ಕೋ.ಲ.ಕಾರಂತ..
ಕೋಟ ಲಕ್ಷ್ಮಿನಾರಾಯಣ ಕಾರಂತ ಹುಟ್ಟಿದ್ದು 1898ರಲ್ಲಿ. ಪ್ರಾಯಶ: ಆ ಕುಟುಂಬವೇ ಒಂದು ಪ್ರತಿಭಾವಂತರ ಕೂಟ. ಹಿರಿಯ ರಾಮಕೃಷ್ಣ ಕಾರಂತರು ಆ ಕಾಲದಲ್ಲೇ ಎಲ್.ಎಲ್.ಬಿ.ಮುಗಿಸಿ ಮದ್ರಾಸಿನಲ್ಲಿ ವಕಾಲತ್ತು ಮಾಡುತ್ತ ಆಗಿನ ಬ್ರಿಟಿಷ್ ಸರಕಾರ ರೂಪಿಸಿದ್ದ ಸಚಿವ ಸಂಪುಟದಲ್ಲಿದ್ದರು. ತಮ್ಮ ಶಿವರಾಮ ಕಾರಂತರಂತೂ ಬಿಡಿ, ಜಗತ್ತಿಗೆ ಗೊತ್ತು. ಉಳಿದ ಸಹೋದರರೂ ಬೇರೆ,ಬೇರೆ ಕ್ಷೇತ್ರಗಳಲ್ಲಿ ಪ್ರತಿಭಾನ್ವಿತರಾಗಿ ಸಾಧನೆ ಮಾಡಿದ್ದರೆಂದು ಕೇಳಿದ್ದೆ.
ಕೋ.ಲ.ಕಾರಂತರು ಆಗಿದ್ದ ಜಿಲ್ಲಾ ಬೋರ್ಡ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಪುತ್ತೂರಿನಲ್ಲಿ ವೃತ್ತಿ ಆರಂಭಿಸಿ,(ನಂತರ ಕುಂದಾಪುರಕ್ಕೆ ವರ್ಗಾವಣೆಗೊಂಡರು) ನಂತರ ಸಾರ್ವಜನಿಕರ ಒತ್ತಾಸೆಯ ಮೇರೆಗೆ ಕೋಟದಲ್ಲಿ ವಿವೇಕ ಪ್ರೌಢಶಾಲೆ ಆರಂಭಿಸಿ, ಅದನ್ನ ಅಭಿವೃದ್ಧಿಪಡಿಸಲು ಹತ್ತಾರು ವರ್ಷಗಳ ಕಾಲ ಅಹರ್ನಿಶಿ ಶ್ರಮಿಸಿದ ಬಗ್ಗೆ ವೈದೇಹಿಯವರ ಕೃತಿಯಿಂದ, ಶಿವರಾಮ ಕಾರಂತರ ‘ಹುಚ್ಚುಮನಸ್ಸಿನ ಹತ್ತುಮುಖಗಳು’ ಅಥವಾ ‘ ಸ್ಮøತಿ ಪಟಲದಿಂದ’ ಎನ್ನುವ ಕೃತಿಗಳಿಂದ ತಿಳಿದುಕೊಂಡಿದ್ದೇನೆ ಅಷ್ಟೇ.
ಅಲ್ಲಿ ಓದಿದ ವಿವರಣೆಗಳೇ ಓದುವಾಗ ವಿಸ್ಮಯ ಹುಟ್ಟಿಸಬೇಕಾದರೆ ನಿಜವಾಗಿ ಕಂಡಿದ್ದರೆ ಹೇಗಿತ್ತೇನೋ? ಜಿಲ್ಲಾ ಬೋರ್ಡ ಸ್ಕೂಲ್‍ನಲ್ಲಿದ್ದಾಗಲೇ(1930ರ ಆಸುಪಾಸು) ಆಗಿನ 2-3-4ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಬರೆದಿದ್ದರಂತೆ; ಎಲಿಮೆಂಟರಿ ಫಿಜಿಕಲ್ ಸೈನ್ಸ ಮತ್ತು ಎಲಿಮೆಂಟರಿ ನ್ಯಾಚುರಲ್ ಸೈನ್ಸ ಮುಂತಾಗಿ. ಶಾಲೆಯಲ್ಲಿ ಸಹಜವಾದ ಪ್ರಯೋಗ ಶಾಲೆ ನಿರ್ಮಾಣ ಇವರ ಸಾಧನೆಗಳಲ್ಲಿ ಒಂದು.
