ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಹರ್ತೆಬೈಲಿನ ರಾಮಚಂದ್ರ ಹೆಗಡೆಯವರ ಮನೆಯಂಗಳದಲ್ಲಿ ಶ್ರೀಮದ್ಭಾಗವತ ಸಪ್ತಾಹದ ಧಾರ್ಮಿಕ ಸಭೆ ನಡೆಯಿತು. ಈ ಸಂದರ್ಭದಲ್ಲಿ ಖ್ಯಾತ ವಿದ್ವಾಂಸ,ಲೇಖಕ ಗಣೇಶ ಭಟ್ಟ ಹೋಬಳಿ – ನೆಲೆಮಾಂವ್(ಬೆಂಗಳೂರು) ಇವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿ.ಗಣೇಶ ಭಟ್ಟ,
ನಮ್ಮ ಪೂರ್ವಿಕರು ಮಾಡಿರುವ ಪುಣ್ಯದಿಂದ ಹಾಗೂ ವಿದ್ಯೆ ಕಲಿಸಿದ ಗುರುಗಳ ಆಶೀರ್ವಾದದ ಫಲವಾಗಿ ಸನ್ಮಾನವು ಲಭಿಸಿದೆ ಎಂಬ ಭಾವ ನನ್ನದು ಪ್ರತಿಯೊಬ್ಬ ಮನುಷ್ಯ ಹಿಂದೆ ಎರಡು ಪರಂಪರೆಯ ಕೊಂಡಿಗಳು ಇರುತ್ತವೆ, ಇದನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು,ಒಂದು ನಮ್ಮ ಮನೆತನದ ಹಿನ್ನೆಲೆ, ಇನ್ನೊಂದು ನಮಗೆ ವಿದ್ಯೆ ಕಲಿಸಿದ ಗುರುಗಳ ಪರಂಪರೆ ಎಂದರು.
ಶ್ರೀಮದ್ಭಾಗವತ ಬೇರೆಯಲ್ಲ ಶ್ರೀಕೃಷ್ಣ ಬೇರೆಯಲ್ಲ ಪ್ರತಿಯೊಬ್ಬರೂ ಮನೆಯಲ್ಲಿ ಭಾಗವತದ ಪುಸ್ತಕವನ್ನು ತಂದಿಡುವಂತಾಗಲಿ, ಮುಂದೆ ಭಗವಂತನೇ ಅದರ ಪುಟಗಳನ್ನು ತೆರೆಯುವಂತೆ – ಪಾರಾಯಣ ಮಾಡುವಂತೆ ನಮಗೆ ಪ್ರೇರಣೆಯನ್ನು ನೀಡುತ್ತಾನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೇ.ಕೃಷ್ಣ ದೇವರು ಭಟ್ಟ ಹೋಬಳಿ ನೆಲೆಮಾಂವ್ ಮಾತನಾಡಿ, ನಮ್ಮ ಶಿಷ್ಯವರ್ಗದಲ್ಲಿ ಕೆಲವರ ಮನೆಯಂಗಳದಲ್ಲಿ ಯಜ್ಞ-ಯಾಗಗಳು ನಿರಂತರವಾಗಿ ನಡೆಯುತ್ತಾ ಬಂದಿವೆ, ಹರ್ತೆಬೈಲಿನ ರಾಮಚಂದ್ರ ವಿ ಹೆಗಡೆ ಅಂತಹ ಶಿಷ್ಯರಲ್ಲಿ ಒಬ್ಬರು ಒಂದು ವಾರಗಳ ಕಾಲ ನಡೆದ ಭಾಗವತ ಪಾರಾಯಣ ಹಾಗೂ ಹವನದ ಮಹಾ ಸಮರ್ಪಣೆ ಮತ್ತು ಗಾಯತ್ರೀ ಹವನಗಳಿಂದ ಸಕಲರಿಗೂ ಸನ್ಮಂಗಳವಾಗಲಿ ಎಂದರು.
“ವಾಙ್–ನಿಧಿ” ಗೌರವ ಪ್ರಧಾನ : ವಿದ್ವಾನ್ ಗಣೇಶ ಭಟ್ಟ ಹೋಬಳಿ – ನೆಲೆಮಾಂವ್ ಅವರಿಗೆ ವಾಙ್–ನಿಧಿ ಎಂಬ ಬಿರುದಾಂಕಿತವನ್ನು ನೀಡಿ ರಾಮಚಂದ್ರ ಹೆಗಡೆ ಹರ್ತೆಬೈಲ್ ಕುಟುಂದವರು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಯಕ್ಷಗಾನದ ಹಿರಿಯ ಅರ್ಥದಾರಿಗಳು ಹಾಗೂ ಕಲಾವಿದರಾದ ಸೀತಾರಾಮ ಗಣಪಯ್ಯ ಹೆಗಡೆ ಹೊಸ್ತೋಟ, ಗಜಾನನ ಮಂಜುನಾಥ ಭಟ್ಟ ಕೆಳಗಿನ ವಾಜಗಾರ, ವೆಂಕಟ್ರಮಣ ಪರಮೇಶ್ವರ ಹೆಗಡೆ ಹಿರೇಕೈ, ನಾರಾಯಣ ಮಾಬ್ಲೇಶ್ವರ ಭಟ್ಟ ಹೊಸ್ತೋಟ ಹಾಗೂ ಮಾಬ್ಲೇಶ್ವರ ರಾಮಚಂದ್ರ ಹೆಗಡೆ ಹರಿಗಾರ ಅವರನ್ನು ಸನ್ಮಾನಿಸಲಾಯಿತು.
ಅಡುಗೆ ಕಾಯಕದಲ್ಲಿ ದಶಕಗಳಿಂದ ನಿರತರಾಗಿರುವ ಸೀತಕ್ಕ ಐನಬೈಲ್, ಮಂಜುನಾಥ ಹೆಗಡೆ ಐನಬೈಲ್ ಹಾಗೂ ನೇರ್ಲಮನೆ ನಾರಾಯಣ ಹೆಗಡೆ ಅವರ ನೆನಪಿನಲ್ಲಿ ಮಂಜುನಾಥ ಹೆಗಡೆ ನೇರ್ಲಮನೆ ಅವರನ್ನು ಸಹ ವಿಶೇಷ ಸೇವೆಗಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ನಡೆಸಿಕೊಟ್ಟ ರಾಮಚಂದ್ರ ವಿ ಹೆಗಡೆ ಹರ್ತೆಬೈಲ್, ಅಭ್ಯಾಗತರಾದ ಸಿಎ. ಎಂ ಆರ್ ಹೆಗಡೆ ಹೆಗ್ನೂರು, ಸುಬ್ರಾಯ ವಿ ಹೆಗಡೆ ಹರ್ತೆಬೈಲ್ ವೇದಿಕೆಯಲ್ಲಿದ್ದರು ಮತ್ತು ನಾಗಪತಿ ರಾಮಚಂದ್ರ ಹೆಗಡೆ ನಿರ್ವಹಿಸಿದರು.
ಯಕ್ಷಗಾನ ಪ್ರದರ್ಶನ : ಸಂಜೆ ಇದೇ ವೇದಿಕೆಯಲ್ಲಿ ಯಕ್ಷ ಸಂವರ್ಧನ ಸಂಸ್ಥೆ ಶಿವಮೊಗ್ಗ ಇವರಿಂದ ಶ್ರೀಕೃಷ್ಣ ಪಾರಿಜಾತ ಯಕ್ಷಗಾನ ಪ್ರದರ್ಶನವು ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾದ ಪರಮೇಶ್ವರ ಹೆಗಡೆ ಐನಬೈಲ್, ಮದ್ದಳೆ ವಾದಕರಾದ ಮಂಜುನಾಥ ಗುಡ್ಡೇದಿಂಬ ಹಾಗೂ ಚಂಡೆ ವಾದನದಲ್ಲಿ ಕುಮಾರ ಶ್ರೀವತ್ಸ ಗುಡ್ಡೇದಿಂಬ ಇದ್ದರು.
ಮುಮ್ಮೇಳದಲ್ಲಿ ಕೃಷ್ಣನಾಗಿ ಕಿರಣ್ ಪೈ, ಸತ್ಯಭಾಮೆಯಾಗಿ ಡಾ. ಪ್ರಕೃತಿ ಮಂಚಾಲೆ, ಭೌಮಾಸುರನಾಗಿ ಭಾರತಿ ಸುದರ್ಶನ್, ದೇವೇಂದ್ರನಾಗಿ ಕುಮಾರಿ ಇಂಪು ರಾವ್ ಶಿವಮೊಗ್ಗ, ಮುರಾಸುರನಾಗಿ ಗಗನ್ ಮಯೂರ ಭಟ್ಟ, ಅಗ್ನಿಯಾಗಿ ಅಮೂಲ್ಯ ಹೊಳ್ಳ, ಧೂತ ಪಾತ್ರದಲ್ಲಿ ಮಲ್ಲಿಕಾ ರಾಘವೇಂದ್ರ ಭಟ್ಟ ಇದ್ದರು ಹಾಗೂ ಪ್ರಸಾದನ ಸರೋಜಾ ಹೊಳ್ಳ ಅವರದ್ದಾಗಿತ್ತು.
ಶ್ರೀಮದ್ಭಾಗವತ ಸಪ್ತಾಹ ಮತ್ತು ಗಾಯತ್ರೀ ಪುನಶ್ಚರಣೆ :
ಭಾಗವತ ಪಾರಾಯಣವು ದಿನಾಂಕ 16-03-2021 ಮಂಗಳವಾರದಿಂದ 22-03-2021 ಸೋಮವಾರದ ವರೆಗೆ ನಡೆಯಿತು. ಪ್ರಧಾನ ವಾಚಕರಾಗಿ ವಿದ್ವಾನ್ ಗಣೇಶ ಭಟ್ಟ ಹೋಬಳಿ – ನೆಲೆಮಾಂವ್ ಹಾಗೂ ಸಹ-ವಾಚಕರಾಗಿ ವಿದ್ವಾನ್ ಗಂಗಾಧರ ಬೋಡೆ, ಯಲ್ಲಾಪುರ (ಚೆನ್ನೈ) ಮತ್ತು ವೇದಮೂರ್ತಿ ಗಣಪತಿ ಭಟ್ಟ ಬೆಳೇಮನೆ (ಧೋರಣಗಿರಿ) ಪಾಲ್ಗೊಂಡಿದ್ದರು.
