ಉತ್ತರ ಕನ್ನಡ ಜಿಲ್ಲೆ ಅರಣ್ಯಗಳ ಜಿಲ್ಲೆ. ಮೊದಲಿನ ಕಾಲದಲ್ಲಿ ಜಿಲ್ಲೆ ಸಂಪೂರ್ಣವಾಗಿ ಅರಣ್ಯ ಪ್ರದೇಶಗಳಿಂದ ಆವೃತವಾಗಿತ್ತು. ನಂತರದಲ್ಲಿ ಆಧುನಿಕತೆಯ ಪರಿಣಾಮವಾಗಿ ಜನಸಂಖ್ಯೆ ಜಾಸ್ತಿಯಾದಂತೆ ಜನರು ವಾಸಿಸೋಕೆ ಆರಂಭಿಸಿದ್ರು. ಇದೀಗ ಹಲವಾರು ವರ್ಷಗಳಿಂದ ಅರಣ್ಯ ಜಮೀನನ್ನು ಸಾಗುವಳಿ ಮಾಡುತ್ತಿರೋ ರೈತರನ್ನ ಅರಣ್ಯ ಇಲಾಖೆ ಒಕ್ಕಲೆಬ್ಬಿಸೋಕೆ ಪ್ರಾರಂಭಿಸಿದೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ..
ಉತ್ತರ ಕನ್ನಡ ಜಿಲ್ಲೆಯ ಸುಮಾರು 80 ಶೇಕಡಾ ಭಾಗ ಅರಣ್ಯ ಪ್ರದೇಶಗಳನ್ನ ಹೊಂದಿದೆ. ಇಲ್ಲಿ ಪೂರ್ವಜರು ಸುಮಾರು 100ಕ್ಕೂ ಅಧಿಕ ವರ್ಷಗಳಿಂದ ಕಾಡಿನ ಜೊತೆ ನಂಟನ್ನು ಹೊಂದಿ, ವ್ಯವಸಾಯದ ಜೊತೆ ಕಾಡನ್ನು ಕೂಡ ರಕ್ಷಿಸೋ ಕೆಲಸವನ್ನ ಮಾಡುತ್ತಾ ಬಂದಿದ್ದಾರೆ. ಇದರಲ್ಲಿ ಖಾಲಿ ಇರೋ ಅರಣ್ಯ ಭೂಮಿಯನ್ನು ಕೂಡ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಆದ್ರೆ ಈ ಅರಣ್ಯ ಭೂಮಿಯನ್ನ ಜನರ ಹೆಸರಿಗೆ ಪಟ್ಟಾ ಮಾಡೋಕೆ ಅರಣ್ಯ ಇಲಾಖೆಯ ನಿಯಮಗಳು ಅಡ್ಡಿಯಾಗುತ್ತಿವೆ.
ಆದ್ರೂ ಕೂಡ ಈ ಹಿಂದೆ 1978ಕ್ಕೂ ಮುಂಚಿನಿಂದ ಸಾಗುವಳಿ ಮಾಡುತ್ತಿರೋರಿಗೆ ದಾಖಲೆಗಳನ್ನು ಪರಿಶೀಲಿಸಿ ಭೂಮಿಯನ್ನ ಹಸ್ತಾಂತರಿಸಲಾಗಿತ್ತು. ಕೆಲವು ಜನರಲ್ಲಿ ದಾಖಲೆಗಳು ಇಲ್ಲದಿರೋದ್ರಿಂದ ಅರ್ಜಿಗಳನ್ನ ತಿರಸ್ಕರಿಸಿದ್ದು, ಮೇಲ್ಮನವಿ ಕೂಡ ಸಲ್ಲಿಸಿದ್ರು. ಅದು ಇನ್ನೂ ಕೂಡ ಇತ್ಯರ್ಥವಾಗದೇ ಉಳಿದಿದೆ. ಕೆಲವೆಡೆ ಅರಣ್ಯ ಇಲಾಖೆ ಜಿಪಿಎಸ್ ಮಾಡಿಕೊಟ್ಟಿದೆ. ಆ ಜಾಗಗಳಲ್ಲಿ ಮನೆ ಕಟ್ಟಿಕೊಂಡ್ರು ಕೂಡ ಅರಣ್ಯ ಇಲಾಖೆ ಮನೆಯನ್ನ ಕಿತ್ತು ಹಾಕೋ ಮೂಲಕ ಬಡ ಜನರ ಮೇಲೆ ದರ್ಪ ತೋರುತ್ತಿದೆ. ಇಲಾಖೆಯ ಈ ಕ್ರಮ ಜನರ ಆಕ್ರೋಶಕ್ಕೆ ಕಾರಣವಾಗಿದೆ..