ಕುಂದಾಪುರದಲ್ಲಿ ಹೈಸ್ಕೂಲ್ ಆರಂಭಿಸಿದಾಗ ಹೊರಗಿನಿಂದ ಫಿಲಂ ಪ್ರೊಜೆಕ್ಟರ್ ತರಿಸಿ, ಮಕ್ಕಳಿಗೆ ಅದರಲ್ಲಿ ಪ್ರಕೃತಿ, ಪ್ರಾಣಿ, ಪಕ್ಷಿ, ಸಸ್ಯಗಳ ಕುರಿತಾದ ಫಿಲಂ ತೋರಿಸುವದರ ಜೊತೆ ಗುಣಮಟ್ಟದ ಸಿನೆಮಾಗಳನ್ನು ತೋರಿಸಿ ಅವರ ಜ್ಞಾನ ವಿಸ್ತಾರಕ್ಕೆ ಪ್ರಯತ್ನಿಸಿದ್ದರಂತೆ. ಪಕ್ಷಿ, ಸಣ್ಣ ಪ್ರಾಣಿಗಳ ಸಾಕಾಣಿಕೆ, ವಿವಿಧ ಸಸ್ಯಗಳ ಬೆಳೆಸುವಿಕೆ, ಅದರ ಪೋಷಣೆಗಳ ಮೂಲಕವೇ ವಿದ್ಯಾರ್ಥಿಗಳಿಗೆ ಅವುಗಳ ಕುರಿತಾಗಿ ಸಹಜ ಜ್ಞಾನ ತರುವ ಪ್ರಯತ್ನ ಇವೆಲ್ಲ ಆ ಕಾಲದಲ್ಲೇ ಆರಂಭಿಸಿದ್ದರಲ್ಲ! ಯಾವ ಪ್ರಚಾರ, ಸದ್ದು, ಗದ್ದಲವಿಲ್ಲದೇ!! – ಇದು ನನಗೆ ಬಹುಮುಖ್ಯ ಎನ್ನಿಸುತ್ತದೆ.

edh

ಆ ಅವಧಿಯಲ್ಲೇ ಅವರಿಗೆ ಕೃಷಿ ಮಾಡುವ ಹುಚ್ಚು ( ಹುಚ್ಚು ಅಂತಾ ಹೇಳೋದು ಅವಮಾನಕ್ಕಲ್ಲ. ಕೃಷಿ ಬೇಡುವಷ್ಟು ಸಹನೆ, ಶ್ರಮ, ಕಠೋರ ವಾಸ್ತವದ ಅನುಭವ, ನಷ್ಠ.. ಯಾವ ಕ್ಷೇತ್ರವೂ ಕೇಳೋದಿಲ್ಲ. ಆದರೂ ಕೃಷಿಯ ಬಗ್ಗೆ ಆಸಕ್ತಿ ಇದ್ದು ಅದನ್ನೇ ಮಾಡ್ತಿವಲ್ಲ, ಅದಕ್ಕೆ ಹೇಳಿದ್ದು) ಶುರುವಾಯಿತಂತೆ. ಅಷ್ಟರಲ್ಲೇ ಅವರು ಜೇನು ಸಾಕಾಣಿಕೆ ಆರಂಭಿಸಿ, ಆ ಬಗ್ಗೆ ವೈಜ್ಞಾನಿಕವಾದ ಮಾಹಿತಿಯೊಂದಿಗೆ ಆ ಬಗ್ಗೆ ಹೆಚ್ಚು ಕ್ರಿಯಾಶೀಲರಾಗಿದ್ದರಂತೆ.
ಕುಂದಾಪುರದ ಸಮೀಪ ಬಹುದೊಡ್ಡ ಜಮೀನಿನಲ್ಲಿ ಕೃಷಿ ಆರಂಭಿಸಿದ ಅವರಿಗೆ ಆ ವೇಳೆಯಲ್ಲಿ ಕುತೂಹಲ ಹುಟ್ಟಿಸಿದ್ದು ಸಸ್ಯಗಳಿಗೆ, ಅದರಲ್ಲೂ ಮುಖ್ಯವಾಗಿ ಹಣ್ಣಿನ ಗಿಡಗಳಿಗೆ ಕಟ್ಟುವ ಕಸಿ ವಿಧಾನದ ಬಗ್ಗೆ.
