ಆದ್ಯೋತ್ ಸುದ್ದಿನಿಧಿ:
ಮಧು ಬಂಗಾರಪ್ಪ ಬೆಂಬಲಿಗರಾಗಿದ್ದ ಸಿದ್ದಾಪುರದ ಬಿ.ಆರ್.ನಾಯ್ಕ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ ಹದಿನೈದು ದಿನ ಕಳೆದ ನಂತರ ಜೆಡಿಎಸ್ ಪಕ್ಷ ಎಚ್ಚೆತ್ತುಕೊಂಡಿದೆ. ಜಿಲ್ಲೆಯಲ್ಲಿ ಜೆಡಿಎಸ್ ಹಡಗು ಮುಳುಗದಂತೆ ನೋಡಿಕೊಳ್ಳುವ ನಾವಿಕನ ಹುಡುಕಾಟಕ್ಕೆ ಮುಂದಾಗಿದೆ.
ಇದರನ್ವಯ ಉತ್ತರಕನ್ನಡ ಜಿಲ್ಲೆಯ ಕುಮಟಾ ವರದ ಹೋಟೆಲ್ ನಲ್ಲಿ ಬುಧವಾರ ಜೆಡಿಎಸ್ ಜಿಲ್ಲಾಧ್ಯಕ್ಷರ ಆಯ್ಕೆ ಮತ್ತು ಪಕ್ಷದ ಸಂಘಟನೆಯ ಕುರಿತು ಚರ್ಚಿಸಲು ಜೆಡಿಎಸ್ ರಾಜ್ಯ ವೀಕ್ಷಕ ಎನ್.ಹೆಚ್.ಕೋನರೆಡ್ಡಿ ಅಧ್ಯಕ್ಷತೆಯಲ್ಲಿ ಆಂತರಿಕ ಸಭೆ ನಡೆಸಲಾಯಿತು.
ಜಿಲ್ಲಾ ವೀಕ್ಷಕ ಗಂಗಣ್ಣ ಹಿರಿಯ ಮುಖಂಡ ಗಣಪಯ್ಯ ಗೌಡ, ಡಾ.ಶಶಿಭೂಷಣ ಹೆಗಡೆ, ಇನಾಯತುಲ್ಲಾ ಶಾಬಂದ್ರಿ, ಆನಂದ ಗೌಡ, ತ್ರಿವೇಣಿ ಗೌಡ, ಭಾಸ್ಕರ್ ಪಟಗಾರ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕೋನರೆಡ್ಡಿ,
ರಾಜ್ಯಧ್ಯಕ್ಷರ ಸೂಚನೆಯ ಮೇರೆಗೆ ಈ ಸಭೆಯನ್ನು ನಡೆಸಲಾಗುತ್ತಿದ್ದು ಶೀಘ್ರದಲ್ಲೆ ಪಕ್ಷವನ್ನು ಸಂಘಟಿಸುವ ಯೋಗ್ಯ
ಹೊಸ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಗುವುದು ಹಾಲಿ ಇರುವ ಪದಾಧಿಕಾರಿಗಳನ್ನು ಕೈ ಬಿಟ್ಟು ಹೊಸ ಪದಾಧಿಕಾರಿಗಳ ನೇಮಕ ಮಾಡಲಾಗುವುದು ಎಂದು ಹೇಳಿದರು.
ಪಕ್ಷದ ಮುಖಂಡರ ತಪ್ಪು ನಿರ್ಧಾರ ಹಾಗೂ ಅಧಿಕಾರದ ಲಾಲಸೆಯಿಂದ ಹಲವು ಮುಖಂಡರು ಪಕ್ಷ ತೊರೆದಿರಬಹುದು ಆದರೆ ತಳಮಟ್ಟದಲ್ಲಿ ಕಾರ್ಯಕರ್ತರನ್ನು ಹೊಂದಿರುವುದರಿಂದ ಪಕ್ಷದ ಸಂಘಟನೆಗೆ ತೊಂದರೆಯಾಗುವುದಿಲ್ಲ,ನಮ್ಮ ಪಕ್ಷ ನಾಯಕರನ್ನು ತಯಾರಿ ಮಾಡುವಂತಹ ಕಾರ್ಖಾನೆಯಾಗಿ ಬಿಟ್ಟಿದೆ, ರಾಜ್ಯದಲ್ಲಿ ಬೇರೆ ಬೇರೆ ಪಕ್ಷದಲ್ಲಿ ಇರುವಂತಹ ಬಹುತೇಕ ಮುಖಂಡರು ಜೆಡಿಎಸ್‌ನಿಂದ ರಾಜಕೀಯ ಕಲಿತು ಬೇರೆ ಪಕ್ಷದಲ್ಲಿ ಅಧಿಕಾರ ಅನುಭವಿಸುತ್ತಿದ್ದಾರೆ ಎಂದರು.
ಸರಕಾರ ಸಾರಿಗೆ ನೌಕರರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಇದು ಸರಿಯಾದ ಕ್ರಮವಲ್ಲ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚೀವರು ತಾಯಿಹೃದಯದಿಂದ ನೌಕರರ ಬೇಡಿಕೆಯನ್ನು ಈಡೇರಿಸಬೇಕು ಎಂದು ಕೋನರೆಡ್ಡಿ ಹೇಳಿದರು
ಸೂರಜ್ ನಾಯ್ಕ ಸೋನಿ ಮಾತನಾಡಿ,ಶಾಸಕ ದಿನಕರ ಶೆಟ್ಟಿ ಜೆಡಿಎಸ್ ಬಿಟ್ಟು ಹೊದರು ಕೂಡಾ ಕುಮಟಾದಲ್ಲಿ ಜೆಡಿಎಸ್ ಶಕ್ತಿ ಕಳೆಗುಂದಿಲ್ಲ. ಕಳೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ತಾಲೂಕಿನ ೪ ಗ್ರಾಮ ಪಂಚಾಯತ ಅಧ್ಯಕ್ಷರು ಜೆಡಿಎಸ್ ಪಕ್ಷದವರು ಇದ್ದಾರೆ ಶಾಸಕರು ಗ್ರಾಮ ಪಂಚಾಯತ ಚುನಾವಣೆಯಲ್ಲಿ ಬಿಜೆಪಿ ಕುಮಟಾದಲ್ಲಿ ೧೮ ಗ್ರಾ.ಪಂದಲ್ಲಿ ಅಧಿಕಾರ ಹಿಡಿಯುತ್ತದೆ ಎಂದು ಭವಿಷ್ಯ ನುಡಿದಿದ್ದರು.ಅವರ ಲೆಕ್ಕಾಚಾರ ತಲೆಕೆಳಗಾಗಿದೆ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ ನೌಕರರು ತಮ್ಮ ವಿವಿಧ ಬೇಡಿಕೆಗಳಿಗೆ ಸರಕಾರ ಸರಿಯಾಗಿ ಸ್ಪಂದನೆ ನಿಡುತ್ತಿಲ್ಲ ಈ ಬಗ್ಗೆ ಜೆಡಿಎಸ್ ಪಕ್ಷವು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರ ಸ್ವಾಮಿಯವರು ನೌಕರರ ಸಮಸ್ಯೆಗೆ ದ್ವನಿಯಾಗಬೇಕು ಎಂದು ಎನ್.ಎಚ್ ಕೊನರೆಡ್ಡಿಯವರಿಗೆ ಮನವಿ ಸಲ್ಲಿಸಿದರು.