ದಿನಾಂಕ 23-03-2021 ಮಂಗಳವಾರ ಭಾಗವತ ಸಪ್ತಾಹದ ಹವಿರ್ಭಾಗ ಸಮರ್ಪಣೆಯ ಹವನ ಮತ್ತು ದಿನಾಂಕ 24-03-2021 ಬುಧವಾರ ಅಕ್ಷರ ಸಹಸ್ರ ಗಾಯತ್ರೀ ಪುನಶ್ಚರಣೆಯ ಹವನವು ಲೋಕಕಲ್ಯಾಣಾರ್ಥವಾಗಿ ನೆರೆವೇರಿದವು.
ವಿದ್ವಾನ್ ಗಣೇಶ ಭಟ್ಟ ಹೋಬಳಿ ಅವರ ಕುರಿತು: ಹೋಬಳಿ ದೊಡ್ಡಗಣಪ ಭಟ್ಟರ ಕುಟುಂಬದಲ್ಲಿ ದೇವರು ಭಟ್ಟ ಹಾಗೂ ಯಂಕಿ ಇವರ ದ್ವಿತೀಯ ಪುತ್ರರಾಗಿ ಜನಿಸಿ, ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಕವಲಕ್ಕಿ (ಸುಬ್ರಹ್ಮಣ್ಯ) ಸಂಸ್ಕøತ ಶಾಲೆಯಲ್ಲಿ ವಿದ್ವಾನ್ ರಾಮಚಂದ್ರ ಶಾಸ್ತ್ರಿ ಸೂರಿ ಇವರಲ್ಲಿ ಸಾಹಿತ್ಯ ಹಾಗೂ ಕಾಲೋಚಿತ ಮಂತ್ರಭಾಗವನ್ನು ಓದಿದ್ದಾರೆ. ಹೆಚ್ಚಿನ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ, ಬೆಂಗಳೂರಿನ ಕಾಲೇಜಿನಲ್ಲಿ ವೇದಾಂತ ವಿದ್ವತ್ ಹಾಗೂ ಪದವಿ ಶಿಕ್ಷಣ ಪೂರೈಸಿದ್ದಾರೆ. ತಿರುಪತಿ ವಿಶ್ವವಿದ್ಯಾಲಯದಿಂದ ಬಿ.ಎಡ್ ಪದವಿಯನ್ನು ಪಡೆದಿದ್ದಾರೆ. ಬೆಂಗಳೂರಿನ ಹೊಂಬೇಗೌಡ ಬಾಲಕಿಯರ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
ಬೆಂಗಳೂರಿನ ಗೋಖಲೆ ಇನ್ಸ್ಟಿಟ್ಯೂಟ್ ಹಾಗೂ ಅನೇಕ ಸಂಸ್ಥೆಗಳಲ್ಲಿ ಉಪನ್ಯಾಸ ಮಾಲಿಕೆಗಳನ್ನು ನಡೆಸಿಕೊಟ್ಟಿರುತ್ತಾರೆ. ಅನೇಕ ಉಪನ್ಯಾಸಗಳ ಧ್ವನಿಸುರುಳಿಗಳು ಲೋಕಾರ್ಪಣೆಗೊಂಡಿವೆ. ಮೋಹಮುದ್ಗರ, ಸೌಂದರ್ಯಲಹರಿ, ಶಿವಾಪರಾಧ ಕ್ಷಮಾಪಣಾ ಸ್ತೋತ್ರ, ಗಾಯತ್ರೀ ಇನ್ನೂ ಅನೇಕ ಕೃತಿಗಳನ್ನು ರಚಿಸಿದ್ದು ಜ್ಞಾನಾರ್ಜನೆಗಾಗಿ ಪ್ರಕಟಗೊಂಡಿವೆ. ಇತ್ತೀಚೆಗಷ್ಟೇ ಪ್ರಸೂತಪುರ ಚರಿತ್ರೆ ಹಾಗೂ ನೆಲೆಮಾವು ಮಠದ ಶ್ರೀಗುರುಪರಂಪರೆ ಎನ್ನುವ ಕೃತಿಗಳು ಲೋಕಾರ್ಪಣೆಗೊಂಡಿರುತ್ತವೆ. ಸ್ವರ್ಣವಲ್ಲಿಯ ಪೂಜ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಶ್ರೀಗಳು ವಿದ್ವಾನ್ ಗಣೇಶ ಭಟ್ಟರಿಗೆ ‘ಪ್ರವಚನ ಸರಸ್ವತೀ’ ಎಂಬ ಬಿರುದು ನೀಡಿ ಆಶೀರ್ವದಿಸಿರುತ್ತಾರೆ.