ಆ ಮೊದಲು ಮಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿರುವಾಗಲೇ ವಿವಿಧ ರೀತಿಯ ಗುಲಾಬಿ ಹೂವುಗಳ ಬಗ್ಗೆ ಆಕರ್ಷಿತರಾದ ಕಾರಂತರಿಗೆ ಆ ಗಿಡಗಳ ಕಂಟಿಂಗ್ಸನ್ನು ತಂದು ಬೆಳೆಸುವ ಪ್ರಯತ್ನ ಮಾಡುತ್ತಿರುವಾಗಲೇ ಅವರಿಗೆ ಆ ಗಿಡಗಳಿಗೆ ಕಸಿ ಕಟ್ಟುವ ಆಸೆ ಹುಟ್ಟುತ್ತದೆ. ಅದನ್ನು ಅಲ್ಲಿನ ಬಾಶೆಲ್ ಮಿಷನ್ ಶಾಲೆಯ ಅಧ್ಯಾಪಕರೊಬ್ಬರು ಕಲಿಸಿಕೊಟ್ಟರಂತೆ. ಮುಂದೆಂದೋ ಆದ ಬಹುದೊಡ್ಡ ಕಾರ್ಯಕ್ಕೆ ಸಣ್ಣ ನಾಂದಿ ಇದು. ಮುಂದೆ ಅಧ್ಯಾಪಕರಾದಾಗ ತಾವು ಪುಸ್ತಕ ಬರೆದು ಗಳಿಸಿದ ಹಣದಲ್ಲಿ ರಾಜಮಹೇಂದ್ರಿ, ಕೊಲ್ಕೊತ್ತಾಗಳಿಂದ ಫಲ ಮರಗಳ ಕಸಿ ಗಿಡಗಳನ್ನು ತರಿಸಿ ನೆಟ್ಟರಂತೆ!
ಅವರು ಕಸಿ ಕುರಿತಾದ ತಮ್ಮ ಆಸಕ್ತಿಯನ್ನು ಕೇವಲ ಅದಕ್ಕಷ್ಟೇ ಸೀಮಿತಗೊಳಿಸದೇ, ಆ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವ ರೀತಿ ಅಪೂರ್ವವಾದದ್ದು. ಸುಮಾರು 450 ವರ್ಷಗಳ ಹಿಂದೆ ನಮ್ಮ ದೇಶದ ಗೋವೆಗೆ ಬಂದು ನೆಲಸಿದ ಪೋರ್ಚಗೀಸರು ಇಲ್ಲಿನ ಕಾಟು ಅಂದರೆ ಕಾಡು ಅಥವಾ ದೇಸಿ ಮಾವಿನ ಗಿಡಗಳಿಗೆ ಕಸಿ ಕಟ್ಟಲು ಆರಂಭಿಸಿದ್ದನ್ನ ಮತ್ತು ಗೋವೆಯ ಸುತ್ತಲಿನ ಕರಾವಳಿ ಪ್ರದೇಶಗಳಿಗೆ ಬಂದು ನಮ್ಮಲ್ಲಿನ ಹಳೆ ಮಾವಿನ ಮರಗಳಿಗೆ ಕಸಿ ಕಟ್ಟಿ, ಅದನ್ನು ಗೋವೆಗೆ ಒಯ್ದು ಅಭಿವೃದ್ಧಿಪಡಿಸಿದ್ದನ್ನ, ಇಲ್ಲಿ ಮಾತ್ರವಲ್ಲದೇ ದೂರದ ಆಫ್ರಿಕಾ, ಅಮೇರಿಕಾ ದೇಶಗಳಿಗೂ ಇಲ್ಲಿನ ಕಸಿ ಗಿಡಗಳನ್ನ ಸಾಗಿಸಿ, ಅಲ್ಲಿಯೂ ಇಲ್ಲಿನ ಮಾವಿನ ಸಂತತಿಯನ್ನ ಬೆಳೆಸಿದ ಬಗ್ಗೆ ಅವರು ತೆಗೆದ ಮಾಹಿತಿ ಯಾವ ಕಾಲಕ್ಕೂ ಉಳಿಯುವಂತದ್ದು. ಅವರು ಮಾವಿನ ಬಗ್ಗೆ ಎಷ್ಟು ನಿಖರವಾಗಿ ವಿವರಿಸುತ್ತಾರೆ ಎಂದರೆ ಮಲ್ಲೋವ( ಪ್ರಾಯಶ: ಮಲ್ಗೋವ), ಪಯರಿ, ಅಪ್ಪೂಸ್, ಫರ್ನಾಂಡ್ ಮುಂತಾದ ಮಾವು ಗೋವೆಯಿಂದ ಬಂದವಾದರೆ ನೀಲಂ, ಬೆನೆಟ್ಪೂಸ್, ಅಲ್ಛಾನೊ, ಕಾಳಪ್ಪಾಡಿ, ಬಂಗನಪಳ್ಳಿ, ತೋತಾಪುರಿ ಖುದಾಬಾದ್ ಮುಂತಾದವು ದೇಶದ ಇತರ ಭಾಗಗಳಿಂದ ಬಂದವು ಎನ್ನುವದನ್ನ ಕಾರಂತರು ಗುರುತಿಸುತ್ತಾರೆ. ಕಾಡು ಮಾವಿನ ಹಣ್ಣಿನ ಗೊರಟೆ ಚೀಪಿ ಬೆಳೆದ ಮನಗೆ ಹೊಸ ಕಾಲದ ಹಣ್ಣುಗಳು ಆಕಾಶದ ನಕ್ಷತ್ರಗಳಂತೆ ಗೋಚರಿಸುತ್ತವೆ. ಮೂರು, ಮತ್ತೊಂದು ಮಾವಿನ ಹಣ್ಣುಗಳ ಪರಿಚಯವಿರುವ ನನಗೆ ಕಾರಂತರ ಕೆಲಸ ಅಬ್ಬಾ! ಎನ್ನಿಸುತ್ತಿದೆ. ಕೇವಲ ಮಾವುಗಳು ಮಾತ್ರವಲ್ಲದೇ ಚಿಕ್ಕು ( ಚಿಕ್ಕು ಹಣ್ಣಿನ ಗಿಡದ ಕಸಿಗೆ ಬಳಸುವ ಕಿರ್ಣಿ ಎಂಬ ಕಾಟು ಗಿಡದ ಕೊಂಬೆಗಳನ್ನ ಸಂಗ್ರಹಿಸಲು ತಮಿಳುನಾಡಿನ ನೆಲ್ಲೂರು ಜಿಲ್ಲೆಯ ರಾಪುರ್ ಎನ್ನುವ ಮೂಲ ನಿವಾಸಿಗಳಿದ್ದ ಕುಗ್ರಾಮಕ್ಕೆ ಹೋಗಿದ್ದರಂತೆ), ಹಲಸು, ಗೇರು, ಪೇರಳೆ, ಹೂಗಳಾದ ಸಂಪಿಗೆ, ಗುಲಾಬಿ ಮುಂತಾದವುಗಳ ಕಸಿ ಕಾರ್ಯವೂ ಇವರಿಂದ ಆಗುತ್ತದೆ.

rpt
ಕೋ.ಲ.ಕಾರಂತರ ಬಗ್ಗೆ ಬಲ್ಲವರು ಹಲವರಿದ್ದರೂ ಗೊತ್ತಿಲ್ಲದವರಿಗೆ ಕ್ವಚಿತ್ತಾದರೂ ತಿಳಿಯಲಿ ಎಂದು ಬರೆದೆ. ಅದು ಸಮರ್ಪಕ ಎಂದೇನೂ ಅನಿಸಿಲ್ಲ. ಗಟ್ಟಿ ಕೂತು ಬರೆಯಲು ಕೂತರೆ ಅವರ ಜೀವನ ಚರಿತ್ರೆಯನ್ನೇ ಬರೆದುಬಿಟ್ಟೇನು.( ಗೊತ್ತಿರುವ ಮಾಹಿತಿ ಆಧರಿಸಿ)
###
ಗಂಗಾಧರ ಕೊಳಗಿ