ಅರಣ್ಯ ಇಲಾಖೆಯ ಈ ಕಿರುಕುಳವನ್ನು ಮಲೆನಾಡಿನ ಶಾಸಕರು ಸದನದಲ್ಲಿ ಕೂಡ ಖಂಡಿಸುತ್ತಾ ಬಂದಿದ್ರು. ವಿಧಾನಸಭಾಧ್ಯಕ್ಷರು ಕೂಡ ಅತಿಕ್ರಮಣಾದಾರರಿಗೆ ನೀಡುತ್ತಿರೋ ಕಿರುಕುಳದ ಬಗ್ಗೆ ದನಿ ಎತ್ತಿದ್ರು. ಒಂದುವೇಳೆ ಕಸ್ತೂರಿ ರಂಗನ್ ವರದಿ ಯಥಾಸ್ಥಿತಿಯಲ್ಲಿ ಜಾರಿಯಾದ್ರೆ ಎಷ್ಟೋ ಹಳ್ಳಿಗಳು ನಿರಾಶ್ರಿತ ಹಳ್ಳಿಗಳಾಗಿ ಪರಿವರ್ತನೆಯಾಗೋ ಆತಂಕವಿದೆ. ಕಸ್ತೂರಿ ರಂಗನ್ ವರದಿಯ ಜಾರಿ ಬಗ್ಗೆ ಸರ್ಕಾರ ಕೂಡ ಸಮಿತಿ ರಚಿಸಿದೆ. ಇದೀಗ ಈ ಸಮಿತಿ ಜಿಲ್ಲೆಯ ಹಾಗೂ ರಾಜ್ಯದ ಜನರಿಗೆ ತೊಂದರೆ ಉಂಟು ಮಾಡಿ ವರದಿಯನ್ನ ಅನುಷ್ಠಾನ ಮಾಡೋಕೆ ಸಾಧ್ಯವಿಲ್ಲ. ಇದನ್ನ ಸಂಪೂರ್ಣವಾಗಿ ತಿರಸ್ಕರಿಸೋಣ ಅನ್ನೋ ನಿಲುವಿಗೆ ಬಂದಿದೆ.
ಅರಣ್ಯ ಇಲಾಖೆಯ ಇಂತಹ ಕ್ರಮಗಳನ್ನ ಸಚಿವರು ಕೂಡ ಖಂಡಿಸಿದ್ದಾರೆ. ಇಲ್ಲಿನ ಜನ ಅರಣ್ಯದ ಜೊತೆ ಹಲವಾರು ವರ್ಷಗಳಿಂದ ಸಂಬಂಧ ಹೊಂದಿದ್ದಾರೆ. ಅರಣ್ಯ ರಕ್ಷಣೆ ಆಗ್ತಿರೋದು ಇಲ್ಲಿನ ಜನರಿಂದಲೇ. ಆದ್ದರಿಂದ ಈಗ ಬಂದ ಅರಣ್ಯ ಅಧಿಕಾರಿಗಳು ಇಲ್ಲಿನ ಜನರಿಗೆ ತೊಂದರೆ ಕೊಟ್ರೆ ಅವರು ಈ ಜಿಲ್ಲೆಯನ್ನ ಬಿಟ್ಟು ಹೋಗ್ಬಹುದು ಅಂತ ಖಡಕ್ ಎಚ್ಚರಿಕೆ ನೀಡಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್..
ಸಚಿವರ ಈ ಹೇಳಿಕೆ ಹಾಗೂ ಸದನಗಳಲ್ಲಿ ಅತಿಕ್ರಮಣಾದಾರರ ಪರವಾದ ನಿಲುವುಗಳು ವ್ಯಕ್ತವಾಗ್ತಿರೋದು ಮಲೆನಾಡಿನ ಜನರಲ್ಲಿ ಸಂತಸ ತಂದಿದೆ. ಮುಂದಾದ್ರೂ ಹಳೇ ಅತಿಕ್ರಮಣಾದಾರರಿಗೆ ಭೂಮಿ ಮಂಜೂರಾಗುತ್ತೇನೋ ಅನ್ನೋ ಆಶಾಭಾವನೆ ಜನರಲ್ಲಿ ಬರತೊಡಗಿದೆ. ಒಂದುವೇಳೆ ಈ ಭೂಮಿಗಳಿಗೆ ಪಟ್ಟಾ ಸಿಕ್ಕಿದ್ರೆ ಜಿಲ್ಲೆಯ 50 ಶೇಕಡಾ ಜನರಿಗೆ ಇಲಾಖೆಯ ಕಿರುಕುಳದಿಂದ ಮುಕ್ತಿ ದೊರಕುವಂತಾಗುತ್ತದೆ.
####
ಶ್ರೀಧರ ಮದ್ದಿನಕೆರೆ