ್ನಡ ಜಿಲ್ಲೆಯನ್ನು ವಿಭಜಿಸಿ ಘಟ್ಟದ ಮೇಲಿರುವ 7 ತಾಲೂಕುಗಳ ಶಿರಸಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು.ಹಾಗೂ ಚಿಕ್ಕ ಜಿಲ್ಲೆರುವುದರಿಂದ ಈ ಪ್ರದೇಶದ ಸರ್ವಾಂಗೀಣ ಅಭೀವೃದ್ದಿಗೆ ಸಹಾಯವಾಗುತ್ತದೆ.ಅಭಿವೃದ್ದಿ ದೃಷ್ಟಿಯಿಂದ ಪ್ರತ್ಯೇಕ ಜಿಲ್ಲೆ ಅನಿವಾರ್ಯ. ಈ ಬಗ್ಗೆ ಯಾವ ಜನಪ್ರತಿನಿಧಿಗಳು ಮಾತನಾಡದೇ ಇರುವುದು ಬೇಸರ ತಂದಿದೆ.
ಶಿರಸಿ ಜಿಲ್ಲೆ ಘೋಷಣೆ ಮಾಡುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ಅವರು ಎಚ್ಚರಿಸಿದರು
ಜಿಪಂ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ ಮಾತನಾಡಿ,
ಉತ್ತರಕನ್ನಡ ಜಿಲ್ಲೆ ಇಬ್ಬಾಗವಾಗಿ ಶಿರಸಿ ಜಿಲ್ಲೆ ರಚನೆಯಾಗಲಿ ಆಮೇಲೆ ಜಿಲ್ಲಾಕೇಂದ್ರ ಯಾವುದನ್ನು ಮಾಡಬೇಕು ಎಂದು ತೀರ್ಮಾನಿಸೋಣ ಎಂದು ಹೇಳಿದರು.
ಕದಂಬ ಸೇನೆ ಅಧ್ಯಕ್ಷ ಉದಯಕುಮಾರ ಕಾನಳ್ಳಿ, ಜಿಲ್ಲೆ ರಚನೆಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಂಡು ಬರುತ್ತಿದೆ ಇಲ್ಲಿಯ ಜನಪ್ರತಿನಿಧಿಗಳು ಇದಕ್ಕೆ ಸ್ಪಂದಿಸುತ್ತಿಲ್ಲ ಕೂಡಲೇ ಬನವಾಸಿ ತಾಲೂಕನ್ನಾಗಿ ಮಾಡಿ ಶಿರಸಿ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ವಿವೇಕಾನಂದ ವೈದ್ಯ ಮಾತನಾಡಿ, ಘಟ್ಟದ ಮೇಲಿನ ತಾಲೂಕಿನ ಜನತೆ ತಮ್ಮ ಕೆಲಸಗಳಿಗೆ ದೂರದ ಜಿಲ್ಲಾ ಕೇಂದ್ರ ಕಾರವಾರಕ್ಕೆ ಹೋಗಬೇಕಾಗಿದೆ. ಇದನ್ನು ತಪ್ಪಿಸಬೇಕೆಂದರೆ ಶಿರಸಿ ಜಿಲ್ಲೆ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.